ವಿಷಕಾರಿ ಗುಟ್ಕಾ ಜಾಹೀರಾತುಗಳಲ್ಲಿ ನಟರಾದ ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ಕಾಣಿಸಿಕೊಳ್ಳುತ್ತಿದ್ದು, ಇದು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ ಎಂದು ದೂರು ದಾಖಲಾಗಿದೆ. ಈ ಜಾಹೀರಾತುಗಳು ಗ್ರಾಹಕ ಸಂರಕ್ಷಣಾ ಕಾಯ್ದೆ ಉಲ್ಲಂಘಿಸುತ್ತಿವೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಜೈಪುರ ಜಿಲ್ಲಾ ಗ್ರಾಹಕ ಆಯೋಗವು ನಟರಿಗೆ ಮತ್ತು ಗುಟ್ಕಾ ತಯಾರಿಕಾ ಕಂಪೆನಿಗೆ ಸಮನ್ಸ್ ಜಾರಿ ಮಾಡಿದೆ.

 ಬಹುತೇಕ ವಿಷಕಾರಿ ಪದಾರ್ಥಗಳ ಜಾಹೀರಾತಿನಲ್ಲಿ ದೊಡ್ಡ ದೊಡ್ಡ ಚಿತ್ರತಾರೆಯರು, ಕ್ರಿಕೆಟಿಗರು ಸೇರಿದಂತೆ ಕೆಲವು ಕ್ಷೇತ್ರಗಳ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುವುದು ಮಾಮೂಲಾಗಿದೆ. ತಾವು ತೋರಿಸುವ ಜಾಹೀರಾತಿನ ಪದಾರ್ಥಗಳನ್ನು ಜನ್ಮದಲ್ಲಿ ಒಂದೇ ಒಂದು ಬಾರಿ ಸೇವಿಸದಿದ್ದರೂ ಕೋಟಿ ಕೋಟಿ ಹಣದ ಆಸೆಗೆ ಬಿದ್ದು ಅದರಲ್ಲಿ ರಾಯಭಾರಿಯಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜನರ ಹಾದಿ ತಪ್ಪಿಸುವ ಜಾಹೀರಾತುಗಳಿಗೇನೂ ಕೊರತೆ ಇಲ್ಲ. ಅದರಲ್ಲಿಯೂ ಪ್ರಾಣಕ್ಕೆ ಕುತ್ತು ತರುವ, ದೇಹದ ಅಂಗಾಂಗಳಿಗೆ ಶಾಶ್ವತ ನಷ್ಟ ಉಂಟು ಮಾಡುವ ಜಾಹೀರಾತುಗಳಿಗೆ ಕಡಿವಾಣವೂ ಬಿದ್ದಿಲ್ಲ. ಒಂದಷ್ಟು ತಿಂಗಳು ಕೋರ್ಟ್​ ಇಲ್ಲವೇ ಸರ್ಕಾರ ಇದನ್ನು ಬ್ಯಾನ್​ ಮಾಡಿದರೆ, ಮತ್ತೆ ಜಾಹೀರಾತುಗಳು ಮುಂದುವರೆಯುತ್ತವೆ. ಅದೇ ಇನ್ನೊಂದೆಡೆ, ಸಿನಿ ತಾರೆಯರನ್ನೇ ದೇವರು ಎಂದು ನಂಬಿರೋರು ಅದೆಷ್ಟೋ ಮಂದಿ. ಅವರ ಹೇರ್​ಸ್ಟೈಲ್​, ಜೀವನ ಕ್ರಮ, ಅವರ ಉಡುಗೆ-ತೊಡಗೆ ಹೀಗೆ ಚಿತ್ರ ನಟ-ನಟಿಯರನ್ನೇ ಅನುಸರಿಸುವುದು ಎಂದರೆ ಇಂದಿನ ಬಹುತೇಕ ಜನರಿಗೆ ಸಿಕ್ಕಾಪಟ್ಟೆ ಇಷ್ಟ. ಅದೇ ಕಾರಣಕ್ಕೆ ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡರೂ ಅದೇ ಪಂಚಾಮೃತ ಎಂದು ಸೇವನೆ ಮಾಡುವವರೂ ಕಮ್ಮಿಯೇನಿಲ್ಲ. 

ಅಂಥದ್ದೇ ಒಂದು ಜಾಹೀರಾತು ಗುಟ್ಕಾ. ಕಣ ಕಣದಲ್ಲಿಯೂ ಕೇಸರಿ ಎನ್ನುವ ಮೂಲಕ, ಶಾರುಖ್ ಖಾನ್ (Shah Rukh Khan), ಅಜಯ್ ದೇವಗನ್ (Ajay Devgn) ಮತ್ತು ಟೈಗರ್ ಶ್ರಾಫ್‌ಗೆ (Tiger Shroff) ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೈಗರ್​ ಶ್ರಾಫ್​ಗೂ ಮೊದಲು ಅಕ್ಷಯ್​ ಕುಮಾರ್​ ಇದರಲ್ಲಿ ಇದ್ದರು. ಆದರೆ ಕೊನೆಗೆ ಅವರು ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದು, ಜನರ ಹಾದಿಯನ್ನು ನಾನು ತಪ್ಪಿಸಲಾರೆ ಎನ್ನುತ್ತಲೇ ಕ್ಷಮೆ ಕೋರಿ ಜಾಹೀರಾತಿನಿಂದ ಹಿಂದಕ್ಕೆ ಸರಿದರು. ಅವರು ಹೋದರೇನಂತೆ. ದುಡ್ಡಿಗಾಗಿ ಇನ್ನೊಬ್ಬರು ಸಿಗದೇ ಇರ್ತಾರೆಯೆ? ಹಾಗೆ ಸಿಕ್ಕಿದ್ದು ಟೈಗರ್​ ಶ್ರಾಫ್​. ಇದೀಗ ಈ ಮೂವರಿಗೂ ಕಾನೂನು ಸಂಕಷ್ಟ ಎದುರಾಗಿದೆ. ಈ ನಟರ ವಿರುದ್ಧ ಕೇಸ್​ ದಾಖಲಾಗಿದ್ದು, ಘಟನೆಗೆ ಜೈಪುರ ಜಿಲ್ಲಾ ಗ್ರಾಹಕ ಆಯೋಗ ಸಮನ್ಸ್​ ಜಾರಿ ಮಾಡಿದೆ.

ಶಾರುಖ್​ ಖಾನ್​ ಸಾಯಲ್ಲ... ನಾವು ಮಾತ್ರ ಸಾಯ್ತೇವಾ ಎಂದ ಮಕ್ಕಳು! ಶಾಕಿಂಗ್​ ವಿಡಿಯೋ ವೈರಲ್​

ನಟರ ಜೊತೆಗೆ ಗುಟ್ಕಾ ತಯಾರಿಕಾ ಕಂಪೆನಿ ಜೆಬಿ ಇಂಡಸ್ಟ್ರೀಸ್‌ಗೆ ಸಹ ಸಮನ್ಸ್ ಜಾರಿ ಮಾಡಲಾಗಿದೆ. ಎಲ್ಲರೂ ಇದೇ ಮಾರ್ಚ್ 19ರಂದು ಕೋರ್ಟ್​ಗೆ ಹಾಜರಾಗುವಂತೆ ಆದೇಶಿಸಲಾಗಿದೆ. ಗುಟ್ಕಾದಲ್ಲಿ ಕೇಸರಿ ಇದೆ ಎನ್ನುವ ಮೂಲಕ ಈ ನಟರು ಜನರ ಹಾದಿ ತಪ್ಪಿಸುತ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಅದರಲ್ಲಿ ಕೇಸರಿ ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ ಜೈಪುರ ನಿವಾಸಿ ಯೋಗೇಂದ್ರ ಸಿಂಗ್ ಬಡಿಯಾಲ್ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಜಾಹೀರಾತು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಅನ್ನು ಉಲ್ಲಂಘಿಸುತ್ತದೆ ಮತ್ತು ಸಾರ್ವಜನಿಕರನ್ನು ದಾರಿತಪ್ಪಿಸುತ್ತದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ನಿಜವಾದ ಕೇಸರಿಗೆ ಕೆ.ಜಿಗೆ ಒಂದು ಲಕ್ಷಕ್ಕಿಂತಲೂ ಹೆಚ್ಚು ಹಣವಿದೆ. ಆದರೆ ಐದು ರೂಪಾಯಿ ಪ್ಯಾಕೆಟ್​ನಲ್ಲಿ ಕೇಸರಿ ಇದೆ ಎನ್ನುವ ಮೂಲಕ ಜನರನ್ನು ಮರಳು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 

ಈ ಮೂವರು ನಟರು ಬಹಳ ಸಮಯದಿಂದ ಪಾನ್ ಮಸಾಲಾ ಮತ್ತು ಗುಟ್ಕಾ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಟೇಸ್ಟ್ ಆಫ್ ಬಿಗ್ ಬ್ರಾಂಡ್ಸ್” ಎಂಬ ಟ್ಯಾಗ್‌ಲೈನ್ ಅಡಿಯಲ್ಲಿ ಈ ಜಾಹೀರಾತುಗಳು ಇದನ್ನು “ಕೇಸರ್” ಉತ್ಪನ್ನವೆಂದು ಪ್ರಚಾರ ಮಾಡುತ್ತವೆ. ಆದರೆ ವಾಸ್ತವದಲ್ಲಿ ಇದು ಗುಟ್ಕಾ ಉತ್ಪನ್ನಗಳ ಪ್ರಚಾರವಾಗಿದೆ ಎಂದು ಯೋಗೇಂದ್ರ ಸಿಂಗ್ ತಿಳಿಸಿದ್ದಾರೆ. ಒಂದು ವೇಳೆ ಆರೋಪ ಸಾಬೀತಾದರೆ, ಈ ಜಾಹೀರಾತುಗಳನ್ನು ನಿಷೇಧಿಸಿ ಇದರ ಪ್ರಚಾರಸೆಲೆಬ್ರಿಟಿಗಳ ಮೇಲೆ ಆರ್ಥಿಕ ದಂಡವನ್ನು ವಿಧಿಸಬಹುದು. ಅದೇ ಸಮಯದಲ್ಲಿ, ಗ್ರಾಹಕ ಸಂರಕ್ಷಣಾ ಕಾಯ್ದೆ ಮಾಡುತ್ತಿರುವ ನಟರು ಹಾಗೂ ಕಂಪೆನಿಗೆ ದಂಡ ವಿಧಿಸುವ ಅವಕಾಶ ಕಾನೂನಿನಲ್ಲಿ ಇದೆ.

ಗುಟ್ಕಾದಿಂದ ಹಾದಿ ತಪ್ಪಿಸಲಾರೆನೆಂದ ಅಕ್ಷಯ್​ ಔಟ್​: ಶಾರುಖ್​, ಅಜಯ್ ಡೋಂಟ್​ ಕೇರ್​​- ಟೈಗರ್​ ಎಂಟ್ರಿ!