ಗರಡಿಯಲ್ಲಿ 15 ವರ್ಷ ಹಿಂದಿನ ದರ್ಶನ್ ಸಿಕ್ತಾರೆ: ಬಿ.ಸಿ. ಪಾಟೀಲ್
ಯೋಗರಾಜ್ ಭಟ್ ನಿರ್ದೇಶನ, ಯಶಸ್ ಸೂರ್ಯ, ಸೋನಲ್ ಮೊಂತೆರೋ ನಟನೆಯ 'ಗರಡಿ' ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೌರವ ಬ್ಯಾನರ್ ನಡಿ ಈ ಸಿನಿಮಾ ನಿರ್ಮಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿದ ಬಿಸಿ. ಪಾಟೀಲ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಪ್ರಿಯಾ ಕೆರ್ವಾಶೆ
ಇಂಡಸ್ಟ್ರಿಯ ಕಾಗುಣಿತ ಅರಿತವರು ನೀವು, ಗರಡಿಯಂಥಾ ಭಿನ್ನ ಮಾದರಿಯ ಸಿನಿಮಾ ನಿಮ್ಮ ಮನಸ್ಸು ಗೆದ್ದಿದ್ದು ಹೇಗೆ?
ನಶಿಸಿ ಹೋಗುತ್ತಿರುವ ದೇಸಿ ಆಟವನ್ನು ಪುನರುಜ್ಜೀವನಗೊಳಿಸಬೇಕು ಅನ್ನೋದು ಈ ಸಿನಿಮಾ ನಿರ್ಮಿಸೋದಕ್ಕೆ ಮುಖ್ಯ ಕಾರಣ. ಕ್ರೀಡೆ ಬಗ್ಗೆ ಬಂದಿರೋ ಸಿನಿಮಾಗಳು ಯಾವತ್ತೂ ಸೋತಿಲ್ಲ. ಜೊತೆಗೆ ಹಳೆಯ ಸಂಗತಿಗಳನ್ನು ಮರೆಯಬಾರದು. ಇವತ್ತು ಗರಡಿ ಮನೆಗಳು ಕ್ಷೀಣಿಸುತ್ತಿವೆ. ಅವುಗಳ ಜಾಗವನ್ನು ಜಿಮ್‌ಗಳು ಆಕ್ರಮಿಸಿಕೊಂಡಿವೆ. ನಮ್ಮಲ್ಲಿ ಹಲವರಿಗೆ ಗರಡಿ ಮನೆಗಳ ವೈಭವದ ಬಗ್ಗೆ ಗೊತ್ತಿಲ್ಲ. ಒಂದು ಕಾಲದಲ್ಲಿ ಅವು ಊರು ಕಾಯೋ ಪೊಲೀಸ್ ಸ್ಟೇಶನ್‌ಗಳಾಗಿದ್ದವು. ಊರ ತಾಯಂದಿರು ಸ್ವಂತ ಮಕ್ಕಳಂತೆ ಈ ಪೈಲ್ವಾನರನ್ನು ಪೊರೆಯುತ್ತಿದ್ದರು. ಇದೆಲ್ಲ ನಮ್ಮ ಸಿನಿಮಾ ಮೂಲಕ ಮತ್ತೆ ಜನರ ಮನೆ, ಮನಗಳಿಗೆ ತಲುಪಲಿದೆ.
ಯೋಗರಾಜ್ ಭಟ್ಟರ ನಿರ್ದೇಶನದ ಬಗ್ಗೆ ಹೇಳೋದಾದ್ರೆ?
ಅವರು ಮೊದಲ ಬಾರಿ ಸ್ಕ್ರಿಪ್ಟ್ ಮಾಡಿಕೊಂಡು ಬಂದಾಗ ಮೊದಲ ಭಾಗ ಇಷ್ಟ ಆಯ್ತು. ಎರಡನೇ ಸಲ ಪರಿಷ್ಕೃತ ಸ್ಕ್ರಿಪ್ಟ್ ತಂದಾಗ ಶೇ.80ರಷ್ಟು ಚೆನ್ನಾಗಿದೆ ಅನಿಸಿತು. ಮೂರನೇ ಬಾರಿ ಕಂಪ್ಲೀಟ್ ಸ್ಕ್ರಿಪ್ಟ್‌ಅನ್ನು ಓಕೆ ಮಾಡಿದೆ. ಅವರು ಗರಡಿ ಸಿನಿಮಾ ನಿರ್ದೇಶನ ಮಾಡುತ್ತಾರೆ ಅಂದಾಗ ಒಂದಿಷ್ಟು ಜನ, ಪ್ರೇಮ ಕತೆ ಹೇಳೋ ಭಟ್ಟರು ಗರಡಿಯಂಥಾ ಸಿನಿಮಾ ಹೇಗೆ ಮಾಡ್ತಾರೆ ಅಂತ ಪ್ರಶ್ನೆ ಮಾಡಿದರು. ಒಬ್ಬ ಪ್ರತಿಭಾವಂತ ನಿರ್ದೇಶಕ ಯಾವ ವಿಷಯ ಕೊಟ್ಟರೂ ಅದ್ಭುತವಾಗಿ ಸಿನಿಮಾ ಮಾಡುತ್ತಾನೆ ಅನ್ನೋದು ನನ್ನ ನಂಬಿಕೆ. ಅದು ಈ ಸಿನಿಮಾದಲ್ಲಿ ಸಾಕಾರಗೊಂಡಿದೆ.
ರಾಣಿಬೆನ್ನೂರಿನಲ್ಲಿ D-ಬಾಸ್; ಅಬ್ಬಬ್ಬಾ!!! ಗರಡಿ ಟ್ರೇಲರ್ ಲಾಂಚ್‌ನಲ್ಲಿ ಏನಾಯ್ತು ನೋಡಿ
ದರ್ಶನ್ ಯಂಗ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ?
ಹೌದು. 15 ವರ್ಷ ಹಿಂದಿನ ದರ್ಶನ್ ನಿಮಗಿಲ್ಲಿ ಸಿಗುತ್ತಾರೆ. ಅವರ ಪಾತ್ರಕ್ಕೊಂದು ಒಳ್ಳೆಯ ಹಿನ್ನೆಲೆ ಇದೆ. ಆರಂಭದಿಂದಲೇ ಚಿತ್ರದಲ್ಲಿ ಅವರ ಪಾತ್ರ ಇರುತ್ತದೆ. ಸಿನಿಮಾ ಆರಂಭಕ್ಕೂ ಮುನ್ನ ದರ್ಶನ್ ಅವರಿಗೆ ಈ ಕಥೆ ಹೇಳಿದ್ದೆವು. ಹೊಸಬರನ್ನು ಹಾಕಿ ಸಿನಿಮಾ ಮಾಡುವ ಇಂಗಿತವನ್ನೂ ತಿಳಿಸಿದ್ದೆವು. ಆಗ ಅವರು ತಮ್ಮ ಸ್ನೇಹಿತ ಯಶಸ್ ಸೂರ್ಯ ಅವರನ್ನು ಆ ಪಾತ್ರಕ್ಕೆ ಹಾಕಿಕೊಳ್ಳಲು ಹೇಳಿದರು. ಅವರಿಗೆ ಬೆಂಬಲವಾಗಿ ತಾನೂ ಒಂದು ಪಾತ್ರದಲ್ಲಿ ನಟಿಸೋದಾಗಿ ಹೇಳಿದರು. ಸಿನಿಮಾದಲ್ಲಿ ದರ್ಶನ್ ಎಂಟ್ರಿಯೇ ಸಖತ್ತಾಗಿದೆ.
ನಿಮ್ಮ ಅಳಿಯನೇ ವಿಲನ್ ಆಗಿದ್ದಾರೆ?
ಹೌದು. ನನ್ನ ಅಳಿಯ ಸುಜಯ್ ಬೇಲೂರು ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಆತನದು ಜಿಮ್ ಬಾಡಿ. ಈ ಪಾತ್ರಕ್ಕಾಗಿ ಸಾಕಷ್ಟು ಸಮಯ ಗರಡಿ ಮನೆಯಲ್ಲಿ ತರಬೇತಿ ಪಡೆದಿದ್ದಾರೆ. ನಾಯಕ ಯಶಸ್ ಸೂರ್ಯ ಅವರೂ ಮೂರು ತಿಂಗಳು ತರಬೇತಿ ಪಡೆದಿದ್ದಾರೆ. ಜೊತೆಗೆ ನೈಜ ಪೈಲ್ವಾನರೇ ಸಿನಿಮಾದಲ್ಲಿ ನಟಿಸಿರೋದು ವಿಶೇಷ.
ಗರಡಿಯಲ್ಲಿ ಗಂಡ್ಮಕ್ಕಳೇ ಅರೆಬಟ್ಟೆಯಲ್ಲಿ: ಸೋನಲ್ ಮೊಂತೆರೋ
ಎಷ್ಟು ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ?
ದೇಶಾದ್ಯಂತ 250 ಸ್ಕ್ರೀನ್‌ಗಳಲ್ಲಿ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ದೆಹಲಿ, ಒರಿಸ್ಸಾ, ಹರಿಯಾಣ ಮೊದಲಾದೆಡೆಯೂ ರಿಲೀಸ್ ಆಗ್ತಿದೆ. ಹಿಂದಿ, ತೆಲುಗು, ತಮಿಳು ಮೊದಲಾದ ಭಾಷೆಗಳಿಗೆ ಸಿನಿಮಾ ಡಬ್ ಆಗಲಿದೆ. ಒಟ್ಟಾರೆ ಚಿತ್ರದಲ್ಲಿ ಪಾರಂಪರಿಕ ಗರಡಿ ಮನೆ, ಪೈಲ್ವಾನರ ತಲೆಮಾರು, ಅವರ ಬದುಕಿನ ಏರಿಳಿತಗಳನ್ನು ಪರಿಣಾಮಕಾರಿಯಾಗಿ ದಾಖಲಿಸಲಾಗಿದೆ. ಇದೊಂದು ಕಾಡುವ ಸಿನಿಮಾವಾಗಿ ಜನರ ಮನಸ್ಸಲ್ಲಿ ಉಳಿಯುವ ವಿಶ್ವಾಸ ಇದೆ.