ಸ್ಯಾಂಡಲ್‌ವುಡ್‌ ಶೋ ಮ್ಯಾನ್‌ ರವಿಚಂದ್ರನ್‌ ಅವರ ‘ರವಿಬೋಪಣ್ಣ’ ಸಿವಿಮಾ ಪ್ರೇಕ್ಷಕರ ಮುಂದೆ ಇಂದು (ಆ.12) ಬರುತ್ತಿದೆ. ಅಂದಹಾಗೆ 50 ವರ್ಷಗಳ ಸಂಭ್ರಮದಲ್ಲಿರುವ ಶ್ರೀ ಈಶ್ವರಿ ಪ್ರೊಡಕ್ಷನ್‌ ಸಂಸ್ಥೆ ನಿರ್ಮಾಣದ ಚಿತ್ರ. ಈ ಬಗ್ಗೆ ಕ್ರೇಜಿಸ್ಟಾರ್‌ ಮಾತುಗಳು ಇಲ್ಲಿವೆ.

ಆರ್‌ ಕೇಶವಮೂರ್ತಿ

ಚಿತ್ರದ ಟ್ರೇಲರ್‌ನಲ್ಲಿ ತುಂಬಾ ಕುತೂಹಲ ಮೂಡಿಸಿದ್ದೀರಲ್ಲ?

ಸಿನಿಮಾ ನೋಡುವಾಗಲೂ ಅದೇ ಕುತೂಹಲ ಇರುತ್ತದೆ. ಜತೆಗೆ ಸಂಭ್ರಮ ಮತ್ತು ಮನಸ್ಸಿಗೆ ತೃಪ್ತಿ ಕೊಡುತ್ತದೆ. ರವಿಚಂದ್ರನ್‌ ಹೊಸದಾಗಿ ಇಷ್ಟವಾಗುತ್ತಾರೆ. ಹೊಸದಾಗಿ ಕಾಣಿಸಿಕೊಳ್ಳುತ್ತಾರೆ. ಇಷ್ಟುದಿನ ನೋಡಿದ ಕ್ರೇಜಿಸ್ಟಾರ್‌ ಬೇರೆ, ಇಲ್ಲಿ ಬೇರೆ ಅನಿಸುವ ಮಟ್ಟಿಗೆ ಸಿನಿಮಾ ಮೂಡಿ ಬಂದಿದೆ.

ಇಲ್ಲಿ ಇಬ್ಬರು ರವಿಚಂದ್ರನ್‌ ಇದ್ದಾರೆಯೇ?

ಅದೇ ಚಿತ್ರದ ಕತೆಯ. ನಮ್ಮೊಳಗೆ ಒಬ್ಬ ಇರುತ್ತಾನೆ. ಅವನನ್ನು ನಾನು ಕರ್ಮ ಎನ್ನುತ್ತೇನೆ. ಆತ ನಮ್ಮ ಜತೆ ಸದಾ ಇರುತ್ತಾನೆ. ಬೋಪಣ್ಣನ ಒಳಗೆ ಇರುವ ಆ ಕರ್ಮ ಆಚೆ ಬರುತ್ತದೆ. ಒಂಟಿಯಾಗಿ ಬಿಡಲ್ಲ. ಕರ್ಮ ಜತೆ ಮಾಡಿಕೊಂಡ ರವಿಬೋಪಣ್ಣನ ಕತೆ ಇಲ್ಲಿದೆ.

ಮಗಳ ಮದುವೆಯಲ್ಲಿ ಹಣದ ಮುಗ್ಗಟ್ಟಿತ್ತು:ಕಷ್ಟದ ಸಮಯ ನೆನೆದ ರವಿಚಂದ್ರನ್

ತುಂಬಾ ಫಿಲಾಸಫಿ ಅನಿಸುತ್ತಿದೆಯಲ್ಲ?

ಸಿನಿಮಾ ನೋಡಿದಾಗ ನಿಮ್ಮ ಈ ಅಭಿಪ್ರಾಯ ಬದಲಾಗುತ್ತದೆ. ನನಗೆ ಕ್ರೇಜಿಸ್ಟಾರ್‌ ಎನ್ನುವ ಹೆಸರು ಕೊಟ್ಟಿದ್ದೀರಿ. ಆದರೆ, ನಿಜವಾದ ಕ್ರೇಜಿಸ್ಟಾರ್‌ನನ್ನು ನೀವು ಇದುವರೆಗೂ ನೋಡಿಲ್ಲ. ಆದರೆ, ‘ರವಿಬೋಪಣ್ಣ’ ಚಿತ್ರದಲ್ಲಿ ನೋಡುತ್ತೀರಿ. ನನ್ನ ಸಿನಿಮಾಗಳನ್ನು ಸಿನಿಮಾ ರೀತಿ ನೋಡಿದರೆ ಪ್ರೇಕ್ಷಕರಿಗೆ ಹಬ್ಬದಂತೆ ಕಾಣುತ್ತದೆ.

ರವಿಬೋಪಣ್ಣನ ಥೀಮ್‌ ಅಥವಾ ಉದ್ದೇಶ ಏನು?

ಯೂ ನೆವರ್‌ ಅಲೋನ್‌. ನಾವು ಒಂಟಿ ಅಲ್ಲ ಎನ್ನುವ ಆಲೋಚನೆ ಮೇಲೆ ಕಟ್ಟಿರುವ ಸಿನಿಮಾ- ಕತೆ. ನಾವು ಮಾಡುವ ಕೆಲಸಗಳು ನಮಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೂ ‘ಅಯ್ಯೋ, ನಡೆಯುತ್ತೆ ಬಿಡು’ ಎಂದುಕೊಳ್ಳುತ್ತೇವೆ. ಆದರೆ, ನಿಮ್ಮೊಳಗೆ ಒಬ್ಬ ಇರುತ್ತಾನಲ್ಲ, ಆತ ಮಾತ್ರ ನಿಮ್ಮನ್ನು ಎಚ್ಚರಿಸುತ್ತಾನೆ, ನಗಿಸುತ್ತಾನೆ, ಪ್ರಶ್ನಿಸುತ್ತಾನೆ, ವ್ಯಂಗ್ಯ ಮಾಡುತ್ತಾನೆ, ನಿಮ್ಮ ಕೆಲಸಗಳ ಬಗ್ಗೆ ಆತ ಮತ್ತೆ ಮತ್ತೆ ನಿಮಗೆ ನೆನಪಿಸುತ್ತಲೇ ಹೋಗುತ್ತಾನೆ. ಅದು ಹೇಗೆ ಎನ್ನುವುದೇ ಈ ಸಿನಿಮಾ.

ಆದರೆ, ಇದು ರೀಮೇಕ್‌ ಸಿನಿಮಾ ಎನ್ನುವವರಿಗೆ ನಿಮ್ಮ ಉತ್ತರ?

ಆದರೆ, ಸಿನಿಮಾನಾ ಸಿನಿಮಾ ರೀತಿ ನೋಡುವವರಿಗೆ ನನ್ನ ಚಿತ್ರಗಳು ಯಾವತ್ತೂ ರೀಮೇಕ್‌, ಸ್ವಮೇಕ್‌ ಎನ್ನುವ ಪ್ರಶ್ನೆಗಳನ್ನು ಹುಟ್ಟಿಸಿಲ್ಲ. ಅಷ್ಟರ ಮಟ್ಟಿಗೆ ನನ್ನತನ ಎಂಬುದನ್ನು ನಾನು ಉಳಿಸಿಕೊಂಡಿದ್ದೇನೆ. ‘ರಣಧೀರ’ ಚಿತ್ರ ರೀಮೇಕ್‌. ಆದರೂ ಅದರ ಮೂಲ ಚಿತ್ರದ ನಿರ್ದೇಶಕ ಸುಭಾಷ್‌ ಘಾಯ್‌ ಅವರೇ ಪದೇ ಪದೇ ‘ರಣಧೀರ’ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಾರೆ. ದತ್ತು ತೆಗೆದುಕೊಳ್ಳುವ ಮಗುವನ್ನು ನಾವೇ ‘ದತ್ತು ತೆಗೆದುಕೊಂಡು ಮಗು’ ಅಂತ ಪದೇ ಪದೇ ಹೇಳಲ್ಲ. ಪ್ರೀತಿಯಿಂದ ನನ್ನದೇ ಮಗು ಅಂತ ಸಾಕಿ, ಬೆಳೆಸುತ್ತೇವೆ. ನನ್ನ ಸಿನಿಮಾ ಕೂಡ ಹಾಗೆ. ನಾನು ಎಲ್ಲಿಂದ ತಂದರೂ ನನ್ನದೇ ಮಗು ಎನ್ನುವಂತೆ ಪ್ರೀತಿಯಿಂದ ಕಟ್ಟಿಪ್ರೇಕ್ಷಕರ ಮುಂದಿಡುತ್ತೇನೆ.

ಈ ಚಿತ್ರವನ್ನು ಕನ್ನಡಕ್ಕೆ ತರಬೇಕು ಅನಿಸಿದ್ದು ಯಾಕೆ?

ಮುಖ್ಯವಾಗಿ ಕತೆ ಹಾಗೂ ಆ ಕತೆ ಮೂಲಕ ಹೇಳಕ್ಕೆ ಹೊರಟಿರುವ ವಿಷಯ ನನಗೆ ಅರ್ಥ ಆಯಿತು. ಮತ್ತು ಇಷ್ಟಆಯಿತು. ಅದನ್ನು ನನ್ನ ಚಿತ್ರಗಳನ್ನು ನೋಡಿಕೊಂಡು ಬಂದ ಪ್ರೇಕ್ಷಕರಿಗೂ ನನ್ನದೇ ಸ್ಟೈಲಿನಲ್ಲಿ ಹೇಳಬೇಕು ಅನಿಸಿತು. ಮನುಷ್ಯರನಲ್ಲ, ಮನಸುಗಳನ್ನು ಅರ್ಥ ಮಾಡಿಕೊಳ್ಳಬೇಕು. ವ್ಯಕ್ತಿಗಳಿಗಿಂತ ವ್ಯಕ್ತಿತ್ವಗಳು ಮುಖ್ಯ ಎನ್ನುವ ಆ ಚಿತ್ರದ ಒಳ ನೋಟ ಕನ್ನಡ ನೆಲದಲ್ಲಿ ಹೇಳಬೇಕು ಅನಿಸಿತು.

ನೀವೇ ಹೇಳಿದಂತೆ ನಿಮ್ಮತನಗಳು ಇಲ್ಲಿ ಏನೇನಿವೆ?

ನಿರೂಪಣೆ ಹೊಸದಾಗಿದೆ. ಸಂಗೀತದ ಮೂಲಕ ಕತೆ ಹೇಳಿದ್ದೇನೆ. ನಿರೂಪಣೆ ಮತ್ತು ಸಂಗೀತ ಎರಡೂ ಮಿಕ್ಸ್‌ ಆಗಿ ಸಾಗುತ್ತದೆ. ಏನ್‌ ಮಹಾ ಮಾಡಿದ್ದಾನೆ ಎನ್ನುವವರಿಗೂ, ಏನಿರಬಹುದು ಈ ಚಿತ್ರದಲ್ಲಿ ಎನ್ನುವವರಿಗೂ ‘ರವಿಬೋಪಣ್ಣ’ ಸಮರ್ಥವಾಗಿ ಉತ್ತರ ಕೊಡುತ್ತಾನೆ. ಸ್ಕ್ರೀನ್‌ ಅನುಭವ ನಾನು ಕೊಟ್ಟಂತೆ ಬೇರೆಯವರು ಕೊಡಲ್ಲ. ಇದೆಲ್ಲದರ ಜತೆಗೆ ಲವ್‌, ಫ್ಯಾಮಿಲಿ, ತೊಳಲಾಟವೂ ಇದೆ. ಜತೆಗೆ ಸಮಾಜಕ್ಕೆ ಸಂಬಂಧ ಇರುವ ತಿರುವುಗಳು ಇಲ್ಲಿವೆ.

‘ರವಿ ಬೋಪಣ್ಣ’ ಪ್ರೀ ರಿಲೀಸ್​​: ಸುದೀಪ್ ವಾಯ್ಸ್‌ನಲ್ಲಿ ಕರೆಂಟ್‌ ಇದೆ ಅಂದ್ರು ಕ್ರೇಜಿ ಸ್ಟಾರ್

ಇದು ನಿಮ್ಮ ಸಂಸ್ಥೆಯ ಸಿನಿಮಾ ಆಗಿದ್ದು ಹೇಗೆ?

ಮೊದಲು ಬೇರೆಯವರು ಶುರು ಮಾಡಿದ್ದು. ಆಗ ಅದು ಪ್ರಯೋಗಾತ್ಮಕ ಚಿತ್ರವಾಗಿತ್ತು. ಮತ್ತೆ ‘ಅಪೂರ್ವ’ ಆಗೋದು ಬೇಡ ಎಂದುಕೊಂಡು ಕಮರ್ಷಿಯಲ್ಲಾಗಿ ಮಾಡಬೇಕು ಎಂದುಕೊಂಡು ನಾನೇ ಎಲ್ಲ ಜವಾಬ್ದಾರಿ ವಹಿಸಿಕೊಂಡೆ. 50ರ ಸಂಭ್ರಮದಲ್ಲಿರುವ ಶ್ರೀ ಈಶ್ವರಿ ಪ್ರೊಡಕ್ಷನ್‌ ಸಂಸ್ಥೆಯಲ್ಲಿ ಈ ಚಿತ್ರ ಬಂದರೆ ಚೆನ್ನಾಗಿರುತ್ತದೆ ಅನಿಸಿ, ನಿರ್ಮಾಣ ಕೂಡ ನಾನೇ ಮಾಡಿದ್ದೇನೆ.

ಕಮರ್ಷಿಯಲ್‌ ಕಾರಣಕ್ಕೆ ಸುದೀಪ್‌ ಪಾತ್ರ ಬಂದಿದ್ದಾ?

ಕತೆಗೆ ಬೇಕಿತ್ತು. ಆದರೆ, ಸುದೀಪ್‌ ಅವರೇ ಯಾಕೆ ಎಂದರೆ ನನ್ನ ಮತ್ತು ಅವರ ಸಂಬಂಧವನ್ನು ಮಾತಿನಲ್ಲಿ ಹೇಳಕ್ಕೆ ಆಗಲ್ಲ. ಸಿನಿಮಾ ಮೇಲಿನ ಪ್ರೀತಿ ನಮ್ಮಿಬ್ಬರನ್ನು ಜತೆಗೂಡಿಸಿದೆ. ಸುದೀಪ್‌ ಅವರು ತೂಕದ ಪಾತ್ರವನ್ನು ಅವರು ಈ ಚಿತ್ರದಲ್ಲಿ ಮಾಡಿದ್ದಾರೆ.

ಉಳಿದ ಪಾತ್ರಧಾರಿಗಳು ಬಗ್ಗೆ ಹೇಳುವುದಾದರೆ?

ಇಬ್ಬರು ನಾಯಕಿಯರು. ರಾಧಿಕಾ ಹಾಗೂ ಕಾವ್ಯ ಶೆಟ್ಟಿ. ಹಠವಾದಿ ಹಾಗೂ ಒಡಹುಟ್ಟಿದವರು ಚಿತ್ರಗಳ ನಂತರ ನಾನು ರಾಧಿಕಾ ಜತೆಯಾಗಿದ್ದೇವೆ. ತುಂಬಾ ಚೆನ್ನಾಗಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.