ಅಮ್ಮನಾದ ಮೇಲೆ ಮರಳಿರುವ ನಟಿ ದೀಪಿಕಾ ಪಡುಕೋಣೆ ರೀಲ್ಸ್ ಒಂದರಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಅಷ್ಟಕ್ಕೂ ಏನಿದೆ ನೋಡಿ ಈ ರೀಲ್ಸ್ನಲ್ಲಿ...
ಅಮ್ಮನಾದ ಮೇಲೆ ನಟಿಯರಿಗೆ ಚಿತ್ರಗಳಲ್ಲಿ ಅವಕಾಶ ಕಡಿಮೆ ಎನ್ನುವ ಮಾತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಹಲವಾರು ನಟಿಯರು ಇದಾಗಲೇ ಸಿನಿಮಾದಲ್ಲಿ ಛಾಪು ಮೂಡಿಸುತ್ತಲೇ ಇದ್ದಾರೆ. ಈಚೆಗಷ್ಟೇ ಅಮ್ಮನಾಗಿ, ಮಗುವಿನ ಆರೈಕೆಗಾಗಿ ಬಿಡುವು ಪಡೆದುಕೊಂಡಿದ್ದ ನಟಿ ದೀಪಿಕಾ ಪಡುಕೋಣೆ (Deepika Padukone) ಮತ್ತೆ ಕಮ್ಬ್ಯಾಕ್ ಮಾಡುತ್ತಲೇ ವಿಶ್ವ ದಾಖಲೆಯನ್ನೇ ಬರೆದಿದ್ದಾರೆ. ಇವರ ಇನ್ಸ್ಟಾಗ್ರಾಮ್ ರೀಲ್ಸ್ ಒಂದು ವಿಶ್ವದಾಖಲೆ ಬರೆದಿದೆ. ಇವರ ರೀಲ್ಸ್ 1.90 ಮಿಲಿಯನ್ ಅರ್ಥಾತ್ 190 ಕೋಟಿ ವ್ಯೂವ್ಸ್ ಪಡೆದುಕೊಳ್ಳುವ ಮೂಲಕ ದಾಖಲೆ ಬರೆದಿದೆ. ಈ ರೀಲ್ಸ್ನಿಂದಾಗಿ ನಟಿ, ಹಾರ್ದಿಕ್ ಪಾಂಡ್ಯಾರ ಹೆಸರಿನಲ್ಲಿ ಇದ್ದ ದಾಖಲೆಯನ್ನು ಮುರಿದಿದ್ದಾರೆ. ಹಾರ್ದಿಕ್ ಪಾಂಡ್ಯಾ ಅವರ ರೀಲ್ಸ್ 160 ಕೋಟಿ ವೀಕ್ಷಣೆ ಪಡೆದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಅದಕ್ಕೂ ಮುನ್ನ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ರೀಲ್ಸ್ ಒಂದು 1.5 ಬಿಲಿಯನ್ ಅಂದರೆ 150 ಕೋಟಿ ವ್ಯೂವ್ಸ್ ಕಂಡಿತ್ತು. ಇದೀಗ ದೀಪಿಕಾ ಎಲ್ಲಾ ದಾಖಲೆ ಉಡೀಸ್ ಮಾಡಿದ್ದಾರೆ.
ಅಷ್ಟಕ್ಕೂ, ಅಂಥದ್ದೇನಿದೆ ಈ ರೀಲ್ಸ್ನಲ್ಲಿ ಎಂದು ಕೇಳಿದರೆ ಅಚ್ಚರಿ ಪಡುವುದಂತೂ ಗ್ಯಾರೆಂಟಿ. ಏಕೆಂದರೆ, ಇದೇನು ಹಿಲ್ಟನ್ ಹೋಟೆಲ್ನ ಜಾಹೀರಾತು ಅಷ್ಟೇ. ಹಿಲ್ಟನ್ ಹೋಟೆಲಿನ ರಾಯಭಾರಿ ಆಗಿರುವ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೆ ಇದರ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಅದನ್ನು ತಮ್ಮ ಇನ್ಸ್ಟಾದಲ್ಲಿ ಅಪ್ಲೋಡ್ ಮಾಡಿದ್ದರು. ಅಂತರರಾಷ್ಟ್ರೀಯ ಹೋಟೆಲ್ ಉದ್ಯಮದ ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ದೀಪಿಕಾ ಪಡುಕೋಣೆ 'ಇಟ್ ಮ್ಯಾಟರ್ಸ್ ವೇರ್ ಯು ಸ್ಟೇ' ಎಂಬ ಅಭಿಯಾನದ ಭಾಗವಾಗಿ ಒಂದು ರೀಲ್ ಅನ್ನು ಪೋಸ್ಟ್ ಮಾಡಿದ್ದಾರೆ. ಜೂನ್ 9 ರಂದು ಜಾಹೀರಾತನ್ನು ದೀಪಿಕಾ ಪಡುಕೋಣೆ ಶೇರ್ ಮಾಡಿದ್ದರು. ಆ ವಿಡಿಯೋ ಇದೀಗ 1.9 ಬಿಲಿಯನ್ ವೀವ್ಸ್ ಕಂಡಿದೆ. ಈ ಮೂಲಕ ಮಗಳು ಹುಟ್ಟುತ್ತಲೇ ದೀಪಿಕಾ ಇನ್ನೊಂದು ದಾಖಲೆಗೆ ಮುನ್ನುಡಿ ಬರೆದಿದ್ದಾರೆ.
ಮಗುವಿನ ಆರೈಕೆಯ ನಡುವೆಯೇ, ದೀಪಿಕಾ ಪಡುಕೋಣೆ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಜೊತೆಗೆ ‘ಕಿಂಗ್’ ಸಿನಿಮಾನಲ್ಲಿ ನಾಯಕಿಯಾಗಿ ದೀಪಿಕಾ ನಟಿಸುತ್ತಿದ್ದಾರೆ. ಮಾತ್ರವಲ್ಲದೇ ಅಟ್ಲಿ ನಿರ್ದೇಶನದ ಮತ್ತೊಂದು ಸಿನಿಮಾಕ್ಕೂ ಇವರೇ ನಾಯಕಿ. ಅದರಲ್ಲಿ ನಟ ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿದ್ದಾರೆ. ಇವುಗಳ ನಡುವೆಯೇ ಈಗ ದಾಖಲೆಯ ಕಿರೀಟವೂ ಮುಡಿಲಿಗೇರಿದೆ.
ಏಕೆಂದರೆ, ಇತ್ತೀಚೆಗೆ, ದೀಪಿಕಾ ಪಡುಕೋಣೆ ಹಾಲಿವುಡ್ 'ವಾಕ್ ಆಫ್ ಫೇಮ್ ಸ್ಟಾರ್ 2026' ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆ ಮಾಡಿದ ಕೆಲವೇ ತಿಂಗಳುಗಳಲ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಶ್ವ ದಾಖಲೆ ಮಾಡಿ ಗಮನ ಸೆಳೆದಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ
