Asianet Suvarna News Asianet Suvarna News

Trivikrama: ತಂದೆಯ ಪ್ರತಿಕ್ರಿಯೆ ಕೇಳಲು ಕುತೂಹಲವಿದೆ: ವಿಕ್ರಮ್‌ ರವಿಚಂದ್ರನ್‌

ಸಹನಾಮೂರ್ತಿ ನಿರ್ದೇಶನದ, ವಿಕ್ರಮ್‌ ರವಿಚಂದ್ರನ್‌ ನಟನೆಯ ಮೊದಲ ಚಿತ್ರ ‘ತ್ರಿವಿಕ್ರಮ’ ಸಿನಿಮಾ ಇಂದು (ಜೂ.24) ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಚಿತ್ರದ ಕುರಿತು ವಿಕ್ರಮ್‌ ಜೊತೆ ಮಾತುಕತೆ.

Kannada Actor Vikram Ravichandran Exclusive Interview gvd
Author
Bangalore, First Published Jun 24, 2022, 5:25 AM IST

ಆರ್‌. ಕೇಶವಮೂರ್ತಿ

ಸಹನಾಮೂರ್ತಿ ನಿರ್ದೇಶನದ, ವಿಕ್ರಮ್‌ ರವಿಚಂದ್ರನ್‌ ನಟನೆಯ ಮೊದಲ ಚಿತ್ರ ‘ತ್ರಿವಿಕ್ರಮ’ ಸಿನಿಮಾ ಇಂದು (ಜೂ.24) ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಚಿತ್ರದ ಕುರಿತು ವಿಕ್ರಮ್‌ ಜೊತೆ ಮಾತುಕತೆ.

* ಮೊದಲ ಚಿತ್ರದ ಬಿಡುಗಡೆ ಸಂಭ್ರಮ ಹೇಗಿದೆ?
ಸಹಜವಾಗಿ ಖುಷಿ, ಕುತೂಹಲ ಇದೆ. ಒಂದೆರಡು ವರ್ಷಗಳ ಕನಸು ಅಲ್ಲ ಇದು. ಹಲವು ವರ್ಷಗಳ ಕನಸು ಈಗ ನನಸಾಗುತ್ತಿದೆ. ಪ್ರೀಮಿಯರ್‌ ಶೋ ಎಲ್ಲಾ ಕಡೆ ಹೌಸ್‌ಫುಲ್‌ ಆಗಿದೆ. ಹೊಸ ನಟನಾಗಿ ನನಗೆ ಇದಕ್ಕಿಂತ ಇನ್ನೇನು ಬೇಕು.

* ತೆರೆ ಹಿಂದೆ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದವರು ಹೀರೋ ಆಗಿದ್ದು ಹೇಗೆ?
ನಿರ್ಮಾಣ, ನಿರ್ದೇಶನ ವಿಭಾಗ, ತಾಂತ್ರಿಕ ಕೆಲಸಗಳಲ್ಲಿ ತೊಡಗಿಸಿಕೊಂಡ ಮೇಲೆಯೇ ನನ್ನೊಳಗಿನ ನಟ ಹುಟ್ಟಿಕೊಂಡಿದ್ದು. ಆ ನಟನನ್ನು ಹೀರೋ ಮಾಡಿದ್ದು ‘ತ್ರಿವಿಕ್ರಮ’ ಸಿನಿಮಾ.

* ಹೀರೋ ಆಗುವ ದಾರಿಯಲ್ಲಿ ಹೆಚ್ಚು ಸಲಹೆ, ಮಾರ್ಗದರ್ಶನ ಸಿಕ್ಕಿದ್ದು ನಿಮ್ಮ ಅಣ್ಣ ಅಥವಾ ತಂದೆಯವರಿಂದನಾ?
ನನ್ನ ಅಣ್ಣ ಮನು ಅವರಿಂದ. ಅವರು ಕೊಟ್ಟಸಲಹೆ ಹಾಗೂ ಮಾರ್ಗದರ್ಶನ ನಾನು ಹೀರೋ ಆಗಬಹುದು ಎನ್ನುವ ವಿಶ್ವಾಸ ಮೂಡಿಸಿತು. ನನ್ನ ಅಣ್ಣ ಇಲ್ಲದಿದ್ದರೆ ನಾನು ನಟನಾ ತರಬೇತಿಗೆ ಸೇರುತ್ತಿರಲಿಲ್ಲ,

ಚೆನ್ನಾಗಿ ಡ್ಯಾನ್ಸ್‌ ಮಾಡದಿದ್ರೆ ಹೊಡೀತೀನಿ ಅಂದಿದ್ರು ಪುನೀತ್‌: ವಿಕ್ರಂ ರವಿಚಂದ್ರನ್‌

* ನಿಮ್ಮ ಕುಟುಂಬದವರು ಸಿನಿಮಾ ನೋಡಿದ್ದಾರೆಯೇ?
ನಮ್ಮ ತಂದೆ ಒಬ್ಬರು ಬಿಟ್ಟು ಮಿಕ್ಕ ಎಲ್ಲರೂ ನೋಡಿದ್ದಾರೆ. ಮನೆ ಹುಡುಗನ ಸಿನಿಮಾ ಎಂದ ಮೇಲೆ ಎಲ್ಲರಿಗೂ ಚೆನ್ನಾಗಿರುತ್ತದೆ. ಎಲ್ಲರೂ ಮೆಚ್ಚಿಕೊಂಡರು. ಆದರೆ, ನಾನು ನನ್ನ ತಂದೆ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ. ಯಾಕೆಂದರೆ ಅವರು ಸುಖಾಸುಮ್ಮನೆ ಹೊಗಳುವುದಿಲ್ಲ. ಹೀಗಾಗಿ ಚಿತ್ರ ನೋಡಿದ ಮೇಲೆ ಅಪ್ಪ ಏನು ಹೇಳಬಹುದು ಎನ್ನುವ ಕುತೂಹಲ ಇದೆ.

* ತ್ರಿವಿಕ್ರಮ ಚಿತ್ರದ ಕತೆ ಏನು? ಇಲ್ಲಿ ನಿಮ್ಮ ಪಾತ್ರವೇನು?
ಮಧ್ಯಮ ವರ್ಗದ ಹುಡುಗನ ಪ್ರೆಮಕತೆ. ಹೀಗಾಗಿ ಎಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ ಇದು. ಇಲ್ಲಿ ನನ್ನದು ವಿಕ್ರಮ್‌ ಹೆಸರಿನ ಪಾತ್ರ.

* ಚಿತ್ರದ ಹೆಸರಿನ ಗುಟ್ಟೇನಾದರೂ ಉಂಟೇ?
ನಾಯಕನ ಹೆಸರು ವಿಕ್ರಮ್‌ ಹಾಗೂ ನಾಯಕಿಯ ಹೆಸರು ತ್ರಿಷಾ. ಇವರೆಡನ್ನು ಸೇರಿಸಿ ‘ತ್ರಿವಿಕ್ರಮ’ ಎಂದು ಹೆಸರಿಟ್ಟಿದ್ದೇವೆ. ನಾಯಕ ಕನ್ನಡಿಗ, ನಾಯಕಿ ಜೈನ ಸಮುದಾಯದ ಹುಡುಗಿ. ಮಧ್ಯಮ ವರ್ಗದ ವಿಕ್ರಮ್‌, ಶ್ರೀಮಂತ ಮನೆಯ ತ್ರಿಷಾಳನ್ನು ಪ್ರೀತಿಸಿದಾಗ ಏನಾಗುತ್ತದೆ ಎಂಬುದೇ ಚಿತ್ರದ ಕತೆ.

* ಮೊದಲ ಬಾರಿಗೆ ನಟರಾಗಿ ತೆರೆ ಮೇಲೆ ಬರುತ್ತಿರುವ ನಿಮ್ಮ ನಿರೀಕ್ಷೆಗಳೇನು?
ತ್ರಿವಿಕ್ರಮ ಚಿತ್ರದ ಮೂಲಕ ಪಾಸಾಗುತ್ತೇನೆ ಎನ್ನುವ ನಿರೀಕ್ಷೆ ಇದೆ. ಅದು ಫಸ್ಟ್‌ ರಾರ‍ಯಂಕ್‌ ಅಥವಾ ಜಸ್ಟ್‌ ಪಾಸ್‌ ಎಂಬುದು ಪ್ರೇಕ್ಷಕರು ನಿರ್ಧರಿಸುತ್ತಾರೆ. ಆದರೆ, ಈ ಚಿತ್ರದಿಂದ ನಾನು ಗೆಲುವು ಕಾಣುತ್ತೇನೆ ಎನ್ನುವ ನಿರೀಕ್ಷೆಯಂತೂ ಇದೆ.

Vikram Ravichandran: 'ತ್ರಿವಿಕ್ರಮ'ನಾಗಿ ಬರ್ತಿದ್ದಾರೆ ಕ್ರೇಜಿ ಸ್ಟಾರ್ ಕೊನೆಯ ಪುತ್ರ!

* ನಿಮ್ಮ ಮತ್ತು ನಿರ್ದೇಶಕ ಸಹನಾಮೂರ್ತಿ ಅವರ ಜರ್ನಿ ಹೇಗಿತ್ತು?
ಇದು ನನಗೆ ಮೊದಲ ಸಿನಿಮಾ. ಹೀಗಾಗಿ ಇದರ ಜರ್ನಿ ಕೂಡ ತುಂಬಾ ವಿಶೇಷವಾಗಿರುತ್ತದೆ. ಮೊದಲ ಬಾರಿಗೆ ನಟನಾಗಬೇಕು ಎಂದುಕೊಂಡವನಿಗೆ ಕರೆದು ಅವಕಾಶ ಕೊಟ್ಟವರು. ಮರೆಯಲಾಗದ ಸಿನಿಮಾ ಮತ್ತು ಕ್ಷಣವಾಗಿ ನಿಲ್ಲುತ್ತದೆ.

ಪ್ರೀತಿ, ಪ್ರೇಮದ ಕತೆಯಾದರೂ ಅದು ಮಧ್ಯಮವರ್ಗದ ಜೀವನವನ್ನು ಕಟ್ಟಿಕೊಡುವ ಚಿತ್ರವೂ ಆಗಿರುತ್ತದೆ. ಹೀಗಾಗಿ ಬದುಕಿನ ಪಯಣವೂ ಇದೆ. ಸಿನಿಮಾ ನೋಡುವಾಗ ಪ್ರತಿಯೊಬ್ಬರು ವಿಕ್ರಮ್‌ ಪಾತ್ರದಲ್ಲಿ ತಮ್ಮನ್ನು ಕಲ್ಪಿಸಿಕೊಳ್ಳುವ ಮಟ್ಟಿಗೆ ನನ್ನ ಪಾತ್ರ ಮೂಡಿ ಬಂದಿದೆ.
-ವಿಕ್ರಮ್‌ ರವಿಚಂದ್ರನ್‌

Follow Us:
Download App:
  • android
  • ios