ಅನುರಾಗ್‌ ಕಶ್ಯಪ್‌ ನಟನೆಯ ‘ದೋಬಾರಾ’ ಚಿತ್ರದಲ್ಲಿ ಕನ್ನಡದ ನಟಿ ಮೇದಿನಿ ಕೆಳಮನೆ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾ ಕಥೆ ಅವರಿಗೆ ಕನೆಕ್ಟ್ ಆಗಿದೆ. ಈ ಚಿತ್ರ ಆ.19ಕ್ಕೆ ಬಿಡುಗಡೆ ಆಗಲಿದೆ. ಅನುರಾಗ್‌ ಕಶ್ಯಪ್‌ ಸಿನಿಮಾದಲ್ಲಿ ನಟಿಸಿದ ಅನುಭವವನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೀಗ ಉಪೇಂದ್ರ ಅವರ ‘ಯು ಐ’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಿಯಾ ಕೆರ್ವಾಶೆ

ದೋಬಾರ ತಂಡ ನಿಮ್ಮನ್ನು ಸಂಪರ್ಕಿಸಿದ್ದು ಹೇಗೆ?

ಸೋಷಿಯಲ್‌ ಮೀಡಿಯಾ ಮೂಲಕ ಕಾಂಟ್ಯಾಕ್ಟ್ ಮಾಡಿದ್ದು. ದೋಬಾರ ಟೀಮ್‌ನ ಕಾಸ್ಟಿಂಗ್‌ ಡೈರೆಕ್ಟರ್‌ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್‌ ಮಾಡಿದ್ರು. ನಾನಾಗ ಶೂಟಿಂಗ್‌ನಲ್ಲಿದ್ದೆ. ಒಂದು ವಾರ ರಿಪ್ಲೈ ಮಾಡಿರಲಿಲ್ಲ. ಅಷ್ಟರಲ್ಲಿ ಈ ಶೂಟಿಂಗ್‌ ಸೆಟ್‌ನಲ್ಲಿ ತಲೆ ಕೆಟ್ಟಿತ್ತು. ಆಡಿಶನ್‌ ಮಾಡಿ ಕಳಿಸೋಣ ಅಂತ ಅವರನ್ನು ಸಂಪರ್ಕಿಸಿದೆ. ಆ ಹೊತ್ತಿಗೆ ಇನ್ನೊಂದು ಶೂಟಿಂಗ್‌ನಲ್ಲೇ ಇದ್ದ ಕಾರಣ ಒಳ್ಳೆ ಕ್ಯಾಮರ, ಲೈಟಿಂಗ್‌ನಲ್ಲಿ ವೀಡಿಯೋ ಚೆನ್ನಾಗಿ ಬಂತು. ಅದನ್ನು ನೋಡಿದ ಅನುರಾಗ್‌ ಕಶ್ಯಪ್‌ ಅವರಿಗೆ ನನ್ನ ಆ್ಯಕ್ಟಿಂಗ್‌ ಇಷ್ಟಆಗಿ ಆ ಪಾತ್ರದ ಬದಲು ದೊಡ್ಡ ಪಾತ್ರ ಕೊಟ್ಟರು.

ಯಾವುದು ಆ ಪಾತ್ರ?

ರುಜುತಾ ಅಂತ ಪಾತ್ರದ ಹೆಸರು. ಇಡೀ ಸಿನಿಮಾ ನನ್ನ ಪಾತ್ರದ ಜೊತೆಗೆ ಕನೆಕ್ಟ್ ಆಗುತ್ತೆ. ಇಷ್ಟರ ಮೇಲೆ ನನ್ನ ಪಾತ್ರದ ಏನೇ ಕತೆ ಹೇಳಿದರೂ ಸ್ಟೋರಿ ಗೊತ್ತಾಗಿ ಬಿಡುತ್ತೆ.

ಅನುರಾಗ್‌ ಕಶ್ಯಪ್‌ ಡಾರ್ಕ್ ಸಿನಿಮಾಗಳನ್ನು ನೋಡಿ ಅವರ ಬಗ್ಗೆ ಜನರಿಗೆ ಬೇರೆಯದೇ ಅಭಿಪ್ರಾಯ ಇಟ್ಟುಕೊಂಡಿದ್ದಾರೆ. ನೀವು ಕಂಡ ಅವರ ವ್ಯಕ್ತಿತ್ವ?

ಅನುರಾಗ್‌ ಬಹಳ ಕೂಲ್‌ ಮನುಷ್ಯ. ಕಥೆ, ಪಾತ್ರದ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳೂ ಅವರ ತಲೆಯಲ್ಲಿರುತ್ತವೆ. ಒಂದು ಚೌಕಟ್ಟಿನೊಳಗೆ ನಟರಿಗೆ ಅವರ ಪ್ರತಿಭೆ ತೋರಿಸಲು ಅವಕಾಶ ಕೊಡ್ತಾರೆ. ಜೊತೆಗೆ ಆ ಕಲಾವಿದರ ನಟನೆಯ ತಾಕತ್ತನ್ನೂ ಅರಿತಿರುತ್ತಾರೆ. ‘ನಿನ್ನ ಕಣ್ಣುಗಳು ಅಷ್ಟುಚಂದ ಇವೆ, ಕಣ್ಣು ಮುಚ್ಚುವ ಬದಲು ತಲೆ ಎತ್ತಿ ಕಣ್ಣು ಕಾಣೋ ಹಾಗೆ ನಟಿಸು’ ಅಂದಿದ್ರು. ನಿಮ್ಮ ಡಾರ್ಕ್ ಸಿನಿಮಾ ನೋಡಿ ಎಲ್ರೂ ನಿಮ್ಮನ್ನು ಕಂಡರೆ ಭಯ ಪಡ್ತಾರೆ, ನೀವು ನೋಡಿದ್ರೆ ಹೀಗಿದ್ದೀರ ಅಂದಿದ್ದೆ. ‘ನಿಂಗೀಗ ಗೊತ್ತಾಯ್ತಲ್ಲಾ, ನಾನು ಡಾರ್ಕ್ ಅಲ್ಲ, ಸ್ವೀಟ್‌ ಅಂತ. ನೀನೇ ಜನಕ್ಕೆ ಹೇಳ್ಬಿಡು’ ಅಂತ ನಗ್ತಿದ್ರು.

ಭಾವನೆಗಳು ವಿಕ್ರಾಂತ್‌ ರೋಣ ಚಿತ್ರದ ಆತ್ಮ: ಅನೂಪ್‌ ಭಂಡಾರಿ

ಅನುರಾಗ್‌ ನಿರ್ದೇಶನದ ಕೆಲವು ಅಪರೂಪದ ಸಂಗತಿ ಹೇಳೋದಾದ್ರೆ?

ಮರ್ಡರ್‌ ಥರದ ಸೀನ್‌ ಶೂಟ್‌ ಮಾಡುವಾಗ ಅವರು ಸುಮ್ನೆ ಮೊಬೈಲ್‌ನಲ್ಲಿ ಗೇಮ್‌ ಆಡ್ತಾ ಕೂತಿರುತ್ತಿದ್ದರು. ಮಾನಿಟರೇ ನೋಡ್ತಿರಲಿಲ್ಲ. ‘ಅದನ್ನೆಲ್ಲ ನೋಡೋದು ಕಷ್ಟ’ ಅಂತಿದ್ರು. ಬಹಳ ಫ್ರೆಂಡ್ಲಿ ವ್ಯಕ್ತಿತ್ವ. ನನ್ನ ಆ್ಯಕ್ಟಿಂಗ್‌ ಮೆಚ್ಚಿ ಆ ಪಾತ್ರಕ್ಕೆ ತಕ್ಕ ಆರ್ಟಿಸ್ಟ್‌ ಅಂತ ಅವರ ಅಸಿಸ್ಟೆಂಟ್‌ ಬಳಿ ಹೇಳ್ತಿದ್ರಂತೆ. ಅದನ್ನು ಅವರು ನಂಗೆ ಮೆಸೇಜ್‌ ಮಾಡಿದ್ರು. ನನ್ನ ಭಾಗದ ಶೂಟಿಂಗ್‌ ಮುಗಿದ ಮೇಲೆ ಆ್ಯಕ್ಟಿಂಗ್‌ ಮೆಚ್ಚಿ ಎಲ್ಲರ ಬಳಿ ಕ್ಲಾಪ್‌ ಮಾಡೋದಕ್ಕೆ ಹೇಳಿದ್ರು. ಒಬ್ಬ ಆ್ಯಕ್ಟರ್‌ ಆಗಿ ಬಹಳ ಖುಷಿ ಕೊಟ್ಟಕ್ಷಣವದು.

ಇಂಥ ಅವಕಾಶ ಪದೇ ಪದೇ ಬರೋದಿಲ್ಲ: ರಾಧಿಕಾ ನಾರಾಯಣ್‌

ಈಗ ಯಾವ ಶೂಟಿಂಗ್‌ನಲ್ಲಿದ್ದೀರಿ?

ಈಗ ಉಪೇಂದ್ರ ಅವರ ‘ಯುಐ’ ಸಿನಿಮಾ ಶೂಟಿಂಗ್‌ನಲ್ಲಿದ್ದೇನೆ. ಆ ಸಿನಿಮಾದ ನನ್ನ ಪಾತ್ರದ ಬಗ್ಗೆ ಇನ್ನೊಮ್ಮೆ ಹೇಳ್ತೀನಿ.