ಗೌತಮಿ ಜಾಧವ್ ತೆರೆದಿಟ್ಟ 'ಸತ್ಯ' ಸಮಾಚಾರ

ಪ್ರಖ್ಯಾತಿಯೋ, ಕುಖ್ಯಾತಿಯೋ ಒಟ್ಟಿನಲ್ಲಿ ಖ್ಯಾತಿ ಇದ್ದರೆ ಸಾಕು ಎಂದುಕೊಳ್ಳುವವರೇ ಇರುವಾಗ ನಿಜವಾದ ಜನಪ್ರಿಯತೆ ಪಡೆಯುವವರು ಅಪರೂಪ. ಅದರಲ್ಲಿಯೂ ನಟಿಯಾಗಿ ತಮ್ಮ ಪಾತ್ರದ ಮೂಲಕ ಗಮನ ಸೆಳೆಯುವ ಅವಕಾಶ ತೀರ ಅಪರೂಪ. ಅಂಥ ಸಂದರ್ಭದಲ್ಲಿ ಕಲಾವಿದೆಯಾಗಿ ಮಾತ್ರವಲ್ಲ ತಾರೆಯಾಗಿಯೂ ಗುರುತಿಸಲ್ಪಡುತ್ತಿರುವ ನಟಿ ಗೌತಮಿ ಜಾಧವ್ ಅದರ ಹಿಂದಿನ ಸತ್ಯವನ್ನು ಇಲ್ಲಿ ಹೇಳಿದ್ದಾರೆ.
 

Kannada serial Sathya Fame Actress Gowthami Jadhavs interview

-ಶಶಿಕರ ಪಾತೂರು

ಗೌತಮಿ ಜಾಧವ್ ಎನ್ನುವ ಹೆಸರು ಕಂಡರೆ ಅದರಲ್ಲೊಂದು ಪರಭಾಷೆಯ ಜಾಡು ಇದೆ. ಹಾಗಂತ ಇವರು ಕನ್ನಡದವರಲ್ಲ ಎನ್ನಲಾಗದು. ಯಾಕೆಂದರೆ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ. ಕಾವೇರಿ ವಿದ್ಯಾನಿಕೇತನ್‌ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಬಳಿಕ ವಾಸವಿ ಗರ್ಲ್ಸ್ ಹೈಸ್ಕೂಲ್‌ ನಲ್ಲಿನ ಓದು, ಬಿಎನ್ಎಮ್‌ನಲ್ಲಿ ಪಿಯು ಮುಗಿಸಿದ ಬಳಿಕ ಬಿಕಾಮ್ ಮಾಡಿದ್ದು ಜಯನಗರದ ಪ್ರತಿಷ್ಠಿತ ನ್ಯಾಶನಲ್ ಕಾಲೇಜ್‌ನಲ್ಲಿ.

ಅಲ್ಲಿಂದ ಪ್ಯಾಷನ್ ಡಿಸೈನಿಂಗ್ ವಿಭಾಗದಲ್ಲಿ ತೊಡಗಿಸಿಕೊಂಡರು ಕೂಡ ಹೆಸರು ಮಾಡಿರುವುದು ನಟಿಯಾಗಿ. ಅದರಲ್ಲಿಯೂ ಪ್ರಸ್ತುತ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲೊಂದಾದ `ಸತ್ಯ'ದ ಮೂಲಕ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ತಮ್ಮ ಕಲಾ ಜೀವನ ನಡೆದು ಬಂದ ದಾರಿಯ ಬಗ್ಗೆ ಅವರು ಸುವರ್ಣ ನ್ಯೂಸ್‌.ಕಾಮ್ ಜೊತೆಗೆ ಹಂಚಿಕೊಂಡಿರುವ ಮಾಹಿತಿ ಇದು.

ನಟಿಯಾಗಬೇಕು ಎನ್ನುವ ಗುರಿ ನಿಮ್ಮದಾಗಿದ್ದು ಯಾವಾಗ?

ಹಾಗೆ ಗುರಿ ಇರಿಸಿಕೊಂಡಿರಲಿಲ್ಲ. ಆದರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇತ್ತು. ನಾನು ಚಿಕ್ಕವಳಾಗಿದ್ದಾಗಿನಿಂದಲೇ ನಮ್ಮಮ್ಮ ನನ್ನನ್ನು ಡಾನ್ಸ್‌ ಕ್ಲಾಸ್‌ಗಳಿಗೆ ಕಳಿಸಿ ಪ್ರೋತ್ಸಾಹ ನೀಡಿದ್ದರು. ಪ್ರಥಮ ಪಿಯುಸಿಯಲ್ಲಿದ್ದಾಗಲೇ ಒಂದು ಸಿನಿಮಾದ ಆಡಿಶನ್‌ಗೆ ಹೋಗಿದ್ದೆ. `ಗುರುಕುಲ' ಎನ್ನುವ ಆ ಚಿತ್ರದಲ್ಲಿ ಸಣ್ಣದೊಂದು ಪಾತ್ರಮಾಡಿದ್ದೆ. ಆ ಚಿತ್ರಕ್ಕೆ ಕರೆದೊಯ್ದವರೇ ಮುಂದೆ ಧಾರಾವಾಹಿಯೊಂದರ ಆಡಿಶನ್‌ಗೆ ಕರೆದೊಯ್ದಿದ್ದರು. ಹಾಗೆ ದಶಕದ ಹಿಂದೆಯೇ `ನಾಗಪಂಚಮಿ' ಎನ್ನುವ ಧಾರಾವಾಹಿಯಲ್ಲಿ ನಟಿಸಿದೆ. 
ಅವಲ್ಲದೆ `ಲೂಟಿ', `ಆದ್ಯಾ' ಮತ್ತು ಇತ್ತೀಚೆಗೆ `ಕಿನಾರೆ' ಎನ್ನುವ ಸಿನಿಮಾಗಳಲ್ಲಿಯೂ ನಟಿಸಿದ್ದೇನೆ.  ಇದರ ನಡುವೆ `ಸಂತೋಸತ್ತಿಲ್ ಕಲವರಂ' ಎನ್ನುವ ತಮಿಳು ಚಿತ್ರದಲ್ಲಿಯೂ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದೆ. 

ನಾಗಿಣಿ ಖ್ಯಾತಿಯ ನಿನಾದನ ಮಾತು

ಸಿನಿಮಾದಿಂದ ಧಾರಾವಾಹಿಗೆ ಮರಳುವ ನಿರ್ಧಾರ ಮಾಡಿದ್ದೇಕೆ? 

ವರ್ಷದ ಹಿಂದೆ ನನ್ನ ವಿವಾಹವಾಯಿತು. ಬಳಿಕ ಸಹಜವಾಗಿ ಕೌಟುಂಬಿಕವಾಗಿಯೂ ಸಮಯ ನೀಡಬೇಕಾಗಿತ್ತು. ಆಗ ಕಿರುತೆರೆ ಪಾತ್ರಗಳಾದರೆ ಚಿತ್ರೀಕರಣದ ವಿಚಾರದಲ್ಲಿ ಬೆಂಗಳೂರಲ್ಲೇ ಇದ್ದುಕೊಂಡು ಕೆಲಸ ಮಾಡಬಹುದು ಅನಿಸಿತು. ಹಾಗಾಗಿ ಧಾರಾವಾಹಿಗಳಿಂದ ಉತ್ತಮ ಆಫರ್ ಬಂದಾಗ ಒಪ್ಪಿಕೊಳ್ಳಬೇಕು ಎನ್ನುವ ನಿರ್ಧಾರ ಮಾಡಿದ್ದೆ. ಅದೇ ಸಂದರ್ಭದಲ್ಲಿ `ಸತ್ಯ' ಧಾರಾವಾಹಿಯ ಮೂಲಕ ಒಂದೊಳ್ಳೆಯ ಅವಕಾಶ ದೊರೆಯಿತು. ಹಾಗಾಗಿ ಒಪ್ಪಿಕೊಂಡೆ. ಜನ ಧಾರಾವಾಹಿಯನ್ನು ತುಂಬ ಮೆಚ್ಚಿಕೊಂಡಿದ್ದಾರೆ. ಈ ಪಾತ್ರವನ್ನು ನೋಡಿ ನನಗೆ ಇಂಥದೇ ಪಾತ್ರವೊಂದನ್ನು ನಿಭಾಯಿಸುವಂತೆ ಸಿನಿಮಾದ ಆಫರ್ ಕೂಡ ಬಂತು. ಆದರೆ ನನಗೆ ವೈಯಕ್ತಿಕವಾಗಿ ಈ ರೀತಿಯ ಪಾತ್ರದಲ್ಲಿ ಅಷ್ಟೇನೂ ಒಲವಿಲ್ಲ. ಪ್ಯಾಂಟ್‌, ಶರ್ಟು ಹಾಕಿ ಗಂಡಸಿನಂತೆ ಇರುವುದಕ್ಕಿಂತ ಸೀರೆಯುಟ್ಟು ಜಡೆ ಹಾಕಿರುವ ಪಾತ್ರಗಳನ್ನು ಮಾಡುವ ಆಸೆ ಇದೆ.

ಕನ್ನಡತಿಯ ಪ್ರತಿಭೆ ಪ್ರತಿಮಾ ಎನ್ನುವ ಸಮೀಕ್ಷಾ

ಸತ್ಯ ಪಾತ್ರವನ್ನು ಮಾಡಲು ನಿಮಗೆ ಎದುರಾದ ಸವಾಲುಗಳೇನು?

ಆಗಲೇ ಹೇಳಿದಂತೆ ನಾನು ತುಂಬ ಫೆಮಿನೈನ್ ಆದಂಥ ಬಾಡಿ ಲ್ಯಾಂಗ್ವೇಜ್ ಇರುವಂಥವಳು. ಹಾಗಾಗಿ ನಾಯಕಿಯ ಪ್ರಮುಖ ಹಾವಭಾವಗಳನ್ನು ಸ್ವತಃ ನಿರ್ದೇಶಕಿ ಸ್ವಪ್ನ ಮೇಡಮ್‌ ನಟಿಸಿ ತೋರಿಸುತ್ತಿದ್ದರು. ಈಗಂತೂ ನಾನೇ ಸತ್ಯ ರೀತಿಯಲ್ಲಿ ಮಾತನಾಡಲು ಶುರು ಮಾಡಿದ್ದೇನೆ. ಆರಂಭದಲ್ಲಿ ನನಗೆ ಬೈಕ್ ಓಡಿಸಲು ಬರುತ್ತಿರಲಿಲ್ಲ. ಅದೊಂದು ದೊಡ್ಡ ಸಮಸ್ಯೆಯಾಗಿಯೇ ಕಂಡಿತ್ತು. ಈಗ ನನ್ನ ಬೈಕ್‌ ರೈಡಿಂಗ್‌ ದೃಶ್ಯಗಳನ್ನು ನೀವು ನೋಡಿರುತ್ತೀರಿ. ಆದರೆ ಈಗಲೂ ಬೈಕ್ ಓಡಿಸುವಾಗ ನನ್ನೊಳಗೆ ಭಯ ಇದ್ದೇ ಇರುತ್ತದೆ.  ಹಾಗೆಯೇ ಒಂದಷ್ಟು ಘಟನೆಗಳನ್ನು ರಾತ್ರಿಯಲ್ಲಿ ಶೂಟ್ ಮಾಡಲಾಗುತ್ತಿದೆ. ನನಗೆ ಚೆನ್ನಾಗಿ ನಿದ್ದೆ ಮಾಡೋದು ಅಂದರೆ ತುಂಬ ಇಷ್ಟ. ಆದರೆ ಇತ್ತೀಚೆಗೆ ಅಂಥ ಸವಿನಿದ್ದೆಗೆ ಕತ್ತರಿ ಬಿದ್ದಿರುವುದು ಸವಾಲೇ ಆಗಿದೆ.  ಆದರೆ ಈ ಧಾರಾವಾಹಿಯಿಂದ ಪ್ರೇಕ್ಷಕರು ನೀಡುತ್ತಿರುವ ಅಭಿಮಾನದ ಮುಂದೆ ಅವೆಲ್ಲವೂ ಗೌಣ ಎನ್ನುವಂತಾಗಿದೆ.

ಗಡಿನಾಡಿನಿಂದ ಬಂದ ಯುವನಟ ರಘು ಭಟ್

ಅಭಿಮಾನಿಗಳಿಂದ ಮರೆಯಲಾಗದ ಅಭಿಮಾನ ಸಿಕ್ಕಂಥ ಘಟನೆಗಳೇನಾದರೂ ಇವೆಯೇ?

ತುಂಬಾನೇ ಇವೆ. ಸದ್ಯಕ್ಕೆ ಒಂದನ್ನು ಮಾತ್ರ ಹೇಳುತ್ತೇನೆ. ಈಗ ಅಭಿಮಾನಿಗಳು ಇನ್ಸ್ಟಗ್ರಾಂ, ವಾಟ್ಸಾಪ್‌ ಎಂದು ನೇರವಾಗಿ ಸಂಪರ್ಕಿಸಲು ಬಯಸುವವರೇ ಹೆಚ್ಚು. ಆದರೆ 
ತುಮಕೂರಿನಿಂದ ಒಬ್ಬರು ಚಾನೆಲ್‌ಗೆ ಲೆಟರ್ ಬರೆದಿದ್ದರು. ಅದರಲ್ಲಿ ಅವರು ಧಾರಾವಾಹಿಯಲ್ಲಿನ ನನ್ನ ಪಾತ್ರದ ಬಗ್ಗೆ ವಿವರವಾಗಿ ಬರೆದು ಮೆಚ್ಚುಗೆ ಸೂಚಿಸಿದ್ದರು. ಅದನ್ನು ಚಾನೆಲ್‌ನವರು ನಮ್ಮ ಚಿತ್ರೀಕರಣದ ಸೆಟ್‌ಗೆ ಕಳಿಸಿಕೊಟ್ಟರು.

Kannada serial Sathya Fame Actress Gowthami Jadhavs interview

ಅದು ಹುಡುಗನೊಬ್ಬ ಬರೆದ ಲೆಟರ್ ಆಗಿತ್ತು. ಗಂಡಸರು ಸೀರಿಯಲ್ಸ್ ನೋಡಲ್ಲ ಎನ್ನುವಂಥ ಸಂದರ್ಭದಲ್ಲಿ ನೋಡಿ, ಮೆಚ್ಚಿ ಲೆಟರ್ ಬರೆದು ಕಳಿಸಿದ್ದು ನನಗೆ ತುಂಬಾನೇ ಇಷ್ಟವಾಗಿತ್ತು. ಅದನ್ನು ಅರಗಿಸಿಕೊಳ್ಳೋಕೆ ನಾನು ಸ್ವಲ್ಪ ಸಮಯವನ್ನೇ ತೆಗೆದುಕೊಂಡೆ. ಮಕ್ಕಳು ನನ್ನ ಚಿತ್ರ ಬಿಡಿಸಿ ತಂದುಕೊಡುತ್ತಾರೆ. ಅದು ಕೂಡ ಖಷಿಯಾಗುತ್ತೆ.

Latest Videos
Follow Us:
Download App:
  • android
  • ios