ಪಾತ್ರ ಚಿತ್ರಣ. ಸಾಮಾನ್ಯವಾಗಿ ಒಬ್ಬ ನಾಯಕ ನಟನನ್ನು ಪರಿಚಯಿಸುವಾಗ ದೊಡ್ಡ ಪ್ರಮಾಣದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ. ಪಾತ್ರದ ಶೇಡ್ಸ್‌ ಅದ್ಭುತವಾಗಿತ್ತು ಎಂದು ಪ್ರಿಯಾ ಸುದೀಪ್ ಸಂದರ್ಶನದಲ್ಲಿ ಹೇಳಿದರು.

- ರಾಜೇಶ್ ಶೆಟ್ಟಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

* ಮ್ಯಾಂಗೋ ಪಚ್ಚ ಕತೆಯನ್ನು ಆರಿಸಿಕೊಳ್ಳಲು, ನಿರ್ಮಾಣ ಮಾಡಲು ಮುಖ್ಯ ಪ್ರೇರಣೆ ಏನು?

ನೈಜ ಘಟನೆಗಳನ್ನು ಆಧರಿಸಿದ ಕತೆ ಇದು. ಈ ಕತೆ ನಡೆಯುವ ಕಾಲದ ಮೈಸೂರಿನ ವಾತಾವರಣ ನನ್ನ ಬಾಲ್ಯವನ್ನು ನೆನಪಿಸುತ್ತಿತ್ತು. ಜೊತೆಗೆ ಈ ಕತೆ, ಪಾತ್ರ ಸಂಚಿತ್‌ಗೆ ತುಂಬಾ ಚೆನ್ನಾಗಿ ಹೊಂದಿಕೆಯಾಗುತ್ತಿತ್ತು. ಅದು ಮೊದಲ ಪ್ರೇರಣೆ. ಅಲ್ಲದೇ, ಈ ಕತೆಯನ್ನು ತುಂಬಾ ವಿಭಿನ್ನವಾಗಿ ನಿರೂಪಿಸಿದ್ದಾರೆ. ನಾನಂತೂ ಈ ರೀತಿಯ ಸಿನಿಮಾವನ್ನು ಕನ್ನಡದಲ್ಲಿ ನೋಡಿಲ್ಲ.

* ನಿರ್ಮಾಪಕಿಯಾಗಿ ನಿಮಗೆ ಈ ಕತೆಯಲ್ಲಿ ಕಂಡ ಪ್ಲಸ್‌ಪಾಯಿಂಟ್‌ ಏನು?

ಪಾತ್ರ ಚಿತ್ರಣ. ಸಾಮಾನ್ಯವಾಗಿ ಒಬ್ಬ ನಾಯಕ ನಟನನ್ನು ಪರಿಚಯಿಸುವಾಗ ದೊಡ್ಡ ಪ್ರಮಾಣದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ. ಆದರೆ ನಮಗೆ ಈ ಕತೆ ಮತ್ತು ಪಾತ್ರದ ಮೇಲೆ ಅಪಾರ ನಂಬಿಕೆ ಇತ್ತು. ಆ ಪಾತ್ರದ ಶೇಡ್ಸ್‌ ಅದ್ಭುತವಾಗಿತ್ತು. ಆ ಪಾತ್ರವೇ ಸಂಚಿತ್‌ನನ್ನು ಡಿಫರೆಂಟಾಗ್ ಕಾಣಿಸುವಂತಿತ್ತು. ಹಾಗಾಗಿ ನಾವು ಆ ಪಾತ್ರದ ಮೇಲೆ ಭರವಸೆ ಇಟ್ಟೆವು. ಅದೇ ಕಾರಣದಿಂದ ನಾವು ಬೇರೆ ಯಾವುದೇ ಅಂಶಗಳನ್ನು ಸೇರಿಸಿಲ್ಲ. ಬೇಕಿದ್ದರೆ ಸುದೀಪ್‌ ಅವರನ್ನು ಒಂದೆರಡು ಸೀನ್‌ಗಳಲ್ಲಿ ನಟಿಸಿ ಅಂತ ಕೇಳಬಹುದಿತ್ತು. ಆದರೆ ಕತೆಗೆ ಸರಿ ಹೊಂದುವುದಿಲ್ಲ ಎಂಬ ಕಾರಣಕ್ಕೆ ನಾವು ಆ ಪ್ರಯತ್ನ ಮಾಡಿಲ್ಲ. ಕತೆಗೆ ಏನು ನ್ಯಾಯ ಸಲ್ಲಬೇಕೋ ಅದು ಸಂದಿದೆ.

* ನಿರ್ಮಾಪಕಿಯಾಗಿ ಈ ಚಿತ್ರಕ್ಕೆ ನೀವೇನಾದರೂ ಸಲಹೆ, ಸೂಚನೆ ಕೊಟ್ಟಿದ್ದಿದೆಯೇ?

ನಿರ್ಮಾಪಕಿಯಾಗಿ ಅಲ್ಲ, ಸುದೀಪ್‌ ಪತ್ನಿಯಾಗಿ, ಅವರ ಅಭಿಮಾನಿಯಾಗಿ ಸಲಹೆ ಕೊಟ್ಟೆ. ಈ ಸಿನಿಮಾದಲ್ಲಿ ಸುದೀಪ್‌ ಅವರಿಗೋಸ್ಕರ ಸಣ್ಣ ಟ್ರಿಬ್ಯೂಟ್ ಕೊಡಬೇಕು ಅನ್ನುವುದು ನನ್ನ ಆಸೆಯಾಗಿತ್ತು. ಹಾಗಾಗಿ ಇಂಟ್ರೊಡಕ್ಷನ್‌ ಸೀನ್‌ ಹೇಗಿದ್ದರೆ ಚೆಂದ ಅಂತ ಐಡಿಯಾ ತಿಳಿಸಿದೆ. ಎಲ್ಲರೂ ಇಷ್ಟ ಪಟ್ಟರು. ಆ ಸೀನ್‌ ಅನ್ನು ಸುದೀಪ್‌ ಅವರ ಎಲ್ಲಾ ಅಭಿಮಾನಿಗಳು ಇಷ್ಟ ಪಡುತ್ತಾರೆ ಅನ್ನುವ ನಂಬಿಕೆ ನನಗಿದೆ.

* ಸಂಚಿತ್ ಸಂಜೀವ್‌ ತಾಳ್ಮೆಯಿಂದ ಕಾಯುತ್ತಿದ್ದ ಸಮಯ ಈಗ ಬಂದಿದೆ. ಅವರ ಈ ಪಯಣ ಹೇಗಿತ್ತು?

ಅವನು ತುಂಬಾ ಸುಲಭವಾಗಿ ಬಂದಿಲ್ಲ. ಶ್ರಮಪಟ್ಟು ಇಲ್ಲಿಯವರೆಗೂ ಬಂದಿದ್ದಾನೆ. ಓದಿನಲ್ಲಿ ಅಂಥಾ ಆಸಕ್ತಿ ಏನೂ ಇರಲಿಲ್ಲ. ಫೋಟೋಗ್ರಫಿ ಅಂದ್ರೆ ಬಹಳ ಇಷ್ಟವಿತ್ತು. ಪಿಯುಸಿ ಆದ ಮೇಲೆ ಅವನು ಒಂದು ದಿನ ಬಂದು ದೀಪು ಹತ್ತಿರ ಚಿತ್ರರಂಗ ಸೇರುವ ಆಸೆಯನ್ನು ಹೇಳಿದ. ಅವನಿಗೆ ನಿರ್ದೇಶನ ಮಾಡುವ ಆಸೆ ಇತ್ತು. ವಿವರವಾಗಿ ಮಾತನಾಡಿದ ಮೇಲೆ, ಸುದೀಪ್‌ ಅವರು ಅವನಿಗೆ ನ್ಯೂಯಾರ್ಕ್‌ನಲ್ಲಿ ಫಿಲಂ ಕೋರ್ಸ್‌ ಮಾಡಲು ಕಳುಹಿಸಿದರು. ಅಲ್ಲಿಂದ ಬಂದು ಸುದೀಪ್‌ ನಿರ್ದೇಶನದ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ. ಸುದೀಪ್‌ರಿಂದ ಬೈಸಿಕೊಂಡ. ಆಗಲೇ ಸ್ಕ್ರೀನ್‌ನಲ್ಲಿ ಬಹಳ ಚೆನ್ನಾಗಿ ಕಾಣಿಸುತ್ತಾನೆ ಎಂಬ ಅಭಿಪ್ರಾಯವನ್ನು ಸಾಕಷ್ಟು ಜನ ಹೇಳಿದರು. ಆಮೇಲೆ ‘ಜಿಮ್ಮಿ’ ಸ್ಕ್ರಿಪ್ಟ್‌ ಬರೆದ. ಈಗ ಕನ್ನಡಿಗರ ಪ್ರೀತಿಗಾಗಿ ನಿಮ್ಮೆದುರು ಬಂದಿದ್ದಾನೆ. ನಮ್ಮನೆ ಮಗುವನ್ನು ಕನ್ನಡಿಗರು ಅವರ ಮನೆಮಗುವಾಗಿಸುವ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೇವೆ.

* ಈ ಕತೆ ಕೇಳಿದಾಗ ಸುದೀಪ್‌ ಅ‍ವರ ಪ್ರತಿಕ್ರಿಯೆ ಹೇಗಿತ್ತು?

ಸುದೀಪ್‌ ಅವರಿಗೆ ಕತೆ ಹೇಳುವುದು ತುಂಬಾ ಇರಿಟೇಟ್‌ ಆಗುವ ಪ್ರಕ್ರಿಯೆ. ಕತೆ ಹೇಳುತ್ತಿದ್ದರೆ ಅವರ ಮುಖದಲ್ಲಿ ಯಾವುದೇ ಭಾವನೆಗಳೇ ಇರುವುದಿಲ್ಲ. ಕತೆ ಪೂರ್ತಿಯಾದ ಮೇಲೆ ಯೋಚನೆ ಮಾಡಿ ಹೇಳುತ್ತೇನೆ ಅನ್ನುತ್ತಾರೆ, ಅಷ್ಟೇ. ನಾವೆಲ್ಲಾ ಕತೆ ಕೇಳಿದ ಮೇಲೆ, ಅವರಿಗೆ ಕತೆ ಹೇಳಿಸಿದೆವು. ಕತೆ ಪೂರ್ತಿಯಾಗಿ ಕೇಳಿ, ಸಂಚಿತ್‌ ಬಳಿ ನಿನಗೆ ಇಷ್ಟವಾಯಿತೇ ಎಂದು ಕೇಳಿದರು. ನಾವೆಲ್ಲರೂ ಇಷ್ಟಪಟ್ಟಿದ್ದೆವು. ಹಾಗಾದರೆ ಈ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂದರು.

* ಈ ಪಯಣದಲ್ಲಿ ಅವರ ಜೊತೆ ಸಿನಿಮಾ ಕುರಿತು ಚರ್ಚಿಸುತ್ತಿದ್ರಾ?

ನಾನು ಚಿತ್ರೀಕರಣಕ್ಕೆ ಹೋಗಿ ಬಂದಾಗೆಲ್ಲಾ ಅವರ ಜೊತೆ ಏನೇನು ನಡೆಯಿತು ಎಲ್ಲವನ್ನೂ ಹೇಳುತ್ತಿದ್ದೆ. ಬಹಳ ಸಲ ಅವರು ಅವರ ಅನುಭವದ ಆಧಾರದ ಮೇಲೆ ತಪ್ಪುಗಳನ್ನು ಕಂಡುಹಿಡಿದು ಹೇಳುತ್ತಿದ್ದರು. ಸಾಕಷ್ಟು ಒಳ್ಳೆಯ ಐಡಿಯಾಗಳನ್ನು ಹೇಳಿದ್ದಾರೆ. ಅದರಿಂದ ನನಗೆ ಸಹಾಯವಾಗಿದೆ. ನಮ್ಮ ತಂಡದಲ್ಲಿ ಬಹುತೇಕ ಯುವ ಪ್ರತಿಭೆಗಳೇ ಇದ್ದಾರೆ. ಅವರಿಗೆಲ್ಲಾ ಸುದೀಪ್‌ ಸೆಟ್‌ಗೆ ಬರಬೇಕು ಅಂತ ಆಸೆ ಇತ್ತು. ನಾನು ಹೇಳಿದ ಮೇಲೆ, ಕ್ಲೈಮ್ಯಾಕ್ಸ್‌ ಶೂಟಿಂಗ್‌ ಇದ್ದ ದಿನ ಸೆಟ್‌ಗೆ ಬಂದರು. ಅವರು ಅಲ್ಲಿ ಕೂತಲ್ಲಿ ಕೂರಲ್ಲ. ಸೆಟ್‌ ಪ್ರಾಪರ್ಟಿ ಸರಿ ಮಾಡುವುದು. ಚಿತ್ರೀಕರಣ ನೋಡುವುದು. ಆ ಎರಡು ದಿನ ಸೆಟ್‌ ತುಂಬಾ ಲೈವ್ಲಿಯಾಗಿತ್ತು.

* ನಿರ್ಮಾಣ ನಿಮಗೆ ಎಷ್ಟು ಸವಾಲಾಗಿತ್ತು?

ನನಗೆ ಒಂದು ಒಳ್ಳೆಯ ತಂಡವಿತ್ತು. ಕಾರ್ತಿಕ್‌ ಮತ್ತು ಯೋಗಿ ರಾಜ್‌ ನನಗೆ ಹೆಚ್ಚು ಒತ್ತಡ ಆಗದ ಹಾಗೆ ನೋಡಿಕೊಂಡರು. ಎಲ್ಲವನ್ನೂ ನಾವು ಮಾದಲೇ ಮಾತಾಡಿಕೊಂಡಿರುತ್ತಿದ್ದೆವು. ನಾನು ಚಿತ್ರೀಕರಣಕ್ಕೆ ಹೋಗಿದಿದ್ದರೂ ಆ ದಿನದ ಎಲ್ಲಾ ಮಾಹಿತಿ ನನಗೆ ತಲುಪುತ್ತಿದ್ದವು. ನಿರ್ದೇಶಕ ವಿವೇಕ್‌ ಸೇರಿದಂತೆ ಇಡೀ ತಂಡ ಸೊಗಸಾಗಿ ಕಾರ್ಯನಿರ್ವಹಿಸಿದೆ. ಪ್ರಶಾಂತ್‌ ಹಿರೇಮಠ್‌, ಭಾವನಾ, ಮಯೂರ್‌ ಪಟೇಲ್‌, ಉಗ್ರಂ ಮಂಜು ಉತ್ತಮ ಅಭಿನಯ ನೀಡಿದ್ದಾರೆ. ಹಾಗಾಗಿ ಎಲ್ಲವೂ ಸುಲಭವಾಯಿತು.

* ತೃಪ್ತಿ ಇದೆಯೇ?

ಈ ಸಿನಿಮಾ ಮೇಲೆ ಬಹಳ ವಿಶ್ವಾಸ ಇದೆ ನನಗೆ. ಸಿನಿಮಾ ರಿಲೀಸ್‌ ಆಗುತ್ತಿರುವ ಈ ವೇಳೆಯಲ್ಲಿ ಸ್ವಲ್ಪ ನರ್ವಸ್‌ ಆಗಿದ್ದೇನೆ. ಆದರೆ ಸಂಚಿತ್‌ಗೆ ಈ ಸಿನಿಮಾದಿಂದ ಒಳ್ಳೆಯದಾಗುತ್ತಿದೆ, ಅವನು ಹೊಸ ಪಯಣ ಆರಂಭಿಸುತ್ತಿದ್ದಾನೆ ಎಂಬ ಸಾರ್ಥಕತೆ ಇದೆ.

* ಈ ಸಿನಿಮಾದಿಂದ ನೀವು ಕಲಿತ ಪಾಠವೇನು?

1. ಕತೆಯೇ ಸ್ಟಾರ್‌. ವಿಶಿಷ್ಟ ಕತೆಯನ್ನು ಆರಿಸಬೇಕು ಮತ್ತು ಆ ಕತೆಯನ್ನು ನಂಬಬೇಕು. ವಿಭಿನ್ನ ರೀತಿಯಲ್ಲಿ ಆ ಕತೆ ಹೇಳಬೇಕು.

2. ಸಿನಿಮಾ ಒಂದು ಮ್ಯಾಜಿಕ್‌. ಎಡಿಟಿಂಗ್‌ ಟೇಬಲ್‌ನಲ್ಲಿ, ಸಂಗೀತ ಸಂಯೋಜನೆಯಲ್ಲಿ ಸಿನಿಮಾ ಬದಲಾಗುವ ಪ್ರಕ್ರಿಯೆಯನ್ನು ನೋಡಿ ನಾನು ವಿಸ್ಮಿತಳಾಗಿದ್ದೇನೆ. ಈ ಪ್ರಕ್ರಿಯೆ ನನಗೆ ತುಂಬಾ ಖುಷಿ ಕೊಟ್ಟಿದೆ.