Asianet Suvarna News Asianet Suvarna News

Dance Karnataka Danceನ 'ವರುಣ' ಜೋಡಿ..!

ವರುಣ್ ಬಗ್ಗೆ ತಿಳಿದವರಿಗಿಂತ ಅವರ ನೃತ್ಯದ ಬಗ್ಗೆ ತಿಳಿದವರೇ ಹೆಚ್ಚಿರಬಹುದು. ಯಾಕೆಂದರೆ ಅವರು ಹಿಂದಿಯಿಂದ ಕನ್ನಡದ ತನಕ ಸಾಕಷ್ಟು ರಿಯಾಲಿಟಿ ಶೋಗಳ ಮೂಲಕ ಮನಸೆಳೆದವರು. ಅವರ ಪತ್ನಿ ಮೋನಿಷಾ ಕೂಡ ನೃತ್ಯಗಾತಿಯಾಗಿದ್ದು ತಮ್ಮ ನೃತ್ಯ ಬದುಕಿನ ಬಗ್ಗೆ ಇಲ್ಲಿ ವಿವರಿಸಿದ್ದಾರೆ.
 

Dance of Karnataka choreographer Varuns interview
Author
Bengaluru, First Published Apr 21, 2021, 3:21 PM IST

ಹತ್ತನೇ ವರ್ಷ ವಯಸ್ಸಲ್ಲಿದ್ದಾಗಲೇ ಯಕ್ಷಗಾನ ಕಲಾವಿದನಾಗಿ ನೃತ್ಯಾಭ್ಯಾಸದಲ್ಲಿ ಆಸಕ್ತರಾದವರು ವರುಣ್. ಇಂದು  ಅವರು ಕಂಟೆಂಪರರಿಯಿಂದ, ಕಳರಿಪಯಟ್ಟು, ಹಿಪ್ ಹಾಪ್, ಜಾಜ್, ಬಾಲಿವುಡ್ ಹೀಗೆ ಎಲ್ಲ ಮಾದರಿಯ ನೃತ್ಯ ಪ್ರಕಾರಗಳಲ್ಲಿ ನುರಿತಿದ್ದಾರೆ. ಖ್ಯಾತ ಬಾಲಿವುಡ್ ನೃತ್ಯ ನಿರ್ದೇಶಕರಾದ ರೆಮೋ ಡಿಸೋಜಾ, ಗೀತಾ ಕಪೂರ್, ಟೆರೆನ್ಸ್ ಮೊದಲಾದ ಜನಪ್ರಿಯ ನೃತ್ಯ ನಿರ್ದೇಶಕರ ತಂಡದಲ್ಲಿ ಕೆಲಸ ಮಾಡಿದ ಅನುಭವಿ. ನೃತ್ಯಪಟು, ನೃತ್ಯ ನಿರ್ದೇಶಕ, ರೂಪದರ್ಶಿ, ನೃತ್ಯ ಶಿಕ್ಷಕರಾಗಿ ದೇಶ ವಿದೇಶಗಳ ಜನಪ್ರಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಹೆಸರು ಮಾಡಿದ್ದಾರೆ. ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ `ಡಾನ್ಸ್‌ ಕರ್ನಾಟಕ ಡಾನ್ಸ್'ನಲ್ಲಿ ನೃತ್ಯ ನಿರ್ದೇಶಕರಾಗಿರುವ ವರುಣ್ ನೃತ್ಯದ ಜೊತೆಗಿನ ತಮ್ಮ ಅವಿನಾಭಾವ ಸಂಬಂಧದ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಮಾತನಾಡಿದ್ದಾರೆ.

- ಶಶಿಕರ ಪಾತೂರು

`ಡಾನ್ಸ್ ಕರ್ನಾಟಕ ಡಾನ್ಸ್‌' ತಂಡದಲ್ಲಿ ನೀವು ಸೇರಿಕೊಂಡಿದ್ದು ಹೇಗೆ? 
ನನಗಿಂತ ಮೊದಲು `ಡಾನ್ಸ್ ಕರ್ನಾಟಕ ಡಾನ್ಸ್' ಕಾರ್ಯಕ್ರಮದಲ್ಲಿ ಸೇರಿಕೊಂಡಿದ್ದು ನನ್ನ ಶಿಷ್ಯ ಲಿಖಿತ್ ಜೈನ್! ಆತನ ಆಯ್ಕೆಯಾದ ಬಳಿಕ ನಮ್ಮನ್ನು ಕೊರಿಗ್ರಫಿಗಾಗಿ ಕರೆದರು. ಆದರೆ ಲಿಖಿತ್ ಈಗ ಬೇರೆ ಕೊರಿಯಾಗ್ರಫರ್‌ಗಳ ತಂಡದಲ್ಲಿದ್ದಾರೆ. ನಾನು ಹಿಂದಿಯ ಜೀ ವಾಹಿನಿಯ ಮೂಲಕ ರಿಯಾಲಿಟಿ ಶೋಗೆ ಎಂಟ್ರಿಯಾದವನು. ಇದೀಗ ದಶಕದ ಬಳಿಕ ಮತ್ತೆ ಜೀಯವರದೇ  ವಾಹಿನಿಯಲ್ಲಿ ಕೊರಿಯೋಗ್ರಫರ್ ಆಗುವ ಅವಕಾಶ ದೊರಕಿದೆ. ಇಲ್ಲಿ ತೀರ್ಪುಗಾರರಾಗಿರುವ ಚಿನ್ನಿ ಮಾಸ್ಟರ್ ಅವರು ಈ ಹಿಂದೆ ನನಗೂ ಬೇರೊಂದು ರಿಯಾಲಿಟಿ ಶೋನಲ್ಲಿ ಜಡ್ಜ್‌ ಆಗಿದ್ದರು. ಜೊತೆಗೆ ನನ್ನ ಜೊತೆಗೆ ಪತ್ನಿ ಕೂಡ ಇಲ್ಲಿ ಕೊರಿಯೋಗ್ರಾಫರ್ ಆಗಿದ್ದಾಳೆ.  ಹಾಗಾಗಿ ತಂಡದ ಜೊತೆಗೆ ನಾನು ಬೇಗ ಕನೆಕ್ಟ್ ಆದೆ. 

ಗೌತಮಿ ಜಾಧವ್ ಜೊತೆಗೆ ಮಾತುಕತೆ

ಪತ್ನಿಯೊಂದಿಗಿನ ನೃತ್ಯ ಜೀವನದ ಬಗ್ಗೆ ಹೇಳಿ
ನನ್ನ ಪತ್ನಿಯ ಹೆಸರು ಮೋನಿಷಾ. ಡಾನ್ಸ್‌ನಲ್ಲಿ ಡಾಕ್ಟರೇಟ್‌ ಪಡೆದಿದ್ದು ಭರತನಾಟ್ಯದಲ್ಲಿ ವಿದ್ವತ್ ಮಾಡುತ್ತಿದ್ದಾರೆ. ನನ್ನ ಹೆಂಡತಿ ಜೀ ಕನ್ನಡದಲ್ಲಿ ಕುಣಿಯೋಣು ಬಾರಾ ದಲ್ಲಿ ಎಂಟನೇ ಸೀಸನ್‌ನಲ್ಲಿದ್ದರು. ಎರಡು ವರ್ಷಗಳ ಹಿಂದೆ ಮದುವೆಯಾಯಿತು. ವೃತ್ತಿಯಲ್ಲಿ ರೂಪದರ್ಶಿ, ನಟಿ, ನೃತ್ಯಗಾತಿ, ಫಿಟ್ನೆಸ್ ಗುರುವಾಗಿ ಭರತನಾಟ್ಯ ಮತ್ತು ಪಾಶ್ಚಾತ್ಯ ನೃತ್ಯ ಪ್ರಕಾರಗಳಲ್ಲಿ ನುರಿತವರು ಮಾತ್ರವಲ್ಲ, ಕರ್ನಾಟಿಕ್ ಸಿಂಗರ್ ಆಗಿ, ವೀಣಾ ವಾದಕಿಯಾಗಿ ಗುರುತಿಸಿಕೊಂಡವರು. ಆಕೆ ಕೂಡ ಕನ್ನಡ ಮಾತ್ರವಲ್ಲ ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಪಂಚಭಾಷೆಗಳ ಒಟ್ಟು ಹನ್ನೊಂದು ರಿಯಾಲಿಟಿ ಶೋಗಳಲ್ಲಿ ಭಾಗಿಯಾದವರು. ಧಾರಾವಾಹಿ, ಸಿನಿಮಾಗಳಲ್ಲಿಯೂ ನಟಿಸಿದ ಅನುಭವ ಇದೆ. ನಾವಿಬ್ಬರೂ ಸೇರಿ  ವಿಎಮ್‌ ಕಂಪನಿ ಆಫ್ ಡಾನ್ಸ್ ನಡೆಸುತ್ತಿದ್ದೇವೆ. ಇದೀಗ ರಿಯಾಲಿಟಿ ಶೋನಲ್ಲಿಯೂ ಜೊತೆಯಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಇಲ್ಲಿ ನಮಗೆ ಡಾನ್ಸರ್ಸ್‌ ಆಗಿ ಕಾಣಿಸುವ ಸಂದರ್ಭ ಬಂದಿಲ್ಲ. ಬಹುಶಃ ಕೊರಿಯೋಗ್ರಾಫರ್ ರೌಂಡ್ ಬಂದಾಗ ಅವಕಾಶ ಸಿಗಬಹುದು. ಈಗ ಸ್ಪರ್ಧಿಗಳ ಕೊರಿಯೋಗ್ರಾಫರ್ ಆಗಿ ಮಾತ್ರ ವೇದಿಕೆಗೆ ಬರುತ್ತಿದ್ದೇವೆ.

ನಾಗಿಣಿಯ ನಿನಾದ್‌ ವಿಶೇಷ ಸಮಾಚಾರ

ಇಂದು ನೃತ್ಯ ಸಂಸ್ಥೆ ನಡೆಸುವುದು ಎಷ್ಟರ ಮಟ್ಟಿಗೆ ಲಾಭದಾಯಕವಾಗಿದೆ?
ನಮ್ಮ ವಿಎಮ್‌ ಕಂಪನಿ ಆಫ್ ಡಾನ್ಸ್ ಗೆ ಇದೀಗ ನಮ್ಮ ಸಂಸ್ಥೆಗೆ ಮೂರು ವರ್ಷಗಳಾಗಿವೆ. ಆರಂಭದಲ್ಲಿ ನೂರ ಇಪ್ಪತ್ತರಷ್ಟು ಜನ ವಿದ್ಯಾರ್ಥಿಗಳಿದ್ದರು. ಆದರೆ ಕೊರೊನಾ ಕಾರಣ ಅರ್ಧಕ್ಕಿಂತಲೂ ಕಡಿಮೆಯಾಗಿದ್ದಾರೆ. ಜೊತೆಗೆ ಒಂದಷ್ಟು ಜನರಿಗೆ ನಾವು ಉಚಿತವಾಗಿಯೂ ತರಬೇತಿ ನೀಡುತ್ತೇವರ. ಸ್ಕಾಲರ್‌ಶಿಪ್‌ ಮೂಲಕ ಐದಾರು ಜನರಿಗೆ ತರಬೇತಿ ನೀಡುತ್ತೇವೆ. ಚಿತ್ರೀಕರಣದ ಸಂದರ್ಭದಲ್ಲಿ ಸಮಯ ಟೈಮಿಂಗ್ಸ್‌ ಚೇಂಜ್ ಮಾಡಿಕೊಳ್ಳುತ್ತೇವೆ. ಪ್ರಸ್ತುತ ಟಿ.ವಿ ಶೋ ಒಳ್ಳೆಯ ಹೆಸರು ತಂದುಕೊಟ್ಟಿದೆ. ನಮ್ಮಿಬ್ಬರ ನೃತ್ಯ ನಿರ್ದೇಶನದಲ್ಲಿ ನರ್ತಿಸುತ್ತಿರುವ ಸ್ಪರ್ಧಿಗಳಾದ ಯಶ್ ಮತ್ತು ಸಾನಿಧ್ಯ ಹಾಗೂ ಮಹೇಶ್ ಮತ್ತು  ಚೈತ್ರಾ ಅವರಿಗೆ ತೀರ್ಪುಗಾರರಾದ ಚಿನ್ನಿ ಮಾಸ್ಟರ್, ರಕ್ಷಿತಾ ಮೇಡಂ, ವಿಜಯ ರಾಘವೇಂದ್ರ ಸರ್ ಮೆಚ್ಚುಗೆ ತೋರಿಸಿದ್ದನ್ನು ಮರೆಯಲಾಗದು. ಅವರು ಎರಡು ಮೂರು ಸಲ ತಮ್ಮ ಹಾರ್ಡ್‌ ವರ್ಕ್‌ನಿಂದ `ಫೈರ್ ಬ್ರ್ಯಾಂಡ್' ಪಡೆದುಕೊಂಡಿದ್ದಾರೆ. ಇವುಗಳನ್ನೆಲ್ಲ ನೋಡುವಾಗ ನೃತ್ಯ ನೀಡಬಹುದಾದ ಆರ್ಥಿಕ ಲಾಭಕ್ಕಿಂತ ಹೆಚ್ಚಿನ ಖುಷಿ ನಮಗೆ ಸಿಗುತ್ತದೆ. ಒಬ್ಬ ಕಲಾವಿದನಾಗಿ ಸಿಕ್ಕ ಅವಕಾಶಗಳನ್ನೆಲ್ಲ ಸರಿಯಾಗಿ ಬಳಸುವ ಪ್ರಯತ್ನ ನನ್ನಲ್ಲಿ ಇದ್ದೇ ಇದೆ. ಈಗಾಗಲೇ ಧಾರಾವಾಹಿಗಳ ಶೀರ್ಷಿಕೆ ಗೀತೆಗೆ ಕೊರಿಯೋಗ್ರಫಿ ಮಾಡುವ ಅವಕಾಶ ಬಂದಿದೆ. `ದ್ರೋಣ ಪಡೆ' ಎನ್ನುವ ಚಿತ್ರದಲ್ಲಿ ಖಳನಟನ ಪಾತ್ರ ಮಾಡಿದ್ದೇನೆ.  ಚಾಮರಾಜ್ ಮಾಸ್ಟರ್ ನಿರ್ದೇಶನದ ಆ ಚಿತ್ರ ನಿರ್ಮಾಣ ಹಂತದಲ್ಲಿದೆ. ನಾನೇ ನಾಯಕನಾಗಿರುವ `ರಾಯ್' ಎನ್ನುವ ಚಿತ್ರ ಕೂಡ ಬಿಡುಗಡೆಯಾಗಬೇಕಿದೆ. 

ಕನ್ನಡತಿಯ ಪ್ರತಿಭೆ ಪ್ರತಿಮಾ ಎನ್ನುವ ಸಮೀಕ್ಷಾ


 

Follow Us:
Download App:
  • android
  • ios