ಧಾರವಾಡದ ನಂದಿನಿ ಲೇಔಟ್‌ನಲ್ಲಿ, ಮುಚ್ಚಿದ ಕೋಣೆಯಲ್ಲಿ ಇದ್ದಿಲು ಒಲೆಯ ಹೊಗೆಯಿಂದ ಉಸಿರುಗಟ್ಟಿ ನೇಪಾಳಿ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ. ಇದೇ ಘಟನೆಯಲ್ಲಿ ಆರು ಮಂದಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ 'ಚಿಂಗ್ಸ್ ಚೌ' ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಧಾರವಾಡ: ನಗರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಇದ್ದಿಲು ಹೊಗೆಯಿಂದ ಉಸಿರಾಟದ ತೊಂದರೆಯಾಗಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಇನ್ನೂ ಆರು ಮಂದಿ ಅಸ್ವಸ್ಥರಾಗಿರುವ ಘಟನೆ ಧಾರವಾಡ ನಗರದ ನಂದಿನಿ ಲೇಔಟ್‌ನಲ್ಲಿ ಬೆಳಕಿಗೆ ಬಂದಿದೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ.

ಮೃತ ಕಾರ್ಮಿಕನನ್ನು ಬಿಬೆಕ್ ಎಂದು ಗುರುತಿಸಲಾಗಿದ್ದು, ಅಸ್ವಸ್ಥರಾದವರನ್ನು ನರೇಶ್ (45), ನಿತೇಶ್ (18), ಡಿಕೆಶಿ (40), ಸುಧನ್ (30), ಕುಮಾರ್ (50) ಮತ್ತು ಲಕ್ಷ್ಮಣ್ (30) ಎಂದು ಗುರುತಿಸಲಾಗಿದೆ. ಅಸ್ವಸ್ಥರನ್ನೆಲ್ಲಾ ತಕ್ಷಣ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದ್ದಿಲು ಒಲೆಯ ಹೊಗೆಯಿಂದ ಅನಾಹುತ

ಪೊಲೀಸರು ಮತ್ತು ಸ್ಥಳೀಯರಿಂದ ಲಭ್ಯವಾದ ಮಾಹಿತಿಯಂತೆ, ನಂದಿನಿ ಲೇಔಟ್‌ನಲ್ಲಿರುವ ಒಂದು ಮನೆಯಲ್ಲಿ ಏಳು ಮಂದಿ ನೇಪಾಳಿ ಕಾರ್ಮಿಕರು ವಾಸವಾಗಿದ್ದರು. ಇವರೆಲ್ಲರೂ ಧಾರವಾಡದ ‘ಚಿಂಗ್ಸ್ ಚೌ’ ಎಂಬ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಮೊಮೊಸ್ ಹಾಗೂ ಇತರ ಆಹಾರ ಪದಾರ್ಥಗಳ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ರಾತ್ರಿ ಚಿಕನ್ ಬಾರ್ಬಿಕ್ಯೂ ಮಾಡಲು ಇದ್ದಿಲು ಒಲೆಯನ್ನು ಬಳಸಲಾಗಿದ್ದು, ರೊಟ್ಟಿ ಮಾಡುವ ಒಲೆಯಿಂದ ಉಂಟಾದ ಹೊಗೆ ಮನೆಯೊಳಗೆ ತುಂಬಿಕೊಂಡಿದೆ. ಕೊಠಡಿ ಮುಚ್ಚಿದ ಸ್ಥಿತಿಯಲ್ಲಿ ಇದ್ದ ಕಾರಣ ಹೊಗೆ ಹೊರ ಹೋಗದೆ, ಕಾರ್ಮಿಕರಿಗೆ ಉಸಿರಾಟದ ತೊಂದರೆ ಉಂಟಾಗಿದೆ ಎನ್ನಲಾಗಿದೆ.

ಬೆಳಿಗ್ಗೆ ಬೆಳಕಿಗೆ ಬಂದ ಘಟನೆ

ಬೆಳಿಗ್ಗೆ ಹೊಟೇಲ್ ಕಾರ್ಮಿಕರು ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಹೊಟೇಲ್ ಮಾಲಿಕರು ಅವರ ವಾಸದ ಮನೆಗೆ ತೆರಳಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸ್ ಆಯುಕ್ತರ ಹೇಳಿಕೆ

ಈ ಕುರಿತು ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, “ಮನೆಯಲ್ಲಿ ಏಳು ಮಂದಿ ನೇಪಾಳಿ ಕಾರ್ಮಿಕರು ವಾಸವಾಗಿದ್ದರು. ಇವರು ಚಿಂಗ್ಸ್ ಚೌ ಹೊಟೇಲ್‌ನಲ್ಲಿ ಕೆಲಸ ಮಾಡುವವರು. ಕೆಲಸಕ್ಕೆ ಬಂದಿರದ ಕಾರಣ ಮಾಲಿಕರು ಮನೆಗೆ ಹೋಗಿ ನೋಡಿದಾಗ ಒಬ್ಬರು ಮೃತಪಟ್ಟಿದ್ದು, ಉಳಿದವರು ಅಸ್ವಸ್ಥರಾಗಿರುವುದು ಗೊತ್ತಾಗಿದೆ. ಅಡುಗೆ ಮಾಡಲು ಬಳಸಿದ ಇದ್ದಿಲು ಒಲೆಯ ಹೊಗೆಯಿಂದ ಉಸಿರಾಟದ ತೊಂದರೆ ಉಂಟಾಗಿರಬಹುದು ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಫುಡ್ ಪಾಯ್ಸನಿಂಗ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೊಠಡಿ ಮುಚ್ಚಿದ ಸ್ಥಿತಿಯಲ್ಲಿತ್ತು. ಈ ಬಗ್ಗೆ ನಾವು ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ತನಿಖೆ ಮುಂದುವರಿಕೆ

ಘಟನೆಗೆ ಸಂಬಂಧಿಸಿದಂತೆ ವಿದ್ಯಾಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಒಂದೇ ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕರ ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿದ್ದು, ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.