ಶಿಲ್ಪಾ ಶೆಟ್ಟಿ ತಾಯಿಗೆ ಮತ್ತೆ ಸಂಕಷ್ಟ; ವಾರೆಂಟ್ ಜಾರಿ
21 ಲಕ್ಷ ರೂಪಾಯಿ ಸಾಲ ಮರುಪಾವತಿ ಮಾಡದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ವಿರುದ್ಧ ನ್ಯಾಯಾಲಯ ಜಾಮೀನು ಸಹಿತ ವಾರೆಂಟ್ ಹೊರಡಿಸಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ(Shilpa Shetty) ತಾಯಿ ಸುನಂದಾ ಶೆಟ್ಟಿಗೆ ಮತ್ತೆ ಸಂಕಷ್ಟ ಎದುರಾಗಿದೆ. 21 ಲಕ್ಷ ರೂಪಾಯಿ ಸಾಲ ಮರುಪಾವತಿ ಮಾಡದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುನಂದಾ ಶೆಟ್ಟಿ(Sunanda Shetty) ವಿರುದ್ಧ ನ್ಯಾಯಾಲಯ ಜಾಮೀನು ಸಹಿತ ವಾರೆಂಟ್(Bailable Warrant) ಹೊರಡಿಸಿದೆ.
ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್(Metropolitan Magistrate) ಸುನಂದಾ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ವಿರುದ್ಧ ವಾರೆಂಟ್ ಜಾರಿ ಮಾಡಿದೆ. ಉದ್ಯಮಿಯೊಬ್ಬರು ಶಿಲ್ಪಾ ಶೆಟ್ಟಿ ತಾಯಿ ಮತ್ತು ಸಹೋದರಿ ವಿರುದ್ಧ ವಂಚನೆ ಪ್ರಕರಣ ದಾಲಿಸಿದ್ದರು. ತನ್ನಿಂದ ಪಡೆದ 21 ಲಕ್ಷ ರೂಪಾಯಿ ಹಣವನ್ನು ಮರುಪಾವತಿಸಿಲ್ಲ ಎಂದು ಆರೋಪಿಸಿ ದೂರು ನೀಡಿದ್ದರು. ಈ ಸಂಬಂಧ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತನಿಖೆಗೆ ಆದೇಶ ನೀಡಿತ್ತು. ಈ ಪ್ರಕರಣದಲ್ಲಿ ಸುನಂದಾ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ವಾರೆಂಟ್ ಹೊರಡಿಸಲಾಗಿದೆ.
ಶಿಲ್ಪಾ ಶೆಟ್ಟಿಗೆ ಪೋಕರ್ ಆಡಲು ಕಲಿಸಿದ ಸ್ಪಿನ್ನರ್ ಶೇನ್ ವಾರ್ನ್ !
ಸುನಂದಾ ಕುಟುಂಬ ಸಮನ್ಸ್ ಪ್ರಶ್ನಿಸಿ ಸೆಷನ್ಸ್ ಕೋರ್ಟ್ ಮೊರೆ ಹೋಗಿತ್ತು. ಸೋಮವಾರ ಸೆಷನ್ಸ್ ನ್ಯಾಯಾಧೀಶ ಎ ಜೆಡ್ ಖಾನ್ ಅವರು ಶಿಲ್ಪಾ ಶೆಟ್ಟಿ ಮತ್ತು ಶಮಿತಾ ಶೆಟ್ಟಿ ವಿರುದ್ಧದ ಆದೇಶಕ್ಕೆ ತಡೆ ನೀಡಿದ್ದರು. ಆದರೆ ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿಗೆ ಯಾವುದೇ ರಿಲೀಫ್ ನೀಡಿಲ್ಲ. ಮಂಗಳವಾರವೂ ನ್ಯಾಯಾಲಯದ ಮುಂದೆ ಹಾಜರಾಗದ ಸುನಂದಾ ಅವರಿಗೆ ವಿನಾಯಿತಿ ನೀಡಲು ಮ್ಯಾಜಿಸ್ಟ್ರೇಟ್ ನಿರಾಕರಿಸಿದರು ಮತ್ತು ಜಾಮೀನು ಸಹಿತ ವಾರೆಂಟ್ ಹೊರಡಿಸಿದರು.
ಶಿಲ್ಪಾ ಶೆಟ್ಟಿ ತಂದೆ ದಿವಂಗತ ಸುರೇಂದ್ರ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿ ಅವರ ಸಂಸ್ಥೆಯಲ್ಲಿ ಪಾಲುದಾರರಾಗಿದ್ದರು. ಆದರೆ ಈ ಪಾಲುದಾರಿಕೆ ಸಂಸ್ಥೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಾದ ಶಿಲ್ಪಾ ಮತ್ತು ಶಮಿತಾ ಸಹ ಪಾಲುದಾರರು ಎಂದು ತೋರಿಸಲು ದೂರುದಾರರು ಯಾವುದೇ ದಾಖಲೆ ಸಲ್ಲಿಸಿರಲಿಲ್ಲ.
ಪ್ರಕರಣದ ಹಿನ್ನಲೆ..
ಉದ್ಯಮಿ ಫರ್ಹಾದ್ ಆಮ್ರ, ನಟಿ ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ಮತ್ತು ತಂದೆ ಸುರೇಂದ್ರ ಶೆಟ್ಟಿ 2015ರಲ್ಲಿ ತಮ್ಮಿಂದ ಸಾಲ ಪಡೆದಿದ್ದರು ಮತ್ತು ಈ ಸಾಲವನ್ನು ಜನವರಿ 2017ರೊಳಗೆ ಮರುಪಾವತಿಸಬೇಕಾಗಿತ್ತು. ಆದರೆ ಇದುವರೆಗೂ ಮರುಪಾವತಿ ಮಾಡಿಲ್ಲ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಸಾಲದ ವಿಚಾರ ಕುಟುಂಬದವರಿಗೆ ತಿಳಿದಿತ್ತು. ಸುರೇಂದ್ರ ಶೆಟ್ಟಿ ನಿಧನದ ಬಳಿಕ ಸಾಲ ಮರುಪಾವತಿ ಮಾಡುವ ಜವಾಬ್ದಾರಿ ಕುಟುಂಬದಾಗಿತ್ತು. ಆದರೆ ಕುಟುಂಬದವರು ಹಣ ಪಡೆದೇ ಇಲ್ಲ ಎಂದು ಸುಳ್ಳು ಹೇಳುತ್ತಿದೆ ಎಂದು ಫರ್ಹಾದ್ ಆಮ್ರಾ ಆರೋಪ ಮಾಡಿದ್ದಾರೆ.
Shilpa Shetty: ಬಾಲಿವುಡ್ ನಟಿಗೆ ಕೋಪ ಬಂದ್ರೆ ಏನ್ ಮಾಡ್ತಾರೆ ಗೊತ್ತಾ?
ಕಳೆದ ವರ್ಷ ನಟಿ ಶಿಲ್ಪಾ ಶೆಟ್ಟಿ ಸಾಕಷ್ಟು ಕಷ್ಟು ಅನುಭವಿಸಿದ್ದರು. ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಜೈಲು ಪಾಲಾಗಿದ್ದರು. ಈ ಸಮಯದಲ್ಲಿ ಶಿಲ್ಪಾ ಶೆಟ್ಟಿ ವಿರುದ್ಧವೂ ಸಾಕಷ್ಟು ಆರೋಪ ಕೇಳಿಬಂದಿತ್ತು. ಅದೇ ಸಮಯದಲ್ಲಿ ಶಿಲ್ಪಾ ಶೆಟ್ಟಿ ತಾಯಿ ವಿರುದ್ಧ ಉದ್ಯಮಿ ಫರ್ಹಾದ್ ವಂಚನೆ ಪ್ರಕರಣ ದಾಖಲಿಸಿದ್ದರು. ಇದು ಮಾತ್ರವಲ್ಲದೆ ಶಿಲ್ಪಾ ಶೆಟ್ಟಿ ವಿರುದ್ಧ ಚಿನ್ನದ ಉದ್ಯಮದಲ್ಲಿ ವಂಚನೆ, ಫಿಟ್ನೆಸ್ ಸೆಂಟರ್ ವಂಚನೆ ಸೇರಿದಂತೆ ಹಲವರು ಆರೋಪ ಕೇಳಿಬಂದಿತ್ತು.