ಅವರೊಬ್ಬ ಲೆಜೆಂಡರಿ ಸಂಗೀತ ನಿರ್ದೇಶಕರು ಎಂಬುದು ಜಗತ್ತಿಗೇ ಗೊತ್ತು. ಕಳೆದ ಕೆಲವು ದಶಕಗಳಿಂದಲೂ ಸಂಗೀತ ಕ್ಷೇತ್ರದಲ್ಲಿ ನಂಬರ್ 1 ಸ್ಥಾನದಲ್ಲಿದ್ದು, ವಿಶ್ವ ಪ್ರಸಿದ್ಧಿ ಪಡೆದಿದ್ದಾರೆ ಎಆರ್ ರೆಹಮಾನ್. ಹಲವಾರು ಹೊಸ ಸಂಗೀತ ನಿರ್ದೇಶಕರು ಬಂದು ಹೋದರೂ ಸಹ ರೆಹಮಾನ್ ಸಂಗೀತ ಇಂದಿಗೂ ಸೂಪರ್ ಹಿಟ್ ಆಗುತ್ತಿದೆ.

ಎಆರ್ ರೆಹಮಾನ್ ಹೊಸ ಕೆಲಸ.. ಏನದು?

ಎಆ‌ರ್ ರೆಹಮಾನ್ (AR Rahman) ಎಂಬ ಈ ಹೆಸರು ಭಾರತೀಯ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು. ಅವರೊಬ್ಬ ಲೆಜೆಂಡರಿ ಸಂಗೀತ ನಿರ್ದೇಶಕರು ಎಂಬುದು ಜಗತ್ತಿಗೇ ಗೊತ್ತು. ಕಳೆದ ಕೆಲವು ದಶಕಗಳಿಂದಲೂ ಸಂಗೀತ ಕ್ಷೇತ್ರದಲ್ಲಿ ನಂಬರ್ 1 ಸ್ಥಾನದಲ್ಲಿದ್ದು, ವಿಶ್ವ ಪ್ರಸಿದ್ಧಿ ಪಡೆದಿದ್ದಾರೆ ಎಆರ್ ರೆಹಮಾನ್. ಹಲವಾರು ಹೊಸ ಸಂಗೀತ ನಿರ್ದೇಶಕರು ಬಂದು ಹೋದರೂ ಸಹ ರೆಹಮಾನ್ ಸಂಗೀತ ಇಂದಿಗೂ ಸೂಪರ್ ಹಿಟ್ ಆಗುತ್ತಿದೆ. ಭಾರತದ ಸಿನಿಮಾಗಳು ಮಾತ್ರವೇ ಅಲ್ಲದೆ ಹಾಲಿವುಡ್‌ನಲ್ಲೂ ಬೇಡಿಕೆ ಹೊಂದಿದ್ದಾರೆ ಎಆರ್ ರೆಹಮಾನ್.

ಯೂಟೂಬ್ ವಿಡಿಯೋಗಳಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ

ಇಂಥ ನಿರ್ದೇಶಕ ಎಆರ್ ರೆಹಮಾನ್ ಅವರು ಸಂಗೀತ ಕ್ಷೇತ್ರದಲ್ಲಿ ಬಹಳ ಬ್ಯುಸಿ ಆಗಿರುವ ಹೊತ್ತಿನಲ್ಲಿಯೇ, ನಟನೆಯನ್ನೂ ಆರಂಭಿಸಿದ್ದಾರೆ. ಇದು ನಿಜ.. ಹೌದು, ರೆಹಮಾನ್ ಅವರು ಈ ಹಿಂದೆ ಕೆಲವು ಆಲ್ಬಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ, ಕೆಲವು ಹಾಡುಗಳಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸ್ವಲ್ಪ ಕಾಲದ ಹಿಂದೆ ಕೆಲವು ಯೂಟೂಬ್ ವಿಡಿಯೋಗಳಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ. ಆದರೆ ಯಾವತ್ತೂ ಕೂಡ ಪೂರ್ಣ ಪ್ರಮಾಣದ ಪಾತ್ರದಲ್ಲಿ ನಟಿಸಿರಲಿಲ್ಲ. ಆದರೆ.. ಇದೀಗ ಎಆರ್ ರೆಹಮಾನ್ ಅವರು ಮೊದಲ ಬಾರಿಗೆ ಸಿನಿಮಾ ಪಾತ್ರವೊಂದರಲ್ಲಿ ನಟಿಸಲು ಮುಂದಾಗಿದ್ದಾರೆ. ರೆಹಮಾನ್ ಅವರ ಈ ಸಾಹಸ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಎಆ‌ರ್ ರೆಹಮಾನ್ ಅವರು ತಮಿಳಿನ 'ಮೂನ್ ವಾಕ್' ಹೆಸರಿನ ಸಿನಿಮಾದ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. 'ಮೂನ್ ವಾಕ್' ಸಿನಿಮಾದ ನಾಯಕ ಕನ್ನಡ ಮೂಲದ ಖ್ಯಾತ ತಮಿಳು ನಟ ಪ್ರಭುದೇವ. ಎಆರ್ ರೆಹಮಾನ್ ಹಾಗೂ ಪ್ರಭುದೇವ ಅವರಿಬ್ಬರೂ ಬಹಳ ಒಳ್ಳೆಯ ಸ್ನೇಹಿತರು. ಇದೇ ಸಲುಗೆಯ ಹಿನ್ನೆಲೆಯಲ್ಲಿ ರೆಹಮಾನ್ ಅವರು ಮೊದಲ ಬಾರಿಗೆ ಸಿನಿಮಾನಲ್ಲಿ ಪಾತ್ರವೊಂದರಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಮನೋಜ್ ಎನ್‌ಎಸ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಬಿಹೈಂದ್ ವೂಡ್ಸ್ ನಿರ್ಮಾಣ ಸಂಸ್ಥೆ ಸಿನಿಮಾದ ನಿರ್ಮಾಣ ಮಾಡಲಿದೆ.

'ಮೂನ್‌ವಾಕ್'

'ಮೂನ್‌ವಾಕ್' ಹೆಸರೇ ಸೂಚಿಸುತ್ತಿರುವ ನೃತ್ಯದ ವಿಷಯ ಹೊಂದಿರುವ ಹಾಸ್ಯ ಪ್ರಧಾನ ಸಿನಿಮಾ. ಈ ಸಿನಿಮಾನಲ್ಲಿ ಎಆರ್ ರೆಹಮಾನ್ ಕೋಪಿಷ್ಟ ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ನಟಿಸಲಿದ್ದಾರಂತೆ. 'ಮೂನ್ ವಾಕ್' ಸಿನಿಮಾನಲ್ಲಿ ಎಆ‌ರ್ ರೆಹಮಾನ್ ನಿರ್ವಹಿಸುತ್ತಿರುವ ಪಾತ್ರದ ಹೆಸರೂ ಸಹ ಎಆರ್ ರೆಹಮಾನ್ ಎಂದೇ ಆಗಿರಲಿದೆ. ಆದರೆ ಅಲ್ಲಿ ಅವರದ್ದು ಸಂಗೀತ ನಿರ್ದೇಶಕನ ಬದಲು ಸಿನಿಮಾ ನಿರ್ದೇಶಕನ ಪಾತ್ರ. ಅದು ಮಾತ್ರವೇ ಅಲ್ಲದೆ, 'ಮೂನ್‌ವಾಕ್' ಸಿನಿಮಾದ ಎಲ್ಲ ಐದೂ ಹಾಡುಗಳನ್ನು ರೆಹಮಾನ್ ಅವರೇ ಹಾಡಿರುವುದು ಇನ್ನೂ ಒಂದು ವಿಶೇಷ ಸಂಗತಿ. ಈ ಹಿಂದೆ ಯಾವತ್ತೂ ಕುಡ ಪೂರ್ಣ ಸಿನಿಮಾ ಆಲ್ಬಂನಲ್ಲಿ ರೆಹಮಾನ್ ಅವರೊಬ್ಬರೇ ಹಾಡಿದ್ದೇ ಇಲ್ಲ.

ಸಿನಿಮಾದ ಹಲವು ದೃಶ್ಯಗಳ ಚಿತ್ರೀಕರಣವನ್ನು ರೆಹಮಾನ್ ಅವರು ಈಗಾಗಲೇ ಮುಗಿಸಿದ್ದು, ಇನ್ನು ಕೆಲವು ದೃಶ್ಯಗಳಷ್ಟೇ ಬಾಕಿ ಇವೆಯಂತೆ. ಸಿನಿಮಾ ನಟನೆಯನ್ನು ಬಹಳ ಎಂಜಾಯ್ ಮಾಡುತ್ತಿರುವುದಾಗಿ ಸ್ವತಃ ರೆಹಮಾನ್ ಅವರೇ ಹೇಳಿಕೊಂಡಿದ್ದಾರೆ. ರೆಹಮಾನ್ ಅವರು ಸಂಗೀತ ನೀಡಿರುವ 'ಪೆದ್ದಿ' ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಇದರ ಜೊತೆಗೆ ರೆಹಮಾನ್ 'ರಾಮಾಯಣ' ಸಿನಿಮಾಕ್ಕೂ ಸಂಗೀತ ನೀಡುತ್ತಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ 15ಕ್ಕೂ ಹೆಚ್ಚು ಸಿನಿಮಾಗಳಿವೆ. ಇದೀಗ, ನಟನೆಯನ್ನೂ ಶುರುಮಾಡಿ ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.