ನಟಿ ದೀಪಿಕಾ ಪಡುಕೋಣೆ ತಮ್ಮ ಮಗುವಿನ ಕುರಿತು ಗೂಗಲ್​ನಲ್ಲಿ ಸರ್ಚ್​ ಮಾಡಿದ್ದು ಏನು ಎಂಬ ಬಗ್ಗೆ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅದೇನು ಗೊತ್ತಾ? 

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಕಳೆದ ಸೆಪ್ಟೆಂಬರ್​ 8ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಗರ್ಭಿಣಿ ಎಂದು ತಿಳಿದಾಗಿನಿಂದಲೂ ದೀಪಿಕಾ ತಾವು ವಹಿಸಿಕೊಂಡಿರುವ ಎಲ್ಲಾ ಚೀತ್ರಗಳನ್ನೂ ಪೂರ್ಣಗೊಳಿಸಿ ಭೇಷ್​ ಎನ್ನಿಸಿಕೊಂಡವರು. ಗರ್ಭಿಣಿಯಾಗಿದ್ದರೂ ಕಲ್ಕಿ ಚಿತ್ರದಲ್ಲಿ ನಟಿಸಿದ್ದರು. ಇದಾಗ ಬಳಿಕ ಈಗ ಸಂಪೂರ್ಣ ಮಗಳ ಜೊತೆ ಕಳೆಯುವುದಾಗಿ ಹೇಳಿಕೊಂಡಿರೋ ದೀಪಿಕಾ ಈ ಕುರಿತು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿಯೂ ಹೇಳಿಕೊಂಡಿದ್ದರು. ಫೀಡ್, ಬರ್ಪ್, ಸ್ಲೀಪ್, ರಿಪೀಟ್ (Feed, Burp, Sleep, Repeat) ಎಂದು ಇನ್ಸ್​ಟಾಗ್ರಾಮ್​ನಲ್ಲಿ ಬರೆದುಕೊಳ್ಳುವ ಮೂಲಕ ಇನ್ನು ಸದ್ಯ ಮಗುವಿನ ಆರೈಕೆಯಷ್ಟೇ ತಮ್ಮ ಕೆಲಸ ಎನ್ನುವುದನ್ನು ಹೇಳಿದ್ದರು.

ಇದೀಗ ಮಗಳಿಗೆ ಆರು ತಿಂಗಳು ತುಂಬಿದೆ. ಸಾಮಾನ್ಯವಾಗಿ ಎಲ್ಲ ಅಮ್ಮಂದಿರಿಗೂ ಮಗುವಿನ ಬಗ್ಗೆ ನೂರೆಂಟು ಪ್ರಶ್ನೆಗಳು ಇರುತ್ತವೆ. ಈ ಮೊದಲು ಅಮ್ಮ-ಅಜ್ಜಿಯಂದಿರೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಹೊಸ ಅಮ್ಮನ ಸಮಸ್ಯೆಗಳನ್ನು ನಿವಾರಿಸುತ್ತಿದ್ದರು. ಈಗ ಅಪ್ಪ- ಅಮ್ಮ ಸರ್ವಸ್ವ ಎಲ್ಲವೂ ಗೂಗಲ್​. ಗೂಗಲ್​ ಮಾಡಿದ್ರೆ ಸಾಕು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ. ಅಲ್ಲಿ ಸಿಗುವ ಉತ್ತರಗಳ ಸತ್ಯಾಸತ್ಯತೆ ಮಾತ್ರ ಕೇಳುವುದೇ ಬೇಡ ಬಿಡಿ. ಈಗಂತೂ ಸೋಷಿಯಲ್​ ಮೀಡಿಯಾದ ಕ್ರೇಜ್​ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಾಯಿಗೆ ಬಂದ ಟಿಪ್ಸ್​ಗಳನ್ನು ನೀಡುವುದು ಮಾಮೂಲಾಗಿಬಿಟ್ಟಿದೆ. ಅದನ್ನು ನಂಬಿ ಯಾರಾದರೂ ಏನಾದರೂ ಮಾಡಲು ಹೋದರೆ ತೊಂದರೆಗೆ ಒಳಗಾದರೂ ಅಚ್ಚರಿಯೇನಿಲ್ಲ. ಇದರ ಹೊರತಾಗಿಯೂ ಗೂಗಲ್​ಗಳಲ್ಲಿ ನಮಗೆ ಬೇಕಾದ ಸತ್ಯ ಮಾಹಿತಿಗಳೂ ಸಿಗುವುದು ಉಂಟು.

ನಾನೂ ಖಿನ್ನತೆಗೆ ಜಾರಿದ್ದೆ... ಮಕ್ಕಳಿಗೆ ಪರೀಕ್ಷೆಯ ಟಿಪ್ಸ್​ ಕೊಟ್ಟ ದೀಪಿಕಾ ಪಡುಕೋಣೆ: ಪಿಎಂ ಮೋದಿ ಶ್ಲಾಘನೆ

ಅದೇ ರೀತಿ ದೀಪಿಕಾ ಪಡುಕೋಣೆ ಅವರೂ ಮಗುವಿನ ಬಗ್ಗೆ ಕೇಳಿರುವ ಪ್ರಶ್ನೆಯೊಂದು ಇದೀಗ ರಿವೀಲ್​ ಆಗಿದೆ. ಅಬುಧಾಬಿಯಲ್ಲಿ ಫೋರ್ಬ್ಸ್ ನಡೆಸಿದ ಕಾರ್ಯಕ್ರಮದ ಭಾಗವಾಗಿದ್ದ ದೀಪಿಕಾಗೆ, ಫೋನ್‌ನಲ್ಲಿ ಆಕೆ ಕೊನೆಯದಾಗಿ ಗೂಗಲ್ ಮಾಡಿದ ವಿಷಯದ ಬಗ್ಗೆ ಕೇಳಲಾಯಿತು. ಆಗ ದೀಪಿಕಾ ಅದು ತಮ್ಮ ಮಗುವಿಗೆ ಸಂಬಂಧಿಸಿದ್ದು ಎಂದು ಹೇಳಿದರು. 'ನನ್ನ ಮಗು ಪುರ್​ ಎಂದು ಉಗುಳುವುದನ್ನು ಯಾವಾಗ ನಿಲ್ಲಿಸುತ್ತದೆ' ಎಂದು ಕೇಳಿರುವುದಾಗಿ ಹೇಳಿದರು! ಸಾಮಾನ್ಯವಾಗಿ ಕಂದಮ್ಮಗಳು ಈ ರೀತಿ ಉಗುಳುವುದು ಮಾಮೂಲು. ಅದೂ ಹೆಚ್ಚಾಗಿ ಅಮ್ಮನ ಮುಖದ ಮೇಲೆಯೇ ಉಗುಳುತ್ತದೆ. ಇದೇ ಪ್ರಶ್ನೆಯನ್ನು ದೀಪಿಕಾ ಕೇಳಿದ್ದಾರಂತೆ. 

ಇದಕ್ಕೆ ನೆಟ್ಟಿಗರು ತಮಾಷೆಯ ಉತ್ತರ ಕೊಟ್ಟಿದ್ದಾರೆ. ಅಬ್ಬಬ್ಬಾ ಇಂಥ ಪ್ರಶ್ನೆ ಬಹುಶಃ ಯಾವ ಅಮ್ಮನೂ ಗೂಗಲ್​ನಲ್ಲಿ ಹುಡುಕಿರಲು ಸಾಧ್ಯವಿಲ್ಲ. ನೀವು ಗ್ರೇಟ್​ ಮದರ್​ ಎಂದು ಕಾಲೆಳೆದಿದ್ದಾರೆ. ಇನ್ನು ನಟಿ ಕುರಿತು ಹೇಳುವುದಾದರೆ, ದೀಪಿಕಾ ಪಡುಕೋಣೆ ಕೆಲ ದಿನಗಳ ಹಿಂದೆ ಹೊಸ ಕೆಲಸಕ್ಕೆ ಸಹಿ ಹಾಕಿದ್ದಾರೆ. ಇಲ್ಲಿಯವರೆಗೆ ರಣವೀರ್​ ಸಿಂಗ್​ ರಾಯಭಾರಿಯಾಗಿದ್ದ ಜಾಗಕ್ಕೆ ತಾವು ಬಂದು ಕೂತಿದ್ದಾರೆ ದೀಪಿಕಾ. ಈ ಮೂಲಕ ಪತಿಯ ಜಾಗಕ್ಕೆ ಇವರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ರಣವೀರ್​ ಸಿಂಗ್​ ಆ ಉದ್ಯೋಗ ಕಳೆದುಕೊಂಡಿದ್ದಾರೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ತಯಾರಕ ಕ್ರಾಫ್ಟನ್, ಜಾಗತಿಕ ಐಕಾನ್ ದೀಪಿಕಾ ಪಡುಕೋಣೆ ಅವರನ್ನು ಹೊಸ ಬ್ರಾಂಡ್ ಅಂಬಾಸಿಡರನ್ನಾಗಿ ನೇಮಕ ಮಾಡಿಕೊಂಡಿದೆ. ಇಲ್ಲಿಯವರೆಗೆ ಈ ಜಾಗದಲ್ಲಿ ರಣವೀರ್​ ಬ್ರಾಂಡ್​ ಅಂಬಾಸಿಡರ್​ ಆಗಿದ್ದರು.

ಮಗಳ ಪಾಲನೆಯೇ ಸರ್ವಸ್ವ ಎಂದಿದ್ದ ದೀಪಿಕಾ ಹೊಸ ಕೆಲಸಕ್ಕೆ ಸಹಿ! ಉದ್ಯೋಗ ಕಳಕೊಂಡ ರಣವೀರ್​ ಸಿಂಗ್