ಭಾವನೆಗಳು ವಿಕ್ರಾಂತ್ ರೋಣ ಚಿತ್ರದ ಆತ್ಮ: ಅನೂಪ್ ಭಂಡಾರಿ
ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ಸಂದರ್ಶನ
ರಾಜೇಶ್ ಶೆಟ್ಟಿ
ವಿಕ್ರಾಂತ್ ರೋಣ ಸಿನಿಮಾ ನಿಮಗೆ ಎಷ್ಟುಮುಖ್ಯ?
ಸುದೀಪ್ ಅವರ ಜೊತೆ ಮೊದಲ ಸಿನಿಮಾ. ಅವರಿಗಾಗಿ ಬರೆದ ಕತೆ. ರಾಮ್‌ಗೋಪಾಲ್ ವರ್ಮಾ ಈ ಸಿನಿಮಾ ನೋಡಿ ಮೆಚ್ಚಿಕೊಂಡರು. ‘ಈಗ’ ಚಿತ್ರದ ಸುದೀಪ್ ಅಭಿನಯ ನನಗೆ ಇದುವರೆಗೆ ಇಷ್ಟವಾಗಿತ್ತು, ಅದಕ್ಕಿಂತ ಹತ್ತು ಪಟ್ಟು ಚೆನ್ನಾಗಿ ಇದರಲ್ಲಿ ಅಭಿನಯಿಸಿದ್ದಾರೆ ಎಂದು ಅವರು ಹೇಳಿಕೊಂಡರು. ರಮೇಶ್ ಅರವಿಂದ್ ಇಷ್ಟಪಟ್ಟು ಬಹಳಷ್ಟುದೃಶ್ಯಗಳ ಕುರಿತು ನನ್ನ ಜೊತೆ ಚರ್ಚಿಸಿದ್ದಾರೆ. ಇವರೆಲ್ಲಾ ಫೈನಲ್ ಕಟ್ ಆಗುವ ಮೊದಲಿನ ವರ್ಷನ್ ನೋಡಿದವರು. ಹಾಗಾಗಿ ಸಿನಿಮಾ ಬಿಡುಗಡೆ ಮೊದಲೇ ವಿಶ್ವಾಸ, ಖುಷಿ ಹೊಂದಿದ್ದೇನೆ.
ವಿಕ್ರಾಂತ್ ರೋಣ ಚಿತ್ರದ ಆತ್ಮ ಯಾವುದು?
ಭಾವನೆಗಳು. ಭಾವನೆಗಳ ಸುತ್ತ ಕಟ್ಟಿರುವ ಪ್ರಪಂಚ ಇದು.
ಕತೆ ಹುಟ್ಟಿದ್ದು ಹೇಗೆ?
ಹೇಗೆ ಹುಟ್ಟಿತು ಅಂತ ಹೇಳಲು ಸಾಧ್ಯವಿಲ್ಲ. ಒಮ್ಮೆ ಗೆಳೆಯರೊಂದಿಗೆ ಮೈಸೂರಿನ ತೋಟವೊಂದರಲ್ಲಿ ಸುತ್ತಾಡುತ್ತಿದ್ದೆ. ಆಗ ನನಗೆ ಇದ್ದಕ್ಕಿದ್ದ ಹಾಗೆ ಈ ಸಿನಿಮಾದ ಇಂಟರ್ವಲ್ ದೃಶ್ಯ ಕಣ್ಮುಂದೆ ಬರತೊಡಗಿತು. ಆಗ ವಿಕ್ರಾಂತ್ ರೋಣ ಹುಟ್ಟಿಕೊಂಡಿತು ಬಹುಶಃ.
ಸಿನಿಮಾ ಶುರುವಾಗುವ ಮೊದಲು ಮತ್ತು ಈಗ ಸುದೀಪ್ ಜೊತೆಗಿನ ಸಂಬಂಧ ಹೇಗಿದೆ?
ಮೊದಲು ಅವರೊಬ್ಬ ಸ್ಟಾರ್. ನಾನೊಬ್ಬ ನಿರ್ದೇಶಕ. ಈಗ ನಾವು ಒಂದೇ ಕುಟುಂಬದ ಸದಸ್ಯರು.
Movie Review: ವಿಕ್ರಾಂತ್ ರೋಣ 3ಡಿ ಚಿತ್ರ ಹೇಗಿದೆ? ರಕ್ಕಮ್ಮ ಎಂಟ್ರಿ ಮಜವೋ ಮಜಾ
ಈ ಜರ್ನಿಯಲ್ಲಿ ಪಡೆದಿದ್ದೆಷ್ಟು, ಕಳಕೊಂಡಿದ್ದೇನು?
ಪಡೆದಿದ್ದು ತುಂಬಾ ಇದೆ. ಕಳಕೊಂಡಿದ್ದು ನಾಲ್ಕು ವರ್ಷ. ಈ ಜರ್ನಿ ತೃಪ್ತಿ ಕೊಟ್ಟಿದೆ. ಒಂದೊಳ್ಳೆ ಸಿನಿಮಾ ಮಾಡಿರುವ ಸಮಾಧಾನ ನೀಡಿದೆ.
ಕತೆ ಕಟ್ಟುವಾಗ ಬೇರೆ ಬೇರೆ ಸಂಸ್ಕೃತಿ ತರುತ್ತೀರಿ. ಇದು ನಿರ್ದೇಶಕನಿಗೆ ಎಷ್ಟುಮುಖ್ಯ?
ಯಾವುದೇ ಸಿನಿಮಾ ಬೇರಿನಿಂದ ಹುಟ್ಟಿಕೊಂಡಿರಬೇಕು ಅನ್ನುವುದು ನನ್ನ ಬಲವಾದ ನಂಬಿಕೆ. ಹಾಗಾಗಿ ತುಳು ಸಂಸ್ಕೃತಿ ಬರುತ್ತದೆ. ಈ ಸಿನಿಮಾದಲ್ಲಿ ತುಳು ಮಾತ್ರ ಅಲ್ಲ, ಉತ್ತರ ಕರ್ನಾಟಕದ ಸಂಸ್ಕೃತಿ ಕೂಡ ಇದೆ. ರೋಣ ಅನ್ನುವುದು ಗದಗ್ ಜಿಲ್ಲೆಯ ಒಂದು ತಾಲೂಕು. ಅದೇ ಥರ ರುದ್ರಮಣಿ ಬಾವಿಕಟ್ಟಿಎಂಬ ಒಂದು ಪಾತ್ರ ಇದೆ. ನಾವು ಸಿನಿಮಾ ಪ್ರಪಂಚದೊಳಗೆ ಕರೆದುಕೊಂಡು ಹೋಗುವಾಗ ಆಯಾಯ ಭಾಗದ ಸಂಸ್ಕೃತಿ ತಂದರೆ ನೋಡುಗನಿಗೆ ಹೆಚ್ಚು ಕನೆಕ್ಟ್ ಆಗುತ್ತದೆ.
ಪಾತ್ರಗಳಿಗೆ ವಿಶಿಷ್ಟಹೆಸರುಗಳನ್ನು ಉದ್ದೇಶಪೂರ್ವಕವಾಗಿ ಇಡುತ್ತೀರೋ?
ಪಾತ್ರಗಳಿಗೆ ಹೆಸರಿಡುವ ವಿಚಾರದಲ್ಲಿ ತುಂಬಾ ತಲೆ ಕೆಡಿಸಿಕೊಳ್ಳುತ್ತೇನೆ. ಈಗ ಗಬ್ಬರ್ ಸಿಂಗ್ ಎಂದಾಗ ಶೋಲೆ ಸಿನಿಮಾದ ವಿಲನ್ ಪಾತ್ರ ಹೇಗೆ ಕಣ್ಣು ಮುಂದೆ ಬರುತ್ತದೆಯೋ ಅದೇ ಥರ ನನ್ನ ಸಿನಿಮಾ ಪಾತ್ರಗಳ ಹೆಸರು ಹೇಳುವಾಗ ಆ ಪಾತ್ರ ಕಣ್ಮುಂದೆ ಬರಬೇಕು. ಮನಸ್ಸಲ್ಲಿ ಉಳಿಯಬೇಕು.
ಮುಂಬೈನಲ್ಲಿ 'ವಿಕ್ರಾಂತ್ ರೋಣ' ತಂಡ; ಸಖತ್ ಸ್ಟೈಲಿಶ್ ಆಗಿ ಮಿಂಚಿದ ಕಿಚ್ಚ
ನಿಮ್ಮ ಸಿನಿಮಾದಲ್ಲಿ ಹಸಿರು ಹಿನ್ನೆಲೆ, ಒದ್ದೆಯಾದ ವಾತಾವರಣ ಇರುತ್ತದೆ. ಯಾಕೆ?
ನಾನು ಹುಟ್ಟಿದ್ದು ಪುತ್ತೂರಲ್ಲಿ. ಬೆಳೆದಿದ್ದು ಮೈಸೂರಲ್ಲಿ. ಮೈಸೂರಿಂದ ಪ್ರತೀ ರಜೆಗೆ ಪುತ್ತೂರಿಗೆ ಹೋಗುತ್ತಿದ್ದೆವು. ಆಗ ಮಡಿಕೇರಿ ಹಾದುಹೋಗಬೇಕಾಗುತ್ತಿತ್ತು. ಆ ರಸ್ತೆಯಲ್ಲಿ ಮಳೆ, ಮಂಜು, ಹಸಿರು ಎದುರಾಗುತ್ತಿತ್ತು. ಅದು ನನಗಿಷ್ಟ. ಇವತ್ತಿಗೂ ನನಗೆ ಮನಸ್ಸಲ್ಲಿ ಅದೇ ಥರ ದೃಶ್ಯಗಳು ಬರುತ್ತದೆ. ಈಗ ಅದು ನನ್ನದೇ ಸ್ಟೈಲ್ ಆಗಿಬಿಟ್ಟಿದೆ.
ಗರಗರಗರ ಗಗ್ಗರ ಜರ್ಬ ಪಿರನಲ್ಕುರಿ ನೆತ್ತರ ಪರ್ಬ ಅಂದ್ರೆ ಏನರ್ಥ?
ಅದು ತುಳು ಭಾಷೆಯ ಸಾಲು. ತಂದೆಯ ನೆರವಿನಿಂದ ನಾನೇ ಬರೆದಿದ್ದು. ಎಲ್ಲಾ ಭಾಷೆಯಲ್ಲೂ ಈ ಸಾಲುಗಳನ್ನು ಬಳಸಿದ್ದೇವೆ. ತೆಲುಗು, ಹಿಂದಿಯಲ್ಲೂ ಈ ಸಾಲುಗಳನ್ನು ಜನ ಗುರುತಿಸಿದ್ದಾರೆ. ಯಾವ ಭಾಷೆ, ಏನರ್ಥ ಎಂಬ ಪ್ರಶ್ನೆಗಳನ್ನು ನನ್ನಲ್ಲಿ ಕೇಳಿದ್ದಾರೆ. ಇದರ ಅರ್ಥ ಸಿನಿಮಾದಲ್ಲಿ ತಿಳಿಯುತ್ತದೆ.