'ರಿಷಬ್ ಶೆಟ್ಟಿ ಮೇಲೆ ನನಗೆ ಹೊಟ್ಟೆಕಿಚ್ಚು' ಎಂದ ನವಾಝುದ್ದೀನ್ ಸಿದ್ದಿಕಿ; ಕಾಂತಾರ ಶಿವನ ರಿಯಾಕ್ಷನ್ ವೈರಲ್
'ರಿಷಬ್ ಶೆಟ್ಟಿ ಮೇಲೆ ಹೊಟ್ಟೆಕಿಚ್ಚಿದೆ' ಎಂದು ಬಾಲಿವುಡ್ ಸ್ಟಾರ್ ನವಾಝುದ್ದೀನ್ ಸಿದ್ದಿಕಿ ಹೇಳಿದ್ದಾರೆ. ಕಾಂತಾರ ಶಿವನ ರಿಯಾಕ್ಷನ್ ವೈರಲ್ ಆಗಿದೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಸಿನಿಮಾ ರಿಲೀಸ್ ಆಗಿ ಅನೇಕ ದಿನಗಳಾದರೂ ಇನ್ನೂ ಕಾಂತಾರ ಬಗ್ಗೆ ಚರ್ಚೆ ನಾಡೆಯುತ್ತಿದೆ. ಭಾರತೀಯ ಸಿನಿಮಾರಂಗದ ಅನೇಕ ಸ್ಟಾರ್ ಕಲಾವಿದರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ , ಹಾಡಿ ಹೊಗಳಿದ್ದಾರೆ. ಆದರೆ ಬಾಲಿವುಡ್ ಖ್ಯಾತ ನಟ ನವಾಝುದ್ದೀನ್ ಸಿದ್ದಿಕಿ ಮಾತನಾಡಿ ರಿಷಬ್ ಶೆಟ್ಟಿ ಮೇಲೆ ಹೊಟ್ಟೆಕಿಚ್ಚು ಆಗುತ್ತಿದೆ ಎಂದು ಹೇಳಿದ್ದಾರೆ. ಅಂದಹಾಗೆ ಇದು 'ನಕಾರಾತ್ಮಕ' ರೀತಿಯಲ್ಲಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚಿಗಷ್ಟೆ ಕಾಂತಾರ ಸ್ಟಾರ್ ಬಾಲಿವುಡ್ ನಟ ನವಾಝುದ್ದೀನ್ ಸಿದ್ದಿಕಿ ಅವರನ್ನು ಭೇಟಿಯಾಗಿದ್ದರು. ಇಬ್ಬರೂ ಒಂದು ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಗ ನವಾಝುದ್ದೀನ್ ಸಿದ್ದಿಕಿ ರಿಷಬ್ ಶೆಟ್ಟಿ ಬಗ್ಗೆ ಮಾತನಾಡಿದರು.
'ಇಡೀ ದೇಶ ಇಂದು ರಿಷಬ್ ಶೆಟ್ಟಿ ನೋಡಿ ಶಾಕ್ ಆಗಿದೆ. ಅವರು ಯಾವುದನ್ನೂ ಪ್ರಚಾರ ಮಾಡಿಲ್ಲ. ಸದ್ದಿಲ್ಲದ್ದೇ ಬಿಡುಗಡೆ ಮಾಡಿದರು ಮತ್ತು ಎಲ್ಲಾ ಬ್ರೇಕ್ ಮಾಡಿದರು. ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಅಸೂಯೆಯ ಭಾವನೆ ಬೆಳೆಯುತ್ತದೆ ಮತ್ತು ಅದೇ ಸಮಯದಕ್ಕೆ ಸ್ಪರ್ಧೆಗೆ ಪ್ರೇರೇಪಿಸುತ್ತದೆ' ಎಂದು ಹೇಳಿದರು. ಬಳಿಕ ನವಾಝುದ್ದೀನ್ ಅವರಿಗೆ ನಿರೂಪಕರು ಅಸೂಯೆ ಪದ ಬಳಸಿದ್ದ ಬಗ್ಗೆ ಕೇಳಿದರು. ಪ್ರತಿಕ್ರಿಯೆ ನೀಡಿದ ನವಾಜುದ್ದೀನ್, ಖಂಡಿತವಾಗಿಯೂ ಹೊಟ್ಟೆಕಿಚ್ಚು ಆಗುತ್ತದೆ. ಯಾಕೆಂದರೆ ಅವರು ಅಷ್ಟು ಒಳ್ಳೆಯ ಸಿನಿಮಾ ಮಾಡಿದ್ದಾರೆ. ಇದು ನಕಾರಾತ್ಮಕ ಕತೆಯ ಅಸೂಯೆ ಅಲ್ಲ' ಎಂದು ಹೇಳಿದರು.
ನವಾಝುದ್ದೀನ್ ಅವರ ಮಾತುಗಳಿಗೆ ನಟ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿ ಅವರ ಹಲವು ಸಿನಿಮಾಗಳನ್ನು ನೋಡಿರುವುದಾಗಿ ಹೇಳಿದರು. 'ನಾನು ನವಾಜ್ ಭಾಯ್ ಅವರ ಹಲವಾರು ಸಿನಿಮಾಗಳನ್ನು ನೋಡಿದ್ದೇನೆ ಮತ್ತು ಅವರ ಪರಿಶ್ರಮ ಮತ್ತು ಕಷ್ಟದ ಪಯಣವನ್ನು ನೋಡಿದ್ದೇನೆ. ಅವರೂ ಕೂಡ ನಮ್ಮ ಹಾಗೆ. ನಾವು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಹಾಗಾಗಿ ನಾವು ಇಂಡಸ್ಟ್ರಿಯಲ್ಲಿ ಏನಾದರೂ ದೊಡ್ಡದು ಮಾಡಬೇಕೆಂದು ಬಯಸುತ್ತೇವೆ. ಅವರು ದೊಡ್ಡ ಸ್ಫೂರ್ತಿ. ಅವರು ರಂಗಭೂಮಿಯಿಂದ ಬಂದು ಹಲವು ಸಣ್ಣ ಪಾತ್ರಗಳನ್ನು ಮಾಡಿದ್ದಾರೆ. ನಾವು ಕೂಡ ಕನ್ನಡ ಚಿತ್ರಂರಗದಲ್ಲಿ ಸಣ್ಣ ಪಾತ್ರಗಳನ್ನು ಮಾಡಿದ್ದೇವೆ. ಅವರು ನಮ್ಮ ಸೀನಿಯರ್. ನಮ್ಮದು ಒಂದೇ ರೀತಿಯ ಪಯಣ' ಎಂದು ಹೇಳಿದರು.
ಕನ್ನಡ ಚಿತ್ರರಂಗದ ಆ ದಿನಗಳು ಮತ್ತೆ ಮರುಕಳಿಸಿದೆ; ಕಾಂತಾರ ಬಗ್ಗೆ ಕಮಲ್ ಹಾಸನ್ ಮೆಚ್ಚುಗೆ
ಕಾಂತಾರ ಸಿನಿಮಾ ರಿಷಬ್ ಶೆಟ್ಟಿಗೆ ರಾಷ್ಟ್ರ ಮಟ್ಟದ ಖ್ಯಾತಿ ತಂದುಕೊಟ್ಟಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆದರೂ ಕನ್ನಡ ಸಿನಿಮಾಗಳನ್ನೇ ಮಾಡುವುದಾಗಿ ಹೇಳಿದರು. ಬಾಲಿವುಡ್‌ಗೆ ಹೋಗುವ ಯಾವುದೇ ಯೋಚನೆ ಇಲ್ಲ ಎಂದು ಸಹ ಸ್ಪಷ್ಟಪಡಿಸಿದರು. ಕಾಂತಾರ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ಬಳಿಕ ಇದೀಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಕಾಂತಾರ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ. ಹಿಂದಿ ಭಾಷೆಯ ಕಾಂತಾರ ನೆಟ್ ಫ್ಲಿಕ್ಸ್ ನಲ್ಲಿ ಲಭ್ಯವಿದೆ.
'ಕಾಂತಾರ 2' ಮಾಡಲು ಧರ್ಮಸ್ಥಳ ಮಂಜುನಾಥೇಶ್ವರನ ಅನುಮತಿ ಬೇಕು; ಅಲೋಚಿಸಿ ಸಿನಿಮಾ ಮಾಡ್ಬೇಕಾ?
ಕಾಂತಾರ-2
ಕಾಂತಾರ ಸಕ್ಸಸ್ ಆದ ಬಳಿಕ ಕಾಂತಾರ ಪಾರ್ಟ್-2ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ರಿಷಬ್ ಮತ್ತು ತಂಡ. ಈಗಾಗಲೇ ಪಂಜುರ್ಲಿ ಬಳಿ ಅನುಮತಿ ಕೂಡ ಕೇಳಿರುವ ರಿಷಬ್ ಶೆಟ್ಟಿ ಮುಂದಿನ ವರ್ಷದಿಂದ ಪಾರ್ಟ್-2 ಪ್ರಾರಂಭಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಮುಂದಿನ ವರ್ಷಾರಂಭದಲ್ಲಿ ಕಾಂತಾರ ಚಿತ್ರೀಕರಣ ಪ್ರಾರಂಭವಾಗಲಿದ್ದು 2024 ಫೆಬ್ರವರಿಗೆ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ. ಮೊದಲ ಭಾಗ ನೋಡಿದ ಪ್ರೇಕ್ಷಕರಿಗೆ ಪಾರ್ಟ್-2 ಮೇಲಿನ ಕುತೂಹಲ ಹೆಚ್ಚಾಗಿದೆ.