ಮೀ ಟೂ ಅಭಿಯಾನದಡಿ ನಟಿ ತನುಶ್ರೀ ದತ್ತಾ 2008ರ ಘಟನೆಗೆ ಸಂಬಂಧಿಸಿದಂತೆ ನಟ ನಾನಾ ಪಾಟೇಕರ್ ವಿರುದ್ಧ 2018ರಲ್ಲಿ ದೂರು ದಾಖಲಿಸಿದ್ದರು. ಆದರೆ, ಘಟನೆ ನಡೆದು ಹಲವು ವರ್ಷಗಳ ನಂತರ ದೂರು ದಾಖಲಿಸಿದ್ದರಿಂದ, ಕಾನೂನಿನ ಕಾಲಮಿತಿಯ ಕಾರಣಕ್ಕೆ ಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿದೆ. ಸೂಕ್ತ ಕಾರಣವಿಲ್ಲದೆ ವಿಳಂಬವಾಗಿ ದೂರು ದಾಖಲಿಸಿದ್ದನ್ನು ಪರಿಗಣಿಸಿ, ಅರ್ಜಿಯಲ್ಲಿ ಹುರುಳಿಲ್ಲವೆಂದು ನ್ಯಾಯಾಲಯ ತೀರ್ಪು ನೀಡಿದೆ.
ಲೈಂಗಿಕ ದೌರ್ಜನ್ಯದ ಮೀ ಟೂ ಅಭಿಯಾನ ರಾಷ್ಟ್ರವ್ಯಾಪಿ ಸದ್ದು ಮಾಡಿದ್ದು ಗೊತ್ತೇ ಇದೆ. ಹಲವು ನಟಿಯರು ಸಿನಿ ಇಂಡಸ್ಟ್ರಿಯಲ್ಲಿ ತಮಗಾಗಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ತೆರೆದಿಟ್ಟಿದ್ದರು. ಇವುಗಳ ಪೈಕಿ ಕೆಲವು ಪ್ರಕರಣಗಳು ಸುಳ್ಳು ಎಂದು ಸಾಬೀತಾಗಿತ್ತು. ಅದರಲ್ಲಿಯೂ ಸಿನಿಮಾದ ನಟ, ನಿರ್ದೇಶಕ, ನಿರ್ಮಾಪಕ... ಹೀಗೆ ಹಲವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಹೇಳಿಕೊಂಡಿದ್ದ ನಟಿಯರು 10-15 ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಹೇಳಿಕೊಂಡಿದ್ದರು. ಇದರಿಂದ ಸಿನಿಮಾ ಕ್ಷೇತ್ರ ಮಾತ್ರವಲ್ಲದೇ ವಿವಿಧ ಉದ್ಯೋಗಗಳಲ್ಲಿ ನಿಜವಾಗಿಯೂ ಲೈಂಗಿಕ ದೌರ್ಜನ್ಯ ಅನುಭವಿಸುತ್ತಿದ್ದ ಮಹಿಳೆಯರ ಕೇಸುಗಳ ಕೂಡ ಹಳ್ಳ ಹಿಡಿಯತೊಡಗಿತ್ತು. ತಮಗೆ ಅವಕಾಶ ಸಿಗುವುದಕ್ಕಾಗಿ ಹೇಳಿದಂತೆ ಕೇಳಿ ಕೊನೆಗೆ ಅವಕಾಶಗಳ ಕೊರತೆಯಾದಾಗ ಮೀ-ಟೂ ಆರೋಪ ಹೊರಿಸಲಾಗುತ್ತಿದೆ ಎಂದು ಖುದ್ದು ಕೆಲವು ನಟಿಯರೇ ಹೇಳಿಕೆ ನೀಡುವ ಮೂಲಕ ಈ ಚಳವಳಿ ಇನ್ನಷ್ಟು ಹಿನ್ನಡೆಯನ್ನೂ ಪಡೆದುಕೊಂಡಿತ್ತು.
ಇದೀಗ ಅಂಥದ್ದೇ ಪ್ರಕರಣವೊಂದರಲ್ಲಿ ನಟಿ ತನುಶ್ರೀ ದತ್ತಾ, ಹಿರಿಯ ನಟ ನಾನಾ ಪಾಟೇಕರ್ ಸೇರಿದಂತೆ ಇನ್ನು ಕೆಲವರ ವಿರುದ್ಧ 10 ವರ್ಷಗಳ ಬಳಿಕ ದೂರು ಸಲ್ಲಿಸಿದ್ದರು. 'ಹಾರ್ನ್ ಓಕೆ ಪ್ಲೀಸ್' ಚಿತ್ರದ ಹಾಡಿನ ಚಿತ್ರೀಕರಣ 2008ರಲ್ಲಿ ನಡೆದ ವೇಳೆ ಪಾಟೇಕರ್ ಕಿರುಕುಳ ನೀಡಿದ್ದಾರೆ ಎಂದು ತನುಶ್ರೀ 2018ರ ಅಕ್ಟೋಬರ್‌ನಲ್ಲಿ ದೂರು ದಾಖಲಿಸಿದ್ದರು. ತಾವು ಅಶ್ಲೀಲ ಅಥವಾ ಅಹಿತಕರ ರೀತಿಯಲ್ಲಿ ನರ್ತಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ನಂತರವೂ ಪಾಟೇಕರ್ ತಮ್ಮನ್ನು ಅನುಚಿತ ರೀತಿಯಲ್ಲಿ ಸ್ಪರ್ಶಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ಪಾಟೇಕರ್ ಜೊತೆಗೆ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ, ನಿರ್ಮಾಪಕ ಸಮೀ ಸಿದ್ದಿಕಿ ಮತ್ತು ನಿರ್ದೇಶಕ ರಾಕೇಶ್ ಸಾರಂಗ್ ಅವರನ್ನೂ ದೂರಿನಲ್ಲಿ ಹೆಸರಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಮೀ ಟು ಅಭಿಯಾನದಿಂದ ಕನ್ನಡ ಇಂಡಸ್ಟ್ರಿಯಲ್ಲಿ ಭಾರಿ ಬದಲಾವಣೆ: ಶ್ರುತಿ ಹರಿಹರನ್ ಓಪನ್ ಮಾತು...
ಇದರ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಲೇ ಬಂದಿದೆ. ಆದರೆ 2008ರಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದ ಅಪರಾಧದ ಬಗ್ಗೆ 10 ವರ್ಷ ಬಿಟ್ಟು ದೂರು ಸಲ್ಲಿಸಿರುವುದು, ಕಾನೂನಿನ ಕಾಲಮಿತಿಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕೋರ್ಟ್ ಹೇಳಿದೆ. ಕಾಲಮಿತಿ ಕಾಯ್ದೆಯ ಗುಡುವಿನ ಏಳು ವರ್ಷಗಳ ಅವಧಿ ಮೀರಿದ ನಂತರವೂ ಪ್ರಕರಣವನ್ನು ಏಕೆ ಪರಿಗಣಿಸಬೇಕು ಎನ್ನುವುದಕ್ಕೆ ಕೋರ್ಟ್ಗೆ ಸಕಾರಣ ಸಿಗುತ್ತಿಲ್ಲ. ಅಷ್ಟೇ ಅಲ್ಲದೇ ವಿಳಂಬವಾಗಿ ಪ್ರಕರಣ ದಾಖಲು ಮಾಡಿದ್ದು ಏಕೆ ಎನ್ನುವ ಬಗ್ಗೆ ಅರ್ಜಿದಾರ ನಟಿಯಲ್ಲಿಯೂ ಯಾವುದೇ ಸೂಕ್ತ ಉತ್ತರವಿಲ್ಲ. ಕೋರ್ಟ್ನಲ್ಲಿ ಕೇಸು ದಾಖಲು ಮಾಡಲು ಕೂಡ ವಿಳಂಬವಾಗಿದೆ. ಈ ಬಗ್ಗೆಯೂ ನಟಿ ಯಾವುದೇ ಸೂಕ್ತ ಕಾರಣ ಕೊಟ್ಟಿಲ್ಲ. ಇವುಗಳನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡಿರುವ ಕಾರಣ, ಅರ್ಜಿಯಲ್ಲಿ ಹುರುಳಿಲ್ಲ ಎಂದು ಪರಿಗಣಿಸಿ, ಆರೋಪಿ ವಿರುದ್ಧದ ಕೇಸ್ ಅನ್ನು ರದ್ದುಗೊಳಿಸಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ.
ಅಷ್ಟಕ್ಕೂ, ಮುಂಬೈ ಪೊಲೀಸರು 2019ರಲ್ಲಿ ಪ್ರಕರಣ ಮುಕ್ತಾಯಗೊಳಿಸುವಂತೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಪಾಟೇಕರ್ ಮತ್ತು ಇತರ ಆರೋಪಿಗಳಾದ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ, ನಿರ್ಮಾಪಕ ಸಮೀ ಸಿದ್ದಿಕಿ ಮತ್ತು ನಿರ್ದೇಶಕ ರಾಕೇಶ್ ಸಾರಂಗ್ ವಿರುದ್ಧದ ಆರೋಪಗಳಿಗೆ ಸೂಕ್ತ ಪುರಾವೆಗಳಿಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ನಟಿ, ಡಿಸೆಂಬರ್ 2019 ರಲ್ಲಿ ಅರ್ಜಿ ಸಲ್ಲಿಸಿ, ಆರೋಪಿಗಳ ವಿರುದ್ಧ ಹೆಚ್ಚಿನ ತನಿಖೆ ಮತ್ತು ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಆದರೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 468 ರ ಅಡಿಯಲ್ಲಿ ಕೆಲವು ಅಪರಾಧಗಳನ್ನು ವಿಚಾರಣೆಗೆ ಒಳಪಡಿಸಲು ನಿರ್ದಿಷ್ಟ ಕಾಲಮಿತಿ ವಿಧಿಸುವ ಮಿತಿ ಇದ್ದು, ಅದರ ಪಾಲನೆಯಾಗಿಲ್ಲ, ಜೊತೆಗೆ ವಿಳಂಬಕ್ಕೆ ಕಾರಣವನ್ನೂ ನೀಡಿಲ್ಲದೇ ಇರುವುದರಿಂದ ನಟಿಯ ಅರ್ಜಿ ವಜಾಗೊಂಡಿದೆ.
ಮತ್ತೆ ಮುನ್ನೆಲೆಗೆ ಬಂತು ಮೀ ಟೂ: ಕಮಲ ಹಾಸನ್ ವಿರುದ್ಧ ಖ್ಯಾತ ಗಾಯಕಿ ಚಿನ್ಮಯಿ ಕೆಂಡಾಮಂಡಲ!
