ಧಾರವಾಡದ ಕಮಲಾಪುರ ಸರ್ಕಾರಿ ಶಾಲೆಯಿಂದ ಇಬ್ಬರು 8 ವರ್ಷದ ಮಕ್ಕಳನ್ನು ಅಪಹರಿಸಲಾಗಿದೆ. ಮಧ್ಯಾಹ್ನದ ಊಟದ ನಂತರ ಅನಾಮಿಕ ವ್ಯಕ್ತಿಯೊಬ್ಬ ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

ಧಾರವಾಡ(ಜ.12): ವಿದ್ಯಾಕಾಶಿ ಧಾರವಾಡದಲ್ಲಿ ಹಗಲಲ್ಲೇ ದಿಗಿಲು ಹುಟ್ಟಿಸುವ ಘಟನೆಯೊಂದು ನಡೆದಿದೆ. ನಗರದ ಕಮಲಾಪುರ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ನಂಬರ್ 4 ರಿಂದ ಇಬ್ಬರು ಎಂಟು ವರ್ಷದ ಮಕ್ಕಳನ್ನು ಅನಾಮಿಕ ವ್ಯಕ್ತಿಯೊಬ್ಬ ಅಪಹರಿಸಿದ್ದು, ಇಡೀ ನಗರದ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮಧ್ಯಾಹ್ನದ ಊಟದ ಬಳಿಕ ಮಕ್ಕಳ ಕಿಡ್ನ್ಯಾಪ್!

ಸೋಮವಾರ ಮಧ್ಯಾಹ್ನ ಸುಮಾರು 2:30ರ ಸಮಯದಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಮಧ್ಯಾಹ್ನದ ಊಟ ಮುಗಿದ ನಂತರ ತರಗತಿಯಲ್ಲಿ ಕುಳಿತಿದ್ದ ಇಬ್ಬರು ಮಕ್ಕಳನ್ನು ಕಿಡ್ನ್ಯಾಪರ್ ಹೊರಕ್ಕೆ ಕರೆದಿದ್ದಾನೆ. ನಂತರ ಶಾಲಾ ಆವರಣದಿಂದ ಸದ್ದಿಲ್ಲದೆ ಮಕ್ಕಳನ್ನು ಕರೆದೊಯ್ದು ಬೈಕ್ ಮೇಲೆ ಕೂರಿಸಿಕೊಂಡು ಪರಾರಿಯಾಗಿದ್ದಾನೆ. ಅಪಹರಣಕಾರ ಬೈಕ್ ಮೇಲೆ ಮಕ್ಕಳನ್ನು ಕರೆದೊಯ್ಯುತ್ತಿರುವ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಿಡ್ನ್ಯಾಪ್ ಆಗಿರುವ ಮಕ್ಕಳ ವಿವರ

ಅಪಹರಣಕ್ಕೊಳಗಾದ ಮಕ್ಕಳಿಬ್ಬರೂ ಮೂರನೇ ತರಗತಿಯಲ್ಲಿ ಓದುತ್ತಿದ್ದರು. 8 ವರ್ಷದ ತನ್ವೀರ್ ಅಹ್ಮದ್ ದೊಡ್ಮನಿ ಹಾಗೂ ಅದೇ ವಯಸ್ಸಿನ ಲಕ್ಷ್ಮಿ ಮಂಜುನಾಥ್ ಕರೆಪ್ಪನ್ನವರ ಎಂಬುವವರೇ ಅಪಹರಣಕ್ಕೊಳಗಾದ ಮಕ್ಕಳು. ಒಟ್ಟಿಗೆ ಊಟ ಮಾಡಿ ಕುಳಿತಿದ್ದ ಈ ಇಬ್ಬರು ಮಕ್ಕಳನ್ನು ಹಾಡುಹಗಲೇ ಅಪಹರಿಸಿರುವುದು ಹಲವು ಅನುಮಾನ, ಆತಂಕಗಳಿಗೆ ಎಡೆಮಾಡಿಕೊಟ್ಟಿದೆ.

ಕಣ್ಣೀರು ಹಾಕುತ್ತಿರುವ ಕುಟುಂಬಸ್ಥರು; ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ಮಕ್ಕಳು ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಪೋಷಕರು ಶಾಲೆಗೆ ಧಾವಿಸಿ ಕಣ್ಣೀರು ಹಾಕುತ್ತಿದ್ದಾರೆ. ಶಾಲಾ ಅವಧಿಯಲ್ಲಿ ಮಕ್ಕಳು ಕಿಡ್ನ್ಯಾಪ್ ಆಗುತ್ತಾರೆಂದರೆ ಏನು ಹೇಳಬೇಕು? ಯಾವ ಸುರಕ್ಷತೆ ಮೇಲೆ ಮಕ್ಕಳನ್ನು ಶಾಲೆಗೆ ಕಳಿಸಬೇಕು, ಈ ಘಟನೆಗೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಮಕ್ಕಳನ್ನು ಸುರಕ್ಷಿತವಾಗಿ ನಮಗೆ ತಂದುಕೊಡಿ ಎಂದು ಶಿಕ್ಷಕರನ್ನು ಹಾಗೂ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ಥಳದಲ್ಲಿ ಉಪನಗರ ಪೊಲೀಸರ ಮೊಕ್ಕಾಂ; ತನಿಖೆ ತೀವ್ರ

ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಧಾರವಾಡ ಉಪನಗರ ಪೊಲೀಸರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಅಪಹರಣಕಾರ ಯಾವ ಮಾರ್ಗವಾಗಿ ಹೋಗಿದ್ದಾನೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ. ಪೋಷಕರಿಂದಲೂ ಮಾಹಿತಿ ಪಡೆದಿದ್ದು, ಮಕ್ಕಳ ಪತ್ತೆಗಾಗಿ ಬಲೆ ಬೀಸಿದ್ದಾರೆ.