-ಶಶಿಕರ ಪಾತೂರ್

ಸೂಜಿದಾರ ಎನ್ನುವ ಒಂದೇ ಚಿತ್ರದ ಪಾತ್ರದಿಂದಲೇ ಪ್ರೇಕ್ಷಕರಿಗೆ ಆತ್ಮೀಯವಾದ ಅರಳು ಕಂಗಳ ಬೆಡಗಿ ಚೈತ್ರಾ ಕೋಟೂರ್. ಆದರೆ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದ ಮೇಲೆ ಅವರ ರೇಂಜ್ ಬದಲಾಗಿದೆ! ಅವರು, ಅವರ ಕಾರ್ಯಚಟುವಟಿಕೆ, ಪ್ರೇಮದ ಬಗ್ಗೆ ಕೇಳುವ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅಂಥವರಿಗೆ ಒಂದು ಸತ್ಯವನ್ನು ರಿವೀಲ್ ಮಾಡಿದ್ದಾರೆ ಚೈತ್ರಾ. ಅದೇನು ಎನ್ನುವುದರ ಬಗ್ಗೆ ಅವರು ಸುವರ್ಣ.ಕಾಮ್‌ ಜೊತೆ ಮಾತನಾಡಿದ್ದಾರೆ. 

'ಗರ್ಲ್ಸ್  ಮೂಡ್ ಆನ್ ವ್ಯಾಲೆಂಟೈನ್ ಡೇ' ಎಂದರೇನು?

ವ್ಯಾಲಂಟೈನ್ ಡೇ ಎಂದೊಡನೆ ಎಲ್ಲ ಹೆಣ್ಮಕ್ಕಳು ಒಂದೇ ಥರ ಇರ್ತಾರೆ ಅಂತ ಏನಿಲ್ಲ. ದಿನಾಚರಣೆ ಗೊತ್ತಿದ್ದರೂ ಆ ಬಗ್ಗೆ ಆಸಕ್ತಿ ಇರದವರು, ಆಸಕ್ತಿ ಇದ್ದರೂ ತೋರ್ಪಡಿಸಲು ಇಷ್ಟ ಇರದವರು, ಇಷ್ಟ ಇದ್ದರೂ ಹೇಳಿಕೊಳ್ಳೋಕೆ ಆಗದೇ ಇರೋರು... ಹೀಗೆ ಎಲ್ಲವೂ ಅವರವರ ಮೂಡ್‌ಗೆ ಸಂಬಂಧಿಸಿರುತ್ತದೆ. ಅದನ್ನೇ ಇಟ್ಕೊಂಡು 'ಗರ್ಲ್ಸ್ ಮೂಡ್ ಆನ್ ವ್ಯಾಲೆಂಟೈನ್ ಡೇ ' ಅಂತ ಒಂದೈದು ನಿಮಿಷದ spoof ಮಾಡಿದ್ದೇನೆ. ಅದನ್ನು ಅಪ್ಲೋಡ್ ಮಾಡುವ ಮೂಲಕ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದೇನೆ. ಅಂದರೆ ಫ್ರೊಫೆಷನಲ್ಲಾಗಿ ಅದರಲ್ಲೇ ತೊಡಗಿಸುವ ಯೋಜನೆ ಸದ್ಯಕ್ಕೆ ಇಲ್ಲ. ಆದರೆ ಇದೊಂದು ವಿಡಿಯೋದಲ್ಲಿ ಸ್ನೇಹಿತೆ, ನಟಿ ಭೂಮಿ ಶೆಟ್ಟಿ ಕೂಡ ಇದ್ದಾಳೆ ಎನ್ನುವುದು ವಿಶೇಷ.

ನೀವು ಬಯಸಿದ್ದಲ್ಲಿ ಪೂರ್ತಿ ಬಿಗ್ ಬಾಸ್ ಸದಸ್ಯರನ್ನೇ ಬಳಸಬಹುದಿತ್ತಲ್ಲವೇ ?

ನಿಜ. ಆದರೆ ಇದೇನೂ ನಾನು ತುಂಬ ದಿನ ಪ್ಲ್ಯಾನ್ ಹಾಕಿ ಮಾಡಿದಂಥ ಪ್ರಾಜೆಕ್ಟ್ ಅಲ್ಲ. ವ್ಯಾಲಂಟೈನ್ಸ್ ಡೇ ಹಿಂದಿನ ದಿನ ಅನಿಸಿತ್ತು. ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ದಿನಾ ಎನ್ನುವಂತೆ ಟಚ್ಚಲ್ಲಿರುವ ಸ್ನೇಹಿತೆ ಭೂಮಿ ಶೆಟ್ಟಿ. ಹಾಗಾಗೆ ಆಕೆಗೆ ಹೇಳಿದೆ. ಕಿನ್ನರಿ ಧಾರಾವಾಹಿಯಲ್ಲಿ ಆಕೆಯೊಂದಿಗೆ ನಟಿಸಿದ್ದ ಕಲಾವಿದ ಪವನ್ ಕುಮಾರ್ ಕೂಡ ಸಾಥ್ ನೀಡಿದರು. ಪೂರ್ತಿ ನಮ್ಮನೇಲೆ ಶೂಟ್ ಮಾಡಿದ್ದೀ ವಿ. ಒಂದೇ ದಿನದಲ್ಲಿ ಚಿತ್ರೀಕಣ  ಮುಗಿಸಿ ಮರುದಿನ ಮಧ್ಯಾಹ್ನದ ಹೊತ್ತಿಗೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಪೂರ್ತಿ ಮಾಡಿದ್ದೆ. ಇಷ್ಟು ತರಾತುರಿಯ ಯೋಜನೆಗೆ ಬಿಗ್ ಬಾಸ್ ಸದಸ್ಯರನ್ನೆಲ್ಲ ಬಳಸಲು ಕಷ್ಟ ಅಲ್ಲವೇ? ನೋಡೋಣ, ಮುಂದೆ ನಾವೆಲ್ಲ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡರೆ ಅಚ್ಚರಿ ಇಲ್ಲ !

ಬಿಗ್‌ಬಾಸ್ ಮನೆಯಲ್ಲಿ ಚೈತ್ರಾಗೆ ಎಸೆದ ಸವಾಲು

ಸಿನಿಮಾದ ಅವಕಾಶಗಳು ಹೇಗಿವೆ ?

ನಟನೆಗೆ ತುಂಬ ಅವಕಾಶಗಳು ಬರುತ್ತಿವೆ.  ಆದರೆ ಆಗಲೇ ಹೇಳಿದಂತೆ ಡೈರೆಕ್ಷನ್ ನನ್ನ ಕನಸು. ನಟನೆಯ ವಿಚಾರಕ್ಕೆ ಬಂದರೆ ಈಗಾಗಲೇ ನಟಿಸಿರುವ ವಿರಾಟಪರ್ವ ಇನ್ನೇನು ತೆರೆಗೆ ಬರಲು ತಯಾರಾಗಿದೆ. ಇನ್ನೊಂದೆರಡು ಚಿತ್ರಗಳನ್ನು ಕೂಡ ಒಪ್ಪಿದ್ದೇನೆ. ಆದರೆ ನನಗೆ ನಿರ್ದೇಶಕಿಯಾಗಿ ಬೆಳೆಯುವ ಕನಸಿರುವ ಕಾರಣ ಒಳ್ಳೆಯ ನಿರ್ಮಾಣ ಸಂಸ್ಥೆಯೊಂದಿಗೆ ಕೈ ಜೋಡಿಸಬೇಕಿದೆ. ಎಲ್ಲವೂ ಕೈಗೂಡಿ ಬಂದರೆ ಸ್ಕ್ರಿಪ್ಟ್ ಕೆಲಸ ತನ್ನಷ್ಟಕ್ಕೇ ಪೂರ್ತಿಯಾಗುತ್ತದೆ. ಈಗಾಗಲೇ ಒಂದು ಜಾಹೀರಾತು ಡೈರೆಕ್ಟ್ ಮಾಡಿದ್ದೇನೆ. ಇನ್ನು ಸಿನಿಮಾ ನಿರ್ದೇಶಿಸುವುದೊಂದೇ ಬಾಕಿ ಇದೆ.

ನಾನೇಕೆ ಬೋಲ್ಡ್ ಡ್ರೆಸ್ ಹಾಕ್ತೇನೆ: ಚೈತ್ರಾ

ನಿಮ್ಮ ವ್ಯಾಲೆಂಟೈನ್ಸ್ ಡೇ ಹೇಗಾಯಿತು ?

ಅದೇ ಈ ಸ್ಪೂಫ್ ವಿಡಿಯೋ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲೇ ಮುಳುಗಿದ್ದೆ.  ಈಗ ಅದಕ್ಕೆ ಸಿಗುತ್ತಿರುವ ವೀಕ್ಷಕರ ಪ್ರತಿಕ್ರಿಯೆ ನನಗೆ ತುಂಬ ಖುಷಿ ನೀಡಿದೆ. ಬಹುಶಃ ನನಗೊಬ್ಬ ಲವ್ವರ್ ಇದ್ದು , ಇಡೀ ದಿನ ಆತನೊಂದಿಗೆ ಕಳೆದಿದ್ದರೂ ನಾನು ಇಷ್ಟು ಖುಷಿ ಪಡುತ್ತಿರಲಿಲ್ಲವೇನೋ! ಆ ಮಟ್ಟಿಗೆ  ಈ ಕೆಲಸ ನನಗೆ ಸಂತೃಪ್ತಿ ನೀಡುತ್ತಿದೆ. ಹಾಗಂತ ಸಾಮಾಜಿಕ ಜಾಲತಾಣಗಳಲ್ಲಿನ ಪ್ರೇಮ ನಿವೇದನೆಯ ಮೆಸೇಜ್ ಗಳಿಗೆ ಕೊರತೆ ಇರುವುದಿಲ್ಲ ಎಂದು ಗೊತ್ತು. ಅವುಗಳನ್ನು ತೆರೆದು ನೋಡಲಿಕ್ಕೂ ಹೋಗುವುದಿಲ್ಲ ಎನ್ನುವುದು ಸತ್ಯ.