ಲವರ್ಗಾಗಿ ಜವಾನ್ ಟಿಕೆಟ್ ಫ್ರೀ ಕೊಡಿ ಎಂದ ಪ್ರೇಮಿ: ಶಾರುಖ್ರಿಂದ ರೊಮ್ಯಾನ್ಸ್ ಪಾಠ!
ಜವಾನ್ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರೋ ಬೆನ್ನಲ್ಲೇ ತನ್ನ ಪ್ರೇಯಸಿಗೆ ಉಚಿತ ಟಿಕೆಟ್ ಕೊಡಿಸಿ ಎಂದು ಅಭಿಮಾನಿಯೊಬ್ಬ ಶಾರುಖ್ಗೆ ಕೇಳಿದ್ದಾರೆ. ಇದಕ್ಕೆ ನಟ ಹೇಳಿದ್ದೇನು?
ಜವಾನ್ (Jawan) ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ 7ರಂದು ಚಿತ್ರ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನವೇ ಹವಾ ಸೃಷ್ಟಿಸಿದೆ ಶಾರುಖ್ ಖಾನ್ ಅವರ ಈ ಚಿತ್ರ. ದುಬೈನ ಬುರ್ಜ್ ಖಲೀಫಾದಲ್ಲಿ ಜವಾನ್ ಚಿತ್ರದ ಗ್ರ್ಯಾಂಡ್ ಟ್ರೈಲರ್ ಬಿಡುಗಡೆ ಸಮಾರಂಭ ನಡೆದು ಒಂದು ದಾಖಲೆಯಾಗಿತ್ತು. ಇದೇ ಮೊದಲ ಬಾರಿಗೆ ಮುಂಬೈನ ಐತಿಹಾಸಿಕ ಚಿತ್ರಮಂದಿರವಾದ ಗೈಟಿ ಗ್ಯಾಲಕ್ಸಿಯಲ್ಲಿ ಜವಾನ್ ಬೆಳಗ್ಗೆ 6 ಗಂಟೆಗೆ ಪ್ರದರ್ಶನವಾಗಲಿದೆ. ಹಿಂದಿ ಚಿತ್ರರಂಗದಲ್ಲಿ ಇದು ದಾಖಲೆಯಾಗಲಿದ್ದು, ಶಾರುಖ್ ಖಾನ್ ಅಭಿಮಾನಿಗಳು ಥಿಯೇಟರ್ ಬಳಿ ಟೌಟ್‌ಗಳನ್ನು ನಿಲ್ಲಿಸಲಿದ್ದಾರೆ. ಸಿನಿಮಾ ಬಿಡುಗಡೆ ವೇಳೆ ಡೋಲು ಬಾರಿಸಿ ಹಬ್ಬ ಆಚರಿಸಲಿದ್ದಾರೆ. ನಿನ್ನೆಯಷ್ಟೇ ಇನ್ನೊಂದು ಹೊಸ ಅಪ್ಡೇಟ್ ಹೊರಬಂದಿದೆ. ಅದೇನೆಂದರೆ, ಜವಾನ್ ಚಿತ್ರದ ಬಿಡುಗಡೆಯನ್ನು ಆಚರಿಸಲು 85 ಸಾವಿರ ಮಂದಿ ಶಾರುಖ್ ಖಾನ್ ಅಭಿಮಾನಿಗಳು ಒಟ್ಟಿಗೆ ಸೇರುತ್ತಿದ್ದು, ಶಾರುಖ್ ಫ್ಯಾನ್ ಷೋ ನಡೆಸಲಿದ್ದಾರೆ ಎನ್ನಲಾಗಿದೆ. ಶಾರುಖ್ ಖಾನ್ ಅವರ ಫ್ಯಾನ್ ಕ್ಲಬ್ ಆಗಿರುವ, ಎಸ್‌ಆರ್‌ಕೆ ಯೂನಿವರ್ಸ್ ಈ ಆಕ್ಷನ್ ಎಂಟರ್‌ಟೈನರ್‌ಗಾಗಿ ಭಾರತದ 300 ಕ್ಕೂ ಹೆಚ್ಚು ನಗರಗಳಲ್ಲಿ ಫ್ಯಾನ್ ಶೋಗಳನ್ನು ಆಯೋಜಿಸಿರುವುದಾಗಿ ಪಿಂಕ್ವಿಲ್ಲಾ ವರದಿ ಮಾಡಿದೆ. ಈ ಮೂಲಕ ಹಿಂದಿ ಚಲನಚಿತ್ರರಂಗದಲ್ಲಿ ಹೊಸ ದಾಖಲೆಯಾಗಲಿದೆ ಎನ್ನಲಾಗಿದೆ.
ಜವಾನ್ ಬಿಡುಗಡೆಯ ಬಿಜಿಯಲ್ಲಿಯೂ ನಟ ತಮ್ಮ ಟ್ವಿಟರ್ (Twitter) ಸಂಭಾಷಣೆಯಾದ ಆಸ್ಕ್ಎನಿಥಿಂಗ್ ಪ್ರಶ್ನೋತ್ತರ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ. ತಮ್ಮ ಅಭಿಮಾನಿಗಳು ಕೇಳುವ ಬಹುತೇಕ ಪ್ರಶ್ನೆಗಳಿಗೆ ಹಾಸ್ಯದ ರೂಪದಲ್ಲಿ, ಗಂಭೀರವಾಗಿ ಉತ್ತರ ನೀಡುತ್ತಿದ್ದಾರೆ ಶಾರುಖ್. ಜವಾನ್ ಚಿತ್ರದ ಬಗ್ಗೆ ಸಾಕಷ್ಟು ತಾವು ಉತ್ಸುಕರಾಗಿರುವುದಾಗಿ ಬರೆದುಕೊಂಡಿರುವ ಶಾರುಖ್, ಜವಾನ್ ಸಾಧ್ಯವಾದಷ್ಟು ಜನರನ್ನು ರಂಜಿಸುತ್ತದೆ ಎನ್ನುವ ನಿರೀಕ್ಷೆ ಇದೆ ಎಂದಿದ್ದಾರೆ. ಕಳೆದ 3 ವರ್ಷಗಳ ಕಠಿಣ ಪರಿಶ್ರಮದ ಪ್ರಯಾಣವಾಗಿದೆ ಜವಾನ್ ಚಿತ್ರ, ಎಲ್ಲರೂ ಇದನ್ನು ನೋಡಿ ಹರಸಿ ಎಂದಿದ್ದಾರೆ. ಇದರ ನಡುವೆಯೇ, ಜವಾನ್ ಟಿಕೆಟ್ ದರ ಎರಡು ಸಾವಿರ ರೂಪಾಯಿಯನ್ನು ದಾಟಿರುವ ಹಿನ್ನೆಲೆಯಲ್ಲಿ, ತರ್ಲೆ ಅಭಿಮಾನಿಯೊಬ್ಬ ನನ್ನ ಗರ್ಲ್ಫ್ರೆಂಡ್ಗೆ ಜವಾನ್ ಚಿತ್ರ ತೋರಿಸಬೇಕಿದೆ. ಉಚಿತ ಟಿಕೆಟ್ ಕೊಡುವಿರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಷ್ಟೇ ಹಾಸ್ಯದ ರೂಪದಲ್ಲಿ ಉತ್ತರಿಸಿರುವ ಶಾರುಖ್ ಖಾನ್, ರೊಮ್ಯಾನ್ಸ್ ಕುರಿತು ಪಾಠ ಮಾಡಿದ್ದಾರೆ. ಉಚಿತವಾಗಿ ಬೇಕಿದ್ದರೆ ಪ್ರೀತಿ ಕೊಡುತ್ತೇನೆ. ಪ್ರೀತಿಸಿದವರಿಗೆ ಟಿಕೆಟ್ ಅಲ್ಲ ಎಂದಿರೋ ನಟ (Shahrukh Khan), ಟಿಕೆಟ್ಗೆ ಚಾರ್ಜ್ ಆಗುತ್ತದೆ. ಹೀಗೆಲ್ಲಾ ರೊಮ್ಯಾನ್ಸ್ನಲ್ಲಿ ಕಂಜೂಸ್ ಆಗಬೇಡಿ, ಚೌಕಾಸಿ ಮಾಡಬೇಡಿ ಎಂದು ಹೇಳಿ ಟಿಕೆಟ್ ಖರೀದಿಸಿ ಅವಳನ್ನೂ ನಿಮ್ಮ ಜೊತೆ ಕರೆದುಕೊಂಡು ಹೋಗಿ ಎಂದಿದ್ದಾರೆ.
ಬಾಲಿವುಡ್ ಸೃಷ್ಟಿಸಲಿದೆ ಹೊಸ ದಾಖಲೆ: 85 ಸಾವಿರ ಮಂದಿಗಾಗಿ 'ಜವಾನ್ ಫ್ಯಾನ್ ಷೋ'!
ಇನ್ನೊಂದು ಇಂಟರೆಸ್ಟಿಂಗ್ ವಿಷಯ ಏನೆಂದರೆ, ಎಸ್‌ಆರ್‌ಕೆ ಯೂನಿವರ್ಸ್‌ನ (SRK Universe) ಸಹ ಸಂಸ್ಥಾಪಕರಾದ ಯಶ್ ಪರ್ಯಾನಿ (Yash Paryani) ಅವರು, 300 ಕ್ಕೂ ಹೆಚ್ಚು ನಗರಗಳಲ್ಲಿ ಜವಾನ್‌ನ ಹಲವು ಪ್ರದರ್ಶನಗಳನ್ನು ಆಯೋಜಿಸಲು ಚಿಂತನೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಇದರಲ್ಲಿ 85 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದಿದ್ದಾರೆ. ಈ ಹಿಂದೆ ಕೂಡ ಪಠಾಣ್ ಚಿತ್ರಕ್ಕೂ ಇದೇ ರೀತಿ ಮಾಡಲಾಗಿತ್ತು. ಪಠಾಣ್ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ 200 ನಗರಗಳಲ್ಲಿ ಫ್ಯಾನ್ ಶೋಗಳನ್ನು ಆಯೋಜಿಸಲಾಗಿತ್ತು. ಈ ವೇಳೆ 50 ಸಾವಿರ ಅಭಿಮಾನಿಗಳು ಭಾಗವಹಿಸಿದ್ದರು. ಆದರೆ ಈ ಬಾರಿ ಇತಿಹಾಸ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಇದರ ಹೊರತಾಗಿಯೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಫ್ಯಾನ್ ಷೋ ಆಯೋಜಿಸಲು ಚಿಂತನೆ ನಡೆದಿದೆ. 60 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರದರ್ಶನ ನಡೆಯಲಿವೆ ಎನ್ನಲಾಗಿದೆ. ಮುಂಗಡ ಬುಕಿಂಗ್‌ನಲ್ಲಿಯೂ ಕೆಲವು ವಿಶೇಷ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತಿದೆ.
ಇದಾಗಲೇ ಒಂದು ದಾಖಲೆ ಜವಾನ್ (Jawan) ಹೆಸರಿನಲ್ಲಿ ಇದೆ. ಅದೇನೆಂದರೆ ಜರ್ಮನಿಯ ಲಿಯಾನ್‌ಬರ್ಗ್‌ನಲ್ಲಿ ದೈತ್ಯಾಕಾರದ ಶಾಶ್ವತ IMAX ಪರದೆಯ ಮೇಲೆ ಜವಾನ್ ಅನ್ನು ತೋರಿಸಲಾಗುವುದು. ಪರದೆಯು 125 ಅಡಿ ಅಗಲ ಮತ್ತು 72 ಅಡಿ ಎತ್ತರವಿದೆ. ಇದು ಸಾಮಾನ್ಯ ಪರದೆಗಿಂತ ದೊಡ್ಡದಾಗಿದೆ! ಇದುವರೆಗೆ ಯಾವುದೇ ಭಾರತೀಯ ಸಿನಿಮಾ ಇಷ್ಟು ದೊಡ್ಡ ಪರದೆಯ ಮೇಲೆ ಪ್ರದರ್ಶನಗೊಂಡಿಲ್ಲ.
ಜರ್ಮನಿಯಲ್ಲಿ ಶಾರುಖ್ ಖಾನ್ ದಾಖಲೆ; ಇತಿಹಾಸ ಸೃಷ್ಟಿಸಲಿದೆ ಜವಾನ್!