ಡಾಲಿ @ 10; ಧನಂಜಯ್ ಹೀರೋ ಡಾಲಿ ಪಕ್ಕಾ ವಿಲನ್: ಧನಂಜಯ್ Exclusive
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಧನಂಜಯ್ ಅವರು ಚಿತ್ರರಂಗಕ್ಕೆ ಬಂದು ಮೇ 31ಕ್ಕೆ ಹತ್ತು ವರ್ಷಗಳು. ಜಯನಗರ 4ನೇ ಬ್ಲಾಕ್ ನಿಂದ ಬಂದ 'ಡೈರೆಕ್ಟರ್ ಸ್ಪೆಷಲ್' ನಟ ಡಾಲಿಯಾಗಿ ನೆಲೆ ನಿಂತಿದ್ದೇ ಒಂದು ರೋಚಕ. ಸದ್ಯ ಬಡವರ ಮಕ್ಕಳ ಸ್ಫೂರ್ತಿ ಮತ್ತು ಪ್ರೇರಣೆ, ಬೆನ್ನೆಲುಬು ಆಗಿರು ಡಾಲಿ ಧನಂಜಯ್ ಇಲ್ಲಿ ಮಾತನಾಡಿದ್ದಾರೆ.
ಆರ್ ಕೇಶವಮೂರ್ತಿ
1. ನಿಮ್ಮ ಪಯಣವನ್ನು ಒಮ್ಮೆ ತಿರುಗಿ ನೋಡಿದಾಗ ?
ಕಲಿಕೆಯ ಪ್ರಯತ್ನದಲ್ಲಿ 10 ವರ್ಷ ಪ್ರಯಾಣ ಮಾಡಿಕೊಂಡು ಬಂದಿದ್ದೇನೆ. ಕಲಿಕೆಯ ಹತ್ತು, ಕಲಿಯಬೇಕಾದ ಇನ್ನಷ್ಟು ವರ್ಷಗಳ ತಿರುವಿನಲ್ಲಿ ನಿಂತ ಸಂತೋಷ.
2. ಚಿತ್ರರಂಗಕ್ಕೆ ಬರೋ ಮೊದಲು ಇದ್ದ ಕಲ್ಪನೆ, ಬಂದ ಮೇಲೆ ಗೊತ್ತಾಗಿದ್ದೇನು?
ಬರುವ ಮೊದಲು ಒಂದು ಮುಗ್ಧತೆ ಇರುತ್ತದೆ. ಬಂದ ಮೇಲೆ ವಾಸ್ತವತೆ ತಿಳಿಯುತ್ತವೆ. ಇಲ್ಲಿ ರಾತ್ರೋ ರಾತ್ರಿ ಹೀರೋ ಆಗಕ್ಕೆ ಆಗಲ್ಲ. ಪ್ರತಿ ದಿನ ಕಲಿಯುತ್ತಾ ಹೋಗುವುದಕ್ಕೆ ಮಾತ್ರ ಅವಕಾಶ ಇದೆ ಅನ್ನೋದು ಗೊತ್ತಾಗುತ್ತದೆ.
3. ಹೀರೋ ಆಗೇ ಆಗ್ತೀನಿ ಅಂತ ಅಷ್ಟೂ ನಿಖರವಾಗಿ ನೀವೇ ನಿಮ್ಮ ಭವಿಷ್ಯವನ್ನು ಹೇಳೋದಕ್ಕೆ ಸಾಧ್ಯವಾಗಿದ್ದು ಹೇಗೆ?
ತುಂಬಾ ಸ್ವಚ್ಚ ಮತ್ತು ಪ್ರಾಮಾಣಿಕವಾದ ಕನಸು ಇತ್ತು. ಯಾವುದೇ ಕೆಲಸವನ್ನು ಮುನ್ನುಗ್ಗಿ ಮಾಡುವ ಸ್ವಭಾವ ಇತ್ತು. ಅದು ನನ್ನಲ್ಲಿ ವಿಶ್ವಾಸ ಮೂಡಿಸುತ್ತಿತ್ತು. ಜೀವನದಲ್ಲಿ ಏನಾಗಬೇಕು ಎನ್ನುವ ಕ್ಲಾರಿಟಿ ಇತ್ತು. ಇವಿಷ್ಟು ‘ನಾನು ಮುಂದೆ ಹೀರೋ ಆಗೇ ಆಗ್ತೀನಿ’ ಅನ್ನೋ ನಂಬಿಕೆಯ ಮಾತು ಆಗಲೇ ಹೇಳಿಸಿದೆ.
ನೋಡಲೇಬೇಕಿರುವ ಕತೆ ಡೇರ್ ಡೆವಿಲ್ ಮುಸ್ತಾಫಾ: ಧನಂಜಯ
4. ಒಂದು ವೇಳೆ ನೀವು ‘ಟಗರು’ ಚಿತ್ರದಲ್ಲಿ ಡಾಲಿ ಆಗದೆ ಹೋಗಿದ್ದರೆ?
ಏನಾಗಿರುತ್ತಿದ್ದೆ ಅಂತ ಗೊತ್ತಿಲ್ಲ. ಆದರೆ, ಸಿನಿಮಾ ಅಂತೂ ಮಾಡುತ್ತಿದ್ದೆ. ಒಂದು ಸಿನಿಮಾ ನಿರ್ದೇಶನಕ್ಕೂ ಪ್ಲಾನ್ ಮಾಡಿಕೊಂಡಿದ್ದೆ. ಆ ಮೇಲೆ ಏನಾಗುತ್ತಿದ್ದೆ ಎಂಬುದು ಗೊತ್ತಿಲ್ಲ.
5. ಹೌದು, ನೀವು ಹೀರೋನಾ, ವಿಲನ್ನಾ?
ಎರಡೂ. ಧನಂಜಯ್ ಅಂದರೆ ಹೀರೋ, ಡಾಲಿ ಅಂದರೆ ವಿಲನ್ ಅಂತ ಅಂದುಕೊಳ್ಳಿ.
6. ನಟನಾಗಿ ನಿಮ್ಮಲ್ಲಿ ನೀವು ಕಂಡುಕೊಂಡ ಪ್ಲಸ್ ಮತ್ತು ಮೈನಸ್‌ಗಳೇನು?
ನಟನಾಗಿ, ಸ್ನೇಹಿತನಾಗಿ, ಒಳ್ಳೆಯ ವ್ಯಕ್ತಿಯಾಗಿ ನಾನು ಯಾವತ್ತೂ ಸೋತಿಲ್ಲ. ಕತೆ, ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಮೈನಸ್ ಗಳು ಆಗಿವೆ. ತಪ್ಪು ಮಾಡಿದರೆ ತಾನೇ ಕಲಿಯಕ್ಕೆ ಸಾಧ್ಯ ಆಗೋದು.
ಐರನ್ ಲೆಗ್ ಅಂತ ಕೆಟ್ಟ ಪದಗಳಲ್ಲಿ ಬೈದಿದ್ದಾರೆ, ನಿಜವಾದ ಕೊಡಲಿಯಿಂದ ಪೆಟ್ಟುಬಿದ್ದಿದೆ: ಭಾವುಕರಾದ ಧನಂಜಯ್
7. ನಿಮ್ಮ ಪಾತ್ರ, ಕತೆ, ಸಿನಿಮಾಗಳ ಆಯ್ಕೆ ಹೇಗಿರುತ್ತದೆ?
ಆರಂಭದಲ್ಲಿ ನಂಬಿಕೆ ಮೇಲೆ ಕೆಲಸ ಮಾಡಲು ಶುರು ಮಾಡಿದೆ. ವಿಲನ್ ಆಗಬೇಕು ಎಂದಾಗ ಮಾಡೋಣ, ತಪ್ಪೇನು ಅಂತ ಮಾಡಿದೆ. ಮತ್ತೆ ಹೀರೋ ಆಗಕ್ಕೆ ನಾನೇ ಶ್ರಮ ಪಟ್ಟೆ. ನಿರ್ಮಾಣಕ್ಕಿಳಿದೆ. ಅವಕಾಶ, ಅನಿವಾರ್ಯತೆ, ನಂಬಿಕೆ ಮತ್ತು ಭರವಸೆಗಳ ನಡುವೆ ನನ್ನ ಆಯ್ಕೆಗಳು ಪ್ರಯಾಣ ಮಾಡುತ್ತಾ ಬಂದಿವೆ. ಈಗ ಸೆಲೆಕ್ಟೆಟ್ ಆಗಿದ್ದೇನೆ. ಎಷ್ಟರ ಮಟ್ಟಿಗೆ ಎಂದರೆ ‘ಹೊಯ್ಸಳ’ ಸಿನಿಮಾ ನಂತರ ನಾನು ಈಗ ಒಂದೇ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ.
8. ನಿರ್ಮಾಣ, ನಟನೆ, ಹೀರೋ, ವಿಲನ್ನು, ಸಿನಿಮಾಗಳ ಬಿಡುಗಡೆಗೆ ಬೆನ್ನೆಲುಬು. ಹೇಗೆ ಇದೆಲ್ಲ, ರಿಸ್ಕ್ ಅನಿಸುತ್ತಿಲ್ಲವೇ?
ನಾನು ಈ ಹಿಂದೆಯೇ ಹೇಳಿಕೊಂಡಿದ್ದ, ‘ನಾನು ಇಲ್ಲಿಗೆ ಬಂದಿರುವುದು ತುಂಬಾ ಕಂಫೋರ್ಟ್ ಆಗಿರಕ್ಕೆ ಅಲ್ಲ. ನಾನು ಬೆಳೆಯಬೇಕು. ಬೇರೆಯವರನ್ನು ಜತೆಯಲ್ಲಿ ಕರೆದುಕೊಂಡು ಹೋಗಬೇಕು’ ಎಂದು. ನಟ ಅಂದ ಮೇಲೆ ಎಲ್ಲ ರೀತಿಯಲ್ಲೂ ತೆರೆದುಕೊಳ್ಳಬೇಕು ಎಂಬುದು ನನ್ನ ಪಾಲಿಸಿ. ರಿಸ್ಕ್ ಎನ್ನುವುದಕ್ಕಿಂತ ಚಿತ್ರರಂಗ ನನಗೆ ಎಲ್ಲವನ್ನು ಕೊಟ್ಟಿದೆ. ಅದೇ ಚಿತ್ರರಂಗದಲ್ಲಿ ನಾನೂ ಕೂಡ ಏನಾದರು ಕೊಡುತ್ತಿದ್ದೇನೆಂಬ ತೃಪ್ತಿ ಇದೆ.
9. ನೀವೂ ಕೂಡ ಈಗ ಕಾಸ್ಟ್ಲಿ ಹೀರೋ ಅಂತಾರಲ್ಲ?
ವ್ಯವಹಾರ ಅಂತ ಬಂದಾಗ ಒಂದಿಷ್ಟು ದುಡಿಮೆ ಅಂತ ಬೇಕಾಗುತ್ತದೆ ಅಲ್ವಾ. ಅದು ಬದುಕಕ್ಕೆ. ಅದು ಕಾಸ್ಟ್ಲಿನಾ ಅಂತ ಕೇಳಿದರೆ ನನಗೆ ಗೊತ್ತಿಲ್ಲ. ನಾನು ಕಾಸ್ಟ್ಲೀ ಆದ್ರೂ ಅವೈಲಬಲ್!
ಲವ್ ಬ್ರೇಕಪ್ ಮಾಡ್ಕೊಂಡ್ರೆ ಸ್ಟೇಟ್ಸ್ ಹಾಕೋದು; ಜನರೇಷನ್ ಗ್ಯಾಪ್ ಬಗ್ಗೆ ಮಾತನಾಡಿದ ಧನಂಜಯ್
10. ಒಂದು ಭಾವುಕ ನೆನಪು?
ಕಳೆದ ಹೊಸ ವರ್ಷದ ದಿನ ನಾನು ಸ್ನೇಹಿತರ ಜತೆಗೆ ಹೋಗುತ್ತಿದ್ದಾಗ ಆಟೋ ಮೇಲೆ ನನ್ನ ಫೋಟೋ ನೋಡಿದೆ. ನನ್ನ ಫೋಟೋ ಹಾಕಿಕೊಂಡಿದ್ದ ಆಟೋ ಚಾಲಕನನ್ನು ಮಾತನಾಡಿಸಿ, ಹೊಸ ವರ್ಷ ಏನಾದರೂ ತೆಗೆದುಕೊಳ್ಳಲಿ ಅಂತ ದುಡ್ಡು ಕೊಟ್ಟರೆ ಆಟೋ ಚಾಲಕ ಹಣ ತೆಗೆದುಕೊಳ್ಳಲಿಲ್ಲ. ‘ಅಣ್ಣ ನಾವು ನಿಮ್ಮ ಹತ್ತಿರ ತೆಗೆದುಕೊಳ್ಳಬಾರದು. ನಾವೇ ನಿಮಗೆ ಕೊಡಬೇಕು’ ಅಂದ. ಅವನ ಮಾತು ಕೇಳಿ ನಾನು ಮೌನ ಆಗಿಬಿಟ್ಟೆ. ಈಗ ಹೇಳಿ, ನಾನು ತೆರೆ ಮೇಲೆ ಕಾಣಿಸಿಕೊಂಡಂತೆ ತೆರೆ ಆಚೆಗೂ ಅಭಿಮಾನಿಸುವವರನ್ನು ನೋಡಿ ಎದೆ ಉಬ್ಬಿಸಿಕೊಂಡು ಟಾಟಾ ಮಾಡಿಕೊಂಡು ಹೋಗಬೇಕಾ, ಇಂಥ ಆಟೋ ಚಾಲಕರ ಜತೆಗೆ ಭಾವುಕ ಕ್ಷಣಗಳಿಗೆ ಸಾಕ್ಷಿ ಆಗಬೇಕಾ ಅಂತ. ಮೊನ್ನೆ ಮೈಸೂರಿನಲ್ಲಿ ಅಭಿಮಾನಿಗಳೆಲ್ಲ ಸೇರಿ ನನ್ನ 10 ವರ್ಷಗಳ ಸಂಭ್ರಮ ಆಚರಿಸಿದರು. ಆ ಪ್ರೀತಿಗೆ ನಾನು ಬೆಲೆ ಕಟ್ಟಕ್ಕೆ ಆಗಲ್ಲ.
11. ಈ ಸಿನಿಮಾದವರಿಗೆ ರಾಜಕೀಯ, ಸಿದ್ದಾಂತಗಳ ಉಸಾಬರಿ ಯಾಕೆ ಅಂತಾರಲ್ಲ?
ನಾನು ಸಿನಿಮಾದವನು ನಿಜ. ಅದರ ಜತೆಗೆ ನಾನೂ ಕೂಡ ಮತದಾರ. ನಾನೂ ಕೂಡ ವೋಟ್ ಹಾಕುತ್ತೇನೆ. ಏನಾದರು ಹೇಳುವ ಮತ್ತು ಪ್ರಶ್ನಿಸುವ ಹಕ್ಕು ನನಗೂ ಇದೆ. ಬಡತನ- ಹಸಿವು, ರಾಜಕೀಯ, ಸಿದ್ದಾಂತ, ಪ್ರೀತಿ, ಅಭಿಮಾನ ಒಳಗೊಂಡಿರುವ ವ್ಯವಸ್ಥೆಯಲ್ಲೇ ನಾನೂ ಇದ್ದೇನೆ. ಈ ವ್ಯವಸ್ಥೆಯ ಭಾಗವಾಗಿರುವ ನಾನು ಆ ಬಗ್ಗೆ ನನಗೆ ಅನಿಸಿದ್ದನ್ನು ಹೇಳುತ್ತೇನೆ. ಇದನ್ನು ಯಾರೂ ಹೇಳಿಕೊಡಬೇಕಿಲ್ಲ. ಇದು ಜವಾಬ್ದಾರಿ ಕೂಡ.