"ಯಾವುದೇ ಮಹಿಳೆ ತನ್ನ ವಯಸ್ಸಿನ ಬಗ್ಗೆ ಕ್ಷಮೆಯಾಚಿಸುವ ಅಥವಾ ಮುಜುಗರ ಪಡುವ ಅಗತ್ಯವಿಲ್ಲ. ಪ್ರತಿಯೊಬ್ಬ ಮಹಿಳೆಯೂ ತಮ್ಮ ವಯಸ್ಸನ್ನು ಒಂದು ಗೌರವದ ಪದಕದಂತೆ (Badge of Honour) ಧರಿಸಬೇಕು ಮತ್ತು ತಮ್ಮ ಸಾಧನೆಯನ್ನು ಸಂಭ್ರಮಿಸಬೇಕು" ಎಂದಿದ್ದಾರೆ.

ಮಲೈಕಾ ಅರೋರಾ ಹೇಳಿದ್ದೇನು?

ಬಾಲಿವುಡ್‌ನ 'ಫಿಟ್‌ನೆಸ್ ಕ್ವೀನ್' ಮತ್ತು 'ಸ್ಟೈಲ್ ಐಕಾನ್' ಎಂದೇ ಖ್ಯಾತರಾಗಿರುವ ಮಲೈಕಾ ಅರೋರಾ ಅವರು ತಮ್ಮ 52ನೇ ವಯಸ್ಸಿನಲ್ಲೂ ಯುವತಿಯರಿಗೂ ಪೈಪೋಟಿ ನೀಡುವಂತಹ ಮೈಕಟ್ಟು ಮತ್ತು ಚಾರ್ಮ್ ಹೊಂದಿದ್ದಾರೆ. ಆದರೆ, ಗ್ಲಾಮರ್ ಲೋಕದಲ್ಲಿ ಮಹಿಳೆಯರ ವಯಸ್ಸಿನ ಬಗ್ಗೆ ನಡೆಯುವ ಚರ್ಚೆಗಳು ಮತ್ತು ಸಮಾಜದ ದ್ವಂದ್ವ ನೀತಿಯ ವಿರುದ್ಧ ಮಲೈಕಾ ಅರೋರಾ (Malaika Arora) ಈಗ ಬಹಿರಂಗವಾಗಿ ಸಮರ ಸಾರಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಆಡಿರುವ ಮಾತುಗಳು ಈಗ ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿವೆ.

ಹೆಣ್ಣಿಗೊಂದು ಮಾಪನ, ಗಂಡಿಗೊಂದು ವಿನಾಯಿತಿ!

'ದಿ ರೈಟ್ ಆಂಗಲ್' ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮಲೈಕಾ, ಸಮಾಜವು ವಯಸ್ಸಾದ ಪುರುಷರನ್ನು ಮತ್ತು ಮಹಿಳೆಯರನ್ನು ನೋಡುವ ರೀತಿಯಲ್ಲಿ ಎಷ್ಟು ವ್ಯತ್ಯಾಸವಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. "ನನಗೆ ಆಶ್ಚರ್ಯವಾಗುವುದು ಏನೆಂದರೆ, ಮಹಿಳೆಯರನ್ನು ಮಾತ್ರ ಯಾವಾಗಲೂ ಅವರ ವಯಸ್ಸು, ಸೌಂದರ್ಯ ಮತ್ತು ಗ್ಲಾಮರ್ ಲುಕ್ ಬಗ್ಗೆ ಪ್ರಶ್ನೆ ಮಾಡಲಾಗುತ್ತದೆ. ಆದರೆ ಪುರುಷರು ವಯಸ್ಸಾದಂತೆ ಇಂತಹ ಯಾವುದೇ ಪ್ರಶ್ನೆಗಳನ್ನು ಎದುರಿಸುವುದಿಲ್ಲ. ಮಹಿಳೆಯರು ಮಾತ್ರ ತಾವು ಇನ್ನೂ ಸುಂದರವಾಗಿ ಕಾಣುತ್ತಿದ್ದೇವೆ ಎಂದು ಪದೇ ಪದೇ ಸಾಬೀತುಪಡಿಸಬೇಕಾ?" ಎಂದು ಮಲೈಕಾ ಕಿಡಿಕಾರಿದ್ದಾರೆ.

"ಈ ವಯಸ್ಸಿನಲ್ಲೂ..." ಎಂಬ ಕಮೆಂಟ್‌ಗಳಿಗೆ ಚಾಟಿ!

ಮಲೈಕಾ ಅವರಿಗೆ ಅತಿ ಹೆಚ್ಚು ಕೇಳಿಬರುವ ಕಮೆಂಟ್ ಎಂದರೆ, "ಈ ವಯಸ್ಸಿನಲ್ಲೂ ಇಷ್ಟು ಫಿಟ್ ಆಗಿದ್ದೀರಲ್ಲ?". ಇದಕ್ಕೆ ಮಲೈಕಾ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. "ಶೀ ಲುಕ್ಸ್ ಅಮೇಜಿಂಗ್ ಫಾರ್ ಹರ್ ಏಜ್ (ಈ ವಯಸ್ಸಿಗೆ ಅವರು ಅದ್ಭುತವಾಗಿ ಕಾಣುತ್ತಾರೆ) ಎಂಬ ಮಾತುಗಳಲ್ಲಿ ವಯಸ್ಸನ್ನೇ ಯಾಕೆ ಹೈಲೈಟ್ ಮಾಡಬೇಕು? ನಾನು ಅಂದೂ ನಾನಾಗಿದ್ದೆ, ಇಂದೂ ನಾನೇ, ಇನ್ನು 20 ವರ್ಷಗಳ ನಂತರವೂ ನಾನಾಗಿಯೇ ಇರುತ್ತೇನೆ. ನನ್ನ ಫಿಟ್‌ನೆಸ್ ನನ್ನ ಒಳಗಿನ ಶಕ್ತಿ ಮತ್ತು ಮಾನಸಿಕ ಸ್ಥಿತಿಯ ಮೇಲೆ ನಿರ್ಧಾರವಾಗುತ್ತದೆಯೇ ಹೊರತು ಕೇವಲ ಕ್ಯಾಲೆಂಡರ್ ದಿನಾಂಕಗಳ ಮೇಲಲ್ಲ," ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

ಇದು ನನ್ನ ವಯಸ್ಸಿನ 'ಸುವರ್ಣ ಕಾಲ' (Prime Phase)

52ನೇ ವಯಸ್ಸಿನಲ್ಲೂ ಮಲೈಕಾ ಸಣ್ಣ ವಿರಾಮಕ್ಕೂ ತಯಾರಿಲ್ಲ. "ನಾನು ಬೆಳಗ್ಗೆ ಎದ್ದ ತಕ್ಷಣ ನಾನು ಸುಂದರವಾಗಿ ಕಾಣುತ್ತಿದ್ದೇನೆ ಎಂದು ಅಂದುಕೊಳ್ಳುವುದಿಲ್ಲ. ಬದಲಾಗಿ ಇಂದು ಏನಾದರೂ ಹೊಸದನ್ನು ಸಾಧಿಸಬೇಕು, ನನ್ನ ಕುಟುಂಬ ಮತ್ತು ಮಕ್ಕಳು ಹೆಮ್ಮೆ ಪಡುವಂತಹ ಕೆಲಸ ಮಾಡಬೇಕು ಎಂಬ ಹಸಿವಿನಿಂದ ಎದ್ದೇಳುತ್ತೇನೆ. ಈಗ ನಾನು ನನ್ನ ಜೀವನದ ಅತ್ಯುತ್ತಮ ಘಟ್ಟದಲ್ಲಿದ್ದೇನೆ (Prime)" ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಕೊನೆಯದಾಗಿ, ಮಹಿಳೆಯರಿಗೆ ಕಿವಿಮಾತು ಹೇಳಿರುವ ಮಲೈಕಾ, "ಯಾವುದೇ ಮಹಿಳೆ ತನ್ನ ವಯಸ್ಸಿನ ಬಗ್ಗೆ ಕ್ಷಮೆಯಾಚಿಸುವ ಅಥವಾ ಮುಜುಗರ ಪಡುವ ಅಗತ್ಯವಿಲ್ಲ. ಪ್ರತಿಯೊಬ್ಬ ಮಹಿಳೆಯೂ ತಮ್ಮ ವಯಸ್ಸನ್ನು ಒಂದು ಗೌರವದ ಪದಕದಂತೆ (Badge of Honour) ಧರಿಸಬೇಕು ಮತ್ತು ತಮ್ಮ ಸಾಧನೆಯನ್ನು ಸಂಭ್ರಮಿಸಬೇಕು" ಎಂದು ಸ್ಫೂರ್ತಿದಾಯಕವಾಗಿ ಮಾತು ಮುಗಿಸಿದ್ದಾರೆ. ಸದ್ಯಕ್ಕೆ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಮಿಂಚುತ್ತಿರುವ ಮಲೈಕಾ, ತಮ್ಮ ಮಾತುಗಳ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.