ಜೈಪುರದಲ್ಲಿ ಮದ್ಯಪಾನ ಮಾಡಿ ಕಾರು ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಬಾಲಕಿಯೊಬ್ಬಳ ಸಾವಿಗೆ ಕಾರಣರಾದ ಘಟನೆಗೆ ನಟಿ ಜಾನ್ವಿ ಕಪೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ಯಪಾನದಿಂದ ಅಪಘಾತಗಳಾಗುತ್ತಿರುವುದನ್ನು ಖಂಡಿಸಿ, ಕಾನೂನುಗಳನ್ನು ಗೌರವಿಸುವಂತೆ ಒತ್ತಾಯಿಸಿದ್ದಾರೆ. ಮಹಿಳೆಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನವನ್ನು ಪ್ರಶ್ನಿಸಿದ್ದಾರೆ.
ಬಾಲಿವುಡ್ ನಟಿ ಜಾನ್ವಿ ಕಪೂರ್ ಸಿನಿಮಾ ನಟನೆ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳಲ್ಲಿಯೂ ಭಾಗಿಯಾಗುವುದನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದನ್ನು ಖಂಡಿಸುವ ಮತ್ತು ಪ್ರಶ್ನೆ ಮಾಡಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಂತೆಯೇ, ಇಲ್ಲೊಬ್ಬ ಮಹಿಳೆ ಮದ್ಯ ಸೇವನೆಯ ಅಮಲಿನಲ್ಲಿ ಕಾರು ಚಾಲನೆ ಮಾಡುತ್ತಾ ಸ್ಕೂಟರ್‌ಗೆ ಗುದ್ದಿ ಚಿಕ್ಕ ಮಗುವಿನ ಸಾವಿಗೆ ಕಾರಣವಾಗಿದ್ದೂ ಅಲ್ಲದೆ, ಪೊಲೀಸರೊಂದಿಗೆ ಗಲಾಟೆ ಮಾಡಿದ್ದಕ್ಕೆ ನಟಿ ಜಾನ್ವಿ ಕಪೂರ್ ಆಕ್ರೋಶ ಹೊರಹಾಕಿದ್ದಾರೆ.
ಜೈಪುರದಲ್ಲಿ ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರು ಕಾರು ಚಲಾಯಿಸಿ ಬಾಲಕಿಯ ಪ್ರಾಣ ತೆಗೆದಿದ್ದಾರೆ. ಕುಡಿದು ಕಾರು ಚಲಾಯಿಸುತ್ತಿದ್ದ ಆಕೆ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಈ ಘಟನೆಯಲ್ಲಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಬಗ್ಗೆ ತಕ್ಷಣವೇ ಪ್ರತಿಕ್ರಿಯಿಸಿದ ಪೊಲೀಸರು ಆ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಆಕೆ ತನ್ನನ್ನು ಬಿಡಲು ಕೇಳಿಕೊಂಡಿದ್ದು ಆಶ್ಚರ್ಯಕರವಾಗಿದೆ. ಈ ಹಿನ್ನೆಲೆಯಲ್ಲಿ 'ದೇವರ' ಚಿತ್ರದ ನಾಯಕಿ ಜಾನ್ವಿ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕೆ ಗರಂ ಆಗಿದ್ದಾರೆ. ಮದ್ಯಪಾನದಿಂದಲೇ ಹಲವು ಅಪಘಾತಗಳು ಸಂಭವಿಸುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಪಘಾತ ಮಾಡಿದ ಮಹಿಳೆಯ ಮೇಲೆ ಕಿಡಿಕಾರಿದ್ದಾರೆ.
ಇಂತಹ ನಿರ್ಲಕ್ಷ್ಯವನ್ನು ಯಾರಾದರೂ ಸಹಿಸುತ್ತಾರೆಯೇ? ಎಂದು ಜಾನ್ವಿ ಕಪೂರ್ ಪ್ರಶ್ನಿಸಿದ್ದಾರೆ. `ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಸುತ್ತಮುತ್ತಲಿನವರ ಪ್ರಾಣಕ್ಕೂ ಅಪಾಯ ತರುವುದು ಸರಿಯೇ? ಈ ಅಪಘಾತದ ಬಗ್ಗೆ ತಿಳಿದು ಆಘಾತಕ್ಕೊಳಗಾಗಿದ್ದೇನೆ. ಮದ್ಯಪಾನದಿಂದ ಸಂಭವಿಸುವ ಅಪಘಾತಗಳಲ್ಲಿ ಅನೇಕ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಅನೇಕರು ಗಾಯಗೊಳ್ಳುತ್ತಿದ್ದಾರೆ. ನಾವು ಕಾನೂನುಗಳನ್ನು ಏಕೆ ಗೌರವಿಸುತ್ತಿಲ್ಲ?, ಕನಿಷ್ಠ ಅರಿವಿಲ್ಲದೆ ಕಾನೂನುಬಾಹಿರವಾಗಿ ವರ್ತಿಸುತ್ತಿದ್ದೇವೆ. ಈ ರೀತಿಯ ವರ್ತನೆ ಬದಲಾಗಬೇಕು' ಎಂದು ನಟಿ ಜಾನ್ವಿ ಕಪೂರ್ ಇನ್‌ಸ್ಟಾಗ್ರಾಮ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಜಾನ್ವಿ ಕಪೂರ್‌ಗೆ ಬಾಲಿವುಡ್‌ನಲ್ಲಿ ಮಾಡಿದ ಸಿನಿಮಾಗಳು ಕೈ ಹಿಡಿಯಲಿಲ್ಲ. ಹೀಗಾಗಿ, ದಕ್ಷಿಣ ಭಾರತದ ಸಿನಿಮಾಗಳತ್ತ ಬಂದಿದ್ದು, ತೆಲುಗಿನ ದೇವರ ಸಿನಿಮಾದ ಮೂಲಕ ಯಶಸ್ಸು ಕಂಡಿದ್ದಾರೆ. ಇದರ ಮುಂದುವರಿದ ಭಾಗ 'ದೇವರ 2ರಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ರಾಮ್ ಚರಣ್ ಜೊತೆ 'ಪೆದ್ದಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬುಚ್ಚಿಬಾಬು ಸಾನಾ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಇದರ ಜೊತೆಗೆ ತಮಿಳಿನಲ್ಲೂ ಒಂದು ಚಿತ್ರ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಇನ್ನೊಂದೆಡೆ ಹಿಂದಿಯಲ್ಲಿ 'ಪರಮ್ ಸುಂದರಿ', 'ಸನ್ನಿ ಸಂಸ್ಕಾರಿ ಕಿ ತುಲ್ಸಿ ಕುಮಾರಿ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಸಾಮಾನ್ಯವಾಗಿ ಮಹಿಳೆಯರಿಗೆ ಬೈಕ್, ಸ್ಕೂಟಿ, ಕಾರು ಚಾಲನೆ ಮಾಡುವುದಕ್ಕೆ ಬರುವುದಿಲ್ಲವೆಂದು ಗೇಲಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿರುತ್ತವೆ. ಇದಕ್ಕೆ ಪುರುಷರಂತೆ ಇವರು ಹೆಚ್ಚಿನ ಅವಧಿಗೆ ಮನೆಯಿಂದ ಹೊರಗಿದ್ದು ಸ್ಕೂಟಿ ಅಥವಾ ಕಾರು ಚಾಲನೆ ಮಾಡದಿರುವುದು ಒಂದು ಕಾರಣವೂ ಆಗಿರಬಹುದು. ಇನ್ನು ಬಹುತೇಕರು ಪರ್ಫೆಕ್ಟಾಗಿ ವಾಹನ ಚಾಲನೆಯನ್ನು ಮಾಡುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ಕಾರು ಚಾಲನೆಯೇ ಸರಿಯಾಗಿ ಬಾರದಿದ್ದರೂ ಕಂಠಪೂರ್ತಿ ಕುಡಿದು ಮದ್ಯದ ನಶೆಯಲ್ಲಿಯೇ ಸ್ಕೂಟಿಯಲ್ಲಿ ಹೋಗುತ್ತಿದ್ದ ತಾಯಿ ಮಗಳಿಗೆ ಗುದ್ದಿದ್ದಾರೆ. ಈ ವೇಳೆ ಕೆಳಗೆ ಬಿದ್ದ ಚಿಕ್ಕ ಬಾಲಕಿ ಸಾವನ್ನಪ್ಪಿದ್ದಾಳೆ. ಆದರೆ, ಮದ್ಯದ ನಶೆಯಲ್ಲಿದ್ದ ಮಹಿಳೆ ತನ್ನದೇನೂ ತಪ್ಪಿಲ್ಲ, ಬ್ರೇಕ್ ಹಾಕಿ ಸ್ಕೂಟಿ ನಿಲ್ಲಿಸಿದ್ದವರದೇ ತಪ್ಪು. ನನ್ನನ್ನು ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವೈರಲ್ ವಿಡಿಯೋ ನೋಡಿರುವ ಬಾಲಿವುಡ್ ನಟಿ ಜಾನ್ವಯ ಕಪೂರ್ ಭಾರೀ ಗರಂ ಆಗಿದ್ದಾರೆ.


