ಭಯ-ಭಕ್ತಿಯಿಂದ ಸಂಭಾಷಣೆ ಬರೆದ ಸಿನಿಮಾ ಕಾಟೇರ: ಮಾಸ್ತಿ ಜೊತೆ ಮಾತುಕತೆ
ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ, ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಚಿತ್ರ ಯಶಸ್ವಿಯಾಗಿ ಮುನ್ನುಗುತ್ತಿದೆ. ಬಹುತೇಕರು ಚಿತ್ರದ ಸಂಭಾಷಣೆಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಸಂಭಾಷಣಾಕಾರ ಮಾಸ್ತಿ ಮಾತನಾಡಿಸಿದಾಗ ಅವರು ಹೇಳಿದ ಮಾತುಗಳು ಇಲ್ಲಿವೆ.
- ಒಂದು ಕಡೆ ಗಟ್ಟಿಯಾದ ಕತೆ, ಮತ್ತೊಂದೆಡೆ ಜಾತಿ ಪದ್ಧತಿಯ ಹಿನ್ನೆಲೆ, ಇನ್ನೊಂದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಇವೆಲ್ಲವನ್ನೂ ಯೋಚಿಸುತ್ತಾ ನಾನು ಭಯ-ಭಕ್ತಿಯಿಂದ ಸಂಭಾಷಣೆ ಬರೆದ ಸಿನಿಮಾ ‘ಕಾಟೇರ’.
- ತರುಣ್ ಸುಧೀರ್ ಮತ್ತು ಜಡೇಶ್ ಹಂಪಿ ನನಗೆ ಕತೆ ಹೇಳಿದಾಗ ನಾನು ಆ ಕತೆಯನ್ನು ಬಿಡಿಬಿಡಿಯಾಗಿ ನೋಡಿದೆ. ಮೊದಲು ಕಮ್ಮಾರ ಪಾತ್ರ ಕಾಣಿಸಿತು. ಅಲ್ಲಿಗೆ ಬರುವ ರೈತರು, ದೊಡ್ಡವರು ಕಾಣಿಸಿದರು. ಆ ಪಾತ್ರ ಮಾಡುವ ಮಚ್ಚು ಕಾಣಿಸಿತು. ಅದಕ್ಕೆ ಪೂರಕವಾಗಿ ನಾನು ಆಲೋಚಿಸುತ್ತಾ ಹೋದೆ.
- ಇಲ್ಲಿ ದರ್ಶನ್ ಇದ್ದಾರೆ. ಅವರಿರುವಾಗ ಹೀರೋಯಿಕ್ ಆದ ಸಂಭಾಷಣೆ ಬೇಕು. ಆದರೆ ಕತೆ ಬೇರೆ ಥರ ಇದೆ. ಇಲ್ಲಿ ಪಾತ್ರ ಕಾಣಿಸಬೇಕು. ಅಚ್ಚರಿ ಎಂದರೆ ದರ್ಶನ್ ಮೊದಲೇ ಆ ಮನಸ್ಥಿತಿಗೆ ಬಂದಿದ್ದರು. ಇಮೇಜ್ ಬಿಟ್ಟು ಪಾತ್ರವೇ ಆಗಿ ಸಿದ್ಧವಾಗಿದ್ದರು. ಹಾಗಾಗಿ ನಾನು ಮೊದಲು ಬರೆದ ಸಂಭಾಷಣೆಯೇ, ‘ಬೇರೆಯವರು ನಾಲ್ಕು ಹೆಜ್ಜೆ ಮೇಲೆ ಹೋಗುತ್ತಾರೆ ಎಂದರೆ ಎರಡು ಹೆಜ್ಜೆ ಕೆಳಗಿಳಿಯೋಕೆ ನಾವು ಸಿದ್ಧ’ ಅಂತ.
ಅಪ್ಪ ಬಂಡವಾಳ ಹಾಕೋದು ಬೇಡ ಎಂದ ಆರಾಧನಾ; ಕೋಟಿ ರಾಮು ನೆನೆದು ಕಣ್ಣೀರಿಟ್ಟ ಮಾಲಾಶ್ರೀ!
- ಬರೆಯೋಕೆ ಮೊದಲು ದರ್ಶನ್ ಏನು ಯೋಚನೆ ಮಾಡುತ್ತಾರೆ, ಹೇಗೆ ಮಾತನಾಡುತ್ತಾರೆ ಎಂಬುದನ್ನು ನಿರ್ದೇಶಕರ ಬಳಿ ಕೇಳಿ ತಿಳಿದುಕೊಂಡೆ. ಉಳುವವನೇ ಹೊಲದೊಡೆಯ ಕಾಯ್ದೆ ಬಂದ ಕಾಲದ ಪತ್ರಿಕೆಗಳನ್ನು ಓದಿದೆ. ಸೆನ್ಸಿಟಿವ್ ಸಿನಿಮಾ ಆದ್ದರಿಂದ ಯಾರಿಗೋ ನೋವಾಗದಂತೆ ಬರೆಯುವ ಜವಾಬ್ದಾರಿ ನನ್ನ ಮೇಲೆ ಇತ್ತು. ಆಮೇಲೆ ನಾನು ಬದುಕನ್ನು ನೋಡಿ ಮಾತುಗಳನ್ನು ಬರೆದೆ.
- ಕತೆಯ ಸೂಕ್ಷ್ಮತೆಯನ್ನು ಮನಸ್ಸಲ್ಲಿಟ್ಟುಕೊಂಡೇ ಕೆಲವು ಸನ್ನಿವೇಶಗಳಲ್ಲಿ ದರ್ಶನ್ ಅವರ ಅಭಿಮಾನಿಗಳಿಗೆ ಖುಷಿ ಕೊಡುವ ಸಂಭಾಷಣೆಗಳನ್ನೇ ನಾನು ಬರೆಯಬೇಕಿತ್ತು. ಅದಕ್ಕೆ ಪೂರಕವಾದ ದೃಶ್ಯಗಳಲ್ಲಿ ಅದೇ ಥರದ ಡೈಲಾಗ್ ಬರೆದೆ. ಉದಾಹರಣೆಗೆ ಮೆಶಿನ್ ಮಚ್ಚು ಮಾರಾಟ ಮಾಡುವವನು ಬಂದಾಗ ಹೇಳುವ ಮಾತು, ಮಚ್ಚು ಒಡವೆ ಥರ ಕಾಣಿಸಬಾರದು, ಒಡೆಯೋ ಥರ ಕಾಣಿಸಬೇಕು. ಎಲ್ಲಾ ಹಾವುಗಳು ತಲೆ ಎತ್ತುತ್ತವೆ, ಆದರೆ ಕಾಳಿಂಗ ಸರ್ಪ ಮಾತ್ರ ಹೆಡೆ ಎತ್ತುತ್ತದೆ, ಗಂಡ್ಸಾದವನ ಬೆವರು ಸುರಿಸಬೇಕು- ಜೊಲ್ಲು ಸುರಿಸಬಾರದು. ಸೂಕ್ಷ್ಮವಾಗಿ ಬರೆದಾಗ ಎಲ್ಲರಿಗೂ ಆ ಮಾತು ಇಷ್ಟವಾಗುತ್ತದೆ. ಅದೇ ಪ್ರಕಾರ ಈ ಮಾತುಗಳು ಎಲ್ಲರಿಗೂ ತಲುಪಿವೆ.
ಮೂಗು ಸರಿಯಾಗಿಲ್ಲ, ಹಲ್ಲಿನ ಮೇಲೆ ಹಲ್ಲಿತ್ತು; ಆಗ ಮಾಲಾಶ್ರೀ ಎದುರಿಸಿದ ಟೀಕೆಗೆ ನೆಟ್ಟಿಗರು ಶಾಕ್!
- ಚಿತ್ರೀಕರಣದ ಸಮಯದಲ್ಲೇ ದರ್ಶನ್ ಅವರು ಚೆನ್ನಾಗಿ ಬರೆದಿದ್ದೀರಿ ಅಂತ ಹೇಳಿದ್ದರು. ಈಗ ಸಿನಿಮಾ ಬಂದ ಮೇಲೆ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ನನಗೆ ಸಿಕ್ಕ ಅತ್ತುತ್ತಮ ಮೆಚ್ಚುಗೆ ಎಂದರೆ ಈ ಸಿನಿಮಾವನ್ನು ನಾವು ಆಡಿಯೋ ಮೂಲಕವೂ ನೋಡಬಹುದು ಅಂತ ಹೇಳಿದ್ದು. ಮೊದಲೆಲ್ಲಾ ಸಿನಿಮಾಗಳ ಚಿತ್ರಕತೆ ಬರುತ್ತಿತ್ತಲ್ಲ. ಆಥರ ಕೇಳಿ ಕಲ್ಪಿಸಿಕೊಳ್ಳಬಹುದು ಎಂದರು ಒಬ್ಬರು.
- ಹೊಸಬರು ಸಂಭಾಷಣೆ ಬರೆಯಲು ಚಿತ್ರರಂಗಕ್ಕೆ ಬರಬಹುದು. ಆದರೆ ಅವರಿಗೆ ನಿಜಕ್ಕೂ ಅವರ ಶಕ್ತಿ ಏನು ಅನ್ನುವುದು ಗೊತ್ತಿರಬೇಕು. ನಟನೆ ಗೊತ್ತಿರುವವರು ಬರವಣಿಗೆಗೆ ಹೋಗಬಾರದು, ಬರಣಿಗೆ ತಿಳಿದವರು ಎಡಿಟಿಂಗ್ ಮಾಡಬಾರದು. 10 ಬಾಗಿಲುಗಳಿರುತ್ತವೆ. ತಾನು ತಟ್ಟಬಹುದಾದ ಬಾಗಿಲು ಯಾವುದು ಅನ್ನುವುದು ಗೊತ್ತಿರಬೇಕು.
100 ಕೋಟಿ ಕ್ಲಬ್ ಸೇರುವ ಹಂತದಲ್ಲಿ ಕಾಟೇರ
ಬಿಡುಗಡೆಯಾಗಿ ಆರು ದಿನ ಕಳೆದರೂ ‘ಕಾಟೇರ’ ಅಬ್ಬರ ತಗ್ಗಿಲ್ಲ. ದರ್ಶನ್ ನಟನೆಯ ಈ ಸೂಪರ್ ಹಿಟ್ ಸಿನಿಮಾ ಇದೀಗ ನೂರು ಕೋಟಿ ರು. ಕಲೆಕ್ಷನ್‌ನತ್ತ ದಾಪುಗಾಲು ಹಾಕುತ್ತಿದೆ. ಸಿನಿಮಾದ ಈವರೆಗಿನ ಗಳಿಕೆ 95.36 ಕೋಟಿ ರು. ಎಂದು ಅಂದಾಜಿಸಲಾಗಿದೆ. ಕನ್ನಡ ಒಂದೇ ಭಾಷೆಯಲ್ಲಿ ಬಿಡುಗಡೆಯಾಗಿ ಅತೀ ಕಡಿಮೆ ದಿನದಲ್ಲಿ ನೂರು ಕೋಟಿ ಗಡಿಯತ್ತ ಹೆಜ್ಜೆ ಹಾಕುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ಮಾಡಲು ಚಿತ್ರ ಹೊರಟಿದೆ.
ಕಾಟೇರ ನೋಡಿದ ಸೆಲೆಬ್ರಿಟಿಗಳು
ಕನ್ನಡ ಚಿತ್ರರಂಗದ ಗಣ್ಯರಿಗಾಗಿ ಸೆಲೆಬ್ರಿಟಿ ಶೋ ಆಯೋಜಿಸಲಾಗಿತ್ತು. ರಮೇಶ್ ಅರವಿಂದ್, ಉಪೇಂದ್ರ, ಬಿ ಸರೋಜಾದೇವಿ, ಧನಂಜಯ್, ವಿನೋದ್ ಪ್ರಭಾಕರ್, ಸತೀಶ್ ನೀನಾಸಂ, ಯೋಗರಾಜ್ ಭಟ್, ವಸಿಷ್ಠ ಸಿಂಹ, ಹರಿಪ್ರಿಯಾ, ಪ್ರಿಯಾಂಕಾ ಉಪೇಂದ್ರ ಮುಂತಾದವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್, ರಾಕ್‌ಲೈನ್ ವೆಂಕಟೇಶ್ ಮೆಟ್ಟಿಲ ಮೇಲೆ ಕುಳಿತು ಸಿನಿಮಾ ನೋಡಿದರು.