Asianet Suvarna News Asianet Suvarna News

ಕಮಲ್ ಹಾಸನ್ ಕಂಡ ಬಳಿಕ ಅಹಂ ತೊರೆದೆ: ಉಮೇಶ್ ಬಣಕಾರ್

ಉಮೇಶ್ ಬಣಕಾರ್ ಎಂದರೆ ಕನ್ನಡ ಚಿತ್ರೋದ್ಯಮಕ್ಕೆ ಸಂಬಂಧಿಸಿದವರಿಗೆಲ್ಲ ಪರಿಚಯವಿರುತ್ತದೆ. ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸಕ್ರಿಯರಾಗಿರುವ ಇವರು ಕಮಲ ಹಾಸನ್ ಅವರಿಂದಾಗಿ ತಮ್ಮ ಅಹಂಭಾವ ತೊರೆದರಂತೆ. ಅದಕ್ಕೆ ಕಾರಣವಾದ ಘಟನೆಯ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

Umesh Banakar talks about his relationship with multi lingual actor Kamal Haasan
Author
Bengaluru, First Published Jul 26, 2021, 3:52 PM IST

ಗುರುತು ಇರುವವರು ಕೂಡ ಮರೆಯುವಂಥ ಗೆಟಪ್‌ ಮಾಡಿಕೊಂಡಿದ್ದಾರೆ ಉಮೇಶ್ ಬಣಕಾರ್. ಯಾಕೆಂದರೆ ಬಣಕಾರ್ ಎಂದರೆ ಪೊದೆಗೂದಲು ನೀವಿ ನಿಲ್ಲುವ ಹಸನ್ಮುಖಿಯೇ ನೆನಪಾಗುತ್ತಾರೆ. ಆದರೆ ಇತ್ತೀಚೆಗಷ್ಟೇ ತಮ್ಮ ತಲೆಗೂದಲಿಗೆ ಕತ್ತರಿ ಹಾಕಿಸಿಕೊಂಡ ಬಳಿಕ ಮೂರು ದಶಕಗಳಿಂದ ಜನ ಗುರುತಿಸುತ್ತಿದ್ದ ಮುಖವೇ ಬದಲಾದ ಹಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಮಾತ್ರವಲ್ಲ, ನಟರಾಗಿ, ನಿರ್ಮಾಪಕರಾಗಿ, ಪ್ರದರ್ಶಕರಾಗಿ ಹೆಸರು ಮಾಡಿರುವ ಉಮೇಶ್ ಬಣಕಾರ್ ಅವರ ಈ ಹೊಸ ಅವತಾರಕ್ಕೆ ಕೂಡ ಒಂದು ಕಾರಣವಿದೆ. ಅದು ಸಿನಿಮಾ ಅಂತೂ ಖಂಡಿತಾ ಅಲ್ಲ; ಹಾಗಾದರೆ ಬೇರೇನು ಎನ್ನುವ ಬಗ್ಗೆ ಕೂಡ ಅವರು ಸುವರ್ಣ ನ್ಯೂಸ್.ಕಾಮ್ ಮೂಲಕ ಇಲ್ಲಿ ಹಂಚಿಕೊಂಡಿದ್ದಾರೆ.

- ಶಶಿಕರ ಪಾತೂರು

 ನೀವು ತಲೆಗೂದಲಿನ ಶೈಲಿಗೆ ನೀಡಿರುವ ಬದಲಾವಣೆಗೆ ಕಾರಣ ಏನು?
ಹೌದು; ನಾನು ಕಳೆದ ಮೂರು ದಶಕಗಳಿಂದ ತಲೆತುಂಬಾ ಪೊದೆಯಂತೆ ಬೆಳೆದ ಕೂದಲು ನನ್ನ ಗುರುತಿನ ಅವಿಭಾಜ್ಯ ಅಂಗವಾಗಿತ್ತು. ಇತ್ತೀಚೆಗಷ್ಟೇ ಅದಕ್ಕೆ ಮುಕ್ತಿ ನೀಡಿದ್ದೇನೆ.  ಅದಕ್ಕೆ ಕಾರಣ ಹೇಳುವ ಮೊದಲು, ನಾನೇಕೆ ಹಾಗೆ ನಿರಂತರವಾಗಿ ಕೂದಲು ಹೊಂದಿದ್ದೆ ಎನ್ನುವುದರ ಬಗ್ಗೆ ಹೇಳುತ್ತೇನೆ. ಬಹುಶಃ ಅದೇ ನಿಮ್ಮ ಪ್ರಶ್ನೆಗೆ ಉತ್ತರವಾದೀತು.  ಅದು ಎಸ್ ಎಸ್ ಎಲ್ ಸಿ ಫೇಲಾಗಿದ್ದ ಸಂದರ್ಭ. ಆ ದಿನಗಳಲ್ಲೇ ಕೂದಲು ಉದ್ದಕ್ಕೆ ಬಿಟ್ಟು ಶೇಪ್ ಮಾಡಿಸುತ್ತಿದ್ದೆ. ಹಾಗಾಗಿ ಪದೇಪದೆ ಕಟ್ಟಿಂಗ್ ಮಾಡಿಸಬೇಕಾಗಿತ್ತು. ಹಾಗೆ ಒಮ್ಮೆ ಕಟ್ಟಿಂಗ್‌ ಗೆ ಎಂದು ಮನೆಯಲ್ಲಿ ದುಡ್ಡು ಕೇಳಿದಾಗ, "ಪದೇಪದೆ ಕತ್ತರಿಸಲು ಹೀಗೆ ಹಣ ಎಷ್ಟು ಪೋಲಾಗುತ್ತಿದೆ ಎನ್ನುವುದು ನೀನಾಗಿ ಸಂಪಾದನೆ ಮಾಡಿದ್ದರೆ ಗೊತ್ತಾಗುತ್ತಿತ್ತು" ಎಂದಿದ್ದರು! ಅದಕ್ಕೆ ನಾನು ನಾನೇ ಸಂಪಾದನೆ ಮಾಡುವವರೆಗೆ ಕೂದಲು ತೆಗೆಸುವುದೇ ಇಲ್ಲ ಎಂದು ಹಠ ಹಿಡಿದಿದ್ದೆ. ಹಾಗೆ ಕೂದಲು ಬೆಳೆಯತೊಡಗಿತು. ಸಂಪಾದನೆ ಶುರು ಮಾಡಿದಾಗ ಕೂದಲು ಬಹಳಷ್ಟು ಉದ್ದಕ್ಕೆ ಬೆಳೆದು ಬಿಟ್ಟಿತ್ತು. ಹಾಗಾಗಿ ಪೂರ್ತಿ ತೆಗೆಸುವುದು ಬೇಡ ಅನಿಸಿತು. ಅಂದು ಬಿಟ್ಟಿದ್ದ ಕೂದಲಿನ ಅರ್ಧದಷ್ಟು ಮಾತ್ರ ತೆಗೆಸಿದ್ದೆ. ಈಗ ಅದನ್ನೂ ತೆಗೆಸಿ ಸಾಮಾನ್ಯರಂತೆ ಆಗಿದ್ದೀನಿ.

ರಕ್ಷಿತ್ ಶೆಟ್ಟಿಗೆ ನನ್ನ ಬೆಂಬಲವಿದೆ ಎಂದ ಶಿವಣ್ಣ

ಕೂದಲು ಬಿಟ್ಟಿದ್ದಾಗ ಮತ್ತು ಈಗ ನಿಮ್ಮಲ್ಲಿ ಆಗಿರುವ ಬದಲಾವಣೆಗಳೇನು?
ಆರಂಭದಲ್ಲಿ ಅಡ್ಡಾದಿಡ್ಡಿ ಕೂದಲು ಬಿಟ್ಟಿದ್ದಾಗ `ಯಾಕೆ' ಎಂದು ಬಹಳ ಜನ ಈ ಬಗ್ಗೆ ವಿಚಾರಿಸುತ್ತಿದ್ದರು.  ಬೆಂಗಳೂರಲ್ಲಿದ್ದಾಗ ಹರಕೆ ಇದೆ ಎಂದು ಹೇಳುತ್ತಿದ್ದೆ. ಊರಿಗೆ ಹೋದಾಗ ನಾಯಿ ಕಚ್ಚಿದೆ ಎಂದು ಹೇಳುತ್ತಿದ್ದೆ. ಯಾಕೆಂದರೆ ಆ ದಿನಗಳಲ್ಲಿ ನಾಯಿಯಿಂದ ಕಚ್ಚಿಸಿಕೊಂಡವರು ಕೂದಲು ತೆಗೆಸುತ್ತಿರಲಿಲ್ಲ.  ಅದರಿಂದ ನಂಜಾಗುತ್ತದೆ ಎನ್ನುವ ನಂಬಿಕೆ ಇತ್ತು. ನಾನು ಕೂದಲು ಬಿಟ್ಟ ಒಂದಷ್ಟು ವರ್ಷಗಳಲ್ಲೇ  ಉಪೇಂದ್ರ ಅವರು ನಟರಾಗಿ ಜನಪ್ರಿಯರಾದರು. ನೋಡಿದವರೆಲ್ಲ ಉಪೇಂದ್ರನ ಹಾಗೆ ಬಿಟ್ಟಿರುವುದಾಗಿ ಹೇಳುತ್ತಿದ್ದರು.  ಆದರೆ ನಾನು ಅದಕ್ಕೂ ಮೊದಲಿಂದಲೂ ಹಾಗಿದ್ದೆ ಎನ್ನುವ ಬಗ್ಗೆ ಯಾರಿಗೂ ಗಮನವಿರಲಿಲ್ಲ. ಇನ್ನು ನನ್ನನ್ನು ತುಂಬ ಮಂದಿ ಮಧುಬಂಗಾರಪ್ಪ ಎಂದು ತಪ್ಪಾಗಿ ತಿಳಿದವರೂ ಇದ್ದರು. ಅವರ ಜನ್ಮದಿನದಂದು ನನಗೆ ಬರ್ತ್ ಡೇ ವಿಶ್ ಮಾಡಿದ ಉದಾಹರಣೆಯೂ ಇದೆ. ಇನ್ನು ನಾನು ಉಪೇಂದ್ರ, ಗುರುಕಿರಣ್ ಜೊತೆಯಾಗಿದ್ದಾಗ ನಮ್ಮನ್ನು ಸೇರಿಸಿ ಛಾಯಾಗ್ರಾಹಕ ಮಿತ್ರರು ಫೊಟೊ ಕೂಡ ತೆಗೆಸಿದ್ದರು.ಮೂವತ್ತೆರಡು ವರ್ಷಗಳಿಂದ ನಾನು ಒಬ್ಬ ಕ್ಷೌರಿಕನ ಬಳಿಯಲ್ಲಿ ಮಾತ್ರ ಕಟ್ಟಿಂಗ್ ಮಾಡಿಸುತ್ತಿದ್ದೇನೆ. ಆತ ಪ್ರಸ್ತುತ ಬಿಲ್ಡರಾಗಿ ಬೆಳೆದಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಒಂದಿಬ್ಬರನ್ನು ಬಿಟ್ಟರೆ ಅವರು ಇಂದಿಗೂ ನನಗೆ ಮಾತ್ರ ಹೇರ್ ಕಟ್ ಮಾಡುತ್ತಾರೆ.  ಕೂದಲು ತೆಗೆಸಿದ ಬಹಳಷ್ಟು ಮಂದಿ ಥಟ್ಟನೆ ನನ್ನ ಗುರುತೇ ಸಿಗುತ್ತಿಲ್ಲ ಎಂದಿದ್ದಾರೆ!

ಮಾಯಾಮೃಗಕ್ಕೆ ಅದ್ಭುತ ಪ್ರತಿಕ್ರಿಯೆ- ಟಿಎನ್ ಸೀತಾರಾಮ್

ಚಿತ್ರರಂಗದ ಜೊತೆಗಿನ ಮೂರು ದಶಕಗಳ ಬದುಕಲ್ಲಿ ಮರೆಯದ ಘಟನೆ ಯಾವುದು?
ನನ್ನ ಬದುಕೇ ಮರೆಯದ ಅನುಭವಗಳಿಗೆ ಸಾಕ್ಷಿಯಾಗಿದೆ. ಉದಾಹರಣೆಗೆ ಚಿತ್ರರಂಗಕ್ಕೆ ನಾನು ಪ್ರವೇಶಿಸಿದ ರೀತಿಯೇ ಇರಬಹುದು. ಎಚ್ ಎಂ ಕೆ ಮೂರ್ತಿಯವರ ನಿರ್ದೇಶನದ `ದೊಂಬರ ಕೃಷ್ಣ' ಚಿತ್ರದಲ್ಲಿ ಬಾಲನಟನಾಗಿ ಎಂಟ್ರಿಯಾದೆ.  ಅದಕ್ಕೆ ಕಾರಣರಾದವರು ಸುಂದರ ಕೃಷ್ಣ ಅರಸ್ ಮತ್ತು ಮುಸುರಿಕೃಷ್ಣಮೂರ್ತಿಯವರು. ಚಿತ್ರರಂಗದಲ್ಲಿ ಮುಂದುವರಿಯುವುದು ನನ್ನ ತಂದೆಯವರಿಗೆ ಇಷ್ಟವಿರಲಿಲ್ಲ. ನನಗೂ ನಿರ್ದೇಶಕನಾಗಬೇಕು ಎನ್ನುವುದಷ್ಟೇ ಆಸೆಯಿತ್ತು. ಆದರೆ ಹದಿನೈದು ಚಿತ್ರಗಳಲ್ಲಿ ನಟನೆ, ಹತ್ತರಷ್ಟು ಚಿತ್ರಗಳ ನಿರ್ಮಾಣ, ಮೂವತ್ತು ಸಿನಿಮಾಗಳ ವಿತರಣೆ ಮಾಡಿದ ನಾನು ನಿರ್ದೇಶಕನಾಗಲೇ ಇಲ್ಲ! ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮುರು ಬಾರಿ ಉಪಾಧ್ಯಕ್ಷನಾಗಿದ್ದೇನೆ.  ಅದರಲ್ಲಿ ಒಂದು ಬಾರಿ ಕಮಲಹಾಸನ್ ಭೇಟಿಯ ಘಟನೆಯಂತೂ ಮರೆಯಲಾಗದ್ದು. ರಮೇಶ್ ಅರವಿಂದ್ ಅವರ ಆಹ್ವಾನದ ಮೇರೆಗೆ ಚಿತ್ರರಂಗದ ವಿಚಾರದಲ್ಲಿ ನಡೆಸಬೇಕಾಗಿದ್ದ ಚರ್ಚೆಗೆ ನಾನು ಕಮಲಹಾಸನ್ ಅವರನ್ನು ಭೇಟಿಯಾಗಿದ್ದೆ. ನಾನು ಅವರ ಮುಂದೆ ಹೋದೊಡನೆ ಎದ್ದು ನಿಂತುಕೊಂಡ ಅವರು 'ನಾನು ಕಮಲಹಾಸನ್..' ಎಂದು ನನಗೆ ಪರಿಚಯಿಸಿಕೊಂಡರು. ಆ ಕ್ಷಣದವರೆಗೆ ನಾನೇನೋ ಸಾಧನೆ ಮಾಡಿದ್ದೇನೆ ಎನ್ನುವ ಹಾಗೆ ನನ್ನೊಳಗಿದ್ದ ಭಾವವೆಲ್ಲ ಕರಗಿ ಹೋಯಿತು. ಯಾಕೆಂದರೆ ಏಳನೇ ತರಗಿತಿಯಲ್ಲಿದ್ದಾಗಲೇ ಅವರ ಚಿತ್ರ ನೋಡಿ ಅಭಿಮಾನಿಯಾಗಿದ್ದವ ನಾನು. ಅಂಥ ಮಹಾನ್ ನಟ ತಮ್ಮನ್ನು ಪರಿಚಯಿಸಿಕೊಳ್ಳುವಷ್ಟು ವಿನಯವಂತಿಕೆ ತೋರಿಸುವಾಗ.. ನಾವೆಲ್ಲ ಏನು!

ಬಿಗ್ ಬಾಸ್ ಗೆ ಹೋಗ್ತೀರ ಅಂದರೆ ಚಿಕ್ಕಣ್ಣನ ಉತ್ತರವೇನು ಗೊತ್ತೇ?

ಮುಂದಿನ ಯೋಜನೆಗಳೇನು?
ಆಗಲೇ ಹೇಳಿದಂತೆ ನಿರ್ದೇಶನದ ಕನಸು ಇನ್ನೂ ಉಳಿದಿದೆ. ಆದರೆ ಈ ಕೋವಿಡ್ ಸಂಕಷ್ಟ ಮುಗಿದೊಡನೆ ಅದಕ್ಕೊಂದು ರೂಪ ನೀಡುತ್ತೇನೆ ಎನ್ನುವ ಧೈರ್ಯವಿದೆ. ದಯಾಳ್ ಪದ್ಮನಾಭನ್ ನಿರ್ದೇಶನದ `ಹಗ್ಗದ ಕೊನೆ'ಯಂಥ ಚಿತ್ರ ನಿರ್ಮಿಸಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ಮಾಪಕನಾಗಿದ್ದೇನೆ. ಇನ್ನು ಸಮಾಜಕ್ಕೆ ಕೈಗನ್ನಡಿಯಾಗುವಂಥ ಚಿತ್ರ ನಿರ್ದೇಶಿಸಿ ನಿರ್ದೇಶಕನಾಗಿಯೂ ಗುರುತಿಸಿಕೊಳ್ಲಬೇಕಿದೆ. ಕತೆ ಈಗಾಗಲೇ ತಯಾರಾಗಿದೆ. ಹೊಸಬರನ್ನು ಪ್ರಧಾನ ಭೂಮಿಕೆಯಲ್ಲಿ ತೋರಿಸಲಿದ್ದೇನೆ. ನಿರ್ದೇಶಕನಾಗಿ ನನಗೆ ಅದೇ ಚಾಲೆಂಜ್. ಯಾಕೆಂದರೆ ನಿರ್ದೇಶಕ ನಿಜಕ್ಕೂ ಪ್ರತಿಭಾವಂತ ಆಗಿದ್ದರೆ ದೊಡ್ಡ ನಟರ ಮುಂದೆ ಹಲ್ಲುಗಿಂಜಿ ನಿಲ್ಲಬೇಕಾದ ಸಂದರ್ಭ ಇರುವುದಿಲ್ಲ ಎನ್ನುವುದು ನನ್ನ ನಂಬಿಕೆ. ಹಾಗಾಗಿ ಕಲಾವಿದನೊಳಗಿನ ಪ್ರತಿಭೆಯನ್ನು ಹೊರತೆಗೆಸುವವನೇ ನಿರ್ದೇಶಕ. ನನ್ನ ಚಿತ್ರದಲ್ಲಿ ನಾನು ಕೂಡ ಒಂದು ಪಾತ್ರ ಮಾಡಬೇಕು ಎಂದುಕೊಂಡಿದ್ದೇನೆ.

Follow Us:
Download App:
  • android
  • ios