ಅಮಿತಾಬ್ ಬಚ್ಚನ್ ಅವರ ಪ್ರಸಿದ್ಧ 'ಜಲ್ಸಾ' ನಿವಾಸದ ಬಗ್ಗೆ ಕೌಟುಂಬಿಕ ವಿವಾದ ಈಗ ಬೀದಿಗೆ ಬಂದಿದೆ. ಜಯಾ ಬಚ್ಚನ್ ಹೆಸರಿಗೆ ಆಸ್ತಿ ವರ್ಗಾವಣೆಯಾಗಿರುವುದನ್ನು ಬಚ್ಚನ್ ಅತ್ತಿಗೆ ರಮೋಲಾ ಬಚ್ಚನ್ ಪ್ರಶ್ನಿಸಿ ದೂರು ದಾಖಲಿಸಿದ್ದಾರೆ. ಈ ಮೂಲಕ ಕುಟುಂಬ ಜಗಳ ಬೀದಿಗೆ ಬಂದಿದೆ.

ಮುಂಬೈ: ನಟ ಅಮಿತಾಬ್‌ ಬಚ್ಚನ್‌ ಕುಟುಂಬದ ಆಂತರಿಕ ಕಲಹವೀಗ ಬೀದಿಗೆ ಬಂದಿದೆ. ಬಿಗ್‌ ಬಿ ಅವರ ಜುಹುವಿನ ಐಕಾನಿಕ್‌ ಜಲ್ಸಾ ನಿವಾಸವನ್ನು ಜಯಾ ಬಚ್ಚನ್‌ ಅವರ ಹೆಸರಿಗೆ ದಾನ ಪತ್ರ (ಗಿಫ್ಟ್‌ ಡೀಡ್‌) ಮಾಡಿರುವುದನ್ನು ನಟನ ಅತ್ತಿಗೆ ರಮೋಲಾ ಪ್ರಶ್ನಿಸಿದ್ದಾರೆ. ಅಮಿತಾಬ್‌ ಅವರ ಕಿರಿಯ ಸಹೋದರ ಅಜಿತಾಬ್‌ ಬಚ್ಚನ್‌ ಅವರ ಮಡದಿ ರಮೋಲಾ ಬಚ್ಚನ್‌ ಜಲ್ಸಾ ನಿವಾಸಕ್ಕೆ ಸಂಂಬಂಧಿಸಿದಂತೆ ಕಳೆದ 7 ತಿಂಗಳಿನಿಂದ ನೋಂದಣಿ ಅಧಿಕಾರಿಗಳಿಗೆ ಹಲವಾರು ದೂರುಗಳನ್ನು ದಾಖಲಿಸಿದ್ದಾರೆ. ರಮೋಲಾ ಹೆಸರಿನಲ್ಲಿದ್ದ ಮನೆಯನ್ನು 1993 ರಲ್ಲಿ ಗಿಫ್ಟ್ ಡೀಡ್ ಮೂಲಕ ಜಯಾ ಬಚ್ಚನ್ ಅವರಿಗೆ ವರ್ಗಾಯಿಸಲಾಯಿತು. ಮನೆಯ ಗಿಫ್ಟ್‌ ಡೀಡ್‌ ವಹಿವಾಟಿನ ಬಗ್ಗೆ ನನಗೆ ತಿಳಿದಿರಲಿಲ್ಲ ಅಥವಾ ಒಪ್ಪಿಗೆ ನೀಡಿರಲಿಲ್ಲ ಎಂದು ಆರೋಪಿಸಿದ್ದಾರೆ.

ಮೂಲಗಳ ಪ್ರಕಾರ ಜಲ್ಸಾ ರಮೋಲಾ ಹೆಸರಿನಲ್ಲಿತ್ತು, ನಂತರ ಜಯಾ ಹೆಸರಿಗೆ ವರ್ಗಾಯಿಸಲಾಯಿತು. ಸರ್ಕಾರಿ ಆಸ್ತಿ ದಾಖಲೆಗಳಲ್ಲಿ ರಮೋಲಾ ಹೆಸರನ್ನು ತೆಗೆದು ಹಾಕಿ ಜಯಾ ಹೆಸರು ಸೇರಿಸಲು ಯತ್ನಗಳು ನಡೆದಿವೆ ಎನ್ನುವ ಆರೋಪವಿದೆ. ಕಪೋಲ್‌ ಹೌಸಿಂಗ್‌ ಸೊಸೈಟಿ ದಾಖಲೆಗಳಲ್ಲಿ ಜಯಾ ಮಾಲೀಕರು ಅಂತಿದ್ದರೆ ಸರ್ಕಾರಿ ಪ್ರಾಪರ್ಟಿ ಕಾರ್ಡ್‌ನಲ್ಲಿ ರಮೋಲಾ ಅವರ ಹೆಸರಿದೆ. ಈ ಆಸ್ತಿ 100 ಕೋಟಿ ಮೌಲ್ಯದ್ದು ಎನ್ನಲಾಗಿದೆ.

ಈ ಗಲಾಟೆಯು ಪ್ರಸ್ತುತ ಅಂಧೇರಿಯಲ್ಲಿರುವ ಸಹಕಾರ ಸಂಘಗಳ ಉಪ ನಿಬಂಧಕರ ಮುಂದಿದೆ. ದೂರುಗಳನ್ನು ದಾಖಲಿಸಲಾಗಿದೆ, ಔಪಚಾರಿಕ ಪ್ರಕ್ರಿಯೆಗಳು ನಡೆಯುತ್ತಿವೆ ಮತ್ತು ಅಧಿಕೃತ ಉತ್ತರಗಳನ್ನು ಕೋರಿ ಎದುರಾಳಿ ಪಕ್ಷಗಳಿಗೆ ನೋಟಿಸ್ ನೀಡಲಾಗಿದೆ ಎಂದು ಉಪ ನಿಬಂಧಕ ಫೈಯಾಜ್ ಮುಲಾನಿ ಮಾಹಿತಿ ನೀಡಿದ್ದಾರೆ.

2006ರಲ್ಲಿ ನೋಂದಣಿಯಾಗಿರುವ ಈ ಉಡುಗೊರೆ ಪತ್ರದ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ. ತಾವು ಈ ವಹಿವಾಟಿಗೆ ಸಮ್ಮತಿ ನೀಡಿಲ್ಲ ಮತ್ತು ದಾಖಲೆಗೆ ಸಹಿ ಹಾಕಿ ಹಾಕಿಲ್ಲ ಎಂದು ರಮೋಲಾ ತಮ್ಮ ದೂರಿನಲ್ಲಿ ಪ್ರತಿಪಾದಿಸಿದ್ದಾರೆ. ಇದನ್ನು ಸ್ಟಾಂಪ್ ಡ್ಯೂಟಿ ಅಥವಾ ಕಡ್ಡಾಯ ಸಾಕ್ಷಿ ಸಹಿಗಳಿಲ್ಲದೆ ಸರಳ ಕಾಗದದ ಮೇಲೆ ರಚಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

1993ರ ಉಡುಗೊರೆ ಪತ್ರವನ್ನು ತಯಾರಿಸಿದ ರೀತಿ ಮತ್ತು ಅದನ್ನು ನೋಂದಾಯಿಸಿದ ಪ್ರಕ್ರಿಯೆಯ ಬಗ್ಗೆ ರಮೋಲಾ ಅವರ ಪರ ಪ್ರತಿನಿಧಿಗಳು ಗಂಭೀರ ಕಾನೂನು ಪ್ರಶ್ನೆಗಳನ್ನು ಎತ್ತಿದ್ದಾರೆ. ಸಾದಾ ಕಾಗದದ ಮೇಲಿದ್ದ ಈ ದಾಖಲೆಯನ್ನು ಬರೋಬ್ಬರಿ 13 ವರ್ಷಗಳ ಬಳಿಕ, ಅಂದರೆ 2006ರಲ್ಲಿ ಮಹಾರಾಷ್ಟ್ರ ಸರ್ಕಾರದ ‘ಸ್ಟಾಂಪ್ ಡ್ಯೂಟಿ ಅಭಯ್ ಯೋಜನೆ’ಯಡಿ (2004-2006ರ ಕ್ಷಮಾದಾನ ಯೋಜನೆ) ಮುದ್ರಾಂಕ ಶುಲ್ಕ ಪಾವತಿಸಿ ನೋಂದಾಯಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2026ರ ಫೆಬ್ರವರಿ 16ರಂದು ಸಲ್ಲಿಸಲಾದ ಮಾಹಿತಿ ಹಕ್ಕು ಅರ್ಜಿಗೆ ಮಾರ್ಚ್ 4ರಂದು ನೋಂದಣಿ ಇಲಾಖೆ ಉತ್ತರ ನೀಡಿದ್ದು, 1980ರಿಂದ ಈಚೆಗಿನ ಸಾದಾ ಕಾಗದದ ದಾಖಲೆಗಳನ್ನು ಈ ಯೋಜನೆಯಡಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಜಲ್ಸಾ ಬಂಗಲೆಯ ಹಿನ್ನೆಲೆ

ಮೂಲತಃ ‘ಮಾನ್ಸಾ’ ಎಂದು ಕರೆಯಲ್ಪಡುತ್ತಿದ್ದ ಈ ಬಂಗಲೆ ಹಿಂದೆ ಖ್ಯಾತ ಚಲನಚಿತ್ರ ನಿರ್ಮಾಪಕ ಎನ್.ಸಿ. ಸಿಪ್ಪಿ ಅವರ ಒಡೆತನದಲ್ಲಿತ್ತು. 1982ರಲ್ಲಿ ತೆರೆಕಂಡ ಅಮಿತಾಬ್ ಬಚ್ಚನ್ ಅಭಿನಯದ ಸೂಪರ್ ಹಿಟ್ ಚಿತ್ರ 'ಸತ್ತೆ ಪೆ ಸತ್ತಾ'ದ ಸಂಭಾವನೆಯಾಗಿ ಈ ಮನೆಯನ್ನು ಅವರಿಗೆ ನೀಡಲಾಗಿತ್ತು ಎಂಬ ಮಾತುಗಳಿವೆ. ಈ ಹಿಂದೆ ಸ್ವತಃ ಅಮಿತಾಬ್ ಬಚ್ಚನ್ ಅವರೇ ಬಂಗಲೆಯ ಕುರಿತು ಮಾತನಾಡುತ್ತಾ, ತಮ್ಮ ಕುಟುಂಬ ಈ ಆಸ್ತಿಯನ್ನು ಖರೀದಿಸಿ, ನಂತರ ಮಾರಾಟ ಮಾಡಿ, ಮತ್ತೆ ಮರಳಿ ಖರೀದಿಸಿ ಪುನರ್ನಿರ್ಮಿಸಿ ‘ಜಲ್ಸಾ’ ಎಂದು ಹೆಸರಿಟ್ಟಿದ್ದನ್ನು ಸ್ಮರಿಸಿದ್ದರು. ಇದೀಗ ಇದೇ ಐತಿಹಾಸಿಕ ನಿವಾಸದ ದಾಖಲೆಗಳ ವಿಚಾರ ಅಧಿಕಾರಿಗಳ ಮೆಟ್ಟಿಲೇರಿದೆ. ಇನ್ನೊಂದು ವರದಿಯಂತೆ ಅಮಿತಾಬ್ ಬಚ್ಚನ್ ತಮ್ಮ ಪ್ರಸ್ತುತ ನಿವಾಸವಾದ ಜಲ್ಸಾವನ್ನು ಅಜಿತಾಬ್ ಬಚ್ಚನ್ ಮತ್ತು ಅವರ ಕುಟುಂಬಕ್ಕೆ ಉಡುಗೊರೆಯಾಗಿ ನೀಡಿದ್ದರು. ಆದರೆ ಅವರು ಅಲ್ಲಿ ಹೆಚ್ಚು ಕಾಲ ಇರಲಿಲ್ಲ.

ರಮೋಲಾ ಬಚ್ಚನ್ ಯಾರು?

ರಮೋಲಾ ಮೂಲತ ಇಂಡೋ ಬ್ರಿಟಿಷ್ ಫ್ಯಾಷನ್ ಡಿಸೈನರ್, ಅಮಿತಾಬ್ ಬಚ್ಚನ್ ಅವರ ಏಕೈಕ ತಮ್ಮ ಅಜಿತಾಬ್‌ ಬಚ್ಚನ್‌ ಪತ್ನಿ. ಬಚ್ಚನ್ ಮನೆಗೆ ಸೊಸೆಯಾಗುದಕ್ಕೂ ಮುನ್ನವೇ ಅಮಿತಾಬ್ ಗೆ ಸ್ನೇಹಿತೆ. ಈ ಕಾರಣಕ್ಕೆ ತಮ್ಮನೊಂದಿಗೆ ಪ್ರೀತಿಯಾಗಿ ಮದುವೆಯಾಗಿತ್ತು. ಕೆಲವು ದಾಖಲೆಗಳ ಪ್ರಕಾರ ಇವರಿಬ್ಬರ ವಿಚ್ಚೇಧನವಾಗಿದೆ. ನಾಲ್ಕು ಮಕ್ಕಳಿದ್ದಾರೆ ಮೂರು ಹೆಣ್ಣು ಮತ್ತು ಒಂದು ಗಂಡು. ಭೀಮ್, ನಿಲಿಮಾ, ನಮ್ರತಾ ಮತ್ತು ನೈನಾ ಇವರ ಮಕ್ಕಳು. ಬೇರೆ ಬೇರೆಯಾದರೂ ಮಕ್ಕಳಿಗಾಗಿ ಇಬ್ಬರು ಸ್ನೇಹಿತರಾಗಿದ್ದಾರೆ. ಮಾತ್ರವಲ್ಲ ಬಚ್ಚನ್ ಕುಟುಂಬದೊಂದಿದೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಅಜಿತಾಬ್‌ ಬಚ್ಚನ್‌ ದೂರದ ಲಂಡನ್‌ ನಲ್ಲಿ ಉದ್ಯಮಿಯಾಗಿದ್ದು ಸಹೋದರ ಅಮಿತಾಭ್ ಬಚ್ಚನ್ ಅವರೊಂದಿಗೆ ಕುಟುಂಬ ಕಾರ್ಯಕ್ರಮಗಳಿಗೆ ಮಾತ್ರ ಬಂದು ಭಾಗವಹಿಸುತ್ತಾರೆ. ಆದರೆ ರಮೋಲಾ ಭಾರತದಲ್ಲೇ ಇದ್ದು ಬಾಲಿವುಡ್‌ ಸಿನೆಮಾಗಳಿಗೆ ಫ್ಯಾಷನ್ ಡಿಸೈನರ್ ಆಗಿಯೂ ಕೆಲಸ ಮಾಡುತ್ತಾರೆ.