Aishwarya Rajinikanth ಮನೆಯಲ್ಲಿ ಕೋಟ್ಯಂತರ ಮೌಲ್ಯದ ಆಭರಣ ದೋಚಿದ್ದ ಮನೆ ಕೆಲಸದಾಕೆ, ಡ್ರೈವರ್ ಅಂದರ್
ಚಾಲಕ ವೆಂಕಟೇಶನ ಕುಮ್ಮಕ್ಕಿನಿಂದ ಮನೆ ಕೆಲಸದಾಕೆ ಈಶ್ವರಿ ಸುಮಾರು 100 ಪವನ್ ಚಿನ್ನಾಭರಣ, 30 ಗ್ರಾಂ ವಜ್ರಾಭರಣ ಮತ್ತು ನಾಲ್ಕು ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದಳು ಎಂದು ತಿಳಿದುಬಂದಿದೆ.
ಚೆನ್ನೈ (ಮಾರ್ಚ್ 22, 2023): ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ವಜ್ರ ಹಾಗೂ ಬೆಳ್ಳಿ ಆಭರಣಗಳನ್ನು ಇತ್ತೀಚೆಗೆ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಚಿತ್ರ ನಿರ್ಮಾಪಕಿ ಐಶ್ವರ್ಯಾ ರಜನಿಕಾಂತ್ ಅವರ ಸೇವಕಿ ಮತ್ತು ಕಾರು ಚಾಲಕನನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ವೆಂಕಟೇಶನ ಕುಮ್ಮಕ್ಕಿನಿಂದ ಮನೆ ಕೆಲಸದಾಕೆ ಈಶ್ವರಿ ಸುಮಾರು 100 ಪವನ್ ಚಿನ್ನಾಭರಣ, 30 ಗ್ರಾಂ ವಜ್ರಾಭರಣ ಮತ್ತು ನಾಲ್ಕು ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದಳು ಎಂದು ತಿಳಿದುಬಂದಿದೆ. ಅಲ್ಲದೆ, ಕೋಟ್ಯಂತರ ರೂ. ಮೌಲ್ಯದ ಈ ಅಭರಣಗಳನ್ನು ಮಹಿಳೆ ಮಾರಾಟ ಮಾಡಿದ್ದರು ಮತ್ತು ಆ ದುಡ್ಡನ್ನು ಮನೆ ಖರೀದಿಗೆ ಬಳಸಿದ್ದರು, ಹಾಗೆ, ಕೆಲ ಇತರೆ ವಸ್ತುಗಳನ್ನು ಖರೀದಿಸಲು ಸಹ ಬಳಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಇದನ್ನು ಓದಿ: ಚಾಕು ಹಿಡಿದು ಮಗನನ್ನೇ ದರೋಡೆ ಮಾಡಲು ಹೋದ ತಂದೆ..!
18 ವರ್ಷಗಳಿಂದ ಮನೆ ಕೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದ ಈಶ್ವರಿ ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ಮನೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು. ಈ ಹಿನ್ನೆಲೆ ಹಲವು ಬಾರಿ ಲಾಕರ್ ಅನ್ನು ತೆರೆದುಸ್ವಲ್ಪ ಸ್ವಲ್ಪವೇ ಆಭರಣಗಳನ್ನು ಕಳ್ಳತನ ಮಾಡಿದ್ದರು. ಆ ಲಾಕರ್ ಬೀಗ ಇಡುವ ಜಾಗವನ್ನು ಸಹ ತಿಳಿದುಕೊಂಡಿದ್ದ ಹಿನ್ನೆಲೆ ಹಲವು ಬಾರಿ ಲಾಕರ್ ತೆರೆದು ದರೋಡೆ ಮಾಡುವ ಕೆಲಸ ಸುಲಭವಾಯಿತು ಎಂದೂ ತಿಳಿದುಬಂದಿದೆ.
ಆಕೆ ಆಭರಣಗಳು ಮತ್ತು ಇತರ ವಸ್ತುಗಳನ್ನು ಸ್ವಲ್ಪ ಸಮಯದಿಂದ ಕಳ್ಳತನ ಮಾಡುತ್ತಿದ್ದಳು ಎಂದೂ ಪೊಲೀಸರು ತಿಳಿಸಿದ್ದಾರೆ. ಕೆಲಸದಾಕೆ ಕಳವು ಮಾಡಿದ್ದ ವಸ್ತುಗಳು, ಚರಾಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮನೆ ಆಸ್ತಿ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Bengaluru: ಹೀಗೂ ಉಂಟು..! ಪತ್ನಿ ತಡವಾಗಿ ಏಳ್ತಾಳೆ ಎಂದು ಪತಿಯಿಂದ ಪೊಲೀಸರಿಗೆ ದೂರು
ತಮಿಳುನಾಡಿನ ಚೆನ್ನೈನ ಪೋಯಸ್ ಗಾರ್ಡನ್ ಮನೆಯ ಲಾಕರ್‌ನಿಂದ ಬೆಲೆಬಾಳುವ ಚಿನ್ನಾಭರಣಗಳು ನಾಪತ್ತೆಯಾಗಿರುವ ಬಗ್ಗೆ ನಟ ರಜನಿಕಾಂತ್ ಪುತ್ರಿ ಐಶ್ವರ್ಯಾ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಐಶ್ವರ್ಯಾ ಅವರು ಆಭರಣವನ್ನು ಲಾಕರ್‌ನಲ್ಲಿ ಇರಿಸಿದ್ದರು ಮತ್ತು ಆ ಬಗ್ಗೆ ಮನೆಯ ಕೆಲವು ಕೆಲಸದವರಿಗೆ ತಿಳಿದಿತ್ತು ಎಂದು ಹೇಳಿರುವ ಬಗ್ಗೆ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿತ್ತು. ಈ ಸಂಬಂಧ ತೇನಂಪೇಟೆ ಪೊಲೀಸರು ಐಪಿಸಿ ಸೆಕ್ಷನ್ 381 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಐಶ್ವರ್ಯಾ ತನ್ನ ಮದುವೆಯ ಆಭರಣ ಮತ್ತು ಸಹೋದರಿ ಸೌಂದರ್ಯಾ ಮದುವೆಗೆ ಬಳಸಿದ್ದ ಆಭರಣಗಳನ್ನು ಕಳ್ಳಲು ದೋಚಿದ್ದಾರೆ ಎನ್ನಲಾಗಿದೆ.
ಐಶ್ವರ್ಯಾ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳುನಾಡಿದ ಅನೇಕ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದಾರೆ. ಐಶ್ವರ್ಯಾ ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಅಂದಹಾಗೆ ಈ ಘಟನೆ ಸಂಭವಿಸಿ ಒಂದು ತಿಂಗಳಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಫೆಬ್ರವರಿಯಲ್ಲಿ ಐಶ್ವರ್ಯಾ ರಜನಿಕಾಂತ್ ಅವರು ಚಿನ್ನಾಭರಣ ಕಳ್ಳತನದ ಬಗ್ಗೆ ದೂರು ದಾಖಲಿಸಿದ್ದರು. 2019 ರಲ್ಲಿ ತನ್ನ ಸಹೋದರಿ ಸೌಂದರ್ಯಾ ಅವರ ಮದುವೆಯಲ್ಲಿ ಆಭರಣಗಳನ್ನು ಧರಿಸಿದ ಬಳಿಕ ಮತ್ತೆ ಆಭರಣಗಳನ್ನು ಅವರು ನೋಡಿರಲಿಲ್ಲವಂತೆ. ಅದೇ ಕೊನೆಯ ಬಾರಿಗೆ ಆಭರಣಗಳನ್ನು ನೋಡಿದ್ದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮದುವೆಯ ನಂತರ ಅವುಗಳನ್ನು ತನ್ನ ಬಳಿಯಿದ್ದ ಲಾಕರ್‌ನಲ್ಲಿಯೇ ಇರಿಸಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ಮಗಳು ಐಶ್ವರ್ಯಾ ಮನೆಯಲ್ಲಿ ಕಳ್ಳತನ, ಚಿನ್ನಾಭರಣ ದೋಚಿದ ಖದೀಮರು; ದೂರು ದಾಖಲು
ಐಶ್ವರ್ಯಾ ರಜನಿಕಾಂತ್ 2022ರಲ್ಲಿ ನಟ ಧನುಷ್ ಜೊತೆ ವಿಚ್ಛೇದನ ಪಡೆದು ದೂರ ಆದರು. ಅದಕ್ಕೂ ಮೊದಲು ಲಾಕರ್ ಅನ್ನು 3 ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಆಗಸ್ಟ್ 21, 2021 ರಲ್ಲಿ ಆ ಲಾಕರ್ ಅನ್ನು ಸಿಐಟಿ ನಗರದಲ್ಲಿದ್ದ ಐಶ್ವರ್ಯಾ ಮಾಜಿ ಪತಿ ಧನುಷ್ ಅವರ ಫ್ಲಾಟ್‌ಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಅದನ್ನು ಚೆನ್ನೈನ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅವರ ಅಪಾರ್ಟ್ಮೆಂಟ್‌ಗೆ ಸ್ಥಳಾಂತರಿಸಲಾಯಿತು.
ಏಪ್ರಿಲ್ 2022 ರಲ್ಲಿ ಪೋಯಸ್ ಗಾರ್ಡನ್ ನಿವಾಸಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಲಾಕರ್‌ನ ಕೀಗಳು ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅವರ ಫ್ಲಾಟ್‌ನಲ್ಲಿ ಉಳಿದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಚೀನಾಗೆ ಸಿಕ್ತು ಭರ್ಜರಿ ಖಜಾನೆ: 50 ಟನ್ ಉತ್ತಮ ಗುಣಮಟ್ಟದ ಬಂಗಾರದ ಗಣಿ ಪತ್ತೆ; ಬೆಲೆ ಎಷ್ಟು ನೋಡಿ..