ದಿ ವೇಕೆಂಟ್ ಹೌಸ್ ಸಿನಿಮಾದ ಸರ್ವ ಸಾರಥಿ ಎಸ್ತರ್ ನಿರೋನ್ಹಾ. ಕತೆ, ಚಿತ್ರಕಥೆ, ನಟನೆ, ಸಂಗೀತ ನಿರ್ದೇಶನ, ನಿರ್ಮಾಣ ಸೇರಿ ಒಂಭತ್ತು ಮುಖ್ಯ ವಿಭಾಗಗಳಲ್ಲಿ ಅವರ ಕೆಲಸ ಮಾಡಿದ್ದಾರೆ. ಸಿನಿಮಾ ಬಗ್ಗೆ ಎಸ್ತರ್ ಮಾತು..

ಪ್ರಿಯಾ ಕೆರ್ವಾಶೆ

ಒಂಭತ್ತು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ?

ಬಹಳ ಚೆನ್ನಾಗಿತ್ತು. ಕ್ರಿಯೇಟಿವ್‌ ಕೆಲಸ ನನ್ನಿಷ್ಟದ್ದೇ ಆಗಿರುವ ಕಾರಣ ಕಷ್ಟ ಅನಿಸಲಿಲ್ಲ. ಕಥೆ, ಸಂಭಾಷಣೆ ಬರೆಯೋದು, ಸಂಗೀತ ಸಂಯೋಜನೆ, ಹಾಡೋದು, ನಟಿಸೋದು, ನಿರ್ದೇಶಿಸೋದು ಇತ್ಯಾದಿ ಕೆಲಸ ಮಾಡುವಾಗ ಕೆರಿಯರ್‌ನ ಸ್ಟ್ರೆಸ್‌ ಆಗಲಿ, ಕಮರ್ಷಿಯಲ್‌ ಟಾರ್ಗೆಟ್‌ಗಳಾಗಲೀ ಇಲ್ಲದ ಕಾರಣ ಖುಷಿಯಿಂದ ಅದರಲ್ಲಿ ಕಳೆದುಹೋದೆ. ಆದರೆ ಪೋಸ್ಟ್ ಪ್ರೊಡಕ್ಷನ್‌ ಕೆಲಸದಲ್ಲಿ ಒಂದಿಷ್ಟು ಸ್ಟ್ರೆಸ್‌ ಇದ್ದೇ ಇರುತ್ತೆ. ಜೊತೆಗೆ ಪ್ರತಿಯೊಂದು ಕೆಲಸದ ಹೊಣೆಗಾರಿಕೆಯೂ ನನ್ನದೇ ಆದ ಕಾರಣ ಇನ್ನೊಬ್ಬರ ಮೇಲೆ ಅದನ್ನು ಹೊರಿಸುವಂತಿರಲಿಲ್ಲ. ಆದರೆ ಇದನ್ನೆಲ್ಲ ವಿಭಿನ್ನ ಕಲಿಕೆ ಎಂದೇ ಭಾವಿಸಿದ್ದೇನೆ.

ನಾಯಕಿ ಆಗಿ ಒಮ್ಮೆ ಗುರುತಿಸಿಕೊಂಡ ಮೇಲೆ ಬೇರೆ ವಿಭಾಗಗಳತ್ತ ಗಮನ ಹರಿಸೋದು ಕಡಿಮೆ ಅಲ್ವಾ?

ಸಮಾಜದಲ್ಲಿರುವ ಮನಸ್ಥಿತಿಯೇ ಹಾಗಲ್ವಾ? ಅದರಲ್ಲೂ ಹೆಣ್ಮಕ್ಕಳ ವಿಚಾರದಲ್ಲಂತೂ ಹೇಳೋದೇ ಬೇಡ. ಮೂಲತಃ ಗಾಯಕಿಯಾಗಿದ್ದ ನಾನು ನಾಯಕಿ ಆಗಿಬಿಟ್ಟೆ ಅಂದಾಗ ಎಲ್ಲರೂ ಗಾಯನಕ್ಕಿನ್ನು ಫುಲ್‌ಸ್ಟಾಪ್‌ ಬಿತ್ತು ಅಂತಲೇ ಭಾವಿಸಿದ್ದರು. ಯಾವುದರಲ್ಲಿ ಜಾಸ್ತಿ ಹಣ ಬರುತ್ತೋ ಅದನ್ನೇ ಪ್ರೊಫೆಶನ್ ಆಗಿ ಮಾಡ್ಕೊಳ್ಳೋದು ಸಾಮಾನ್ಯ. ಹೀಗಾದಾಗ ತಮಗೆ ಪ್ರಿಯವಾದ ಸಂಗತಿಗಳಲ್ಲಿ ಜೀವಿಸೋದನ್ನೇ ಜನ ಮರೆತು ಬಿಡುತ್ತಾರೆ. ನಾನು ನನ್ನ ಬದುಕಿನಲ್ಲಿ ಫುಲ್‌ಸ್ಟಾಪ್‌ ಹಾಕೋದಕ್ಕಿಂತ ಕಾಮಾ ಹಾಕೋದನ್ನು ಹೆಚ್ಚು ಇಷ್ಟ ಪಡ್ತೀನಿ.

ಗರಡಿಯಲ್ಲಿ 15 ವರ್ಷ ಹಿಂದಿನ ದರ್ಶನ್‌ ಸಿಕ್ತಾರೆ: ಬಿ.ಸಿ. ಪಾಟೀಲ್‌

ನಿಮಗೆ ನಿಮ್ಮನ್ನು ಪ್ರೂವ್‌ ಮಾಡಬೇಕಾದ ಅನಿವಾರ್ಯತೆ ಇತ್ತಾ?

ಪ್ರೂವ್‌ ಮಾಡುವ ಅನಿವಾರ್ಯತೆಗಿಂತಲೂ ಕೆಲಸ ಮಾಡುವ ಎನರ್ಜಿ ಇತ್ತು. ಶೇ.99 ಜನರಿಗೆ ಈ ರೀತಿ ಕೆಲಸ ಮಾಡೋಕೆ ಸಾಧ್ಯ ಆಗದೇ ಇರಬಹುದು. ಹಾಗಂತ ನಾನು ಪ್ರಯತ್ನವನ್ನೇ ಮಾಡದೇ ಇತರರ ಅಭಿಪ್ರಾಯ ಭಾರವನ್ನು ನನ್ನ ಮೇಲೆ ಹೇರಿಕೊಂಡು ಯಾಕೆ ಹತ್ತರಲ್ಲಿ ಹನ್ನೊಂದನೆಯವಳಾಗಬೇಕು.. ಸಿನಿಮಾಗಷ್ಟೇ ನಾನು ವೇಕೆಂಟ್‌ ಅಂತ ಹೆಸರಿಟ್ಟಿದ್ದೀನಿ. ನನಗೆ ವೇಕೆಂಟ್ ಆಗಿ ಕೂರೋದು ಇಷ್ಟ ಇಲ್ಲ.

ನಿಮಗೆ ನೀವೇ ಆ್ಯಕ್ಷನ್‌ ಕಟ್ ಹೇಳಿದ ಅನುಭವ?

ಅದೊಂದು ಸ್ವಾತಂತ್ರ್ಯ. ನನ್ನ ಪ್ರತಿಭೆ ಏನು ಅನ್ನುವುದು ನನಗೆ ತಿಳಿದಿರುತ್ತೆ. ಅದನ್ನು ಇನ್ನೊಬ್ಬ ನಿರ್ದೇಶಕರಿಗೆ ಹೇಳಿದರೂ ಅವರದನ್ನು ಒಪ್ಪಿಕೊಳ್ತಾರೆ ಅನ್ನೋ ಗ್ಯಾರಂಟಿ ಇಲ್ಲ. ಆದರೆ ನನ್ನ ಸಿನಿಮಾದಲ್ಲಿ ನಾನದನ್ನು ಎಕ್ಸ್‌ಪ್ಲೋರ್‌ ಮಾಡಬಹುದು. ನನ್ನನ್ನು ಪ್ರಯೋಗಶೀಲತೆಗೆ ಒಡ್ಡಿಕೊಳ್ಳಲು ಇದೊಂದು ಉತ್ತಮ ಅವಕಾಶ.

ಅಂದುಕೊಂಡಷ್ಟು ಥಿಯೇಟರ್‌ ಸಿಗದೇ ಸಮಸ್ಯೆ ಆಗ್ತಿದೆಯಾ?

ನಿಜ ಹೇಳಬೇಕು ಅಂದರೆ ಸಾಕಷ್ಟು ವರ್ಷ ಇಂಡಸ್ಟ್ರಿಯಲ್ಲಿರುವ ಕಾರಣ ನನಗೆ ಭ್ರಮೆಗಳಿಲ್ಲ. ನೂರಾರು ಥಿಯೇಟರ್‌ಗಳಲ್ಲಿ ನನ್ನ ಸಿನಿಮಾ ತೆರೆ ಕಾಣಬೇಕು, ಭರ್ಜರಿ ರಿಲೀಸ್‌ ಬೇಕು ಅನ್ನೋ ನಿರೀಕ್ಷೆಗಳಿಲ್ಲ. ಮುಖ್ಯ ಕೇಂದ್ರಗಳಲ್ಲೆಲ್ಲ ಸಿನಿಮಾ ತೆರೆ ಕಾಣ್ತಿದೆ. ಜನ ಮೆಚ್ಚಿಕೊಂಡರೆ ಮುಂದಿನ ವಾರ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾಗುತ್ತೆ.

ನಮ್ಮತನ ಇರುವ ನಮ್ಮ ಸಿನಿಮಾ ಟಗರು ಪಲ್ಯ: ಅಮೃತಾ ಪ್ರೇಮ್

ಜನರನ್ನು ಥಿಯೇಟರ್‌ಗೆ ಕರೆತರುವ ಸಿನಿಮಾದ ಆಸಕ್ತಿದಾಯಕ ಅಂಶಗಳು?

ಇದು ಕಾಲ್ಪನಿಕ ಅಸಂಗತ ಕಥೆ, ಅಸಹಜ ಲವ್‌ಸ್ಟೋರಿ. ಕವಿತೆಯಂತೆ ಕತೆ ಹೇಳಿದ್ದೇನೆ. ಸಿನಿಮಾದಲ್ಲಿರುವುದು ಐದೇ ಪಾತ್ರಗಳು. ಶೀರ್ಷಿಕೆಯೇ ಕುತೂಹಲ ಮೂಡಿಸುವಂತಿದೆ. ಒಂದೇ ಜಾಗಕ್ಕೆ ಒಂದು ಗಂಡು, ಒಂದು ಹೆಣ್ಣು ಹೋದರೆ ಇಬ್ಬರು ಹೇಳುವ ಕತೆ ಎರಡು ಬಗೆಯಲ್ಲಿರುತ್ತದೆ. ಹಾಗೇ ಒಬ್ಬ ನಾಯಕಿಯಾಗಿ, ನಿರ್ದೇಶಕಿಯಾಗಿ ನಾನು ಕಥೆಯನ್ನು ನಿರೂಪಿಸುವ ರೀತಿ ಭಿನ್ನವಾಗಿರುತ್ತದೆ. ಉಳಿದಂತೆ ಒಂದು ಖಾಲಿ ಮನೆ, ಅದರ ಸುತ್ತ ನಡೆಯುವ ಘಟನಾವಳಿಗಳು ಪ್ರೇಕ್ಷಕರನ್ನು ಕುರ್ಚಿ ತುದಿಯಲ್ಲಿ ಕೂರಿಸುವ ವಿಶ್ವಾಸವಿದೆ.