ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಮಾ.25ರಂದು ಬಿಡುಗಡೆಗೆ ಸಿದ್ಧವಾಗಿರುವ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರದ ಒಟ್ಟಾರೆ ಬಜೆಟ್ 500 ಕೋಟಿ ರು. ದಾಟಿರುವ ಸುಳಿವು ಸಿಕ್ಕಿದೆ.
ಹೈದರಾಬಾದ್ (ಮಾ.20): ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಮಾ.25ರಂದು ಬಿಡುಗಡೆಗೆ ಸಿದ್ಧವಾಗಿರುವ ಎಸ್.ಎಸ್.ರಾಜಮೌಳಿ (SS Rajamouli) ನಿರ್ದೇಶನದ ‘ಆರ್‌ಆರ್‌ಆರ್’ (RRR) ಚಿತ್ರದ ಒಟ್ಟಾರೆ ಬಜೆಟ್ 500 ಕೋಟಿ ರು. ದಾಟಿರುವ ಸುಳಿವು ಸಿಕ್ಕಿದೆ. ಇದು ನಿಜವಾದಲ್ಲಿ ಇದು, ಇದುವರೆಗೆ ಭಾರತದಲ್ಲಿ ನಿರ್ಮಾಣವಾದ ಅತ್ಯಂತ ಹೆಚ್ಚಿನ ಬಜೆಟ್‌ನ ಸಿನೆಮಾ ಎನ್ನಿಸಿಕೊಳ್ಳಲಿದೆ.
ರಾಜಮೌಳಿ ಅವರದ್ದೇ ಆದ ಬಹುಜನಪ್ರಿಯ ‘ಬಾಹುಬಲಿ’ (Bahubali) 180 ಕೋಟಿ ರು.ನಲ್ಲಿ ಹಾಗೂ ಮುಂದುವರೆದ 2ನೇ ಭಾಗವಾದ ‘ಬಾಹುಬಲಿ: ದ ಕನ್‌ಕ್ಲೂಷನ್’ (Bahubali The Conclusion) ಅನ್ನು 250 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇದೇ ಇದುವರೆಗಿನ ಅತಿ ದುಬಾರಿ ವೆಚ್ಚದ ಚಿತ್ರ ಎನ್ನಿಸಿಕೊಂಡಿತ್ತು. ಇದನ್ನು 'ಆರ್‌ಆರ್‌ಆರ್' ಮೀರಿಸುವ ಸಾಧ್ಯತೆ ಇದೆ.
ನಿರ್ಮಾಣಕ್ಕಷ್ಟೇ 336 ಕೋಟಿ: ಈ ಕುರಿತು ಮಾಹಿತಿ ನೀಡಿರುವ ಆಂಧ್ರಪ್ರದೇಶದ ಸಚಿವ ಪೆರ್ನಿ ನಾನಿ, ಇದುವರೆಗೂ ಚಿತ್ರತಂಡ ಚಿತ್ರ ನಿರ್ಮಾಣಕ್ಕೆ 336 ಕೋಟಿ ರು. ವೆಚ್ಚ ಮಾಡಿದ್ದಾಗಿ ಮಾಹಿತಿ ನೀಡಿದೆ. ಇದರಲ್ಲಿ ನಟರು ಮತ್ತು ಸಿಬ್ಬಂದಿ ಸಂಭಾವನೆ ಸೇರಿಲ್ಲ. ಜೊತೆಗೆ ಜಿಎಸ್‌ಟಿಯೂ (GST) ಸೇರಿಲ್ಲ ಎಂದಿದ್ದಾರೆ. ಈ ಮೂಲಕ ಚಿತ್ರಕ್ಕೆ ಭಾರೀ ವೆಚ್ಚವಾಗಿರುವ ಸುಳಿವು ನೀಡಿದ್ದಾರೆ. ಈ ನಡುವೆ ನಿರ್ಮಾಪಕರ ಕೋರಿಕೆ ಮೇರೆಗೆ ಚಿತ್ರ ಬಿಡುಗಡೆಯಾದ ನಂತರದ ಮೊದಲ 10 ದಿನಗಳ ಅವಧಿಗೆ ಪ್ರತಿ ಟಿಕೆಟ್ ಬೆಲೆಯನ್ನು 75 ರು.ನಷ್ಟುಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
'ಕನ್ನಡ ಶೋ ಜಾಸ್ತಿ ಹಾಕಿ'; ರಾಜಮೌಳಿ ಬಳಿ ಶಿವಣ್ಣ ವಿಶೇಷ ಮನವಿ
ರಾಮಚರಣ್, ಜ್ಯೂ. ಎನ್‌ಟಿಆರ್‌ಗೆ 45 ಕೋಟಿ: ಚಿತ್ರದಲ್ಲಿ ರಾಮ್‌ಚರಣ್ (Ram Charan) ಮತ್ತು ಜ್ಯೂನಿಯರ್ ಎನ್‌ಟಿಆರ್ (Jr NTR) ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರಿಬ್ಬರೂ ಚಿತ್ರಕ್ಕೆ ತಲಾ 45 ಕೋಟಿ ರು. ಸಂಭಾವನೆ ಪಡೆದಿದ್ದಾರೆ ಎಂದು ಈ ಹಿಂದೆ ವರದಿಗಳು ಹೇಳಿದ್ದವು. ಇನ್ನು ಅಜಯ್ ದೇವಗನ್ (Ajay Devgn) ಮತ್ತು ಅಲಿಯಾ ಭಟ್ ಕೂಡಾ (Alia Bhatt) ಚಿತ್ರದಲ್ಲಿ ನಟಿಸಿದ್ದು, ಅವರಿಗೆ ಕ್ರಮವಾಗಿ 25 ಮತ್ತು 9 ಕೋಟಿ ರು. ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ. ಇದಕ್ಕೆ ಇತರೆ ನಟರು, ಸಿಬ್ಬಂದಿ ಸಂಭಾವನೆ ಮತ್ತು ಜಿಎಸ್‌ಟಿಯೂ ಸೇರಿದರೆ ಅದು ಹೆಚ್ಚು ಕಡಿಮೆ 500 ಕೋಟಿ ರು. ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.
‘ಬಾಹುಬಲಿ: ದ ಕನ್‌ಕ್ಲೂಷನ್’ ಚಿತ್ರದ ನಿರ್ದೇಶನಕ್ಕಾಗಿ ರಾಜಮೌಳಿ 28 ಕೋಟಿ ರು, ಪ್ರಭಾಸ್ (Prabhas) 25 ಕೋಟಿ ರು. ಮತ್ತು ರಾಣಾ ದಗ್ಗುಬಾಟಿ (Rana Daggubati) 15 ಕೋಟಿ ರು. ಸಂಭಾವನೆ ಪಡೆದಿದ್ದರು. ಆದರೆ 'ಆರ್‌ಆರ್‌ಆರ್' ಸಂಭಾವನೆ ಸೇರಿದಂತೆ ಎಲ್ಲಾ ವಿಷಯದಲ್ಲಿ ಹಳೆಯ ದಾಖಲೆಗಳನ್ನು ಮುರಿದಿದೆ.
RRR; ಉಕ್ರೇನ್ ಬಾಡಿಗಾರ್ಡ್ ಗೆ ನಟ ರಾಮ್ ಚರಣ್ ನೆರವು
ಇನ್ನು 'ಆರ್‌ಆರ್‌ಆರ್' ಚಿತ್ರವು 1920ನೇ ಇಸವಿಯ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ. ಈ ಚಿತ್ರದಲ್ಲಿ ರಾಮ್ ಚರಣ್ ರಾಮರಾಜು ಪಾತ್ರದಲ್ಲಿ, ಜೂನಿಯರ್ ಎನ್‌ಟಿಆರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಒಲಿವಿಯಾ ಮೋರಿಸ್, ಸಮುದ್ರಕನಿ, ಶ್ರೇಯಾ ಶಿರಿನ್, ಅಲಿಸನ್ ಡೂಡಿ ಹಾಗೂ ರೇ ಸ್ಟೀವನ್ಸನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ವಿಳಂಬ ಆಯಿತು.
