RRR; ಉಕ್ರೇನ್ ಬಾಡಿಗಾರ್ಡ್ ಗೆ ನಟ ರಾಮ್ ಚರಣ್ ನೆರವು
ಉಕ್ರೇನ್ ನಲ್ಲಿ RRR ಸಿನಿಮಾ ಚಿತ್ರೀಕರಣವೇಳೆ ಭದ್ರತೆ ನೀಡಿದ ಸಿಬ್ಬಂದಿಗೆ ನಟ ರಾಮ್ ಚರಣ್ ತೇಜ ಆರ್ಥಿಕ ನೆರವು ನೀಡಿರುವುದಾಗಿ ಹೇಳಿದ್ದಾರೆ. ಉಕ್ರೇನ್ ಪರಿಸ್ಥಿತಿಯ ಬಗ್ಗೆ ನಿರ್ದೇಶಖ ರಾಜಮೌಳಿ ಸಹ ಬೇಸರ ವ್ಯಕ್ತಪಡಿಸಿದ್ದಾರೆ.
ರಷ್ಯಾದ(Russia) ದಾಳಿಯಿಂದ ಉಕ್ರೇನ್(Ukraine)ನಲ್ಲಿ ರಣಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಉಕ್ರೇನ್ ನಲ್ಲಿ ಜನರ ಬದುಕು ತೀರ ಕಷ್ಟಕರವಾಗಿದೆ. ಉಕ್ರೇಶ್ ದೇಶ ವಿನಾಶದತ್ತ ಸಾಗುತ್ತಿದೆ. ಪ್ರಮುಖ ನಗರಗಳು ಛಿದ್ರಛಿದ್ರವಾಗಿದ್ದು ರಷ್ಯಾ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ. ಉಕ್ರೇನ್ ಪರಿಸ್ಥಿತಿ ಕಂಡು ಇಡೀ ವಿಶ್ವ ಮರಗುತ್ತಿದೆ. ಉಕ್ರೇನ್ ಈಗಿನ ಸ್ಥಿತಿ ನೋಡಿ ನಿರ್ದೇಶಕ ರಾಜಮೌಳಿ(SS Rajamouli) ಮತ್ತು ತಂಡ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ RRR ಸಿನಿಮಾದ ನಾಯಕ, ತೆಲುಗು ಸ್ಟಾರ್ ರಾಮ್ ಚರಣ್ ತೇಜ್(Ram Charan) ಬಹಿರಂಗ ಪಡಿಸಿದರು. ಅಂದಹಾಗೆ ಆರ್ ಆರ್ ಆರ್ ಸಿನಿಮಾದ ಕೆಲವು ದೃಶ್ಯಗಳನ್ನು ಉಕ್ರೇನ್ ನಲ್ಲಿ ಸೆರೆ ಹಿಡಿಯಲಾಗಿದೆ. ಯುದ್ಧ ಪ್ರಾರಂಭವಾಗುವ ಮೊದಲೇ ಆರ್ ಆರ್ ಆರ್ ತಂಡ ಉಕ್ರೇನ್ ಚಿತ್ರೀಕರಣ ಮುಗಿಸಿತ್ತು. ಸದ್ಯ RRR ತಂಡ ಸಿನಿಮಾ ಬಿಡುಗಡೆ ತಯಾರಿಯಲ್ಲಿದೆ. ಚಿತ್ರದ ಪ್ರಮೋಷನ್ ನಲ್ಲಿರುವ ಸಿನಿಮಾತಂಡ ಉಕ್ರೇನ್ ರಣಭೀಕರ ಪರಿಸ್ಥಿಯನ್ನು ಬಹಿರಂಗ ಪಡಿಸಿದೆ.
ಚಿತ್ರೀಕರಣ ವೇಳೆ ಸಹಾಯ ಮಾಡಿದ ಉಕ್ರೇನ್ ಜನರಿಗೆ ಸಹಾಯ ಮಾಡಿರುವುದಾಗಿ ರಾಮ್ ಚರಣ್ ಹೇಳಿದ್ದಾರೆ. ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿರುವ ರಾಮ್ ಚರಣ್ ಇದೀಗ ತನ್ನ ಕಾವಲು ಕಾದಿದ್ದ ಉಕ್ರೇನ್ ಸಿಬ್ಬಂದಿಗೆ ನೆರವಿನ ಹಸ್ತಚಾಚಿದ್ದಾರೆ. ಚಿತ್ರೀಕರಣ ವೇಳೆ ಭದ್ರತೆ ನೀಡಿದ್ದ ಬಾಡಿಗಾರ್ಡ್ ಗೆ ಆರ್ಥಿಕ ನೆರವು(Financial help) ನೀಡಿದ್ದಾರೆ. ಅವರ ಕುಟುಂಬ ತುಂಬ ಸಂಕಷ್ಟದಲ್ಲಿ ಸಿಲುಕಿದ್ದು ನೆರವಿನ ಅವಶ್ಯಕತೆ ತುಂಬಾ ಇದೆ. ಹಾಗಾಗಿ ರಾಮ್ ಚರಣ್ ಸಹಾಯ ಮಾಡಿದ್ದಾರೆ.
RRR Movie: ರಾಜಮೌಳಿ ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ!
ಈ ಬಗ್ಗೆ ಬಹಿರಂಗ ಪಡಿಸಿರುವ ರಾಮ್ ಚರಣ್, 'ನನಗೆ ಭದ್ರತೆ ನೀಡಿದವರ ಜೊತೆ ಮಾತನಾಡಿದ್ದೇನೆ. ಅವರ 80 ವರ್ಷದ ತಂದೆ ಆರ್ಮಿಗೆ ಸೇರಿದ್ದಾರೆ. ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದೇನೆ. ಆದರೆ ಅದು ಸಾಕಾಗುವುದಿಲ್ಲ. ನನ್ನ ಕೈಯಲ್ಲಿ ಸಾಧ್ಯವಾದಷ್ಟು ನಾನು ನೆರವು ನೀಡಿದ್ದೇನೆ' ಎಂದು ರಾಮ್ ಚರಣ್ ಹೇಳಿದ್ದಾರೆ. ಅಂದಹಾಗೆ RRR ತಂಡ ಬ್ಲಾಕ್ ಬಸ್ಟರ್ ನಾಟು ನಾಟು..ಹಾಡಿನ ಚಿತ್ರೀಕರಣ ಉಕ್ರೇನ್ ನಲ್ಲಿ ಮಾಡಿದೆ. ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ.
ಇನ್ನು ನಿರ್ದೇಶಕ ರಾಜಮೌಳಿ ಸಹ ಉಕ್ರೇನ್ ಚಿತ್ರೀಕರಣ ವೇಳೆ ಸಹಾಯ ಮಾಡಿದ ಸಿಬ್ಬಂದಿ ಬಗ್ಗೆ ವಿಚಾರಿಸುತ್ತಿದ್ದಾರಂತೆ. ಈ ಬಗ್ಗೆ ವಿವರಣೆ ನೀಡಿರುವ ರಾಜಮೌಳಿ, 'RRR ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕಾಗಿ ಉಕ್ರೇನ್ ನಲ್ಲಿದ್ದೆವು. ಅದೊಂದು ಸುಂದರ ದೇಶವಾಗಿತ್ತು. ಚಿತ್ರೀಕರಣದ ಸಮಯದಲ್ಲಿ ನಮಗೆ ಸಮಸ್ಯೆಗಳ ಬಗ್ಗೆ ತಿಳಿದಿರಲಿಲ್ಲ. ಅದರ ಗಂಭೀರತೆ ಈಗ ಅರ್ಥವಾಗುತ್ತಿದೆ. ಉಕ್ರೇನ್ ನಲ್ಲಿ ಚಿತ್ರೀಕರಣ ಮಾಡುವಾಗ RRRಗಾಗಿ ಕೆಲಸ ಮಾಡಿದ ಸಿಬ್ಬಂದಿಗಳ ಯೋಗಕ್ಷೇಮ ವಿಚಾರಿಸುತ್ತಿದ್ದೇನೆ. ಅದರಲ್ಲಿ ಕೆಲವರು ಪರವಾಗಿಲ್ಲ ಆದರೆ ಇನ್ನು ಕೆಲವರನ್ನು ಸಂಪರ್ಕ ಮಾಡಬೇಕಿದೆ' ಎಂದು ಹೇಳಿದ್ದಾರೆ.
RRR Movie: ಮಾರ್ಚ್ 14ರಂದು ರಾಜಮೌಳಿ ಚಿತ್ರದ 'ಎತ್ತುವ ಜಂಡಾ' ಸಾಂಗ್ ರಿಲೀಸ್
RRR ತಂಡ ಸದ್ಯ ಸಿನಿಮಾ ಬಿಡುಗಡೆಯ ಬ್ಯುಸಿಯಲ್ಲಿದ್ದಾರೆ. ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಚಿತ್ರದ ಪ್ರಮೋಷನ್ ಸಹ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಬಾಲಿವುಡ್ ನಟಿ ಅಲಿಯಾ ಭಟ್ ನಾಯಕಿಯಾಗಿ ಕಾಣಿಸಿಕೊಡಿದ್ದಾರೆ. ಅಲಿಯಾ ಮೊದಲ ಬಾರಿಗೆ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೊದಲ ಸಿನಿಮಾ ಬಿಡುಗಡೆ ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಆರ್ ಆರ್ ಆರ್ ಸಿನಿಮಾ ಮಾರ್ಚ್ 25ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.