ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲೇ 'ವೈಎಂಸಿ' ಕೋಡ್‌ನೇಮ್‌ನ ಹೊಸ 7-ಸೀಟರ್ ಎಲೆಕ್ಟ್ರಿಕ್ ಎಂಪಿವಿ ಕಾರನ್ನು ಬಿಡುಗಡೆ ಮಾಡಲಿದೆ. ಇದು 500 ಕಿ.ಮೀಗೂ ಹೆಚ್ಚು ರೇಂಜ್ ನೀಡಲಿದ್ದು, ಅತ್ಯಾಧುನಿಕ ಫೀಚರ್‌ಗಳೊಂದಿಗೆ ಅತಿ ಕಡಿಮೆ ಬೆಲೆಗೆ ಲಭ್ಯವಾಗುವ ನಿರೀಕ್ಷೆಯಿದೆ.

ಎಲೆಕ್ಟ್ರಿಕ್ ವಾಹನ (ಇವಿ) ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ತನ್ನ ಪ್ರಾಬಲ್ಯ ಮೆರೆಯಲು ಭರ್ಜರಿ ಪ್ಲಾನ್ ಮಾಡಿದೆ. ಮುಂದಿನ ಮೂರು ವರ್ಷಗಳಲ್ಲಿ ಬರೋಬ್ಬರಿ 7 ಹೊಸ ಎಸ್‌ಯುವಿ ಕಾರುಗಳನ್ನು ಕಂಪನಿ ಪರಿಚಯಿಸಲಿದೆ. ಹೈಬ್ರಿಡ್, ಎಲೆಕ್ಟ್ರಿಕ್, ಸಿಎನ್‌ಜಿ ಹಾಗೂ ಐಸಿಇ (ICE) ಎಂಜಿನ್‌ಗಳ ಮೂಲಕ ಗ್ರಾಹಕರಿಗೆ ಹಲವು ಆಯ್ಕೆಗಳನ್ನು ನೀಡಲಿದೆ. ಸದ್ಯ ಮಾರುತಿ ಸುಜುಕಿ ಬಳಿ 'ಇ-ವಿಟಾರಾ' (e-Vitara) ಎಂಬ ಒಂದೇ ಒಂದು ಎಲೆಕ್ಟ್ರಿಕ್ ಕಾರಿದೆ. ಇದರ ಬೆನ್ನಲ್ಲೇ, ಮೂರು ಸಾಲಿನ ಸೀಟ್‌ಗಳಿರುವ ಹೊಸ 7-ಸೀಟರ್ ಎಲೆಕ್ಟ್ರಿಕ್ ಎಂಪಿವಿ ಕಾರನ್ನು ಮಾರುಕಟ್ಟೆಗೆ ಇಳಿಸಲು ಕಂಪನಿ ಸಿದ್ಧತೆ ನಡೆಸಿದೆ. 'ವೈಎಂಸಿ' (YMC) ಎಂಬ ಕೋಡ್‌ನೇಮ್‌ನಿಂದ ಕರೆಯಲ್ಪಡುವ ಈ ಕಾರು, ಈ ವರ್ಷದ ಅಂತ್ಯಕ್ಕೆ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಮುಂದಿನ ವರ್ಷದ ಆರಂಭದಲ್ಲಿ ಇದರ ಮಾರಾಟ ಶುರುವಾಗಲಿದೆ.

ಮಾರುತಿಯ ಅತಿ ಕಡಿಮೆ ಬೆಲೆಯ 7-ಸೀಟರ್ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಅತಿ ಚಿಕ್ಕ ಹಾಗೂ ಕಡಿಮೆ ಬೆಲೆಯ 7-ಸೀಟರ್ ಕಾರಾಗಿ ಹೊಸ ವೈಎಂಸಿ ಹೊರಹೊಮ್ಮಲಿದೆ. ಇದರ ಬೇಸ್ ವೇರಿಯೆಂಟ್ ಬೆಲೆ ಅಂದಾಜು 14 ಲಕ್ಷ ರೂಪಾಯಿ ಇರಬಹುದು. ಬ್ಯಾಟರಿ-ಆಸ್-ಎ-ಸರ್ವೀಸ್ (BaaS) ಅಂದರೆ ಬ್ಯಾಟರಿ ಬಾಡಿಗೆ ಯೋಜನೆಯ ಮೂಲಕ ಕಾರಿನ ಆರಂಭಿಕ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಲು ಕಂಪನಿ ಯೋಚಿಸಿದೆ. ಇದೇ ವೈಎಂಸಿ ಕಾರಿನ ಪ್ಲಾಟ್‌ಫಾರ್ಮ್ ಬಳಸಿಕೊಂಡು ಟೊಯೋಟಾ ಕೂಡ ತನ್ನದೇ ಆದ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

500 ಕಿ.ಮೀಗೂ ಹೆಚ್ಚು ರೇಂಜ್

ಹೊಸ ಮಾರುತಿ 7-ಸೀಟರ್ ಎಲೆಕ್ಟ್ರಿಕ್ ಎಂಪಿವಿಯ ಅಧಿಕೃತ ತಾಂತ್ರಿಕ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಆದರೆ, ಇ-ವಿಟಾರಾ ಕಾರಿನಲ್ಲಿ ಬಳಸಲಾದ 49 kWh ಹಾಗೂ 61 kWh ಬ್ಯಾಟರಿ ಪ್ಯಾಕ್‌ಗಳನ್ನೇ ವೈಎಂಸಿ ಕಾರಿನಲ್ಲೂ ಅಳವಡಿಸುವ ಸಾಧ್ಯತೆಯಿದೆ. ಈ ಎರಡೂ ಬ್ಯಾಟರಿ ಆಯ್ಕೆಗಳು ಫ್ರಂಟ್-ವೀಲ್ ಡ್ರೈವ್ ಸಿಸ್ಟಮ್ ಹಾಗೂ ಮುಂಭಾಗದಲ್ಲಿ ಅಳವಡಿಸಿದ ಎಲೆಕ್ಟ್ರಿಕ್ ಮೋಟಾರ್ ಜೊತೆ ಬರಲಿವೆ. ಒಮ್ಮೆ ಫುಲ್ ಚಾರ್ಜ್ ಮಾಡಿದರೆ, ಈ ಕಾರು 500 ಕಿಲೋಮೀಟರ್‌ಗೂ ಹೆಚ್ಚು ದೂರ ಕ್ರಮಿಸಲಿದೆ.

ಇ-ವಿಟಾರಾ ಕಾರಿನಿಂದ ಸ್ಫೂರ್ತಿ

ಸದ್ಯ ಹೊಸ ಮಾರುತಿ 7-ಸೀಟರ್ ಎಲೆಕ್ಟ್ರಿಕ್ ಎಂಪಿವಿ ಕಾರಿನ ಟೆಸ್ಟಿಂಗ್ ನಡೆಯುತ್ತಿದೆ. ರಸ್ತೆಗಿಳಿದು ಪರೀಕ್ಷೆ ನಡೆಸುವಾಗ ಈ ಕಾರು ಹಲವು ಬಾರಿ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಇದರಿಂದ ಕಾರಿನ ಡಿಸೈನ್ ಬಗ್ಗೆ ಒಂದಷ್ಟು ಸುಳಿವು ಸಿಕ್ಕಿದೆ. ಈ ಕಾರು ಎತ್ತರವಾದ ಬಾಕ್ಸಿ ಡಿಸೈನ್ ಹೊಂದಿರಲಿದೆ. ಇ-ವಿಟಾರಾ ಕಾರಿನಿಂದ ಸ್ಫೂರ್ತಿ ಪಡೆದ ಫ್ರಂಟ್ ಬಂಪರ್, ಏರ್ ಇಂಟೇಕ್ ಹಾಗೂ ಏರೋಡೈನಾಮಿಕ್ ಡಿಸೈನ್‌ನ ಅಲಾಯ್ ವೀಲ್‌ಗಳನ್ನು ಇದರಲ್ಲಿ ಕಾಣಬಹುದು. ಹಿಂಭಾಗದ ವಿಂಡ್‌ಸ್ಕ್ರೀನ್ ಸುತ್ತಲೂ ಇರುವ ಉದ್ದನೆಯ ಟೈಲ್ ಲ್ಯಾಂಪ್‌ಗಳನ್ನು ಮಾರುತಿ ಎರ್ಟಿಗಾ ಕಾರಿನಿಂದ ಎರವಲು ಪಡೆದಂತಿದೆ.

ಫೀಚರ್‌ಗಳಲ್ಲೂ ಮುಂದು

ಹೊಸ ಎಲೆಕ್ಟ್ರಿಕ್ ಎಂಪಿವಿ ಕಾರು ಅತ್ಯಾಧುನಿಕ ಫೀಚರ್‌ಗಳಿಂದ ತುಂಬಿರಲಿದೆ. 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಹಾಗೂ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದರಲ್ಲಿರಲಿದೆ. ಪ್ರೀಮಿಯಂ ಸೌಂಡ್ ಸಿಸ್ಟಮ್, ಆಟೋ ಡಿಮ್ಮಿಂಗ್ ಐಆರ್‌ವಿಎಂ (IRVM), ಫ್ರಂಟ್-ರಿಯರ್ ಪಾರ್ಕಿಂಗ್ ಸೆನ್ಸಾರ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಮಲ್ಟಿಪಲ್ ಏರ್‌ಬ್ಯಾಗ್‌ಗಳು ಹಾಗೂ ಹಿಲ್ ಹೋಲ್ಡ್ ಕಂಟ್ರೋಲ್‌ನಂತಹ ಸೇಫ್ಟಿ ಫೀಚರ್‌ಗಳು ಸಿಗಲಿವೆ. ಒಟ್ಟಿನಲ್ಲಿ, ಫ್ಯಾಮಿಲಿ ಗ್ರಾಹಕರನ್ನು ಟಾರ್ಗೆಟ್ ಮಾಡಿ ಮಾರುತಿ ತನ್ನ ಹೊಸ ಎಲೆಕ್ಟ್ರಿಕ್ 7-ಸೀಟರ್ ಎಂಪಿವಿಯನ್ನು ಮಾರುಕಟ್ಟೆಗೆ ತರುತ್ತಿದೆ.