ಆದಿತ್ಯ, ಅಧಿತಿ ಪ್ರಭುದೇವ ನಟನೆಯ , ಕುಮಾರ್- ಸ್ವಾತಿ ಕುಮಾರ್ ದಂಪತಿ ನಿರ್ಮಾಣದ 5ಡಿ ಚಿತ್ರದ ಕುರಿತು ನಿರ್ದೇಶಕ ಎಸ್‌ ನಾರಾಯಣ್ ಮಾತನಾಡಿದ್ದಾರೆ. 

ಆರ್‌. ಕೇಶವಮೂರ್ತಿ

ನಿಮ್ಮ ಮಾತಿನಂತೆ ‘5ಡಿ’ ನಿಮಗೇ ಹೊಸದು ಅನಿಸಿದ್ದೇಗೆ?

ಈ ರೀತಿಯ ಜಾನರ್‌ ಚಿತ್ರವನ್ನು ನಾನು ಇದುವರೆಗೂ ನಿರ್ದೇಶಿಸಿಲ್ಲ. ಮನುಷ್ಯನಿಗೆ ತುಂಬಾ ಅಗತ್ಯವಾಗಿರುವ ಒಂದರ ಸುತ್ತ ನಡೆಯುತ್ತಿರುವ ಮಾಫಿಯಾ ಕತೆ ಇಲ್ಲಿದೆ. ಇಂಥ ಕತೆ ಮೂಲಕ ನಾನೂ ಈ ಜನರೇಷನ್‌ಗೆ ಕನೆಕ್ಟ್‌ ಆಗಿದ್ದೇನೆಂಬ ಖುಷಿ ಇದೆ.

ಮಾಫಿಯಾ ಕತೆ ಹೇಳಿದರೆ ಈ ಜನರೇಷನ್‌ ನಿರ್ದೇಶಕ ಅನಿಸಿಕೊಳ್ಳಬಹುದಾ?

ನನ್ನ ಚಿತ್ರಗಳು ಹೆಚ್ಚಾಗಿ ಕುಟುಂಬ, ಸಂಸಾರ, ಮನರಂಜನೆ, ಪ್ರೀತಿ-ಪ್ರೇಮದ ಸುತ್ತ ಇರುತ್ತಿದ್ದವು. ಈಗ ನಮ್ಮ ಸುತ್ತ ನಡೆಯುತ್ತಿರುವ ಮಾಫಿಯಾ ಮತ್ತು ಆ ವ್ಯವಸ್ಥೆ ಮೇಲೆ ಬೆಳಕು ಚೆಲ್ಲುವ ಸಿನಿಮಾ ಮಾಡಿದ್ದೇನೆ. ಈ ಕಾರಣಕ್ಕೆ ಹಿರಿಯನಾದರೂ ನಾನು ಹೊಸ ಜನರೇಷನ್‌ ನಿರ್ದೇಶಕ ಎನಿಸಿಕೊಂಡಿದ್ದೇನೆ.

ಎಸ್ ನಾರಾಯಣ್-ಆದಿತ್ಯ ಜುಗಲ್ಬಂದಿ ಟೀಸರ್ ಔಟ್; ಲೇಟ್ ಆದ್ರೂ ಲೇಟೆಸ್ಟ್‌ ಅಂತಿದೆ ಟೀಮ್!

ಈ ಚಿತ್ರದ್ದು ಎಂಥ ಕತೆ?

ನಮ್ಮ ರಕ್ತ ನಮಗೇ ಹೇಗೆ ಶತ್ರು ಆಗುತ್ತಿದೆ ಎಂಬುದನ್ನು ಹೇಳುವ ಚಿತ್ರ. ನಮಗೆ ಗೊತ್ತಿಲ್ಲದೆ ನಮ್ಮ ಮೂಲಕ ನಡೆಯುತ್ತಿರುವ ಬ್ಲಡ್‌ ಮಾಫಿಯಾ ಇಲ್ಲಿದೆ. ನಾವು ಕೊಡುವ ರಕ್ತ ನಮ್ಮ ಪ್ರಾಣಕ್ಕೆ ಕುತ್ತು ತರುತ್ತಿದೆ, ನಮ್ಮ ರಕ್ತದಲ್ಲಿ ಕೆಲವರೇ ಶ್ರೀಮಂತರಾಗುತ್ತಿದ್ದಾರೆ, ಒಂದು ಮಾಫಿಯಾಗೆ ನಾವೆಲ್ಲ ಹೇಗೆ ಟೂಲ್‌ಗಳಾಗಿದ್ದೇವೆ. ಭಾರತೀಯ ಚಿತ್ರರಂಗದಲ್ಲೇ ಇಂಥ ಕತೆ ಸಿನಿಮಾ ಆಗಿಲ್ಲ.

ಸಿನಿಮಾ ಕಟ್ಟುವಲ್ಲಿ ಹೊಸತನಗಳೇನಿವೆ?

ತುಂಬಾ ಟ್ರೆಂಡಿಯಾಗಿ ಮಾಡಿದ್ದೇವೆ. ಮೇಕಿಂಗ್‌ ಹೊಸದಾಗಿದೆ. ನಾನು ಹೊಸಬರ ಜತೆಗೆ ಸಿನಿಮಾ ಮಾಡಿದ್ದು ಕೂಡ ಹೊಸತನವೇ. ಪ್ರತಿಭಾವಂತ ನಾಯಕ- ನಾಯಕಿ ಇದ್ದಾರೆ. ಸಿನಿಮಾ ಹಸಿವು ಇರುವ ನಿರ್ಮಾಪಕ ಕುಮಾರ್‌ ಕನಸು, ನಮ್ಮ ಶ್ರಮ ಇದೆಲ್ಲವೂ ಹೊಸತನಗಳೇ ಅಂತ ಹೇಳಬಹುದು.

ಎಷ್ಟು ಕಡೆ ಸಿನಿಮಾ ಬರುತ್ತಿದೆ?

200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. 

ವಿಷ್ಣುವರ್ಧನ್ ಸಾವಿನ ಮುನ್ಸೂಚನೆ ಸಾಯಿ ಬಾಬ ನನಗೆ ಮೊದಲೇ ಕೊಟ್ಟಿದ್ದರು: ಎಸ್‌ ನಾರಾಯಣ್

50ರ ಸಂಭ್ರಮದಲ್ಲಿ ಎಸ್‌ ನಾರಾಯಣ್

ಇದುವರೆಗೂ ಕನ್ನಡ ಚಿತ್ರರಂಗದಲ್ಲಿ 50 ಸಿನಿಮಾಗಳನ್ನು ನಿರ್ದೇಶಿಸಿರುವುದು ನಾಲ್ಕು ಮಂದಿ ನಿರ್ದೇಶಕರು ಮಾತ್ರ. ವಿಜಯಾ ರೆಡ್ಡಿ, ಸಾಯಿ ಪ್ರಕಾಶ್‌ ಹಾಗೂ ಭಾರ್ಗವ. ಇವರ ಸಾಲಿಗೆ ನಾಲ್ಕನೇಯವರಾಗಿ ಎಸ್‌ ನಾರಾಯಣ್‌ ಅವರು ‘5ಡಿ’ ಚಿತ್ರದ ಮೂಲಕ ಸೇರಿಕೊಂಡಿದ್ದಾರೆ. ನಿರ್ದೇಶನ, ಬರವಣಿಗೆ ವಿಭಾಗದಲ್ಲಿ ತೊಡಗಿಸಿಕೊಂಡು 50 ಚಿತ್ರಗಳನ್ನು ನಿರ್ದೇಶಿಸಿದವರಲ್ಲಿ ಮೊದಲಿಗರು ಎಸ್‌ ನಾರಾಯಣ್‌. ಇದೊಂದು ದೊಡ್ಡ ದಾಖಲೆ. ಇನ್ನೂ ಇವರ ನಿರ್ದೇಶನದ 50 ಚಿತ್ರಗಳ ಪೈಕಿ 16 ಶತದಿನೋತ್ಸವ, 7 ಚಿತ್ರಗಳು 25 ವಾರ, 1 ಚಿತ್ರ 75 ವಾರ, 9 ಚಿತ್ರಗಳು 50 ದಿನಗಳನ್ನು ಕಂಡಿವೆ. ಹೀಗೆ ಚಿತ್ರರಂಗದಲ್ಲಿ ಸಾಧನೆ ಮಾಡಿರುವ ಎಸ್‌ ನಾರಾಯಣ್‌ ಅವರ 50ನೇ ಚಿತ್ರ ‘5ಡಿ’.