ಡಿವೋರ್ಸ್​ ಎನ್ನುವುದು ದಂಪತಿ ನಡುವೆ ಹೇಗೆ ಪರಿಣಾಮ ಬೀರುತ್ತದೆ, ಇದರಿಂದ ಆಗುವ ನಷ್ಟವೇನು ಇತ್ಯಾದಿ ಕುರಿತು ನಟಿ ಕಾಜೋಲ್​ ಮಾತನಾಡಿದ್ದಾರೆ. ಏಕಾಏಕಿ ಅವರು ಹೀಗೆ ಮಾತನಾಡಲು ಕಾರಣವೂ ಇದೆ. ಅದೇನೆಂದರೆ... 

ಕೆಲವೇ ಕೆಲವು ತಾರಾ ಜೋಡಿಗಳು ಮಾತ್ರ ಆದರ್ಶ ಎನ್ನಿಸಿಕೊಂಡಿವೆ. ಮದುವೆಯಾಗಿ ಹತ್ತಾರು ವರ್ಷಗಳಾದರೂ ಸುಖದಿಂದ ಬಾಳುತ್ತಿರುವ ಜೋಡಿಗಳ ನಿದರ್ಶನ ಅಪರೂಪ. ಅಂಥ ತಾರಾ ಜೋಡಿಯಲ್ಲೊಂದು ಅಜಯ್​ ದೇವಗನ್​ ಮತ್ತು ಕಾಜೋಲ್​ ಜೋಡಿ. 1999ರ ಫೆಬ್ರುವರಿ 24ರಂದು ಮದುವೆಯಾಗಿರುವ ಈ ಜೋಡಿ ಮದುವೆಯಾಗಿ 26 ವರ್ಷಗಳಾಗಿವೆ. ಇವರದ್ದು ಸುಖಿ ದಾಂಪತ್ಯ. ಆದರೆ ಇದೇ ಮೊದಲ ಬಾರಿಗೆ ನಟಿ ಕಾಜೋಲ್​ ವಿಚ್ಛೇದನ (divorce) ಬಗ್ಗೆ ಮಾತನಾಡಿದ್ದಾರೆ. ವಿಚ್ಛೇದನವು ಎಲ್ಲರ ಜೀವನದಲ್ಲಿ ಹೇಗೆ ಸಮಸ್ಯೆಗಳನ್ನು ತಂದೊಡ್ಡುತ್ತವೆ ಎಂಬ ಬಗ್ಗೆ ಮಾತನಾಡಿದ್ದಾರೆ.

ಅಷ್ಟಕ್ಕೂ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದು ತಮ್ಮ ಚಿತ್ರ ದಿ ಟ್ರಯಲ್ ಸೀಸನ್ 2 - ಪ್ಯಾರ್ ಕಾನೂನ್ ಧೋಖಾ ಚಿತ್ರದ ಕುರಿತು. ಅದರ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಏಕೆಂದರೆ ಈ ಚಿತ್ರವು ಅಧಿಕಾರ, ರಾಜಕೀಯ ಮತ್ತು ವೈಯಕ್ತಿಕ ಸಂದಿಗ್ಧತೆಗಳ ಸಂದರ್ಭದಲ್ಲಿ ವಿಚ್ಛೇದನದ ಸಂಕೀರ್ಣತೆಗಳ ಬಗ್ಗೆ ತಿಳಿಸುತ್ತದೆ.

ಪತಿಯೊಂದಿಗೆ ಪ್ರಕ್ಷುಬ್ಧ ಸಂಬಂಧ

ಬಂಧನ, ಹಿಂದಿನ ಭ್ರಷ್ಟಾಚಾರ ಮತ್ತು ಲೈಂಗಿಕ ಹಗರಣದ ವಿವಾದಗಳ ಹೊರತಾಗಿಯೂ ರಾಜಕೀಯ ಪುನರಾಗಮನವನ್ನು ಬಯಸುತ್ತಿರುವ ಪತಿಯೊಂದಿಗೆ ಪ್ರಕ್ಷುಬ್ಧ ಸಂಬಂಧವನ್ನು ಉಳಿಸಿಕೊಳ್ಳುವಾಗ ಮಾಡುವ ಹೋರಾಟದ ಕಥೆಯನ್ನು ಇದು ಹೇಳುತ್ತದೆ. ತನ್ನ ಪ್ರಪಂಚವನ್ನು ಹಾಗೆಯೇ ಉಳಿಸಿಕೊಳ್ಳಲು ಹೆಣಗಾಡುತ್ತಿರುವಾಗ ವಿಚ್ಛೇದನವು ವೈಯಕ್ತಿಕ ಮತ್ತು ವೃತ್ತಿಪರ ಸವಾಲುಗಳಾಗುವ ಬಗ್ಗೆ ಇದು ತಿಳಿಸುತ್ತದೆ. ಇದರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಕಾಜೋಲ್​ ಡಿವೋರ್ಸ್​ ಬಗ್ಗೆ ಮಾತನಾಡಿದ್ದಾರೆ.

ಆಧುನಿಕ ಜಗತ್ತಿನಲ್ಲಿ ವ್ಯಕ್ತಿಯ ಘನತೆ ಮತ್ತು ಗುರುತಿನ ಮೇಲೆ ಪರಿಣಾಮ ಬೀರುವ ವಿಚ್ಛೇದನ ಮತ್ತು ಬೇರ್ಪಡುವಿಕೆಗಳಿಗೆ ಸಂಬಂಧಿಸಿದ ನಿಷೇಧದ ಬಗ್ಗೆ ಕಾಜೋಲ್ ನಿಲುವನ್ನು ಹಂಚಿಕೊಂಡಿದ್ದಾರೆ. "ವಿಚ್ಛೇದನದ ಕಳಂಕವು ಇಂದು ಮಹಿಳೆಯರಿಗೆ ಹೆಚ್ಚಾಗಿ ಅಂಟಿಕೊಳ್ಳುತ್ತಿದೆ ಎನ್ನುವುದು ನನ್ನ ಭಾವನೆ. ಪುರುಷರಿಗೂ ಇದರಿಂದ ಹಲವು ಸವಾಲು ಎದುರಾಗಬಹುದಾದರೂ ಮಹಿಳೆ ಇದರಿಂದ ಹೆಚ್ಚಿನ ನೋವು ಅನುಭವಿಸುತ್ತಾಳೆ ಎನ್ನಿಸುತ್ತದೆ' ಎಂದಿದ್ದಾರೆ. ಕಾಜೋಲ್​ ಅವರ ಅಪ್ಪ ಶೋಮು ಮುಖರ್ಜಿ ಮತ್ತು ಅಮ್ಮ ತನುಜಾ ಡಿವೋರ್ಸ್​ ಆದವರು. ಇದರಿಂದ ತಮ್ಮ ಲೈಫ್ ಮೇಲೆ ಆದ ಪರಿಣಾಮವನ್ನೂ ನಟಿ ಹಿಂದೊಮ್ಮೆ ಹೇಳಿದ್ದರು.