ಬಿಎಂಸಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಚಿತ್ರತಂಡ ಇಟ್ಟಿದ್ದ 25,000 ರೂಪಾಯಿಗಳ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜೊತೆಗೆ ಒಂದು ಲಕ್ಷ ರೂಪಾಯಿಗಳ ಹೆಚ್ಚುವರಿ ದಂಡವನ್ನು ವಿಧಿಸಲು ಪ್ರಸ್ತಾಪಿಸಲಾಗಿದೆ. ಈ ಸ್ಟುಡಿಯೋವನ್ನು ನಿಷೇಧಿಸುವಂತೆ ಪತ್ರ ಬರೆಯಲಾಗಿದೆ. 

ಧುರಂಧರ್ 2' ಶೂಟಿಂಗ್‌ನಲ್ಲಿ ಭಾರಿ ಅಚಾತುರ್ಯ! ಆದಿತ್ಯ ಧಾರ್ ಸ್ಟುಡಿಯೋ ಕಪ್ಪುಪಟ್ಟಿಗೆ? 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಬೈ: ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ಆದಿತ್ಯ ಧಾರ್ ಸಾರಥ್ಯದಲ್ಲಿ ಮೂಡಿಬಂದ 'ಧುರಂಧರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿತ್ತು. ರಣವೀರ್ ಸಿಂಗ್ ಅಬ್ಬರದ ನಟನೆಗೆ ಫಿದಾ ಆಗಿದ್ದ ಪ್ರೇಕ್ಷಕರು ಈಗ ಈ ಚಿತ್ರದ ಮುಂದುವರಿದ ಭಾಗ ಅಂದರೆ 'ಧುರಂಧರ್ 2' ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಮಾರ್ಚ್ 19 ರಂದು ಸಿನಿಮಾ ತೆರೆಕಾಣಲು ಸಜ್ಜಾಗುತ್ತಿದ್ದಂತೆಯೇ ಚಿತ್ರತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಚಿತ್ರೀಕರಣದ ವೇಳೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪದ ಮೇಲೆ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚಿತ್ರತಂಡದ ವಿರುದ್ಧ ಗರಂ ಆಗಿದೆ.

ಸಿನಿಮಾ ಅಂದಮೇಲೆ ರೋಚಕ ಸಾಹಸ ದೃಶ್ಯಗಳು ಇರುವುದು ಸಹಜ. ಆದರೆ ಆ ಸಾಹಸಗಳು ಕಾನೂನಿನ ಚೌಕಟ್ಟಿನಲ್ಲೇ ಇರಬೇಕು. ಆದರೆ 'ಧುರಂಧರ್ 2' ಚಿತ್ರತಂಡ ಅನುಮತಿ ಇಲ್ಲದ ಕಡೆಗಳಲ್ಲಿ ಚಿತ್ರೀಕರಣ ನಡೆಸಿ ಸಂಕಷ್ಟಕ್ಕೆ ಸಿಲುಕಿದೆ. ಆದಿತ್ಯ ಧಾರ್ ಅವರ ನಿರ್ಮಾಣ ಸಂಸ್ಥೆಯಾದ 'ಬಿ62 ಸ್ಟುಡಿಯೋಸ್' ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದೆ ಎಂದು ಬಿಎಂಸಿ ಗಂಭೀರ ಆರೋಪ ಮಾಡಿದೆ. ಅಷ್ಟೇ ಅಲ್ಲದೆ, ಈ ನಿರ್ಮಾಣ ಸಂಸ್ಥೆಯನ್ನು ಕಪ್ಪುಪಟ್ಟಿಗೆ (Blacklist) ಸೇರಿಸಬೇಕೆಂದು ಒತ್ತಾಯ ಕೇಳಿಬರುತ್ತಿದೆ.

ಬಿಎಂಸಿ ಕೆಂಗಣ್ಣಿಗೆ ಗುರಿಯಾದ ರಣವೀರ್ ಸಿನಿಮಾ!

ವರದಿಗಳ ಪ್ರಕಾರ, ಹೈ-ಸೆಕ್ಯೂರಿಟಿ ಇರುವ ಅಥವಾ ಭದ್ರತಾ ವಲಯಗಳಲ್ಲಿ ಯಾವುದೇ ಮುನ್ಸೂಚನೆ ನೀಡದೆ ದೊಡ್ಡ ದೊಡ್ಡ ಟಾರ್ಚ್‌ಗಳನ್ನು ಶೂಟಿಂಗ್‌ಗಾಗಿ ಬಳಸಲಾಗಿದೆ. ಇದನ್ನು ಅತ್ಯಂತ ಗಂಭೀರ ಭದ್ರತಾ ಲೋಪವೆಂದು ಪರಿಗಣಿಸಿದ ಮುಂಬೈ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಆ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಅಧಿಕೃತ ಅನುಮತಿ ಪಡೆಯದೆ ಕಟ್ಟಡಗಳ ಟೆರೇಸ್ ಮೇಲೆ ಚಿತ್ರೀಕರಣ ಮಾಡುವುದು ಮತ್ತು ಸ್ಥಳೀಯ ಆಡಳಿತದ ಮಾನ್ಯತೆ ಇಲ್ಲದ ಜನರೇಟರ್ ವ್ಯಾನ್‌ಗಳನ್ನು ಸೆಟ್‌ನಲ್ಲಿ ಬಳಸಿದ್ದು ಅಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಬಿಎಂಸಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಚಿತ್ರತಂಡ ಇಟ್ಟಿದ್ದ 25,000 ರೂಪಾಯಿಗಳ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜೊತೆಗೆ ಒಂದು ಲಕ್ಷ ರೂಪಾಯಿಗಳ ಹೆಚ್ಚುವರಿ ದಂಡವನ್ನು ವಿಧಿಸಲು ಪ್ರಸ್ತಾಪಿಸಲಾಗಿದೆ. ಅಷ್ಟೇ ಅಲ್ಲದೆ, ರಾಜ್ಯದ ಏಕ-ಗವಾಕ್ಷಿ ಚಿತ್ರೀಕರಣ ಪೋರ್ಟಲ್‌ನಿಂದ ಈ ಸ್ಟುಡಿಯೋವನ್ನು ಶಾಶ್ವತವಾಗಿ ನಿಷೇಧಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಒಂದು ವೇಳೆ ಸ್ಟುಡಿಯೋ ಕಪ್ಪುಪಟ್ಟಿಗೆ ಸೇರಿದರೆ ಮುಂದಿನ ದಿನಗಳಲ್ಲಿ ಆದಿತ್ಯ ಧಾರ್ ಅವರ ಚಿತ್ರೀಕರಣಕ್ಕೆ ದೊಡ್ಡ ಅಡ್ಡಿಯಾಗಲಿದೆ.

ಕಾನೂನು ಸಂಘರ್ಷ

ಡಿಸೆಂಬರ್ 5 ರಂದು ಬಿಡುಗಡೆಯಾದ 'ಧುರಂಧರ್' ಮೊದಲ ಭಾಗದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್ ಅಂತಹ ದಿಗ್ಗಜ ನಟರು ನಟಿಸಿದ್ದರು. ಈಗ ಎರಡನೇ ಭಾಗದ ಮೇಲೂ ಅಷ್ಟೇ ನಿರೀಕ್ಷೆ ಇದೆ. ಆದರೆ ಬಿಡುಗಡೆಯ ಹೊಸ್ತಿಲಲ್ಲಿ ಎದುರಾಗಿರುವ ಈ ಕಾನೂನು ಸಂಘರ್ಷ ಚಿತ್ರದ ಪ್ರಚಾರದ ಮೇಲೆ ಮತ್ತು ವಿತರಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ 'ಧುರಂಧರ್' ತಂಡಕ್ಕೆ ಈಗ ಬಿಎಂಸಿ ಅಗ್ನಿಪರೀಕ್ಷೆ ನೀಡುತ್ತಿರುವುದು ಸುಳ್ಳಲ್ಲ.