"ಯೋಗ ಆರಂಭಿಸಿದ ಮೇಲೆ ಹಂತ ಹಂತವಾಗಿ ನನ್ನ ದೇಹದ ಎಲ್ಲಾ ಸಮಸ್ಯೆಗಳು ಮಾಯವಾದವು. ವಿಪರೀತ ಬೆವರುವಿಕೆ, ದೇಹದ ಉಷ್ಣತೆ ಮತ್ತು ಮಾನಸಿಕ ಕಿರಿಕಿರಿ ಎಲ್ಲವೂ ನಿಂತುಹೋಯಿತು. ಈಗ ನನ್ನ ಮನಸ್ಸು ಮತ್ತು ದೇಹ ಎರಡೂ ನನ್ನ ನಿಯಂತ್ರಣದಲ್ಲಿದೆ. ಇದಕ್ಕೆ ‘ಸದ್ಗುರು’ ಅವರ ಯೋಗ ತರಗತಿಗಳಿಗೆ ನಾನು ಚಿರಋಣಿ' ಎಂದ ನಟಿ ಐಶ್ವರ್ಯಾ ಭಾಸ್ಕರನ್..
ನಟಿ ಐಶ್ವರ್ಯಾ ಭಾಸ್ಕರನ್ ಅನುಭವಿಸಿದ ‘ನರಕಯಾತನೆ’
ದಕ್ಷಿಣ ಭಾರತದ ಖ್ಯಾತ ನಟಿ, ಮಲಯಾಳಂನ ಸೂಪರ್ ಹಿಟ್ ಸಿನಿಮಾ 'ನರಸಿಂಹಂ' ಚಿತ್ರದಲ್ಲಿ ಮೋಹನ್ ಲಾಲ್ ಜೋಡಿಯಾಗಿ ಮಿಂಚಿದ್ದ ಐಶ್ವರ್ಯಾ ಭಾಸ್ಕರನ್ (Aishwariyaa Bhaskaran) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಈ ಹಿರಿಯ ನಟಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ ಅತ್ಯಂತ ಕಠಿಣ ದೈಹಿಕ ಮತ್ತು ಮಾನಸಿಕ ನೋವಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮಹಿಳೆಯರ ಜೀವನದಲ್ಲಿ ಎದುರಾಗುವ 'ಮೆನೋಪಾಸ್' (ಋತುಬಂಧ) ಹಂತ ತಮಗೆ ಎಷ್ಟು ದೊಡ್ಡ ಆಘಾತ ನೀಡಿತ್ತು ಎಂಬ ಕಣ್ಣೀರಿನ ಕಥೆಯನ್ನು ಅವರು ಹಂಚಿಕೊಂಡಿದ್ದಾರೆ.
ಮೆನೋಪಾಸ್ ಹಂತವೊಂದು ದೊಡ್ಡ ಟ್ರಾಮಾ!
ಐಶ್ವರ್ಯಾ ಅವರಿಗೆ ಮೆನೋಪಾಸ್ ಆರಂಭವಾದದ್ದು ಸುಮಾರು 46 ಅಥವಾ 47ನೇ ವಯಸ್ಸಿನಲ್ಲಿ. ಆ ದಿನಗಳನ್ನು ನೆನಪಿಸಿಕೊಂಡ ಅವರು, "ಆ ಹಂತ ಈಗ ಮುಗಿದಿರಬಹುದು, ಆದರೆ ಅದು ನನಗೆ ನೀಡಿದ ನೋವು ಅಷ್ಟಿಷ್ಟಲ್ಲ. ಆ ಸಮಯದಲ್ಲಿ ನನ್ನ ದೇಹದಲ್ಲಿ ವಿಪರೀತ ಶಾಖ ಕಾಣಿಸಿಕೊಳ್ಳುತ್ತಿತ್ತು. ಎಷ್ಟು ಶಾಖ ಅಂದರೆ, ನಾನು ಎಸಿ ರೂಮಿನಲ್ಲಿ ಕುಳಿತಿದ್ದರೂ ಬೆವರುತ್ತಿದ್ದೆ. ಅದರಲ್ಲೂ ಬೆನ್ನಿನ ಭಾಗವಂತೂ ಬೆವರಿನಿಂದ ಪೂರ್ತಿ ಒದ್ದೆಯಾಗುತ್ತಿತ್ತು" ಎಂದಿದ್ದಾರೆ. ಅಷ್ಟೇ ಅಲ್ಲದೆ, ಅನಿಯಮಿತ ಪಿರಿಯಡ್ಸ್ ಮತ್ತು ಹಠಾತ್ 'ಮೂಡ್ ಸ್ವಿಂಗ್ಸ್'ನಿಂದಾಗಿ ಕಾರಣವಿಲ್ಲದೆ ಅಳುತ್ತಿದ್ದೆ ಎಂದು ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
“ಗರ್ಭಾಶಯವನ್ನೇ ಕಿತ್ತು ಎಸೆಯೋಣ ಅನಿಸುತ್ತಿತ್ತು!”
ಸಂದರ್ಶನದಲ್ಲಿ ಐಶ್ವರ್ಯಾ ಅವರು ಹಂಚಿಕೊಂಡ ಮತ್ತೊಂದು ವಿಷಯ ಕೇಳಿದರೆ ಎದೆ ನಡುಗುತ್ತದೆ. ಕೇರಳದಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ನಡೆದ ಘಟನೆಯನ್ನು ಅವರು ಸ್ಮರಿಸಿದ್ದಾರೆ. "ಆ ಸಮಯದಲ್ಲಿ ಅತಿಯಾದ ರಕ್ತಸ್ರಾವವಾಗುತ್ತಿತ್ತು. ನೋವು ಎಷ್ಟು ಹೆಚ್ಚಿತ್ತೆಂದರೆ ನನ್ನ ಪ್ರಾಣವೇ ದೇಹದಿಂದ ಹೊರಹೋಗುತ್ತಿದೆ ಎನಿಸುತ್ತಿತ್ತು. ನೋವಿನ ಅತಿರೇಕಕ್ಕೆ ನನ್ನ ಗರ್ಭಾಶಯವನ್ನೇ ನನ್ನ ಕೈಯಿಂದ ಕಿತ್ತು ಎಸೆಯೋಣ ಎಂಬಷ್ಟು ಆಕ್ರೋಶ ಮತ್ತು ಹಿಂಸೆ ಅನುಭವಿಸಿದೆ" ಎಂದು ಹೇಳಿ ಭಾವುಕರಾಗಿದ್ದಾರೆ. ಆಗ ಅವರ ತಾಯಿ ನೀಡಿದ ಒಂದು ಸಲಹೆ ಅವರ ಜೀವನವನ್ನೇ ಬದಲಿಸಿತು.
ಯೋಗದ ಮೂಲಕ ಮರುಜನ್ಮ ಪಡೆದ ನಟಿ
ತಮ್ಮ ಅಮ್ಮನ ಸಲಹೆಯಂತೆ ಐಶ್ವರ್ಯಾ ಅವರು ಯೋಗಾಭ್ಯಾಸಕ್ಕೆ ಮೊರೆ ಹೋಗಿದ್ದಾರೆ. ಸತತ 40 ದಿನಗಳ ಕಾಲ ನಿಯಮಿತವಾಗಿ ಯೋಗ ಮಾಡಿದ ನಂತರ ಅವರ ದೇಹದಲ್ಲಿ ಅದ್ಭುತ ಬದಲಾವಣೆ ಕಾಣಿಸಿಕೊಂಡಿದೆ. "ಯೋಗ ಆರಂಭಿಸಿದ ಮೇಲೆ ಮೊದಮೊದಲು ಅತಿಯಾದ ರಕ್ತಸ್ರಾವವಾಯಿತು. ಆದರೆ ನಾನು ಛಲ ಬಿಡದೆ ಅಭ್ಯಾಸ ಮುಂದುವರಿಸಿದೆ. ಹಂತ ಹಂತವಾಗಿ ನನ್ನ ದೇಹದ ಎಲ್ಲಾ ಸಮಸ್ಯೆಗಳು ಮಾಯವಾದವು. ವಿಪರೀತ ಬೆವರುವಿಕೆ, ದೇಹದ ಉಷ್ಣತೆ ಮತ್ತು ಮಾನಸಿಕ ಕಿರಿಕಿರಿ ಎಲ್ಲವೂ ನಿಂತುಹೋಯಿತು. ಈಗ ನನ್ನ ಮನಸ್ಸು ಮತ್ತು ದೇಹ ಎರಡೂ ನನ್ನ ನಿಯಂತ್ರಣದಲ್ಲಿದೆ. ಇದಕ್ಕೆ ಸದ್ಗುರು ಅವರ ಯೋಗ ತರಗತಿಗಳಿಗೆ ನಾನು ಚಿರಋಣಿ" ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.
ವೃತ್ತಿಜೀವನದ ಹಾದಿ
1991ರಲ್ಲಿ 'ಒಲಿಯಂಪುಕಲ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಐಶ್ವರ್ಯಾ ಭಾಸ್ಕರನ್, ಮಲಯಾಳಂನ ದಿಗ್ಗಜ ನಟರಾದ ಮೋಹನ್ ಲಾಲ್, ಮಮ್ಮುಟ್ಟಿ, ಸುರೇಶ್ ಗೋಪಿ ಅವರೊಂದಿಗೆ ನಟಿಸಿ ಜನಪ್ರಿಯತೆ ಗಳಿಸಿದ್ದರು. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಗುರುತಿಸಿಕೊಂಡಿರುವ ಇವರು, ಈಗ ಮಹಿಳೆಯರಿಗೆ ಸ್ಫೂರ್ತಿಯಾಗುವ ನಿಟ್ಟಿನಲ್ಲಿ ತಮ್ಮ ಆರೋಗ್ಯದ ಕಠಿಣ ಹಾದಿಯನ್ನು ಬಹಿರಂಗಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸಮಸ್ಯೆಗಳನ್ನು ಮುಚ್ಚಿಡುವ ಬದಲು, ಧೈರ್ಯವಾಗಿ ಎದುರಿಸಿ ಪರಿಹಾರ ಕಂಡುಕೊಳ್ಳಬೇಕು ಎಂಬ ಸಂದೇಶವನ್ನು ಅವರು ಈ ಮೂಲಕ ನೀಡಿದ್ದಾರೆ.


