ಅಮೆರಿಕದ ಫ್ಯೂಚರ್‌ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸೋಮವಾರ ಒಂದು ಬ್ಯಾರಲ್‌ಗೆ ಮೈನಸ್‌ 37.63 ಡಾಲರ್‌ಗೆ ಕುಸಿಯುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಅಂದರೆ, ಅಲ್ಲಿನ ಫ್ಯೂಚರ್‌ ಮಾರುಕಟ್ಟೆಯಲ್ಲಿ ಈಗ ಯಾರಾದರೂ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೆಟ್‌ ಕಚ್ಚಾತೈಲ ಖರೀದಿಸಿದರೆ ಅವರಿಗೆ ಮಾರಾಟಗಾರರೇ ಒಂದು ಬ್ಯಾರಲ್‌ಗೆ 37.63 ಡಾಲರ್‌ ಕೊಡಬೇಕು! ಇದು ಜಗತ್ತಿನಾದ್ಯಂತ ತೈಲ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಇದೆಲ್ಲಕ್ಕೂ ಕಾರಣ ಕೊರೋನಾ ವೈರಸ್‌ ಬಿಕ್ಕಟ್ಟು.

ಏನಿದು ವೆಸ್ಟ್‌ ಟೆಕ್ಸಾಸ್‌ ಕಚ್ಚಾತೈಲ?

ಅಮೆರಿಕದ ಕಚ್ಚಾತೈಲ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಚ್ಚಾತೈಲವನ್ನು ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೆಟ್‌ ಕಚ್ಚಾತೈಲ (ಡಬ್ಲ್ಯುಟಿಐ) ಎನ್ನುತ್ತಾರೆ. ಅಮೆರಿಕದ ನ್ಯೂಯಾರ್ಕ್ನಲ್ಲಿ ಈ ಮಾರುಕಟ್ಟೆಯಿದೆ. ಅಂತೆಯೇ ಮುಂಬೈ, ಶಾಂಘೈ, ಟೋಕ್ಯೋ, ಹಾಂಗ್‌ಕಾಂಗ್‌, ಸಿಡ್ನಿ, ಬ್ಯಾಂಕಾಕ್‌ ಹೀಗೆ ಜಗತ್ತಿನ ಬೇರೆ ಬೇರೆ ದೊಡ್ಡ ನಗರಗಳಲ್ಲಿ ಆ ದೇಶದ ತೈಲ ಮಾರುಕಟ್ಟೆಗಳಿವೆ.

ಆದರೆ, ಜಾಗತಿಕ ಮಟ್ಟದ ವ್ಯವಹಾರ ನಡೆಯುವುದು ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ. ಇದರ ಮುಖ್ಯ ಕಚೇರಿ ಆಸ್ಟ್ರಿಯಾದ ವಿಯೆನ್ನಾದಲ್ಲಿದೆ. ಅಲ್ಲಿ ಮಾರಾಟವಾಗುವ ಕಚ್ಚಾತೈಲವನ್ನು ಬ್ರೆಂಟ್‌ ತೈಲ ಎನ್ನುತ್ತಾರೆ. ಭಾರತವೂ ಸೇರಿದಂತೆ ಎಲ್ಲಾ ದೇಶಗಳೂ ಈ ಮಾರುಕಟ್ಟೆಯಲ್ಲಿ ತೈಲ ಖರೀದಿಸುತ್ತವೆ.

ಲಾಕ್‌ಡೌನ್ ಎಫೆಕ್ಟ್‌: ಪಾತಳಕ್ಕಿಳಿದ ಕಚ್ಚಾತೈಲಬೆಲೆ; ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಕಮ್ಮಿ

ಕಚ್ಚಾತೈಲ ಬೆಲೆ ಕುಸಿಯುತ್ತಿರುವುದೇಕೆ?

ಕೊರೋನಾ ವೈರಸ್‌ ಬಿಕ್ಕಟ್ಟಿನಿಂದಾಗಿ ಬಹುತೇಕ ಎಲ್ಲಾ ದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ನಿಂತಿವೆ. ವಾಹನಗಳು ಹೆಚ್ಚು ಓಡಾಡುತ್ತಿಲ್ಲ. ಹೀಗಾಗಿ ಶೇ.30ರಷ್ಟುತೈಲ ಬೇಡಿಕೆ ಕುಸಿದಿದೆ. ಆದರೆ, ಇನ್ನೊಂದೆಡೆ ತೈಲೋತ್ಪಾದಕ ರಾಷ್ಟ್ರಗಳು ಕಚ್ಚಾತೈಲ ಉತ್ಪಾದಿಸುತ್ತಲೇ ಇವೆ. ಹೀಗಾಗಿ ತೈಲ ಸಂಗ್ರಹ ಹೆಚ್ಚುತ್ತಿದ್ದು, ಬೇಡಿಕೆ ಇಲ್ಲದಿರುವುದರಿಂದ ಬೆಲೆ ಕುಸಿಯುತ್ತಿದೆ.

ಅಮೆರಿಕದಲ್ಲಿ ಈಗ ಆಗಿರುವುದು ಏನು?

ಜಗತ್ತಿನಾದ್ಯಂತ ಕಚ್ಚಾತೈಲದ ವ್ಯಾಪಾರ ಗುತ್ತಿಗೆಗಳ ಮೂಲಕ ನಡೆಯುತ್ತದೆ. ಸಾಮಾನ್ಯವಾಗಿ ಎಲ್ಲಾ ದೇಶಗಳೂ ಮುಂದಿನ ತಿಂಗಳಿಗೆ ಬೇಕಾದ ತೈಲವನ್ನು ಈ ತಿಂಗಳು ಖರೀದಿಸುತ್ತವೆ. ಅಂದರೆ ಒಂದೊಂದು ತಿಂಗಳಿಗೆ ಒಂದೊಂದು ಒಪ್ಪಂದ ಮಾಡಿಕೊಳ್ಳುತ್ತವೆ. ತೈಲ ಖರೀದಿಸಿದವರು ಒಪ್ಪಂದದ ಕೊನೆಯ ದಿನದೊಳಗೆ ತೈಲದ ಡೆಲಿವರಿ ತೆಗೆದುಕೊಳ್ಳಬೇಕು ಇಲ್ಲವೇ ಬೇರೆಯವರಿಗೆ ಮಾರಬೇಕು. ಆದರೆ, ತೈಲ ಖರೀದಿದಾರರಲ್ಲಿ ಈಗಾಗಲೇ ಖರೀದಿಸಿರುವ ತೈಲವೇ ಸಾಕಷ್ಟು ದಾಸ್ತಾನಿದೆ.

ಅಮೆರಿಕ ತೈಲ ಮಾರುಕಟ್ಟೆಯಲ್ಲಿ ಕೇಳರಿಯದ ಕುಸಿತ: ಬೆಲೆ ಶೂನ್ಯಕ್ಕಿಂತ ಕೆಳಗೆ!

ಹೊಸ ತೈಲವನ್ನು ಡೆಲಿವರಿ ತೆಗೆದುಕೊಂಡರೆ ಸಂಗ್ರಹಿಸಲು ಜಾಗವಿಲ್ಲ. ಹೀಗಾಗಿ ಅಮೆರಿಕದ ಫ್ಯೂಚರ್‌ ಮಾರುಕಟ್ಟೆಯಲ್ಲಿ ಮೇ ತಿಂಗಳ ತೈಲವನ್ನು ಯಾರೂ ಡೆಲಿವರಿ ಪಡೆಯುತ್ತಿಲ್ಲ. ಆದ್ದರಿಂದ ಅದರ ಬೆಲೆ ಮೈನಸ್‌ಗೆ ಕುಸಿದಿದೆ. ಜೂನ್‌ ತಿಂಗಳ ತೈಲದ ಬೆಲೆ ಸದ್ಯ 21 ಡಾಲರ್‌ ಇದೆ.

ಉತ್ಪಾದನೆ ನಿಲ್ಲಿಸಲು ಸಾಧ್ಯವಿಲ್ಲವೇ?

ಕಚ್ಚಾತೈಲದ ಬಾವಿಗಳಿಂದ ತೈಲ ಎತ್ತುವುದನ್ನು ಒಮ್ಮೆ ನಿಲ್ಲಿಸಿದರೆ ಮತ್ತೆ ಅದನ್ನು ಆರಂಭಿಸಲು ತಿಂಗಳುಗಟ್ಟಲೆ ಸಮಯ ಹಿಡಿಯುತ್ತದೆ. ಅದರಿಂದ ದೊಡ್ಡ ನಷ್ಟವಾಗುತ್ತದೆ. ಹೀಗಾಗಿ ತೈಲೋತ್ಪಾದಕ ರಾಷ್ಟ್ರಗಳು ಉತ್ಪಾದನೆ ನಿಲ್ಲಿಸುತ್ತಿಲ್ಲ. ಆದರೂ ದಿನಕ್ಕೆ 10 ಲಕ್ಷ ಬ್ಯಾರಲ್‌ನಷ್ಟುತೈಲೋತ್ಪಾದನೆ ಕಡಿಮೆ ಮಾಡಿವೆ. ಆದರೆ ಸಂಪೂರ್ಣ ನಿಲ್ಲಿಸಲು ಒಪ್ಪುತ್ತಿಲ್ಲ.

ಮಾರುವವರೇ ಏಕೆ ಹಣ ಕೊಡುವ ಸ್ಥಿತಿ ಬಂದಿದೆ?

ಮೊದಲೇ ಮಾಡಿಕೊಂಡ ಒಪ್ಪಂದದ ಪ್ರಕಾರ ಕಚ್ಚಾತೈಲವನ್ನು ಆ ಒಪ್ಪಂದದ ಕೊನೆಯ ದಿನದೊಳಗೆ ಖರೀದಿದಾರರು ಪಡೆದುಕೊಳ್ಳಬೇಕಾಗುತ್ತದೆ. ಆದರೆ, ಬಹುತೇಕ ತೈಲ ಖರೀದಿದಾರರ ಬಳಿ ಈಗಾಗಲೇ ತೈಲ ದಾಸ್ತಾನು ಸಾಕಷ್ಟಿದ್ದು, ಅವರ ತೈಲ ಸಂಗ್ರಹಾಗಾರಗಳು ಬಹುತೇಕ ತುಂಬಿವೆ.

ಕಚ್ಚಾ ತೈಲ ಬೆಲೆ ಭಾರಿ ಕುಸಿತ : ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?

ಅಮೆರಿಕದಲ್ಲಂತೂ ಅಲ್ಲಿನ ತೈಲ ಸಂಗ್ರಹಾಗಾರಗಳೆಲ್ಲ ಪೂರ್ತಿ ತುಂಬಿವೆ. ಆದರೆ, ಮಾಚ್‌ರ್‍ನಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ಏಪ್ರಿಲ್‌ ಅಂತ್ಯದೊಳಗೆ ಮಾರಾಟಗಾರರಿಂದ ತೈಲ ಪಡೆದುಕೊಳ್ಳಬೇಕು. ಪಡೆದುಕೊಂಡರೆ ಸಂಗ್ರಹಿಸುವುದೆಲ್ಲಿ? ಹೀಗಾಗಿ ಖರೀದಿದಾರರು ಅದನ್ನು ಬೇರೆಯವರಿಗೆ ಮಾರಲು ಯತ್ನಿಸುತ್ತಿದ್ದಾರೆ. ಆದರೆ, ಕೊಳ್ಳುವವರಿಲ್ಲ. ಹೀಗಾಗಿ ಯಾರು ಕೊಳ್ಳುತ್ತಾರೋ ಅವರಿಗೇ ಹಣ ನೀಡಿ ತೈಲವನ್ನೂ ನೀಡುವ ಪರಿಸ್ಥಿತಿ ಬಂದಿದೆ.

ಬ್ರೆಂಟ್‌ ತೈಲದ ಬೆಲೆ ಈಗಲೂ 20 ಡಾಲರ್‌

ಅಮೆರಿಕದ ತೈಲ ಮಾರುಕಟ್ಟೆಯಲ್ಲಿ ಡಬ್ಲ್ಯುಟಿಐ ಕಚ್ಚಾತೈಲದ ಬೆಲೆ ಮೈನಸ್‌ಗೆ ಕುಸಿದಿದ್ದರೂ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಈಗಲೂ ಬ್ಯಾರಲ್‌ಗೆ ಸುಮಾರು 20 ಡಾಲರ್‌ ಇದೆ. ಈ ತೈಲದ ಬೆಲೆ ಕುಸಿದರೆ ಅಥವಾ ಏರಿದರೆ ಅದು ಜಗತ್ತಿನ ಎಲ್ಲಾ ದೇಶಗಳ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಅಮೆರಿಕದಲ್ಲಿ ತೈಲ ಬೆಲೆ ಕುಸಿದಿರುವುದರ ಪರಿಣಾಮ ಮತ್ತು ಕಚ್ಚಾತೈಲಕ್ಕೆ ಜಗತ್ತಿನೆಲ್ಲೆಡೆ ಬೇಡಿಕೆ ಕಡಿಮೆಯಾಗಿರುವ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾತೈಲದ ಬೆಲೆಯೂ ತಕ್ಕಮಟ್ಟಿಗೆ ಕುಸಿಯುತ್ತಿದೆ.

ಭಾರತದಲ್ಲಿ ತೈಲ ಬೆಲೆ ಇಳಿಯುತ್ತದೆಯೇ?

ಇಲ್ಲ. ಭಾರತದಲ್ಲಿ ಸದ್ಯಕ್ಕೆ ತೈಲ ಬೆಲೆ ಇಳಿಯುವ ಸಾಧ್ಯತೆಗಳು ಬಹಳ ಕಡಿಮೆ. ಏಕೆಂದರೆ,

1. ಈಗ ಕುಸಿದಿರುವುದು ಅಮೆರಿಕದ ಡಬ್ಲ್ಯುಟಿಐ ಕಚ್ಚಾತೈಲದ ಬೆಲೆ. ಭಾರತ ಖರೀದಿಸುವುದು ಒಮಾನ್‌, ದುಬೈ, ಇರಾನ್‌ ಮುಂತಾದ ಕೊಲ್ಲಿ ರಾಷ್ಟ್ರಗಳಿಂದ, ಅದೂ ಬ್ರೆಂಟ್‌ ಕಚ್ಚಾತೈಲವನ್ನು. ಇದರ ಬೆಲೆ ಈಗ ಬ್ಯಾರಲ್‌ಗೆ 20.56 ಡಾಲರ್‌ ಇದೆ.

2. ಭಾರತದಲ್ಲಿರುವ ತೈಲ ಸಂಗ್ರಹಾಗಾರಗಳೆಲ್ಲ ಈಗಾಗಲೇ ಖರೀದಿಸಿದ ತೈಲದಿಂದ ತುಂಬಿವೆ. ಹೀಗಾಗಿ ಕುಸಿದ ಬೆಲೆಯಲ್ಲಿ ಭಾರತ ಸದ್ಯಕ್ಕೆ ಬೇರೆ ದೇಶಗಳಿಂದ ತೈಲ ಖರೀದಿಸುವುದಿಲ್ಲ.

3. ಒಂದೊಮ್ಮೆ ಭಾರತ ಈಗ ಕಚ್ಚಾತೈಲ ಖರೀದಿಸಿದರೂ ಬೆಲೆ ಇಳಿಕೆಯ ಲಾಭ ರುಪಾಯಿ ಮೌಲ್ಯದ ಕುಸಿತದಲ್ಲಿ ಕಳೆದುಹೋಗುತ್ತದೆ. ರುಪಾಯಿ ಮೌಲ್ಯ ಡಾಲರ್‌ ಎದುರು ಈಗ 76.70 ರು.ಗೆ ಸಾರ್ವಕಾಲಿಕ ಕುಸಿತ ಕಂಡಿದೆ. ತೈಲಕ್ಕೆ ಡಾಲರ್‌ನಲ್ಲಿ ಹಣ ಪಾವತಿಸಬೇಕು. ಇದು ದೇಶದ ವಿದೇಶಿ ವಿನಿಮಯಕ್ಕೆ ನಷ್ಟ.

4. ಭಾರತದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ಬಹುಪಾಲು ಸರ್ಕಾರದ ತೆರಿಗೆಯೇ ತುಂಬಿದೆ. ಹೀಗಾಗಿ ಕಚ್ಚಾತೈಲದ ಬೆಲೆ ಇಳಿಕೆಯಾದರೂ ಗ್ರಾಹಕರಿಗೆ ಸಿಗುವ ಲಾಭ ಅತ್ಯಲ್ಪ.