ಒಂದು ಕಾಲದಲ್ಲಿ 'ಬಾಹುಬಲಿ 2' ಬರೆದಿದ್ದ ದಾಖಲೆಗಳು ಅಳಿಸಲಾಗದ ಮೈಲಿಗಲ್ಲು ಎನ್ನಲಾಗುತ್ತಿತ್ತು. ಆದರೆ, 'ಧುರಂಧರ್ 2' (Dhurandhar 2) ಈಗ ಆ ಇತಿಹಾಸವನ್ನು ತಿರುಗಿ ಬರೆದಿದೆ. ಪುಷ್ಪ 2, ಬಾಹುಬಲಿ 2 ಮತ್ತು ದಂಗಲ್‌ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಹಿಂದಿಕ್ಕಿದೆ ಈ ಸಿನಿಮಾ 'ಧುರಂಧರ್ 2'.

ಬಾಕ್ಸ್ ಆಫೀಸ್ ಸುನಾಮಿ: 'ಧುರಂಧರ್ 2' ಅಬ್ಬರಕ್ಕೆ ನಲುಗಿದ ದಿಗ್ಗಜ ಸಿನಿಮಾಗಳು; 12 ದಿನಕ್ಕೆ 1400 ಕೋಟಿ!

Add Asianetnews Kannada as a Preferred SourcegooglePreferred

ಭಾರತೀಯ ಚಿತ್ರರಂಗದಲ್ಲಿ ಈಗ 'ಧುರಂಧರ್' ಹವಾ! ಬಾಕ್ಸ್ ಆಫೀಸ್ ಎಂಬ ಅಖಾಡದಲ್ಲಿ ರಣವೀರ್ ಸಿಂಗ್ ಒಬ್ಬ 'ಅಜೇಯ ವೀರ'ನಂತೆ ಮುನ್ನುಗ್ಗುತ್ತಿದ್ದಾರೆ. ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಕೇವಲ ಸಿನಿಮಾ ಆಗಿ ಉಳಿದಿಲ್ಲ, ಅದೊಂದು ದಾಖಲೆಗಳ ಸುನಾಮಿಯಾಗಿ ಮಾರ್ಪಟ್ಟಿದೆ. ಬಿಡುಗಡೆಯಾದ ಕೇವಲ 12 ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂದಾಜು ₹ 1400 ಕೋಟಿ ಗಳಿಸುವ ಮೂಲಕ ಸಿನಿಕ್ರೇಜಿ ಪ್ರೇಕ್ಷಕರನ್ನು ದಬ್ಬಾಳಿಕೆ ಮಾಡುತ್ತಿದೆ.

ದಾಖಲೆಗಳ ಬೇಟೆಗಾರ:

ಒಂದು ಕಾಲದಲ್ಲಿ 'ಬಾಹುಬಲಿ 2' ಬರೆದಿದ್ದ ದಾಖಲೆಗಳು ಅಳಿಸಲಾಗದ ಮೈಲಿಗಲ್ಲು ಎನ್ನಲಾಗುತ್ತಿತ್ತು. ಆದರೆ, 'ಧುರಂಧರ್ 2' (Dhurandhar 2) ಈಗ ಆ ಇತಿಹಾಸವನ್ನು ತಿರುಗಿ ಬರೆದಿದೆ. ಪುಷ್ಪ 2, ಬಾಹುಬಲಿ 2 ಮತ್ತು ದಂಗಲ್‌ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಹಿಂದಿಕ್ಕಿರುವ ಈ ಸಿನಿಮಾ, ವಿದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತರ ಅಮೆರಿಕಾದಲ್ಲಿ 22 ಮಿಲಿಯನ್ ಡಾಲರ್ (ಸುಮಾರು ₹207 ಕೋಟಿ) ಕಲೆಕ್ಷನ್ ಮಾಡುವ ಮೂಲಕ ಪ್ರಭಾಸ್ ಅವರ 9 ವರ್ಷಗಳ ಹಳೆಯ ದಾಖಲೆಯನ್ನು ರಣವೀರ್ ಸಿಂಗ್ ಸದ್ದಿಲ್ಲದೆ ಮುರಿದು ಹಾಕಿದ್ದಾರೆ.

ಅಭಿನಂದಿಸಿದ ಬಾಹುಬಲಿ ನಿರ್ಮಾಪಕ:

ಈ ಅದ್ಭುತ ಯಶಸ್ಸನ್ನು ಕಂಡು ಬಾಹುಬಲಿ ಚಿತ್ರದ ನಿರ್ಮಾಪಕ ಶೋಭು ಯರ್ಲಗಡ್ಡ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "9 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಆದಿತ್ಯ ಧರ್ ಮತ್ತು ತಂಡಕ್ಕೆ ಅಭಿನಂದನೆಗಳು" ಎಂದು ಟ್ವೀಟ್ ಮಾಡುವ ಮೂಲಕ ದೊಡ್ಡತನ ಮೆರೆದಿದ್ದಾರೆ.

ಬಾಕ್ಸ್ ಆಫೀಸ್ ಜೈತ್ರಯಾತ್ರೆ:

ಚಿತ್ರದ ಆರಂಭವೇ ಒಂದು ಅದ್ಧೂರಿ ಹಬ್ಬದಂತಿತ್ತು. ಮೊದಲ ದಿನವೇ ವಿಶ್ವದಾದ್ಯಂತ ₹ 240 ಕೋಟಿ ಲೂಟಿ ಮಾಡಿದ್ದ ಈ ಸಿನಿಮಾ, ಕೇವಲ ಒಂದು ವಾರದಲ್ಲಿ ₹ 1000 ಕೋಟಿ ಕ್ಲಬ್ ಸೇರಿ ಅಚ್ಚರಿ ಮೂಡಿಸಿತ್ತು. ದೇಶೀಯವಾಗಿ (ಭಾರತದಲ್ಲಿ) ಸದ್ಯಕ್ಕೆ ₹ 872 ಕೋಟಿ ಗಳಿಸಿರುವ ಈ ಸಿನಿಮಾ, ಶೀಘ್ರದಲ್ಲೇ ₹ 1000 ಕೋಟಿ ನೆಟ್ ಕಲೆಕ್ಷನ್ ತಲುಪುವತ್ತ ದಾಪುಗಾಲು ಹಾಕುತ್ತಿದೆ. ವಿಶೇಷವೆಂದರೆ, ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗದಿದ್ದರೂ ಈ ಮಟ್ಟದ ಸಾಧನೆ ಮಾಡಿರುವುದು ಸಣ್ಣ ವಿಷಯವೇನಲ್ಲ.

ತಾರಾಗಣದ ಬಲ:

ಈ ಸ್ಪೈ ಥ್ರಿಲ್ಲರ್ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರ ಅಬ್ಬರದ ಜೊತೆಗೆ ಆರ್. ಮಾಧವನ್ ಅವರ ತೂಕದ ಅಭಿನಯ, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಅವರ ಖಡಕ್ ವಿಲನ್ ರೋಲ್ ಚಮತ್ಕಾರ ಮಾಡಿದೆ. ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಅವರ ಸಣ್ಣ ಪುಟ್ಟ ಪಾತ್ರಗಳು ಕೂಡ ಕಥೆಗೆ ಮೆರುಗು ನೀಡಿವೆ. ಮೊದಲ ಭಾಗವು ₹ 1300 ಕೋಟಿ ಗಳಿಸಿ ಸದ್ದು ಮಾಡಿತ್ತು, ಆದರೆ ಈ ಎರಡನೇ ಭಾಗವು ಅದರ ಎಲ್ಲಾ ಮಿತಿಗಳನ್ನು ದಾಟಿ ಬೆಳೆದು ನಿಂತಿದೆ.

ಒಟ್ಟಿನಲ್ಲಿ, 'ಧುರಂಧರ್ 2' ಕೇವಲ ಹಣ ಗಳಿಸುತ್ತಿಲ್ಲ, ಬದಲಾಗಿ ಬಾಲಿವುಡ್ ಕೂಡ ದಕ್ಷಿಣದ ಸಿನಿಮಾಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲದು ಎಂದು ಸಾಬೀತುಪಡಿಸಿದೆ. ರಣವೀರ್ ಸಿಂಗ್ ಅವರ ಕೆರಿಯರ್‌ನಲ್ಲಿ ಇದೊಂದು 'ಅಲ್ಟಿಮೇಟ್' ಗೆಲುವು ಎನ್ನುವುದರಲ್ಲಿ ಸಂಶಯವಿಲ್ಲ!