Asianet Suvarna News Asianet Suvarna News

Madhagaja Release: ಚಿತ್ರದ ಟೈಟಲ್‌ ಮಾಸ್‌ ಕತೆ ಕ್ಲಾಸ್‌, ಶ್ರೀಮುರಳಿ ಸಂದರ್ಶನ

ನಟ ಶ್ರೀಮುರಳಿ ಅಭಿನಯದ, ಮಹೇಶ್‌ ಕುಮಾರ್‌ ನಿರ್ದೇಶನದ, ಉಮಾಪತಿ ನಿರ್ಮಾಣದ ‘ಮದಗಜ’ ಸಿನಿಮಾ ಇಂದು(ಡಿ.3) ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಬಾರಿ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಬರುತ್ತಿರುವ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ತುಂಬಾ ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಸಂಭ್ರಮದಲ್ಲಿದ್ದಾರೆ. ಅವರ ಜೊತೆ ಮಾತುಕತೆ.

Kannada actor Sri Murali exclusive interview about Madhagaja film vcs
Author
Bangalore, First Published Dec 3, 2021, 9:24 AM IST

ಆರ್‌ ಕೇಶವಮೂರ್ತಿ

ಟೈಟಲ್‌ ಹೇಳುವಂತೆಯೇ ಇದು ಮತ್ತೊಂದು ಮಾಸ್‌ ಸಿನಿಮಾನಾ?

ಟೈಟಲ್‌ ಮಾಸ್‌ ಇರಬಹುದು. ಆದರೆ, ಈ ಚಿತ್ರದಲ್ಲಿ ಹೇಳಿರುವ ಕತೆ ಕ್ಲಾಸ್‌ ಆಗಿದೆ. ಅದು ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪುವ ಕ್ಲಾಸಿಕ್‌ ಕತೆ. ಹೀಗಾಗಿ ಇದನ್ನು ರೆಗ್ಯೂಲರ್‌ ಆ್ಯಕ್ಷನ್‌ ಅಥವಾ ಮಾಸ್‌ ಸಿನಿಮಾ ಎಂದುಕೊಳ್ಳಬೇಡಿ.

ಯಾವುದರ ಸುತ್ತ ಕತೆ ನಡೆಯುತ್ತದೆ?

ತಾಯಿ ಮತ್ತು ಮಗು. ತಾಯಿನೇ ಈ ಚಿತ್ರದ ಕೇಂದ್ರಬಿಂದು. ಆಕೆಯ ಪ್ರೀತಿ, ಮಮಕಾರವನ್ನು ತುಂಬಾ ಆಪ್ತವಾಗಿ ಮನಮುಟ್ಟುವಂತೆ ಹೇಳಲಾಗಿದೆ. ಹಾಗಂತ ಇದು ಪ್ರಯೋಗಾತ್ಮಕ ಸಿನಿಮಾ ಅಲ್ಲ. ಆ್ಯಕ್ಷನ್‌ ಹಾಗೂ ಮಾಸ್‌ ನೆರಳಿನಲ್ಲಿ ತಾಯ್ತನವನ್ನು ಮನಮುಟ್ಟುವಂತೆ ಚಿತ್ರದಲ್ಲಿ ಹೇಳಲಾಗಿದೆ.

Madhagaja Director:ವಾರಾಣಸಿ ಶೂಟಿಂಗ್‌ ನಂತರ ಮದಗಜ ಪ್ಯಾನ್‌ ಇಂಡಿಯಾ ಚಿತ್ರ ಆಯಿತು

ಯಾರಿಗೆ ಈ ಸಿನಿಮಾ ಕನೆಕ್ಟ್ ಆಗುತ್ತದೆ?

ತಾಯಿಯನ್ನು ಪ್ರೀತಿಸುವ ಪ್ರತಿಯೊಬ್ಬ ಮಗನಿಗೂ, ಮಗನನ್ನು ಕನವರಿಸುವ ಪ್ರತಿಯೊಬ್ಬ ತಾಯಿಗೂ ಈ ಸಿನಿಮಾ ಕನೆಕ್ಟ್ ಆಗುತ್ತದೆ. ತಾಯಿ ಮತ್ತು ಮಗು ಕತೆ ಎಂದ ಮೇಲೆ ಇಂಥವರೇ ಈ ಸಿನಿಮಾ ನೋಡುತ್ತಾರೆ ಎಂದು ಬೇಲಿ ಹಾಕಲು ಆಗಲ್ಲ. ಎಲ್ಲಾ ವರ್ಗದ ಪ್ರೇಕ್ಷಕರು ಈ ಚಿತ್ರವನ್ನು ನೋಡುತ್ತಾರೆ. ಚಿತ್ರದಲ್ಲಿ ನಾವು ಇಟ್ಟಿರುವ ಕತೆಯ ಅಂಶ ಆ ರೀತಿ ಇದೆ.

Kannada actor Sri Murali exclusive interview about Madhagaja film vcs

ನಿಮ್ಮ ಹಿಂದಿನ ಚಿತ್ರಗಳಿಗಿಂತಲೂ ಇದು ಹೇಗೆ ಭಿನ್ನ?

ಹಿಂದಿನ ಸಿನಿಮಾಗಳೂ ನನ್ನವೇ, ಈ ಚಿತ್ರವೂ ನನ್ನವೇ. ಅವು ಬೇರೆ ರೀತಿ, ಇದು ಒಂದು ರೀತಿ. ಆದರೆ, ನನ್ನ ಮುಂದಿನ ಚಿತ್ರಗಳನ್ನು ನಾನು ಯಾವತ್ತು ಹಿಂದಿನ ಚಿತ್ರಗಳಿಗೆ ಕಂಪೇರ್‌ ಮಾಡಿಕೊಳ್ಳುವುದಿಲ್ಲ. ಪ್ರತಿ ಚಿತ್ರವೂ ಹೊಸದು, ಪ್ರತಿ ಕತೆಯೂ ಭಿನ್ನವಾಗಿಯೇ ತೋರಿಸೋಣ ಅಂತ ಸಿನಿಮಾ ಮಾಡುತ್ತೇವೆ. ಅದು ನಾವು ಅಂದುಕೊಂಡಂತೆ ಭಿನ್ನವಾಗಿದೆಯೇ, ಹೊಸತನದಿಂದ ಕೂಡಿದೆಯೇ ಎಂಬುದನ್ನು ಪ್ರೇಕ್ಷಕ ನೋಡಿ ಮೆಚ್ಚಿಕೊಳ್ಳುವುದರ ಮೇಲೆ ನಿಂತಿರುತ್ತದೆ. ‘ಮದಗಜ’ ನನ್ನ ಮತ್ತೊಂದು ಬಹು ನಿರೀಕ್ಷೆಯ ಸಿನಿಮಾ. ವಿಷುವಲ್‌ ಟ್ರೀಟ್‌, ಅದ್ಭುತವಾದ ಮೇಕಿಂಗ್‌ ಹಾಗೂ ನಿರ್ದೇಶಕ ಮಹೇಶ್‌ ಕುಮಾರ್‌ ಅವರ ತಂಡದ ಕ್ರಿಯೇಟಿವ್‌ ಪ್ರಯತ್ನ ಇಲ್ಲಿದೆ. ನಿರ್ದೇಶಕ ಮಹೇಶ್‌ ಕುಮಾರ್‌ ಅವರ ಹಿಂದಿನ ಸಿನಿಮಾಗೂ, ಈ ಚಿತ್ರಕ್ಕೂ ವ್ಯತ್ಯಾಸ ನೋಡಿದರೆ ಇದು ಗ್ರೇಟ್‌ ವರ್ಕ್ ಅನಿಸುತ್ತದೆ.

Madhagaja: ತಾಂಡವನ ಜೊತೆಗೆ ಶ್ರೀಮುರಳಿ-ಆಶಿಕಾ ಎಕ್ಸ್‌ಕ್ಲೂಸಿವ್ ಮಾತುಗಳು!

ಈ ಚಿತ್ರದ ಹೈಲೈಟ್‌ಗಳೇನು?

ಒಂದು ಒಳ್ಳೆಯ ಕನ್ನಡ ಸಿನಿಮಾ ಅಂತ ನೋಡೋಣ. ಇಡೀ ಸಿನಿಮಾನೇ ಹೈಲೈಟ್‌. ಪ್ರತ್ಯೇಕವಾಗಿ ಇಂಥದ್ದೇ ಹೈಲೈಟ್‌ ಅಂತ ಹೇಳಲಾಗದು. ತಾರಾಗಣ, ಮೇಕಿಂಗ್‌, ಚಿತ್ರದ ಬಜೆಟ್‌, ಕತೆಯ ವಿಸ್ತರಣೆ, ನಿರ್ದೇಶನದ ರೀತಿ ಇವು ಒಂದು ಚಿತ್ರಕ್ಕಿಂತ ಮತ್ತೊಂದು ಚಿತ್ರಕ್ಕೆ ಬೆಳೆಯುತ್ತ ಹೋಗುತ್ತದೆ. ಜಗಪತಿ ಬಾಬು, ದೇವಯಾನಿ, ರಂಗಾಯಣ ರಘು, ಚಿಕ್ಕಣ್ಣ, ಶಿವರಾಜ್‌ ಕೆ ಆರ್‌ ಪೇಟೆ, ಆಶಿಕಾ ರಂಗನಾಥ್‌... ಹೀಗೆ ಒಂದು ದೊಡ್ಡ ತಾರಾಗಣವೇ ಇಲ್ಲಿದೆ. ಇವರೆಲ್ಲರೂ ಚಿತ್ರದ ಒಂದೊಂದು ಹೈಲೈಟ್‌ ಎನ್ನಬಹುದು. ಅವರ ಜತೆಗೆ ನಾನೂ ಇದ್ದೇನೆ.

"

ಬಜೆಟ್‌ ಜಾಸ್ತಿ ಆಗಿದ್ದಕ್ಕೆ ಪ್ಯಾನ್‌ ಇಂಡಿಯಾ ಚಿತ್ರ ಆಯಿತಾ?

ಇಲ್ಲ. ಚಿತ್ರದ ಶೂಟಿಂಗ್‌ ಹಂತದಲ್ಲಿ ನಿರ್ಮಾಪಕ ಉಮಾಪತಿ ಮೇಕಿಂಗ್‌ ಸೀನ್‌ಗಳನ್ನು ನೋಡಿ, ಇದು ಪ್ಯಾನ್‌ ಇಂಡಿಯಾ ಸಿನಿಮಾ ಆಗಬೇಕು ಅಂತ ನಿರ್ಧರಿಸಿದರು. ಅವರು ಹೇಳಿದ ರೀತಿ ನನಗೂ ಓಕೆ ಅನಿಸಿತು ಅಷ್ಟೆ. ಈ ಕತೆ ಯಾರಿಗೆ ಬೇಕಾದರೂ ಇಷ್ಟವಾಗುತ್ತದೆ. ಆ ಕಾರಣಕ್ಕೆ ಇದು ಪ್ಯಾನ್‌ ಇಂಡಿಯಾ ಸಿನಿಮಾ ರೂಪ ಪಡೆದುಕೊಂಡಿದೆ.

ಈ ಹೊತ್ತಿನಲ್ಲಿ ನೀವು ಮಿಸ್‌ ಮಾಡಿಕೊಳ್ಳುತ್ತಿರುವುದು ಏನು?

ಅಪ್ಪು ಮಾಮ. ಅವರು ಇಲ್ಲ ಅನ್ನೋದೇ ದೊಡ್ಡ ನೋವು. ಆ ನೋವಿನಿಂದ ನನಗೆ ಯಾವ ಕೆಲಸದ ಮೇಲೆಯೂ ಆಸಕ್ತಿ ಇರಲಿಲ್ಲ. ಆದರೆ, ಅಪ್ಪು ಮಾಮ ಅವರು ನಮ್ಮ ನಡುವೆಯೇ ಇದ್ದಾರೆ. ಅವರು ಸಿನಿಮಾ ನೋಡುತ್ತಾರೆ. ಅವರ ಎರಡು ಕಣ್ಣುಗಳು ನಾಲ್ಕು ಜನಕ್ಕೆ ದೃಷ್ಟಿನೀಡಿವೆ. ಆ ನಾಲ್ಕೂ ಜನರ ಮೂಲಕ ಅಪ್ಪು ಮಾಮ ನನ್ನ ಸಿನಿಮಾ ನೋಡುತ್ತಾರೆ. ಆ ಒಂದು ಭಾವನಾತ್ಮಕ ನಂಬಿಕೆಯ ಜತೆಗೆ ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ.

Madhagaja: ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರದಲ್ಲಿ 3 ವಿಭಿನ್ನ ಪಾತ್ರಗಳು

ಹಿಂದಿನ ದಿನ ಜಿಮ್‌ನಲ್ಲಿ ಸಿಕ್ಕವರು ಮರುದಿನ ಇಲ್ಲಾಂದ್ರೆ ಹೇಗೆ: ಶ್ರೀಮುರಳಿ

ಅಪ್ಪು ಮಾಮ ಅಗಲಿ ಒಂದು ತಿಂಗಳಾಯಿತು. ಹೇಗೆ ಒಂದು ತಿಂಗಳು ಕಳೆಯಿತು ಗೊತ್ತಿಲ್ಲ. ಯಾಕೆಂದರೆ ಅವರು ಇಲ್ಲ ಎನ್ನುವ ಸಂಗತಿ ಇನ್ನೂ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ನಂಬಲು ಸಾಧ್ಯವಾಗುತ್ತಿಲ್ಲ. ಹಿಂದಿನ ದಿನ ಜಿಮ್‌ನಲ್ಲಿ ಒಟ್ಟಿಗೆ ಸಿಕ್ಕಿ ಎರಡು ತಾಸು ಮಾತನಾಡಿದ್ವಿ. ನನ್ನ ಮುಂದಿನ ಚಿತ್ರದ ತಯಾರಿ ಬಗ್ಗೆ ಹೇಳಿದೆ. ಅವರು ಒಳ್ಳೆಯ ಸಿನಿಮಾಗಳ ಬಗ್ಗೆ ಮಾತನಾಡಿದರು. ನನ್ನ ನೋಡುತ್ತಿದ್ದಂತೆಯೇ ಏ... ಏನೋ ಮುರಳಿ ಅಂತ ತಮಾಷೆ ಮಾಡುತ್ತಿದ್ದರು. ಸಿಕ್ಕಾಗೆಲ್ಲ ಖುಷಿ ಖುಷಿ ಆಗಿ ಮಾತನಾಡುತ್ತಿದ್ವಿ. ಅವರು ತೀರಿಕೊಂಡ ಹಿಂದಿನ ಜಿಮ್‌ನಲ್ಲೂ ಅದೇ ವಾಯ್‌್ಸ ಏನೋ ಮುರಳಿ ಅಂತ ಕರೆದಿದ್ದು. ಆ ವಾಯ್‌್ಸ ಇನ್ನೂ ಕೇಳಿಸಲ್ಲ ಅಂದರೆ ಹೇಗೆ? ಅಪ್ಪು ರೀತಿ ಬೇರೆ ವ್ಯಕ್ತಿ ಬರಲ್ಲ. ಅವರ ಜಾಗ ತೆಗೆದುಕೊಳ್ಳಲು ಆಗಲ್ಲ. ಕರ್ನಾಟಕಕ್ಕೆ ಒಬ್ಬರೇ ಪವರ್‌ ಸ್ಟಾರ್‌. ನನ್ನ ಮಗಳು ಸಿಂಗರ್‌ ಆಗಬೇಕು ಅಂತ ಹೇಳುತ್ತಿದ್ದಾಳೆ ಅಂದಾಗ ಮಕ್ಕಳಿಗೆ ಏನೋ ಬೇಕೋ ಅದು ಕಲಿಸು ಅಂದವರು, ಮರುದಿನ 11.15ರ ಹೊತ್ತಿಗೆ ಅಪ್ಪು ನೋ ಮೋರ್‌ ಎಂದರೆ ನಂಬಕ್ಕೆ ಆಗಲಿಲ್ಲ. ಅವರು ಸದಾ ನಮ್ಮ ಜತೆಗೆ ಇರುತ್ತಾರೆ ಅಂತಲೇ ದಿನ ಕಳೆಯುತ್ತಿದ್ದೇವೆ.

Follow Us:
Download App:
  • android
  • ios