Asianet Suvarna News Asianet Suvarna News

ನನಗೂ ಕೋಟಿ ಥರ ಇರಬೇಕು ಅಂತ ಆಸೆ: ಡಾಲಿ ಧನಂಜಯ್‌

ಡಾಲಿ ಧನಂಜಯ ನಟನೆಯ, ಪರಮ್ ನಿರ್ದೇಶನದ, ಜಿಯೋ ಸ್ಟುಡಿಯೋಸ್ ನಿರ್ಮಾಣದ ಕೋಟಿ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಧನಂಜಯ್ ಸಂದರ್ಶನ.

Sandalwood Actor Dolly Dhananjay Talks About Kotee Movie gvd
Author
First Published Jun 14, 2024, 12:34 PM IST

ರಾಜೇಶ್ ಶೆಟ್ಟಿ

* ಕೋಟಿ ನಿಮಗೆ ಕೊಟ್ಟ ಖುಷಿ ಯಾವುದು? 
ಕೋಟಿ ತುಂಬಾ ಖುಷಿ ಕೊಟ್ಟ ಸಿನಿಮಾ. ನನ್ನ ಅತ್ಯಂತ ಫೇವರಿಟ್ ಪಾತ್ರಗಳಲ್ಲಿ ಕೋಟಿ ಒಂದು. ಒಂದು ಜೀವ ಹೀಗೂ ಬದುಕಬಹುದಾ ಅನ್ನಿಸುವ ಪಾತ್ರ. ಅವನು ಕಳ್ಳತನ ಮಾಡಲ್ಲ. ಮೋಸ ಮಾಡಲ್ಲ. ಇನ್ನೊಬ್ಬರ ದುಡ್ಡಿಗೆ ಆಸೆ ಪಡಲ್ಲ. ಒಂದು ಕೋಟಿ ರೂಪಾಯಿಯನ್ನು ನಿಯತ್ತಾಗಿ ದುಡಿಯಬೇಕು ಅಂತ ಹಂಬಲಿಸುತ್ತಿರುತ್ತಾನೆ. ಪರಮ್‌ ಒಂದು ಹೊಸ ರೀತಿಯ ಕತೆಯನ್ನು ಬರೆದಿದ್ದಾರೆ. ಹೊಸತಾಗಿ ಕಾಣಿಸುವ ಅನೇಕ ಅಂಶಗಳಿವೆ. 

* ಈ ಸಿನಿಮಾ ಉಳಿಸಿಹೋದ ಸಂಕಟ ಯಾವುದು?
ನನಗೂ ಕೋಟಿಯ ಹಾಗೇ ಬದುಕಬೇಕು ಅನ್ಸತ್ತೆ. ಆದರೆ ಹಾಗೆ ಇರುವುದು ತುಂಬಾ ಕಷ್ಟ. ಆ ಭಾವ ಬಹಳ ಕಾಡುತ್ತದೆ. ನಿಮಗೆ ಸಿನಿಮಾ ನೋಡಿದರೆ ಅದು ತಿಳಿಯುತ್ತದೆ.

ಚಿತ್ರದ ಕತೆ ನನ್ನನ್ನು ತೀವ್ರವಾಗಿ ಕಾಡಿತು: ಪರಮ್, ಧನಂಜಯ್‌ ಜೋಡಿಯ 'ಕೋಟಿ' ಕನಸು

* ಈ ಸಿನಿಮಾ ಯಾಕೆ ವಿಶೇಷ?
ಬೇರೆ ಬೇರೆ ಥರದ ಮಾಸ್‌ ಸಿನಿಮಾಗಳ ಮಧ್ಯೆ ಇದೊಂದು ಫ್ಯಾಮಿಲಿ ಸಿನಿಮಾ ಬಂದಿದೆ. ಮಿಡ್ಲ್‌ ಕ್ಲಾಸ್‌ ಕುಟುಂಬದ ಕತೆ. ಮೊದಲು ಬಹಳ ಈ ಥರದ ಸಿನಿಮಾ ಬರುತ್ತಿದ್ದವು. ಅಣ್ಣಾವ್ರು, ಅನಂತ್‌ನಾಗ್‌ ಸರ್‌ ಸಿನಿಮಾಗಳನ್ನು ಕುಟುಂಬಪೂರ್ತಿ ಹೋಗಿ ನೋಡುತ್ತಿದ್ದರು. ಇದೂ ಅದೇ ಥರದ ಸಿನಿಮಾ. ಈ ಸಿನಿಮಾದ ಮೂಲಕ ನಾನು ದಾಟಿ ಬಂದ ಅದೆಷ್ಟೋ ತಿರುವುಗಳಿಗೆ ಮತ್ತೆ ಭೇಟಿ ಕೊಟ್ಟು ಬಂದಂತೆ ಭಾಸವಾಯಿತು.

* ಕೋಟಿ ಏನನ್ನು ಉಳಿಸಿ ಹೋಗುತ್ತಾನೆ?
ಕೋಟಿಯ ಪಾತ್ರವೇ ತುಂಬಾ ದಿನ ಮನಸ್ಸಲ್ಲಿ ಉಳಿಯುತ್ತದೆ. ಅವನು ಕರಪ್ಟ್ ಆಗ್ತಾನಾ, ಆದ್ರೆ ಅಯ್ಯೋ ಯಾಕೆ ಹಾಗಾದ ಅಂತ, ಕರಪ್ಟ್ ಆಗದಿದ್ರೆ ತುಂಬಾ ಕಷ್ಟ ಯಾಕಾಯ್ತು ಅಂತ ಅನ್ನಿಸುತ್ತಾ ಹೋಗುತ್ತದೆ. ಸಿನಿಮಾಗೆ ಒಂದು ಒಳ್ಳೆಯ ಕತೆ ಬೇಕು. ಈ ಕತೆ ಕೇಳಿದಾಗ ಇದೂ ಅಂಥಾ ಒಳ್ಳೆಯ ಕತೆ ಅನ್ನಿಸಿತು. ಮಧ್ಯಮ ವರ್ಗದ ಕುಟುಂಬದ ತವಕ ತಲ್ಲಣಗಳಿವೆ ಇಲ್ಲಿ. ಒಂದು ಒಳ್ಳೆಯ ಕತೆ ಓದಿದಾಗ ಆಗುವ ಖುಷಿ ಈ ಸಿನಿಮಾ ನೋಡಿದಾಗ ಆಗುತ್ತದೆ.

* ನಿಮ್ಮನ್ನು ತಾಕುವ ಸಿನಿಮಾ ಹೇಗಿರುತ್ತದೆ?
ತಲೆಗಿಂತ ಜಾಸ್ತಿ ಹೃದಯಕ್ಕೆ ತಾಕುವಂತಿರಬೇಕು. ಕುಟುಂಬವೆಲ್ಲಾ ಕೂತು ನೋಡುವ ಮಾಸ್ ಸಿನಿಮಾ ಆಗಿರಬೇಕು. ಈ ಸಿನಿಮಾ ಅಂಥಾ ಗುಣ ಹೊಂದಿದೆ.

* ಕಲರ್ಸ್‌ ಕನ್ನಡ ಕಟ್ಟಿದ ಪರಮ್‌ ನಿರ್ದೇಶನದ ಮೊದಲ ಸಿನಿಮಾ ಇದು, ಅವರ ನಿರ್ದೇಶನ ಹೇಗಿತ್ತು?
ಪರಮ್‌ ತುಂಬಾ ಒಳ್ಳೆಯ ಕತೆಗಾರ, ಬರಹಗಾರ. ತುಂಬಾ ಚೆನ್ನಾಗಿ ಕೆಲಸ ಗೊತ್ತು ಅವರಿಗೆ. ಅವರು ಅಷ್ಟು ದೊಡ್ಡ ಹುದ್ದೆ ಬಿಟ್ಟು ಸಿನಿಮಾ ಮಾಡಲು ಬಂದಾಗಲೇ ಅವರು ಅರ್ಧ ಗೆದ್ದಿದ್ದರು. ಆ ಥರದ್ದೊಂದು ನಿರ್ಧಾರ ತಗೊಳೋದು ತುಂಬಾ ಕಷ್ಟ. ಈ ಸಿನಿಮಾ ಮಾಡಿದ್ದೇ ನನ್ನ ಗೆಲುವು ಅಂತ ಹೇಳಿದ್ದಾರೆ ಅವರು. ಈಗ ಆರ್ಥಿಕವಾಗಿ ಸಿನಿಮಾ ಗೆಲ್ಲಬೇಕು. 

ಡಾಲಿ ಧನಂಜಯ್‌ ಅವರ ಕೆರಿಯರ್‌ನಲ್ಲಿ ಮೈಲುಗಲ್ಲಾಗುವ ಸಿನಿಮಾ 'ಕೋಟಿ': ಪರಮೇಶ್ವರ್ ಗುಂಡ್ಕಲ್

* ನಾಳೆಯನ್ನು ಹೇಗೆ ಕಾಣುತ್ತೀರಿ? 
ಜನರು ಒಳ್ಳೆಯ ಸಿನಿಮಾ ಮಾಡಿದಾಗ ಖಂಡಿತಾ ಬರುತ್ತಾರೆ. ಆ ಒಳ್ಳೆಯ ಸಿನಿಮಾ ಮಾಡಲು ನಾವು ಸತತ ಪ್ರಯತ್ನ ಮಾಡುತ್ತಿರುತ್ತೇವೆ. ಅನಿಶ್ಚಿತತೆಯೇ ಕಲಾವಿದರ ಬದುಕು. ನಾವು ಒಂದೊಳ್ಳೆ ಶುಕ್ರವಾರಕ್ಕಾಗಿ ಸದಾ ಕಾಯುತ್ತಿರುತ್ತೇವೆ.

Latest Videos
Follow Us:
Download App:
  • android
  • ios