ಬಿಗ್ ಬಾಸ್ ಮನೆ ಗುರುವಾರ ರಣಾಂಗಣ. ಎರಡು ತಂಡಗಳ  ನಡುವೆ ಮಾರಾಮಾರಿ ನಡೆಯಿತು. ಅಂತಿಮವಾಗಿ ಕಿಶನ್ ನೇತೃತ್ವದ ತಂಡ ವಿಜಯಿಯಾಗಿ ಕೀ ಪಡೆದುಕೊಂಡಿತು. 

ಬಿಗ್ ಬಾಸ್ ಕೊಟ್ಟ ಗೇಮ್ ಸಹ ಹಾಗೆ ಇತ್ತು. ಬಾಕ್ಸ್ ಗಳನ್ನು ಕಾಪಾಡಿಕೊಂಡು ಅದನ್ನು ಲಾರಿಗೆ ಲೋಡ್ ಮಾಡುವಂತೆ ಬಿಗ್ ಬಾಸ್ ಹೇಳಿದ್ದರು. ಮನೆಯ ಕ್ಯಾಪ್ಟನ್ ಹರೀಶ್ ರಾಜ್ ಅವರ ತಾಳ್ಮೆ ಕಟ್ಟೆಯೂ ಒಡೆದು ಹೋಗಿತ್ತು.

ಕಿಶನ್-ಹರೀಶ್ ರಾಜ್ ನಡುವೆ ಟಾಕ್ ವಾರ್, ಭೂಮಿ ಶೆಟ್ಟಿ-ಹರೀಶ್ ರಾಜ್ ನಡುವೆ ಟಾಕ್ ವಾರ್ ನಡೆಯಿತು. ಒಟ್ಟಿನಲ್ಲಿ ಬಿಗ್ ಬಾಸ್ ಕೊಟ್ಟ ಗೇಮ್  ಮನೆಯವರನ್ನು  ಚೆಲ್ಲಾಪಿಲ್ಲಿ ಮಾಡಿದ್ದು ನಿಜ. ಇಷ್ಟು ದಿನ ಸ್ನೇಹಿತರಾಗಿದ್ದವರು ಬಾಕ್ಸ್ ಗಾಗಿ ಕಿತ್ತಾಟ ಮಾಡುವಂತೆ ಆಯಿತು.

'ವಾಸುಕಿ ಕೈ ತೆಗಿ, ನೀನು ಎಲ್ಲಿ ಕೈ ಹಾಕಿದ್ದೀಯಾ ನಿನಗೆ ಗೊತ್ತು'

ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳ ನಡುವೆಯೂ ಕಿತ್ತಾಟ ನಡೆದು ಹೋಯಿತು. ಒಂದರ್ಥದಲ್ಲಿ ಲಾರಿಯ ಒಂದು ಬದಿ ಪಕ್ಕವೇ ಮುರಿದು ಹೋಯಿತು. ಕಿಶನ್ ಮತ್ತು ಶೈನ್ ಶೆಟ್ಟಿ ಒಬ್ಬರ ಮೇಲೆ ಒಬ್ಬರು ಬಿದ್ದು ಹೊರಳಾಡಿಯೂ ಇದ್ದರು. 

ಚೈತ್ರಾ ಕೊಟ್ಟೂರು ಈ ಮಧ್ಯೆ ಮನೆಯವರಿಗೊಂದು ಸವಾಲು ಹಾಕಿದರು. ತಾಕತ್ ಇದ್ದರೆ ನನ್ನನ್ನು ಆಟದಿಂದ ಹೊರಹಾಕಿ ಎಂದು ಸವಾಲೆಸೆದರು. ಅಂತಿಮವಾಗಿ ಪಂಜಾಬ್ ತಂಡದಲ್ಲಿದ್ದ ಚೈತ್ರಾ ಅವರ ಭಾವಚಿತ್ರ ಹರಿದು ಅವರನ್ನು ಆಟದಿಂದ ಹೊರಹಾಕಲಾಯಿತು.

ಇದೆಲ್ಲ ಆದ ಮೇಲೆ ಮನೆಯವರಿಗೆ ಸುಳ್ಳು ಹೇಳುವ ಅವಕಾಶವೊಂದನ್ನು ನೀಡಿ ಹರೀಶ್ ರಾಜ್ ಕಾರ್ಯಕ್ರಮ ನಡೆಸಿಕೊಟ್ಟರು. ಒಬ್ಬರಿಗಿಂತ ಒಬ್ಬರು ಹೇಳಿದ ಸುಳ್ಳುಗಳು ಮಜವಾಗಿದ್ದವು.