ನಟಿ ಕಂಗನಾ ರಣಾವತ್, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ವಿನ್ಯಾಸಕಿ ಮಸಾಬಾ ಗುಪ್ತಾ ವಿರುದ್ಧ ಗಂಭೀರ ಆರೋಪ. ತನ್ನ ಬಿಜೆಪಿ ಬೆಂಬಲದ ಕಾರಣಕ್ಕೆ 'ಎಮರ್ಜೆನ್ಸಿ' ಚಿತ್ರದ ಕುರಿತು ಚರ್ಚಿಸಲು ರೆಹಮಾನ್ ನಿರಾಕರಿಸಿದ್ದರು., ಅಯೋಧ್ಯೆಗೆ ತನ್ನ ಸೀರೆ ಉಟ್ಟಿದ್ದಕ್ಕೆ ಮಸಾಬಾ ಅವಮಾನಿಸಿದರು
ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್, ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ 'ಧಾರ್ಮಿಕ ಕಾರಣಗಳಿಂದ ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ' ಎಂದು ರೆಹಮಾನ್ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕಂಗನಾ, 'ನಾನು ಬಿಜೆಪಿ ಬೆಂಬಲಿಸುತ್ತೇನೆ ಎಂಬ ಕಾರಣಕ್ಕೆ ಚಿತ್ರರಂಗದಲ್ಲಿ ಪೂರ್ವಾಗ್ರಹ ಎದುರಿಸುತ್ತಿದ್ದೇನೆ. ಆದರೆ ನಿಮ್ಮಷ್ಟು ದ್ವೇಷ ಹೊಂದಿರುವ ವ್ಯಕ್ತಿಯನ್ನು ನಾನು ನೋಡಿಲ್ಲ' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಗುಡುಗಿದ್ದಾರೆ.
'ಎಮರ್ಜೆನ್ಸಿ' ಚಿತ್ರದ ಕಥೆ ಕೇಳಲು ಒಪ್ಪದ ಸಂಗೀತ ಮಾಂತ್ರಿಕ
ತಮ್ಮ ಬಹುನಿರೀಕ್ಷಿತ 'ಎಮರ್ಜೆನ್ಸಿ' ಚಿತ್ರದ ಬಗ್ಗೆ ಚರ್ಚಿಸಲು ರೆಹಮಾನ್ ಅವರನ್ನು ಭೇಟಿಯಾಗಲು ಕಂಗನಾ ಪ್ರಯತ್ನಿಸಿದ್ದರಂತೆ. 'ನನ್ನ ಚಿತ್ರದ ಕಥೆ ಹೇಳಲು ಬಯಸಿದ್ದೆ, ಆದರೆ ನೀವು ನನ್ನನ್ನು ಭೇಟಿಯಾಗಲು ಸಹ ನಿರಾಕರಿಸಿದಿರಿ. ಚಿತ್ರದ ಪ್ರಚಾರದ ಭಾಗವಾಗಲು ನಿಮಗೆ ಇಷ್ಟವಿರಲಿಲ್ಲ. ಆದರೆ ವಿರೋಧ ಪಕ್ಷದ ನಾಯಕರೂ ಸಹ ಎಮರ್ಜೆನ್ಸಿ ಚಿತ್ರದ ಸಮತೋಲಿತ ವಿಧಾನವನ್ನು ಮೆಚ್ಚಿದ್ದಾರೆ. ನಿಮ್ಮ ದ್ವೇಷ ನಿಮ್ಮನ್ನು ಕುರುಡನನ್ನಾಗಿ ಮಾಡಿದೆ ಎಂದು ಕಂಗನಾ ಆಕ್ರೋಶ ಹೊರಹಾಕಿದ್ದಾರೆ.
ರಾಮ ಜನ್ಮಭೂಮಿಗೆ ಹೋದಾಗ ಸೀರೆ ವಿಚಾರಕ್ಕೆ ಅವಮಾನ
ತಮಗೆ ಚಿತ್ರರಂಗದಲ್ಲಿ ಆಗುತ್ತಿರುವ ಅವಮಾನಗಳ ಬಗ್ಗೆ ಹಂಚಿಕೊಂಡಿರುವ ಕಂಗನಾ, ವಿನ್ಯಾಸಕಿ ಮಸಾಬ ಗುಪ್ತಾ ಅವರ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 'ನಾನು ಮಸಾಬ ಗುಪ್ತಾ ಅವರ ಸೀರೆ ಧರಿಸಿ ರಾಮ ಜನ್ಮಭೂಮಿಗೆ ಹೋದಾಗ, ಅವರು ನನ್ನ ಸ್ಟೈಲಿಸ್ಟ್‌ಗೆ ಕರೆ ಮಾಡಿ 'ಕಂಗನಾ ನನ್ನ ಬ್ರ್ಯಾಂಡ್‌ನ ಸೀರೆ ಉಟ್ಟು ಅಯೋಧ್ಯೆಗೆ ಹೋಗಬಾರದು' ಎಂದು ಹೇಳಿದ್ದರು. ಆ ಸಮಯದಲ್ಲಿ ನಾನು ಕಾರಿನಲ್ಲಿ ಮೌನವಾಗಿ ಅಳುತ್ತಿದ್ದೆ. ನಂತರ ಅವರ ಹೆಸರನ್ನು ಎಲ್ಲಿಯೂ ಬಳಸದಂತೆ ತಾಕೀತು ಮಾಡಿದರು' ಎಂದು ಕಂಗನಾ ಬೇಸರ ವ್ಯಕ್ತಪಡಿಸಿದ್ದಾರೆ.
ರೆಹಮಾನ್ ಅವರದ್ದು 'ಮೊಸಳೆ ಕಣ್ಣೀರು' ಎಂದ ಕಂಗನಾ
ತಮಗೆ ಅವಕಾಶಗಳು ಸಿಗುತ್ತಿಲ್ಲ ಎಂದು ಹೇಳುತ್ತಿರುವ ಎ.ಆರ್. ರೆಹಮಾನ್ ಅವರದ್ದು 'ಮೊಸಳೆ ಕಣ್ಣೀರು' ಎಂದು ಕಂಗನಾ ಟೀಕಿಸಿದ್ದಾರೆ. 'ಇತರರನ್ನು ದೂಷಿಸುವ ಮೊದಲು ನಿಮ್ಮೊಳಗೆ ಇರುವ ದ್ವೇಷ ಮತ್ತು ಪೂರ್ವಾಗ್ರಹಗಳ ಬಗ್ಗೆ ಏನು ಹೇಳುತ್ತೀರಿ?' ಎಂದು ಪ್ರಶ್ನಿಸಿದ್ದಾರೆ. ಕಂಗನಾ ಅವರ ಈ ನೇರ ವಾಗ್ದಾಳಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ಎರಡು ಬಣಗಳಾಗಿ ವಿಭಜನೆಯಾಗಿದ್ದಾರೆ.


