ಎನ್ ಚಂದ್ರಶೇಖರನ್ ಅವರ ರಾಜೀನಾಮೆ ಘೋಷಣೆಯ ನಂತರ ಟಾಟಾ ಸನ್ಸ್‌ನ ಮುಂದಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುತೂಹಲ ಕೆರಳಿಸಿದೆ. ಕಾನೂನು ತೊಡಕುಗಳು ಮತ್ತು ನಿಯಮಾವಳಿಗಳ ಅಡ್ಡಿಗಳ ನಡುವೆ, ಟಾಟಾ ಸ್ಟೀಲ್‌ನ ಎಂಡಿ ಟಿ.ವಿ. ನರೇಂದ್ರನ್ ಅವರು ಈ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.

ಮುಂಬೈ (ಆ.14): ಬಾಂಬೆ ಹೌಸ್‌ನಲ್ಲಿ (ಟಾಟಾ ಸಮೂಹದ ಪ್ರಧಾನ ಕಚೇರಿ) ನಾಯಕತ್ವ ಬದಲಾವಣೆ ಎಂದರೆ ಅಲ್ಲಿ ಒಂದಿಲ್ಲೊಂದು ದೊಡ್ಡ ಮಟ್ಟದ ಹೈಡ್ರಾಮಾಗಳು ನಡೆಯುವುದು ಕಳೆದ ಕೆಲವು ದಶಕಗಳಿಂದ ಮಾಮೂಲಾಗಿಬಿಟ್ಟಿದೆ. ಇದೀಗ ಎನ್‌ ಚಂದ್ರಶೇಖರನ್ ಅವರ ದಿಢೀರ್ ರಾಜೀನಾಮೆ ಘೋಷಣೆಯು, ಕಳೆದ ಕೆಲವು ತಿಂಗಳುಗಳಿಂದ ಟಾಟಾ ಸನ್ಸ್ ಹಾಗೂ ಟಾಟಾ ಟ್ರಸ್ಟ್ ಆಡಳಿತ ಮಂಡಳಿಗಳ ನಡುವೆ ನಡೆಯುತ್ತಿದ್ದ ಜಟಾಪಟಿಗೆ ಮತ್ತಷ್ಟು ಗೊಂದಲ ಮತ್ತು ಕುತೂಹಲಗಳನ್ನು ಸೇರಿಸಿದೆ. ಚಂದ್ರಶೇಖರನ್ ಅವರ ನಿರ್ಗಮನದ ನಂತರ, "ಟಾಟಾ ಸನ್ಸ್‌ನ ಮುಂದಿನ ಸಾರಥಿ ಯಾರು?" ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡಲಾರಂಭಿಸಿದೆ. ಚಂದ್ರಶೇಖರನ್ ಅವರು ಫೆಬ್ರವರಿ 2027ರವರೆಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಹೀಗಾಗಿ ನಾಯಕತ್ವದ ಸುಸೂತ್ರ ಹಸ್ತಾಂತರಕ್ಕೆ ಟಾಟಾ ಸನ್ಸ್‌ಗೆ ಸಾಕಷ್ಟು ಸಮಯ ಲಭ್ಯವಿದೆ.

ಆಯ್ಕೆ ಸಮಿತಿ ರಚನೆ ಮತ್ತು ಹೊಸ ಕಾನೂನು ತೊಡಕು

ಟಾಟಾ ಸನ್ಸ್ ನಿಯಮಾವಳಿಗಳ ಪ್ರಕಾರ, ಹೊಸ ಅಧ್ಯಕ್ಷರನ್ನು ಐದು ಸದಸ್ಯರ ಸಮಿತಿ ಆಯ್ಕೆ ಮಾಡುತ್ತದೆ. ಇದರಲ್ಲಿ ಮೂವರು ಸದಸ್ಯರನ್ನು 'ಸರ್ ದೊರಾಬ್ಜಿ ಟಾಟಾ ಟ್ರಸ್ಟ್' ಮತ್ತು 'ಸರ್ ರತನ್ ಟಾಟಾ ಟ್ರಸ್ಟ್' (SRTT) ಜಂಟಿಯಾಗಿ ನಾಮನಿರ್ದೇಶನ ಮಾಡುತ್ತದೆ. ಟಾಟಾ ಸನ್ಸ್ ಆಡಳಿತ ಮಂಡಳಿಯಿಂದ ಒಬ್ಬ ಸದಸ್ಯರು ನಾಮನಿರ್ದೇಶನಗೊಳ್ಳುತ್ತಾರೆ. ಐದನೇ ವ್ಯಕ್ತಿ ಆಡಳಿತ ಮಂಡಳಿಯಿಂದ ಆಯ್ಕೆಯಾಗುವ ಸ್ವತಂತ್ರ ಸದಸ್ಯರಾಗಿರುತ್ತಾರೆ.

ಆದರೆ, ಇಲ್ಲಿ ಒಂದು ದೊಡ್ಡ ತೊಡಕು ಎದುರಾಗಿದೆ. ಮಹಾರಾಷ್ಟ್ರ ಚಾರಿಟಿ ಕಮಿಷನರ್ ನೀಡಿದ ನಿರ್ದೇಶನದ ನಂತರ 'ಸರ್ ರತನ್ ಟಾಟಾ ಟ್ರಸ್ಟ್'ಗೆ ಧರ್ಮದರ್ಶಿಗಳ (ಟ್ರಸ್ಟಿ) ಸಭೆಯನ್ನು ಕರೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರಸ್ತುತ ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅದಕ್ಕೆ ಸಾಧ್ಯವಾಗದಿರುವುದು ಚಂದ್ರಶೇಖರನ್ ಉತ್ತರಾಧಿಕಾರಿ ಆಯ್ಕೆಗೆ ದೊಡ್ಡ ಹಿನ್ನಡೆಯಾಗಿದೆ.

ಮಧ್ಯಂತರ ಅಧ್ಯಕ್ಷರಾಗಲು ನೋಯೆಲ್ ಟಾಟಾಗೆ ನಿಯಮಾವಳಿ ಅಡ್ಡಿ!

ನೋಯೆಲ್ ಟಾಟಾ ಅವರು ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬಹುದು ಎಂಬ ಚರ್ಚೆಗಳು ನಡೆದಿದ್ದವು. ನೋಯೆಲ್ ಅವರು ಟಾಟಾ ಗ್ರೂಪ್‌ ಇತರ ಕಂಪನಿಗಳ ನನ್-ಎಕ್ಸಿಕ್ಯೂಟಿವ್ ಡೈರೆಕ್ಟರ್‌ಗಳ ನಿವೃತ್ತಿ ವಯಸ್ಸು (70 ವರ್ಷ) ನಿಯಮದಂತೆ ನವೆಂಬರ್‌ನಲ್ಲಿ ನಿವೃತ್ತರಾಗಲಿದ್ದಾರೆ. ಆದರೆ, ಅವರು ಟ್ರಸ್ಟ್‌ನ ಪ್ರತಿನಿಧಿಯಾಗಿರುವುದರಿಂದ ಟಾಟಾ ಸನ್ಸ್ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ. ಏಕೆಂದರೆ ಟ್ರಸ್ಟ್ ಪ್ರತಿನಿಧಿಗಳಿಗೆ ಯಾವುದೇ ನಿವೃತ್ತಿ ವಯಸ್ಸಿನ ಮಿತಿ ಇರುವುದಿಲ್ಲ.

ಈ ಹಿಂದೆ 2016 ರಲ್ಲಿ ಸೈರಸ್ ಮಿಸ್ಟ್ರಿ ಅವರನ್ನು ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಿದಾಗ, ಆ ಸಮಯದಲ್ಲಿ 78 ವರ್ಷದವರಾಗಿದ್ದ ರತನ್ ಟಾಟಾ ಅವರು ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ ಸಂಸ್ಥೆಯಲ್ಲಿ ಸ್ಥಿರತೆ ತರಲು ಚಂದ್ರಶೇಖರನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ, ಈಗ ನೋಯೆಲ್ ಟಾಟಾ ಅವರಿಗೆ ರತನ್ ಟಾಟಾ ಹಾದಿ ತುಳಿಯಲು ಸಾಧ್ಯವಿಲ್ಲ. 2022 ರಲ್ಲಿ ತಂದ ತಿದ್ದುಪಡಿಯ ಪ್ರಕಾರ, ಟಾಟಾ ಟ್ರಸ್ಟ್ ಅಧ್ಯಕ್ಷರಾಗಿರುವವರು ಟಾಟಾ ಸನ್ಸ್ ಅಧ್ಯಕ್ಷರಾಗುವಂತಿಲ್ಲ! ಈ ಎರಡೂ ಹುದ್ದೆಗಳನ್ನು ಒಟ್ಟಿಗೆ ವಹಿಸಿಕೊಂಡಿದ್ದ ಕೊನೆಯ ವ್ಯಕ್ತಿ ರತನ್ ಟಾಟಾ ಮಾತ್ರ.

ರೇಸ್‌ನಲ್ಲಿ ಟಾಟಾ ಸ್ಟೀಲ್ ಎಂಡಿ ಟಿ.ವಿ. ನರೇಂದ್ರನ್!

ಅಧ್ಯಕ್ಷ ಹುದ್ದೆಗೆ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳಲ್ಲಿ ಟಾಟಾ ಸ್ಟೀಲ್‌ನ ಮ್ಯಾನೇಜಿಂಗ್ ಡೈರೆಕ್ಟರ್ 61 ವರ್ಷದ ಟಿ.ವಿ. ನರೇಂದ್ರನ್ ಅವರದ್ದು. 1988 ರಲ್ಲಿ ಟಾಟಾ ಗ್ರೂಪ್‌ಗೆ ಸೇರಿದ ನರೇಂದ್ರನ್ ಅವರು ತಮ್ಮ ಸಂಪೂರ್ಣ ವೃತ್ತಿಜೀವನವನ್ನು ಟಾಟಾ ಸ್ಟೀಲ್‌ನಲ್ಲೇ ಕಳೆದಿದ್ದಾರೆ. 2013 ರಿಂದ ಅವರು ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ವಿಶೇಷವೆಂದರೆ, ಟಾಟಾ ಸನ್ಸ್ ನಿರ್ದೇಶಕ ಹಾಗೂ ಟಾಟಾ ಟ್ರಸ್ಟ್ ಅಧ್ಯಕ್ಷರಾಗಿರುವ ನೋಯೆಲ್ ಟಾಟಾ ಅವರು ಟಾಟಾ ಸ್ಟೀಲ್‌ನ ವೈಸ್-ಚೇರ್ಮನ್ ಆಗಿದ್ದಾರೆ. ಸಂಸ್ಥೆ ಕಷ್ಟದಲ್ಲಿದ್ದ ಸಮಯದಲ್ಲಿ ರತನ್ ಟಾಟಾ ಅವರು ತಮಗೆ ಮಾರ್ಗದರ್ಶಕರಾಗಿದ್ದರು ಎಂದು ನರೇಂದ್ರನ್ ಈ ಹಿಂದೆ ಹಲವು ಬಾರಿ ಸ್ಮರಿಸಿಕೊಂಡಿದ್ದಾರೆ. ಹೀಗಾಗಿ, ಅನುಭವ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಟಿ.ವಿ. ನರೇಂದ್ರನ್ ಅವರು ಟಾಟಾ ಸನ್ಸ್‌ನ ಮುಂದಿನ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಿದೆ.