ಕೋಲ್ಹಾಪುರಿ ಚಪ್ಪಲಿ ವಿವಾದದಲ್ಲಿ ಪ್ರಾಡಾಗೆ ನಟಿ ಕರೀನಾ ಕಪೂರ್ ಖಡಕ್ ತಿರುಗೇಟು ನೀಡಿದ್ದಾರೆ. ಲಂಡನ್‌ನಲ್ಲಿ ಕೋಲ್ಹಾಪುರಿ ಚಪ್ಪಲಿ ಧರಿಸಿ ಫೋಟೋ ಹಂಚಿಕೊಂಡು, ಪ್ರಾಡಾ ವಿರುದ್ಧ ಪರೋಕ್ಷವಾಗಿ ಟೀಕಿಸಿದ್ದಾರೆ.
“ನನಗೆ ನಾನೇ ಫೇವರಿಟ್” ಎನ್ನುವ ನಟಿ ಕರೀನಾ ಕಪೂರ್ ಅವರು ಉತ್ತರ ಕೊಡೋದರಲ್ಲಿ ಎತ್ತಿದ ಕೈ. ಈಗ ಅವರು ಕೋಲ್ಹಾಪುರಿ ಚಪ್ಪಲಿ ಹಾಕಿ ಪ್ರಾಡಾಗೆ ತಿರುಗೇಟು ಕೊಟ್ಟಿದ್ದಾರೆ.
ತಿರುಗೇಟು ಕೊಟ್ಟ ಕರೀನಾ ಕಪೂರ್!
ಐಷಾರಾಮಿ ಫ್ಯಾಷನ್ ದೈತ್ಯ ಪ್ರಾಡಾ ಇಟಲಿಯಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಕೋಲ್ಹಾಪುರಿ ಮಾದರಿ ಚಪ್ಪಲಿ ಪ್ರದರ್ಶನ ಮಾಡಿತ್ತು. ಇದಕ್ಕೆ ಮಹಾರಾಷ್ಟ್ರದ ಕೋಲ್ಹಾಪುರಿ ಚಪ್ಪಲಿ ಮಂಡಳಿಯವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ನಟಿ ಕರೀನಾ ಕಪೂರ್ ಖಾನ್ ಅವರು, ಪ್ರಾಡಾ ಕಂಪೆನಿಗೆ ತಿರುಗೇಟು ಕೊಟ್ಟಿದ್ದಾರೆ.
ಕರೀನಾ ಕಪೂರ್ ಹೇಳಿದ್ದೇನು?
ತನ್ನ ಕುಟುಂಬದೊಂದಿಗೆ ನಟಿ ಕರೀನಾ ಕಪೂರ್ ಅವರು ಲಂಡನ್‌ನಲ್ಲಿ ಸಮಯ ಕಳೆದಿದ್ದಾರೆ. ಆಗ ಅವರು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ತನ್ನ ಕಾಲುಗಳ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಒರಿಜಿನಲ್ ಮೆಟಾಲಿಕ್ ಸಿಲ್ವರ್ ಕೋಲ್ಹಾಪುರಿ ಚಪ್ಪಲಿಗಳನ್ನು ಹಾಕಿದ್ದರು. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು "ಕ್ಷಮಿಸಿ, ಇದು ಪ್ರಾಡಾ ಅಲ್ಲ... ಆದರೆ ಇದು ನನ್ನ OG ಕೋಲ್ಹಾಪುರಿ" ಎಂದು ಶೀರ್ಷಿಕೆ ನೀಡಿದ್ದಾರೆ. ಈ ಮೂಲಕ ಕೋಲ್ಹಾಪುರಿ ಚಪ್ಪಲಿ ಮೇಲಿನ ಅಭಿಮಾನ ಮೆರೆದಿದ್ದಾರೆ. ಈ ಮೂಲಕ ಭಾರತೀಯ ಕುಶಲಕರ್ಮಿಗಳನ್ನು ಬೆಂಬಲಿಸಿದ್ದಾರೆ.
ದೊಡ್ಡ ವಿವಾದ ಸೃಷ್ಟಿಸಿದ ಚಪ್ಪಲಿ!
ಜೂನ್ 22 ರಂದು ಮಿಲನ್‌ನಲ್ಲಿ ಪ್ರಾಡಾ ಮೆನ್ಸ್ ಸ್ಪ್ರಿಂಗ್/ಸಮ್ಮರ್ 2026 ಫ್ಯಾಷನ್ ಶೋ ನಡೆದಿತ್ತು. ಆ ವೇಳೆ ಪ್ರಾಡಾ ಕಂಪೆನಿಯು ʼಟೋ ರಿಂಗ್ ಸ್ಯಾಂಡಲ್ಸ್ʼ ಎಂದು ಹೇಳಿ ಒಂದು ಫೂಟ್‌ವೇರ್ ಪ್ರದರ್ಶಿಸಿತು. ಇದು ಕೋಲ್ಹಾಪುರಿ ಚಪ್ಪಲಿಗಳನ್ನು ಹೋಲುತ್ತಿತ್ತು. ಕೈಯಿಂದ ಕೋಲ್ಹಾಪುರಿ ಚಪ್ಪಲಿಗಳನ್ನು ತಯಾರಿಸಿಲಾಗುವುದು. ಈ ಚಪ್ಪಲಿಗಳಿಗೆ, 800 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಅಷ್ಟೇ ಅಲ್ಲದೆ ಭಾರತದಲ್ಲಿ ಸಾಂಸ್ಕೃತಿಕ ಮಹತ್ವವನ್ನು ಹೊಂದಿವೆ. ನಮ್ಮ ಡಿಸೈನ್ ಮಾತ್ರ ಕೋಲ್ಹಾಪುರಿ ಡಿಸೈನ್ ರೀತಿ ಇದೆ ಎಂದು ಪ್ರಾಡಾ ಆರಂಭದಲ್ಲಿ ಒಪ್ಪಿಕೊಳ್ಳಲಿಲ್ಲ. ಇದು ಇನ್ನಷ್ಟು ದೊಡ್ಡ ವಿವಾದ ಸೃಷ್ಟಿಸಿತು.
ಕೊನೆಗೂ ತಪ್ಪು ಒಪ್ಪಿಕೊಂಡ ಪ್ರಾಡಾ
ಕೋಲ್ಹಾಪುರಿ ಕುಶಲಕರ್ಮಿಗಳ ಕಲೆಯನ್ನು ಗುರುತಿಸಿ, ಕೋರಿ ಕೋಲ್ಹಾಪುರಿ ಕುಶಲಕರ್ಮಿಗಳಿಗೆ ಪರಿಹಾರ ಕೊಡಬೇಕು ಎಂದು ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ದಾಖಲಿಸಲಾಗಿದೆ. "ಶತಮಾನಗಳ ಇತಿಹಾಸ ಇರುವ ಟ್ರೆಡಿಷನಲ್ ಆಗಿ ಭಾರತೀಯರ ಕೈಯಿಂದ ತಯಾರಾಗಿರುವ ಚಪ್ಪಲಿಗಳಿಂದ ಸ್ಫೂರ್ತಿ ಪಡೆದಿವೆ" ಎಂದು ಕೊನೆಗೂ ಪ್ರಾಡಾ ಒಪ್ಪಿಕೊಂಡಿದೆ.
ವಿಡಿಯೋ ಮೀಟಿಂಗ್ ಮಾಡ್ತಾರೆ!
ಪ್ರಾಡಾ ಗ್ರೂಪ್‌ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಮುಖ್ಯಸ್ಥ ಲೊರೆಂಜೊ ಬೆರ್ಟೆಲ್ಲಿ ಅವರು, “ಭಾರತೀಯ ಕುಶಲಕರ್ಮಿಗಳ ಬಗ್ಗೆ ಗೌರವವಿದೆ. ವ್ಯಾಪಾರ, ಕರಕುಶಲ ವಲಯದ ಪ್ರತಿನಿಧಿಳ ಜೊತೆ ಸಂವಾದ ಮಾಡ್ತೀವಿ” ಎಂದು ತಿಳಿಸಿದ್ದಾರೆ. ಜುಲೈ 11 ರಂದು ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್, ಇಂಡಸ್ಟ್ರಿ, & ಅಗ್ರಿಕಲ್ಚರ್ (MACCIA), ಕೋಲ್ಹಾಪುರಿ ಕುಶಲಕರ್ಮಿಗಳ ಜೊತೆ ಚರ್ಚಿಸಲು ವಿಡಿಯೋ ಮೀಟಿಂಗ್ ಅರೇಂಜ್ ಮಾಡಲಾಗಿದೆ.
ಕರೀನಾ ಕಪೂರ್ ಅವರು ಪತಿ ಸೈಫ್ ಅಲಿ ಖಾನ್, ತೈಮೂರ್ ಅಲಿ ಖಾನ್, ಜೆಹ್ ಅಲಿ ಖಾನ್ ಜೊತೆಗೆ ಲಂಡನ್‌ನಲ್ಲಿ ಹಾಲಿಡೇ ಕಳೆಯುತ್ತಿದ್ದಾರೆ.
