ಅಪರ್ಣಾ ಬೆನ್ನಲ್ಲೇ ಕ್ಯಾನ್ಸರ್‌ಗೆ ಬಲಿಯಾದ ಬಾಲಿವುಡ್ ನಿರ್ಮಾಪಕನ ಪುತ್ರಿ ತಿಶಾ!
ಕ್ಯಾನ್ಸರ್ ಮಾರಕ ರೋಗ ಇದೀಗ ಎಲ್ಲೆಡೆ ಕೇಳಿಬರುತ್ತಿದೆ. ಇತ್ತೀಚೆಗ ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣ ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಇದೀಗ ಬಾಲಿವುಡ್ ನಿರ್ಮಾಪಕ, ನಟನ ಪುತ್ರಿ ಕೇವಲ 21ರ ಹರೆಯದ ತಿಶಾ ಕುಮಾರ್ ಕ್ಯಾನ್ಸರ್‌ಗೆ ಬಲಿಯಾಗಿದ್ದಾಳೆ.
ಮುಂಬೈ(ಜು.19) ಬಾಲಿವುಡ್‌ನ ಅತ್ಯಂತ ಜನಪ್ರಿಯ ನಿರ್ಮಾಣ ಹಾಗೂ ಮ್ಯೂಸಿಕ್ ಲೇಬಲ್ ಕಂಪನಿ ಟಿ ಸೀರಿಸ್ ಮುಖ್ಯಸ್ತ ಭೂಷಣ್ ಕುಮಾರ್ ಸಂಬಂಧಿ, ನಿರ್ಮಾಪಕ ಕೃಷ್ಣ ಕುಮಾರ್ ಪುತ್ರಿ ತಿಶಾ ಕುಮಾರ್ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. 21ರ ಹರೆಯದ ತಿಶಾ ಕುಮಾರ್ ಆ್ಯನಿಮಲ್ ಚಿತ್ರದ ಪ್ರೀಮಿಯರ್ ಶೂ ವೇಳೆ ಕಾಣಿಸಿಕೊಂಡಿದ್ದರು. ಬಳಿಕ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ತಿಶಾ ಕ್ಯಾನ್ಸರ್‌ಗೆ ಬಲಿಯಾಗಿರುವುದು ಬಾಲಿವುಡ್ ಮಾತ್ರವಲ್ಲ ದೇಶವನ್ನೇ ಬೆಚ್ಚಿ ಬೀಳಿಸಿದೆ.
ತಿಶಾ ಕುಮಾರ್ ವಯಸ್ಸು ಕೇವಲ 21. ಆದರೆ ಕಳೆದ ವರ್ಷ ಕ್ಯಾನ್ಸರ್ ಮಾರಕ ರೋಗ ಪತ್ತೆಯಾಗಿತ್ತು. ಬಳಿಕ ಚಿಕಿತ್ಸೆ ಆರಂಭಿಸಲಾಗಿತ್ತು. ಇತ್ತೀಚೆಗೆ ಕ್ಯಾನ್ಸರ್ ಅಪಾಯದ ಮಟ್ಟ ತಲುಪಿತ್ತು. ಹೀಗಾಗಿ ಕುಟುಂಬಸ್ಥರು ಜರ್ಮನಿಯ ಪ್ರಖ್ಯಾತ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಪಾಯದ ಮಟ್ಟ ಮೀರಿದ ಕಾರಣ ಚಿಕಿತ್ಸೆ ಫಲಿಸಿಲಿಲ್ಲ. ಹೀಗಾಗಿ ತಿಶಾ ಕುಮಾರ್ ನಿಧನರಾಗಿದ್ದಾರೆ.
ಕನ್ನಡಿಗರಿಗೆ ಮತ್ತೊಂದು ಆಘಾತ, ಅಚ್ಚ ಕನ್ನಡದ ಖ್ಯಾತ ನಿರೂಪಕಿ ಅಪರ್ಣ ಇನ್ನಿಲ್ಲ!
ತಿಶಾ ಕುಮಾರ್ ಕುಟುಂಬಸ್ಥರು ವಿಶೇಷ ಮನವಿ ಮಾಡಿದ್ದಾರೆ. ಈ ದುಃಖದ ಸಂದರ್ಭದಲ್ಲಿ ಕುಟುಂಬದ ಖಾಸಗಿ ಕ್ಷಣವನ್ನು ಗೌರವಿಸಬೇಕಾಗಿ ವಿನಂತಿಸಿದ್ದಾರೆ. ನಮ್ಮ ನಗುವನ್ನು ಕಳೆದುಕೊಂಡಿದ್ದೇವೆ. ನಮ್ಮ ಎಲ್ಲಾ ಖುಷಿ ಅವಳಾಗಿದ್ದಳು. ಇದು ಅತ್ಯಂತ ಕಠಿಣ ಸಂದರ್ಭ. ಹೀಗಾಗಿ ಈ ಪರಿಸ್ಥಿತಿಯಲ್ಲಿ ನಮ್ಮನ್ನು ಅರ್ಥ ಮಾಡಿಕೊಂಡು ಗೌರವಿಸಬೇಕಾಗಿ ಕುಟುಂಬ ವಿನಂತಿಸಿದೆ.
ತಿಶಾ ತಂದೆ ಕೃಷ್ಣಕುಮಾರ್ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಕೊನೆಯದಾಗಿ ಕೃಷ್ಣ ಕುಮಾರ್ ರಣಬೀರ್ ಕಪೂರ್ ಅಭಿನಯದ ಆ್ಯನಿಮಲ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೂಲ್ ಬೂಲಯ್ಯ 2, ಆಶಿಖಿ, ತಪ್ಪಡ್ ಸೇರಿದಂತೆ ಬಾಕ್ಸ್ ಆಫೀಸ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
ಆಜಾ ಮೇರಿ ಜಾನ್, ಕಸಮ್ ತೇರಿ ಕಸಮ್, ಶಬ್ನಮ್, ಬೇವಫಾ ಸನಮ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ 2000 ಇಸವಿಯಲ್ಲಿ ತೆರೆ ಕಂಡ ಪಾಪಾ ದಿ ಗ್ರೇಟ್ ಚಿತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಬಳಿಕ ಬಾಲಿವುಡ್ ಚಿತ್ರ ನಿರ್ಮಾಣದ ಮೂಲಕ ಯಶಸ್ಸು ಕಂಡಿದ್ದಾರೆ. ಕೃಷ್ಣ ಕುಮಾರ್ ಆಪ್ತ ಸಂಬಂಧಿ ಭೂಷಣ್ ಕುಮಾರ್ ಟಿ ಸೀರಿಸ್ ಕಂಪನಿಯ ಮುಖ್ಯಸ್ಥರಾಗಿದ್ದಾರೆ. ಸೆಲೆಬ್ರಿಟಿ ಕುಟುಂಬ ಕುಡಿ ತಿಶಾ 21ರ ಹರೆಯದಲ್ಲೇ ಮಾರಕ ಆರೋಗ್ಯ ಸಮಸ್ಯೆಗೆ ತುತ್ತಾಗಿ ನಿಧನವಾಗಿರುವುದು ಬಾಲಿವುಡ್ ಲೋಕಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕಾದಿದ್ದೇನೆ ಮರಳಿ ಜೀವ ತಂದಾಳೆಂದು, ಅಪರ್ಣ ಸಾವಿಗೂ ಮುನ್ನ ಪತಿ ಬರೆದ ನೋವಿನ ಕವನ!