ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಜೀವನ ಚರಿತ್ರೆ ಆಧರಿತ ‘ವಿಜಯಾನಂದ’ ಸಿನಿಮಾ ಇಂದು ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ನಿಹಾಲ್‌ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ವಿಆರ್‌ಎಲ್‌ ಸಂಸ್ಥೆಯ ಮುಖಾಂತರ ಆನಂದ ಸಂಕೇಶ್ವರ ನಿರ್ಮಿಸಿದ್ದಾರೆ. ಸಿನಿಮಾ ತೆರೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕಿ ರಿಷಿಕಾ ಶರ್ಮಾ ಸಂದರ್ಶನ.

ಆರ್‌. ಕೇಶವಮೂರ್ತಿ

ವಿಜಯ ಸಂಕೇಶ್ವರ ಅವರ ಬಗ್ಗೆ ಸಿನಿಮಾ ಮಾಡಬೇಕು ಅನಿಸಿದ್ದು ಹೇಗೆ?

ಇದು ನಟ ನಿಹಾಲ್‌ ಕೊಟ್ಟಐಡಿಯಾ. ಲಾಕ್‌ಡೌನ್‌ ಸಮಯದಲ್ಲಿ ನಾವು ಬೇರೆ ಬೇರೆ ಕತೆಗಳ ಮೇಲೆ ಸ್ಕಿ್ರಪ್‌್ಟಮಾಡುವಾಗ, ಉದ್ಯಮಿ ವಿಜಯ ಸಂಕೇಶ್ವರ ಅವರ ಬಯೋಪಿಕ್‌ ಸಿನಿಮಾ ಮಾಡಿದರೆ ಹೇಗೆ ಅಂತ ಕೇಳಿದ್ರು.

ಉದ್ಯಮಿಯೊಬ್ಬರ ಕತೆ ಸಿನಿಮಾ ಆಗುವ ಅಗತ್ಯ ಏನಿತ್ತು?

ವಿಜಯ ಸಂಕೇಶ್ವರ ಅವರು ಕೋಟಿ ಕೋಟಿ ಹಣ ಕೈಯಲ್ಲಿ ಹಿಡಿದು ಬಂದು ಉದ್ಯಮಿ ಆದವರಲ್ಲ. ಜೀರೋದಿಂದ ಹೀರೋ ಆದವರು. ಅವರ ಪಯಣ ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿ ನಿಲ್ಲಬೇಕು. ಒಬ್ಬ ಕನ್ನಡಿಗ ದೇಶವೇ ಮೆಚ್ಚುವಂತಹ ಸಾಧನೆ ಮಾಡಿರುವಾಗ ಆ ಸಾಧಕನ ಜೀವನ ಹೇಳುವುದರಲ್ಲಿ ತಪ್ಪಿಲ್ಲ. ಕನ್ನಡಿಗರ ಸಾಧನೆಗಳನ್ನು ಬೇರೆ ಭಾಷೆಯವರು ಗುರುತಿಸಿ ಸಿನಿಮಾ ಮಾಡುತ್ತಿದ್ದಾರೆ. ನಾವು ನಮ್ಮವರ ಬಯೋಪಿಕ್‌ ಯಾಕೆ ಮಾಡಬಾರದೆಂದು ಅನಿಸಿತು.

ಶುರುವಿನಲ್ಲೇ ಇದು ಪ್ಯಾನ್‌ ಇಂಡಿಯಾ ಸಿನಿಮಾ ಆಗಿತ್ತಾ?

ಇಲ್ಲ. ನಿರ್ಮಾಣ ಸಂಸ್ಥೆಯಿಂದ ನಮಗೆ ಸ್ಪಷ್ಟವಾಗಿ ಹೇಳಿದ್ದು, ಮೊದಲು ಕನ್ನಡದಲ್ಲಿ ಮಾಡೋಣ ಅಂತ. ಶೂಟಿಂಗ್‌ ಮಾಡುವಾಗ ಕೆಲವರು ಹೇಳಿದ ಸಲಹೆಗಳನ್ನು ಪರಿಗಣಿಸಿ ಬಹುಭಾಷೆಯಲ್ಲಿ ಮಾಡಲು ನಿರ್ಧರಿಸಿದ್ದು. ಟೀಸರ್‌ ಬಿಡುಗಡೆ ಆದ ಮೇಲೆ ಹಿಂದಿಯಲ್ಲಿ ಮಾಡುವಂತೆ ಕೇಳಿದರು. ಹಂತ ಹಂತವಾಗಿ ‘ವಿಜಯಾನಂದ’ ಪ್ಯಾನ್‌ ಇಂಡಿಯಾ ಸಿನಿಮಾ ಆಯಿತು.

ಇಷ್ಟುದೊಡ್ಡ ಚಿತ್ರಕ್ಕೆ ಅಷ್ಟೇ ದೊಡ್ಡ ಸ್ಟಾರ್‌ ನಟ ಹೀರೋ ಆದರೆ ಚೆನ್ನಾಗಿರುತ್ತದೆ ಅನಿಸಿಲ್ಲವೇ?

ವಿಜಯ ಸಂಕೇಶ್ವರ ಅವರೇ ರಿಯಲ್‌ ಹೀರೋ. ತೆರೆ ಮೇಲೆ ಅವರ ಕತೆ ಹೇಳುವುದಕ್ಕೆ ಮತ್ತೊಬ್ಬ ಹೀರೋ ಬೇಕಿರಲಿಲ್ಲ. ಆರ್ಟಿಸ್ಟ್‌ ಬೇಕಿತ್ತು. ನನ್ನ ಪ್ರಕಾರ ಈ ಕತೆಗೆ ನಿಹಾಲ್‌ ಸೂಕ್ತ ಅನಿಸಿದರು.

ಒಂದು ಟ್ರಕ್‌ನಿಂದ ಶುರು: ಉದ್ಯಮಿ ವಿಜಯ ಸಂಕೇಶ್ವರರ ಬಯೋಪಿಕ್‌

ನಿಹಾಲ್‌ ಅವರು ವಿಜಯ ಸಂಕೇಶ್ವರ ಪಾತ್ರಧಾರಿ ಆಗಲು ಹೇಗೆ ಸಾಧ್ಯ?

ಅವರು ಕೂಡ ಉತ್ತರ ಕರ್ನಾಟಕದವರು. ಜತೆಗೆ ವಿಜಯ ಸಂಕೇಶ್ವರ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದಾರೆ. ನಿಜ ಜೀವನದಲ್ಲಿ ನಿಹಾಲ್‌ ಅವರಿಗೂ ಸ್ಫೂರ್ತಿ ಆಗಿರುವ ವ್ಯಕ್ತಿ ವಿಜಯ ಸಂಕೇಶ್ವರ ಅವರು. ವಿಜಯ ಸಂಕೇಶ್ವರ ಪಾತ್ರಕ್ಕೆ ಬೇರೆ ಯಾರನ್ನೋ ಕರೆದು ಕೂರಿಸಿ, ಅವರನ್ನು ಹೊಸದಾಗಿ ತಯಾರು ಮಾಡುವ ಬದಲು ನಿಹಾಲ್‌ ಹೀರೋ ಆದರೆ ಚೆನ್ನಾಗಿರುತ್ತದೆ ಅನಿಸಿತು.

ನಿಮ್ಮ ಪೂರ್ವ ತಯಾರಿಗಳು ಹೇಗಿತ್ತು? ನಿಮಗೆ ಸವಾಲು ಎನಿಸಿದ್ದು ಏನು?

ಒಂದೂವರೆ ವರ್ಷ ಅಧ್ಯಯನ ಮಾಡಿದೆ. ಒಟ್ಟು 820 ದಿನಗಳು ಈ ಚಿತ್ರಕ್ಕೆ ನಾನು ಕೊಟ್ಟಸಮಯ. ನಾನೇ ಆರ್ಚ್‌ ಡೈರೆಕ್ಷನ್‌ ಹಾಗೂ ಕಾಸ್ಟೂ್ಯಮ್‌ ಡಿಸೈನ್‌ ಕೂಡ ಮಾಡಿದ್ದೇನೆ. ನಿಹಾಲ್‌ ಜತೆಗೆ ಇದ್ದಿದ್ದರಿಂದ, ಆನಂದ ಸಂಕೇಶ್ವರ ಅವರೇ ಬೆನ್ನೆಲುಬಾಗಿ ನಿಂತ ಕಾರಣ ಹೆಚ್ಚು ಕಷ್ಟಆಗಲಿಲ್ಲ.

ವಿಆರ್‌ಎಲ್‌ ಸಂಸ್ಥೆಯೇ ನಿಮ್ಮ ಚಿತ್ರಕ್ಕೆ ನಿರ್ಮಾಣ ಮಾಡಲು ಮುಂದಾಗಿದ್ದು ಹೇಗೆ?

ಸಿನಿಮಾ ಶುರು ಮಾಡಿದಾಗ ಬೇರೆ ನಿರ್ಮಾಪಕರು ಇದ್ದರು. ಅವರು ವಿಜಯ ಸಂಕೇಶ್ವರ ಅವರ ಅಭಿಮಾನಿಗಳೇ. ಆನಂದ ಸಂಕೇಶ್ವರ ಅವರ ಬಳಿ ಮಾತುಕತೆ ಮಾಡಬೇಕಾದರೆ ‘ನಾವು ಸಿನಿಮಾ ಕ್ಷೇತ್ರಕ್ಕೂ ಬರಬೇಕು ಅಂದುಕೊಂಡಿದ್ದೇವೆ. ನಿಮಗೆ ಓಕೆ ಆದರೆ, ನಾವೇ ಈ ಚಿತ್ರವನ್ನು ನಿರ್ಮಿಸುತ್ತೇವೆ’ ಎಂದು ಹೇಳಿದರು.