"ನಮ್ಮಪ್ಪನ ಜೇಬಿನಲ್ಲಿ ಕೇವಲ 200 ರೂಪಾಯಿ ಇದ್ದಾಗಲೇ ಅಮ್ಮ ಅವರನ್ನು ಮದುವೆಯಾಗಿದ್ದು. ಕಷ್ಟದ ಕಾಲದಲ್ಲಿ ಅಮ್ಮನೇ ಅಪ್ಪನಿಗೆ ಬೆನ್ನೆಲುಬಾಗಿ ನಿಂತವರು. ಅವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ..
ಸಿನಿಮಾ ಸ್ಟೈಲ್‌ನಲ್ಲೇ ಇದೆ ಈ ಸ್ಟಾರ್ ಡೈರೆಕ್ಟರ್ ಲೈಫ್ ಸ್ಟೋರಿ! ನೂರಾರು ಕೋಟಿ ಕಳೆದುಕೊಂಡು ಬೀದಿಗೆ ಬಂದಿದ್ದರೇ ಪುರಿ ಜಗನ್ನಾಥ್? ಮಗ ಆಕಾಶ್ ಬಿಚ್ಚಿಟ್ಟ ಶಾಕಿಂಗ್ ಸತ್ಯ!
ಟಾಲಿವುಡ್ ಅಂಗಳ ಟ್ರಾಜಿಡಿ ಸ್ಟೋರಿ!
ಸಿನಿಮಾ ಅಂದಮೇಲೆ ಅಲ್ಲಿ ಬಣ್ಣದ ಲೋಕ ಮಾತ್ರವಲ್ಲ, ಕತ್ತಲೆಯ ಹಾದಿಯೂ ಇರುತ್ತದೆ ಅನ್ನೋದಕ್ಕೆ ಲೈವ್ ಎಕ್ಸಾಂಪಲ್ ಅಂದರೆ ಅದು ಡೈರೆಕ್ಟರ್ ಪುರಿ ಜಗನ್ನಾಥ್ (Puri Jagannadh)! 'ಬದ್ರಿ' ಸಿನಿಮಾದಿಂದ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, 'ಪೋಕಿರಿ', 'ಈಡಿಯಟ್' ಅಂತಹ ಇಂಡಸ್ಟ್ರಿ ಹಿಟ್ ಚಿತ್ರಗಳನ್ನು ನೀಡಿದ ಈ ಕ್ರೇಜಿ ಡೈರೆಕ್ಟರ್ ಅಕ್ಷರಶಃ ಟಾಲಿವುಡ್ ಅನ್ನು ಆಳಿದವರು. ಮಹೇಶ್ ಬಾಬು, ಪವನ್ ಕಲ್ಯಾಣ್ ಅವರಂತಹ ಸೂಪರ್ ಸ್ಟಾರ್‌ಗಳ ಕೆರಿಯರ್ ಗ್ರಾಫ್ ಬದಲಿಸಿದ ಪುರಿ, ಒಂದು ಕಾಲದಲ್ಲಿ ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದ ಕಿಂಗ್ ಮೇಕರ್. ಆದರೆ, ಇದೀಗ ಅವರ ಮಗ ಆಕಾಶ್ ಪುರಿ ಹೇಳಿರುವ ಮಾತುಗಳು ಕೇಳಿದರೆ ಸಿನಿಮಾ ಪ್ರೇಮಿಗಳ ಕಣ್ಣಾಲಿಗಳು ಒದ್ದೆಯಾಗುವುದು ಖಂಡಿತ!

ಪರಾಜಯದ ಸುಳಿಗೆ ಸಿಲುಕಿದ ಪುರಿ:
ಯಶಸ್ಸಿನ ಶಿಖರದಲ್ಲಿದ್ದಾಗಲೇ ಪುರಿ ಜಗನ್ನಾಥ್ ಅವರ ಕಾಲ ಬುಡದ ನೆಲ ಕುಸಿಯಿತು. ಮಾಡಿದ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದವು. ಫಾರ್ಮ್ ಕಳೆದುಕೊಂಡ ಪುರಿ ಜಗನ್ನಾಥ್ ಅವರ ಮಾರುಕಟ್ಟೆ ಕುಸಿಯಿತು. ಆದರೆ, ಕೇವಲ ಸಿನಿಮಾ ಸೋಲು ಮಾತ್ರ ಅವರನ್ನ ಕುಗ್ಗಿಸಲಿಲ್ಲ; ಬದಲಾಗಿ ಅವರು ಅತಿಯಾಗಿ ನಂಬಿದ್ದ ಆಪ್ತರೇ ಅವರಿಗೆ ಬೆನ್ನಿಗೆ ಚೂರಿ ಹಾಕಿದರು. ನೂರಾರು ಕೋಟಿ ಮೌಲ್ಯದ ಆಸ್ತಿ ಮತ್ತು ಹಾರ್ಡ್ ವರ್ಕ್ ಮಾಡಿ ಗಳಿಸಿದ ಹಣವೆಲ್ಲಾ ಮೋಸದಿಂದಾಗಿ ಮಣ್ಣು ಪಾಲಾಯಿತು.

"ನಾಯಿಗಳಿಗೆ ಆಹಾರ ನೀಡಲೂ ಕಾಸಿರಲಿಲ್ಲ!":
ಒಂದು ಸಂದರ್ಶನದಲ್ಲಿ ಪುರಿ ಜಗನ್ನಾಥ್ ಅವರೇ ಹೇಳಿಕೊಂಡಂತೆ, "ನನ್ನ ಮನೆಯಲ್ಲಿದ್ದ ಸಾಕು ನಾಯಿಗಳಿಗೆ ಊಟ ಹಾಕಲು ಕೂಡ ನನ್ನ ಬಳಿ ಹಣವಿರಲಿಲ್ಲ." ಈ ಮಾತು ಅಕ್ಷರಶಃ ಟಾಲಿವುಡ್‌ಗೆ ಶಾಕ್ ನೀಡಿತ್ತು. ಇದನ್ನು ಈಗ ಅವರ ಮಗ ಆಕಾಶ್ ಪುರಿ ಕೂಡ ಧೃಢಪಡಿಸಿದ್ದಾರೆ. ಆ ಕರಾಳ ದಿನಗಳ ಬಗ್ಗೆ ಮಾತನಾಡುತ್ತಾ, "ನಾವು ಮನೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದೆವು. ಅಪ್ಪ ಅನುಭವಿಸುತ್ತಿದ್ದ ಕಷ್ಟ ನಮಗೆ ಮತ್ತು ತಂಗಿಗೆ ಗೊತ್ತಾಗಬಾರದು ಎಂದು ಅಮ್ಮ ನಮ್ಮನ್ನು ದೂರದ ಹಾಸ್ಟೆಲ್‌ಗೆ ಸೇರಿಸಿ ಓದಿಸಿದಳು. ಆ 5 ವರ್ಷಗಳು ನಮ್ಮ ಕುಟುಂಬ ಪಟ್ಟ ಪಾಡು ಹೇಳತೀರದು" ಎಂದು ಭಾವುಕರಾಗಿದ್ದಾರೆ.
ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಆಕಾಶ್:
ಇದೇ ಸಮಯದಲ್ಲಿ ಪುರಿ ಜಗನ್ನಾಥ್ ಮತ್ತು ಅವರ ಪತ್ನಿ ಲಾವಣ್ಯ ನಡುವೆ ಬಿರುಕು ಮೂಡಿದೆ, ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂಬ ಗಾಸಿಪ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದಕ್ಕೆ ಆಕಾಶ್ ಖಡಕ್ ಉತ್ತರ ನೀಡಿದ್ದಾರೆ. "ನಮ್ಮಪ್ಪನ ಜೇಬಿನಲ್ಲಿ ಕೇವಲ 200 ರೂಪಾಯಿ ಇದ್ದಾಗಲೇ ಅಮ್ಮ ಅವರನ್ನು ಮದುವೆಯಾಗಿದ್ದು. ಕಷ್ಟದ ಕಾಲದಲ್ಲಿ ಅಮ್ಮನೇ ಅಪ್ಪನಿಗೆ ಬೆನ್ನೆಲುಬಾಗಿ ನಿಂತವರು. ಅವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಇದೆಲ್ಲಾ ಕೇವಲ ಸುಳ್ಳು ಸುದ್ದಿ" ಎಂದು ಅಪ್ಪ-ಅಮ್ಮನ ಬಾಂಧವ್ಯವನ್ನು ಎತ್ತಿ ಹಿಡಿದಿದ್ದಾರೆ.
ಮತ್ತೆ ಪುಟಿದೇಳುವ ಮುನ್ಸೂಚನೆ:
ಸದ್ಯ ಪುರಿ ಜಗನ್ನಾಥ್ ಅವರು ವಿಜಯ್ ಸೇತುಪತಿ ಅವರಂತಹ ಪ್ರತಿಭಾವಂತರ ಜೊತೆ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಅಷ್ಟೇ ಅಲ್ಲದೆ, ನಟ ರಾಮ್ ಪೋತಿನೇನಿ ಜೊತೆಗೂ ಕೆಲಸ ಮಾಡುತ್ತಿದ್ದಾರೆ. ಅಂದು ನೂರಾರು ಕೋಟಿ ಕಳೆದುಕೊಂಡು ಶೂನ್ಯಕ್ಕೆ ಇಳಿದಿದ್ದ ಪುರಿ ಜಗನ್ನಾಥ್, ಇಂದು ಮತ್ತೆ ಪೀನಿಕ್ಸ್ ಹಕ್ಕಿಯಂತೆ ಎದ್ದು ಬರಲು ಸಿದ್ಧರಾಗುತ್ತಿದ್ದಾರೆ.
ಸಿನಿಮಾ ಅಂದರೆ ಬರಿ ಲೈಟ್ಸ್, ಕ್ಯಾಮೆರಾ, ಆಕ್ಷನ್ ಮಾತ್ರವಲ್ಲ; ಅದರ ಹಿಂದೆ ಇಂತಹ ರೋಚಕ ಮತ್ತು ನೋವಿನ ಕಥೆಗಳೂ ಇರುತ್ತವೆ ಎಂಬುದಕ್ಕೆ ಈ ಸ್ಟಾರ್ ಡೈರೆಕ್ಟರ್ ಜೀವನವೇ ಸಾಕ್ಷಿ!


