ನಟ ಹೃತಿಕ್ ರೋಶನ್ ಊರುಗೋಲಿನ ಸಹಾಯವಿಲ್ಲದೆ ಬೇಗ ಗುಣಮುಖರಾಗಿ ಮತ್ತೆ ಬೆಳ್ಳಿತೆರೆಯ ಮೇಲೆ ಮಿಂಚಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಹೃತಿಕ್ ಅವರ ಈ ಪೋಸ್ಟ್ ದೈಹಿಕ ಸಮಸ್ಯೆಗಳ ನಡುವೆಯೂ ಧೈರ್ಯವಾಗಿರುವುದು ಹೇಗೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಹೃತಿಕ್ ರೋಶನ್ ದೈಹಿಕ ಸಮಸ್ಯೆ ಅನಾವರಣ
ಬಾಲಿವುಡ್‌ನ 'ಗ್ರೀಕ್ ಗಾಡ್' ಎಂದೇ ಕರೆಯಲ್ಪಡುವ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ (Hrithik Roshan) ಅವರ ಫಿಟ್‌ನೆಸ್ ಬಗ್ಗೆ ಯಾರಿಗೂ ಅನುಮಾನವಿಲ್ಲ. ಆದರೆ, ಇತ್ತೀಚೆಗೆ ಅವರು ಊರುಗೋಲು (Crutches) ಹಿಡಿದು ಓಡಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ ಅಭಿಮಾನಿಗಳು ಬೆಚ್ಚಿಬಿದ್ದಿದ್ದರು. ಈಗ ಈ ಬಗ್ಗೆ ಸ್ವತಃ ಹೃತಿಕ್ ಅವರೇ ಮೌನ ಮುರಿದಿದ್ದು, ತಮ್ಮ ದೇಹದ ವಿಚಿತ್ರ ಮತ್ತು ಸಂಕೀರ್ಣ ಸ್ಥಿತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಊರುಗೋಲು ಹಿಡಿದ ಫೋಟೋ ರಹಸ್ಯವೇನು?
ನಿರ್ದೇಶಕ ಗೋಲ್ಡಿ ಬೆಹ್ಲ್ ಅವರ ಜನ್ಮದಿನದ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಹೃತಿಕ್ ರೋಷನ್ ಕಾಲಿಗೆ ಪೆಟ್ಟಾಗಿ ಊರುಗೋಲಿನ ಸಹಾಯದಿಂದ ನಡೆಯುತ್ತಿರುವುದು ಕಂಡುಬಂದಿತ್ತು. ಇದನ್ನು ಕಂಡ ಅವರ ಕೋಟ್ಯಂತರ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಹೃತಿಕ್, ತಮ್ಮ ಆರೋಗ್ಯದ ಏರಿಳಿತಗಳ ಬಗ್ಗೆ ವಿವರಿಸಿದ್ದಾರೆ.
ದೇಹದ ಭಾಗಗಳಿಗೆ ಆನ್/ಆಫ್ (ON/OFF) ಬಟನ್!
ಹೃತಿಕ್ ರೋಷನ್ ತಮ್ಮ ಪೋಸ್ಟ್‌ನಲ್ಲಿ ಬಹಳ ವ್ಯಂಗ್ಯವಾಗಿ ಮತ್ತು ನೋವಿನ ನಡುವೆಯೂ ಹಾಸ್ಯದ ಧಾಟಿಯಲ್ಲಿ ಬರೆದುಕೊಂಡಿದ್ದಾರೆ. "ನನ್ನ ಎಡಗಾಲು ನಿನ್ನೆ ಇದ್ದಕ್ಕಿದ್ದಂತೆ ಇಡೀ ದೇಹದಿಂದ ರಜೆ ಪಡೆದುಕೊಂಡಿದೆ (OFF ಆಗಿದೆ). ನನ್ನ ದೇಹದ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ಆನ್ ಮತ್ತು ಆಫ್ ಬಟನ್ ಇದೆ ಎನಿಸುತ್ತದೆ. ನನ್ನ ಎಡಗಾಲು, ಎಡ ಭುಜ ಮತ್ತು ಬಲ ಹಿಮ್ಮಡಿ ಈ ಆಫ್ ಬಟನ್ ಅನ್ನು ತಮ್ಮ ಜನ್ಮಸಿದ್ಧ ಹಕ್ಕು ಎನ್ನುವಂತೆ ಬಳಸುತ್ತವೆ. ಇದು ಒಂದು ರೀತಿಯಲ್ಲಿ ಆಯಾ ಸಮಯದ ಮೂಡ್ ಮೇಲೆ ನಿರ್ಧರಿತವಾಗುತ್ತದೆ," ಎಂದು ಅವರು ಹೇಳಿದ್ದಾರೆ.
ಮಾತನಾಡಲು ಕಷ್ಟಪಡುವ ಹಂತ:
ಕೇವಲ ದೈಹಿಕ ನೋವು ಮಾತ್ರವಲ್ಲದೆ, ಕೆಲವೊಮ್ಮೆ ಪದಗಳನ್ನು ಉಚ್ಚರಿಸಲು ಕೂಡ ಅವರಿಗೆ ಕಷ್ಟವಾಗುತ್ತದೆಯಂತೆ. "ಕೆಲವು ದಿನ ನನ್ನ ನಾಲಿಗೆ 'ಡಿನ್ನರ್' (Dinner) ಎಂಬ ಪದವನ್ನು ಹೇಳಲು ನಿರಾಕರಿಸುತ್ತದೆ. ಒಂದು ಸಿನಿಮಾದ ಕೋರ್ಟ್‌ರೂಮ್ ದೃಶ್ಯದಲ್ಲಿ ನಾನು ಎದುರಾಳಿಯನ್ನು ಡಿನ್ನರ್‌ಗೆ ಕರೆಯಬೇಕಿತ್ತು, ಆದರೆ ನನ್ನ ನಾಲಿಗೆ ಆ ಪದವನ್ನು ಹೇಳಲು ಒಪ್ಪಲಿಲ್ಲ. ಆಗ ಅನಿವಾರ್ಯವಾಗಿ ನಾನು ಅವರನ್ನು ಪದೇ ಪದೇ 'ಲಂಚ್' (Lunch) ಗೆ ಕರೆಯಬೇಕಾಯಿತು. ಏಕೆಂದರೆ ಆ ಸಮಯದಲ್ಲಿ ಲಂಚ್ ಎಂಬ ಪದಕ್ಕೆ ಆನ್ ಬಟನ್ ಚಾಲನೆಯಲ್ಲಿತ್ತು," ಎಂದು ತಮ್ಮ ವಿಚಿತ್ರ ಅನುಭವವನ್ನು ಹಂಚಿಕೊಂಡಿದ್ದಾರೆ.
ಮಾನಸಿಕ ಹೋರಾಟದ ಮಾತು:
ಈ ರೀತಿಯ ಆರೋಗ್ಯ ಸಮಸ್ಯೆಗಳು ಮನುಷ್ಯನನ್ನು ಮಾನಸಿಕವಾಗಿ ಕುಗ್ಗಿಸುತ್ತವೆ ಎಂಬ ಸತ್ಯವನ್ನು ಹೃತಿಕ್ ಒಪ್ಪಿಕೊಂಡಿದ್ದಾರೆ. "ನನ್ನ ಮೆದುಳಿನ ನರಗಳು ಕೆಲವೊಮ್ಮೆ ಅಸಹಾಯಕತೆಯ ಕತ್ತಲ ಕೂಪಕ್ಕೆ ನನ್ನನ್ನು ತಳ್ಳುತ್ತವೆ. ಸತತವಾಗಿ ಕೆಳಮುಖವಾಗಿ ಸಾಗುವ ಈ ಆಲೋಚನೆಗಳು ನನ್ನನ್ನು ಕುಗ್ಗಿಸಲು ಪ್ರಯತ್ನಿಸುತ್ತವೆ. ಆದರೆ ಈ ಎಲ್ಲಾ ಸಮಸ್ಯೆಗಳ ನಡುವೆಯೂ ನಾನು ನಡೆಯುವುದನ್ನು ಕಲಿಯುತ್ತಿದ್ದೇನೆ," ಎಂದು ತಮ್ಮ ಮಾನಸಿಕ ದೃಢತೆಯನ್ನು ತೋರ್ಪಡಿಸಿದ್ದಾರೆ.
ವೃತ್ತಿಜೀವನದ ಅಪ್‌ಡೇಟ್:
ಹೃತಿಕ್ ರೋಷನ್ ಅವರು ಕೊನೆಯದಾಗಿ ಅಯಾನ್ ಮುಖರ್ಜಿ ನಿರ್ದೇಶನದ 'ವಾರ್ 2' ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ಕಿಯಾರಾ ಅಡ್ವಾಣಿ ಅವರೊಂದಿಗೆ ಕಾಣಿಸಿಕೊಂಡಿದ್ದರು. ಆದರೆ, ಈ ಚಿತ್ರವು ಅಂದುಕೊಂಡ ಮಟ್ಟಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಸದ್ಯಕ್ಕೆ ಅವರು ತಮ್ಮ ಫ್ರಾಂಚೈಸ್ ಸಿನಿಮಾ 'ಕ್ರಿಶ್ 4' (Krrish 4) ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ತಮ್ಮ ನೆಚ್ಚಿನ ನಟ ಊರುಗೋಲಿನ ಸಹಾಯವಿಲ್ಲದೆ ಬೇಗ ಗುಣಮುಖರಾಗಿ ಮತ್ತೆ ಬೆಳ್ಳಿತೆರೆಯ ಮೇಲೆ ಮಿಂಚಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಹೃತಿಕ್ ಅವರ ಈ ಪೋಸ್ಟ್ ದೈಹಿಕ ಸಮಸ್ಯೆಗಳ ನಡುವೆಯೂ ಧೈರ್ಯವಾಗಿರುವುದು ಹೇಗೆ ಎಂಬುದಕ್ಕೆ ಸಾಕ್ಷಿಯಾಗಿದೆ.


