ಮೈಸೂರು ಸ್ಯಾಂಡಲ್ ಸೋಪ್‌ನ ರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆಗೆ ಬಾಲಿವುಡ್ ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿದ್ದಾರೆ. ಬಹುಭಾಷಾ ಚಿತ್ರಗಳಲ್ಲಿನ ಅನುಭವ, ಸಾಮಾಜಿಕ ಜಾಲತಾಣದ ವ್ಯಾಪ್ತಿ, ಗುರಿ ಗ್ರಾಹಕರ ಮೇಲಿನ ಪ್ರಭಾವ ಮತ್ತು ಜಾಹೀರಾತಿಗೆ ಸೂಕ್ತ ಇಮೇಜ್‌ನಿಂದಾಗಿ ತಜ್ಞರ ಸಲಹೆಯ ಮೇರೆಗೆ ಈ ಆಯ್ಕೆ ಮಾಡಲಾಗಿದೆ. ೨೦೨೮ರ ವೇಳೆಗೆ ₹೫೦೦೦ ಕೋಟಿ ಆದಾಯದ ಗುರಿ ಹೊಂದಲಾಗಿದೆ.

ಬೆಂಗಳೂರು (ಮೇ 22): ಕರ್ನಾಟಕ ಸಾಂಪ್ರದಾಯಿಕ ಹೆಮ್ಮೆ ಮೈಸೂರು ಸ್ಯಾಂಡಲ್ ಸೋಪ್‌ಗೆ ಈಗ ಬಾಲಿವುಡ್ ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಈ ತೀರ್ಮಾನ ಕುರಿತಂತೆ ಸಾರ್ವಜನಿಕವಾಗಿ ವಿರೋಧಗಳು ಹಾಗೂ ಟೀಕೆಗಳೂ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದ ಕೈಗಾರಿಕಾ ಸಚಿವ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಎಂ.ಬಿ. ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ನಮ್ಮ ನಾಡಿನ ಹೆಮ್ಮೆಯ ಸೋಪ್ ಬ್ರ್ಯಾಂಡ್ ಆಗಿರುವ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಜಾಗತಿಕ ಮಟ್ಟದ ಒಂದು ಬ್ರ್ಯಾಂಡ್ ಆಗಿ ಮಾಡುವ ಇಚ್ಛಾಶಕ್ತಿಯನ್ನು ಹೊಂದಲಾಗಿದೆ. ಈ ಹಿನ್ನೆಲೆಯಲ್ಲು ನಟಿ ತಮನ್ನಾ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಅವರ ಆಯ್ಕೆಯ ಬಗ್ಗೆ ಮಾರುಕಟ್ಟೆ ತಜ್ಞರು ಏಕೆ ಅವರನ್ನೇ ಆಯ್ಕೆ ಮಾಡಬೇಕು ಎಂಬುದಕ್ಕೆ ಕಾರಣವನ್ನೂ ನೀಡಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ಅನ್ನು ನಮ್ಮ ರಾಜ್ಯ ಮಾತ್ರವಲ್ಲದೇ ರಾಷ್ಟ್ರೀಯ ಮಟ್ಟಕ್ಕೆ ಮಾರುಕಟ್ಟೆ ವಿಸ್ತರಣೆ ಮಾಡುವ ದೃಷ್ಟಿಯಿಂದ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಆಯ್ಕೆಗೆ 4 ಪ್ರಮುಖ ಕಾರಣಗಳೂ ಇವೆ ಎಂದು ಸ್ಪಷ್ಟಪಡಿಸಿದ್ದಾರೆ.

ತಮನ್ನಾ ಆಯ್ಕೆ ಹಿಂದೆ ಇರುವ ಪ್ರಮುಖ ಕಾರಣಗಳು:
ಸಚಿವ ಎಂಬಿ ಪಾಟೀಲ್ ಅವರು ತಮ್ಮ ಟ್ವೀಟ್‌ನಲ್ಲಿ ಈ ಆಯ್ಕೆ ಯಾವುದೆ ಆತುರದಲ್ಲದೇ, ವಿವಿಧ ಮಾರ್ಕೆಟಿಂಗ್ ತಜ್ಞರ ಜೊತೆ ಚರ್ಚಿಸಿ ಕೈಗೊಂಡ ತೀರ್ಮಾನವಾಗಿದೆ ಎಂದು ತಿಳಿಸಿದ್ದಾರೆ.

  • ತಮನ್ನಾ ಭಾಟಿಯಾ ಯಾವುದೇ ಪ್ರಾದೇಶಿಕ ಅಥವಾ ಭಾಷಾ ವರ್ಗಕ್ಕೆ ಸೀಮಿತವಾಗಿಲ್ಲದ ವ್ಯಕ್ತಿತ್ವ ಹೊಂದಿದ್ದಾರೆ. ಬಹುಭಾಷಾ ಚಿತ್ರಗಳಲ್ಲಿ ಅಭಿನಯಿಸಿದ್ದು, ರಾಷ್ಟ್ರವ್ಯಾಪಿ ನಮ್ಮ ಸೋಪು ಮಾರ್ಕೆಟಿಂಗ್‌ ಮಾಡಲು ಸೂಕ್ತವಾದ ಆಯ್ಕೆ ಆಗಿದ್ದಾರೆ.
  • ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯ: ತಮನ್ನಾ ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಲಕ್ಷಾಂತರ ಜನರನ್ನು ತಲುಪುತ್ತಿದ್ದು, ಬ್ರಾಂಡ್ ಜಾಹೀರಾತಿಗೆ ಸಹಕಾರಿ ಆಗಲಿದೆ. ಸಾಮಾಜಿಕ ಜಾಲತಾಣದ ಮೂಲಕವೂ ನಮಗೆ ಮಾರುಕಟ್ಟೆ ಸಿಗಬಹುದು.
  • ಬ್ರಾಂಡ್ ತಲುಪಬೇಕಾದ ಗುರಿ ಗ್ರಾಹಕರಿಗೆ ಪೂರಕ: ತಮನ್ನಾರ ಪ್ರಭಾವ ವ್ಯಾಪಕವಾಗಿರುವುದರಿಂದ, ಮೈಸೂರು ಸ್ಯಾಂಡಲ್ ಉತ್ಪನ್ನಗಳು ಕರ್ನಾಟಕದಾಚೆಯ ಮಾರುಕಟ್ಟೆಗೆ ತಲುಪುವುದು ಸುಲಭವಾಗಲಿದೆ.
  • ಮಾರ್ಕೆಟಿಂಗ್‌ಗೆ ಹೊಂದಾಣಿಕೆ: ಜಾಹೀರಾತು ಮತ್ತು ಪ್ರಚಾರ ಕಾರ್ಯಗಳಿಗೆ ತಮನ್ನಾರ ಇಮೇಜ್ ಸೂಕ್ತವಾಗಿದೆ.

ಸ್ಥಳೀಯದ ಮಟ್ಟದಿಂದ ಜಾಗತಿಕವಾಗಿ ಸ್ಪರ್ಧೆ: 
ಸಚಿವರು ತಮ್ಮ ಟ್ವೀಟ್‌ನಲ್ಲಿ ಮೈಸೂರು ಸ್ಯಾಂಡಲ್‌ ಸೋಪಿನ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದು, 'ಮೈಸೂರು ಸ್ಯಾಂಡಲ್ ಸೋಪ್ ಕರ್ನಾಟಕದೊಳಗಿನ ಅತ್ಯುತ್ತಮ ಬ್ರಾಂಡ್ ಆಗಿದ್ದು, ಈಗ ಅದರ ಗುರಿ ರಾಜ್ಯದಾಚೆಯ ಮಾರುಕಟ್ಟೆಗೆ ತಲುಪುವುದು' ಎಂದು ಉಲ್ಲೇಖಿಸಿದ್ದಾರೆ. ಕೆಎಸ್‌ಡಿಎಲ್ (ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್) ಸಂಸ್ಥೆಯು ಸರ್ಕಾರಿ ಮಾಲೀಕತ್ವದ ಸೋಪು ಮುಂಬರುವ ವರ್ಷಗಳಲ್ಲಿ ತನ್ನ ವ್ಯಾಪಾರವನ್ನು ಹೆಚ್ಚಿಸಲು ಧೃಡ ಸಂಕಲ್ಪ ಮಾಡಿದೆ. '2028ರ ವೇಳೆಗೆ ವಾರ್ಷಿಕ ₹5000 ಕೋಟಿ ಆದಾಯ ತಲುಪಿಸುವುದು ನಮ್ಮ ದೃಷ್ಟಿಯಾಗಿದೆ' ಎಂದು ಅವರು ಹೇಳಿದ್ದಾರೆ.

Scroll to load tweet…

ಚಲನಚಿತ್ರೋದ್ಯಮದ ಗೌರವವಿದೆ – ತೀರ್ಮಾನ ರಾಜಕೀಯ ಅಲ್ಲ: 
ಅಂತೆಯೇ, ಕನ್ನಡ ಚಲನಚಿತ್ರೋದ್ಯಮದ ಬಗ್ಗೆ ಮಾನ್ಯತೆ ನೀಡುತ್ತೇವೆ. ರಾಜ್ಯ ಸರ್ಕಾರ ಸೇರಿದಂತೆ ಕೆಎಸ್‌ಡಿಎಲ್‌ಗೆ ಕನ್ನಡ ಚಲನಚಿತ್ರೋದ್ಯಮದ ಬಗ್ಗೆ ಅಪಾರವಾದ ಗೌರವವಿದೆ. ಕೆಲವು ಕನ್ನಡ ಚಿತ್ರಗಳು ಬಾಲಿವುಡ್‌ಗೂ ಸ್ಪರ್ಧಿಸುತ್ತಿವೆ. ಆದ್ದರಿಂದ ಈ ತೀರ್ಮಾನ ರಾಜಕೀಯ ಅಥವಾ ಭಾಷೆಗೆ ಸೀಮಿತವಾಗಿರದೇ, ವ್ಯಾಪಾರದ ದೃಷ್ಟಿಕೋನದಿಂದ ಈ ಆಯ್ಕೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅಂದರೆ ಒಟ್ಟಾರೆಯಾಗಿ, ಮೈಸೂರು ಸ್ಯಾಂಡಲ್ ಸೋಪಿನ ಬ್ರಾಂಡ್‌ನ್ನು ರಾಜ್ಯ ಮಟ್ಟದಿಂದ ರಾಷ್ಟ್ರ ಹಾಗೂ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ, ನಟಿ ತಮನ್ನಾ ಅವರನ್ನು ಬ್ರಾಂಡ್ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಈ ನಿರ್ಧಾರವನ್ನು ಸಂಕುಚಿತ ನೋಟದಿಂದ ನೋಡದೆ, ವ್ಯಾಪಾರದ ದೃಷ್ಟಿಯಿಂದ ಪರಿಗಣಿಸಿ ಬೆಂಬಲಿಸುವ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.

Scroll to load tweet…