ವಿಜಯ ಸಂಕೇಶ್ವರರ ಬಯೋಪಿಕ್‌ ವಿಜಯಾನಂದ ರಿಷಿಕಾ ಶರ್ಮಾ ನಿರ್ದೇಶನದ ಸಿನಿಮಾದ ಫಸ್ಟ್‌ ಲುಕ್‌

ರಿಷಿಕಾ ಶರ್ಮಾ ನಿರ್ದೇಶನದಲ್ಲಿ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನ ಕತೆ ‘ವಿಜಯಾನಂದ’ ಹೆಸರಿನಲ್ಲಿ ಸಿನಿಮಾ ಆಗುತ್ತಿದೆ. ಒಂದು ಟ್ರಕ್‌ನಿಂದ ಉದ್ದಿಮೆ ಆರಂಭಿಸಿ ಇಂದು ರಾಷ್ಟ್ರಮಟ್ಟದ ಉದ್ಯಮಿಯಾಗಿ ಬೆಳೆದ, ಮಾಧ್ಯಮ ಕ್ಷೇತ್ರದಲ್ಲೂ ಗುರುತಿಸಿಕೊಂಡ ಪದ್ಮಶ್ರೀ ಪುರಸ್ಕೃತ ಸಂಕೇಶ್ವರ ಅವರ ಬದುಕು ಹಾಗೂ ಸಾಧನೆಯನ್ನಾಧರಿಸಿ ಈ ಚಿತ್ರ ಮಾಡಲಾಗಿದೆ.

ಆನಂದ ಸಂಕೇಶ್ವರ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚೌಕ, ಟ್ರಂಕ್‌ ಚಿತ್ರಗಳಲ್ಲಿ ನಟಿಸಿದ್ದ ಉತ್ತರ ಕರ್ನಾಟಕ ಮೂಲದ ನಟ ನಿಹಾಲ್‌, ವಿಜಯ ಸಂಕೇಶ್ವರ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಸಿನಿಮಾ ಬಗ್ಗೆ ವಿವರ ನೀಡಿದ ನಿರ್ದೇಶಕಿ ರಿಷಿಕಾ, ‘ಎರಡು ವರ್ಷಗಳಿಂದ ಈ ಚಿತ್ರಕ್ಕಾಗಿ ಶ್ರಮಿಸುತ್ತಿದ್ದೇವೆ. ಇದರಲ್ಲಿ 1950 ರಿಂದ 2015ರವರೆಗಿನ ವಿಜಯ ಸಂಕೇಶ್ವರ ಅವರ ಲೈಫ್‌ ಜರ್ನಿ ಇದೆ. ಸಾವಿರಾರು ಜನರಿಗೆ ಉದ್ಯೋಗ ನೀಡುವ ಜೊತೆಗೆ ನಾನಾ ರಂಗಗಳಲ್ಲಿ ಗುರುತಿಸಿಕೊಂಡಿರುವ ಸಂಕೇಶ್ವರ ಅವರ ಸಾಧನೆಯ ಹಾದಿಯನ್ನು ಈ ಚಿತ್ರ ಪ್ರಚುರ ಪಡಿಸಲಿದೆ.

ಪಿಂಚಣಿ ಹಣ ಕೊರೋನಾ ಪರಿಹಾರಕ್ಕೆ ನೀಡುತ್ತೇನೆ: ವಿಜಯ ಸಂಕೇಶ್ವರ

ಜೊತೆಗೆ ವಿಜಯ್‌ ಸಂಕೇಶ್ವರ ಹಾಗೂ ಅವರ ತಂದೆ, ಆನಂದ ಸಂಕೇಶ್ವರ ಹಾಗೂ ವಿಜಯ ಸಂಕೇಶ್ವರ ನಡುವಿನ ಭಾವನಾತ್ಮಕ ಬಂಧವನ್ನು ಸಿನಿಮಾದಲ್ಲಿ ತರಲಾಗುತ್ತಿವೆ. ಇದರಲ್ಲಿ ಉದ್ಯಮಿ ಆನಂದ ಸಂಕೇಶ್ವರರ ಪಾತ್ರವೂ ಬರುತ್ತದೆ. ಮಣಿರತ್ನಂ ಅವರ ಗುರು ಸಿನಿಮಾದಂಥಾ ಕಮರ್ಷಿಯಲ್‌ ಬಯೋಪಿಕ್‌ ಇದು. ಗೀತ ಗೋವಿಂದಂನಂತಹ ಜನಪ್ರಿಯ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದ ಗೋಪಿ ಸುಂದರ್‌ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಮಹಿರಾ ಸಿನಿಮಾದ ಸಿನಿಮಾಟೋಗ್ರಾಫರ್‌ ಕೀರ್ತನ್‌ ಪೂಜಾರಿ ಕ್ಯಾಮರಾ ಹಿಡಿದಿದ್ದಾರೆ. ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಹಾಗೂ ರಾಮೋಜಿ ರಾವ್‌ ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ. ನಾಯಕಿ ಹಾಗೂ ವಿವಿಧ ಪಾತ್ರಗಳ ಆಯ್ಕೆ ಪ್ರಕ್ರಿಯೆ ಮುಗಿಯುತ್ತಾ ಬಂದಿದೆ’ ಎಂದರು.