ಆದಾಯ ಖೋತಾ ಭೀತಿ: ರಾಜ್ಯಗಳಿಂದ ತೀವ್ರ ವಿರೋಧ ಝೊಮ್ಯಾಟೋ, ಸ್ವಿಗ್ಗಿ, ಓಲಾ, ಊಬರ್‌ ಜಿಎಸ್ಟಿವ್ಯಾಪ್ತಿಗೆ

ಲಖನೌ(ಸೆ.18): ಸರಕು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌ ಕೂಡ ಬರಬಹುದು. ತನ್ಮೂಲಕ ದುಬಾರಿಯಾಗಿರುವ ಈ ಎರಡೂ ಇಂಧನಗಳ ಬೆಲೆ ಇಳಿಕೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಎಲ್ಲಾ ರಾಜ್ಯಗಳು ಆದಾಯ ನಷ್ಟದ ಕಾರಣ ಮುಂದಿಟ್ಟು ಜಿಎಸ್‌ಟಿ ವ್ಯಾಪ್ತಿಗೆ ತೈಲೋತ್ಪನ್ನ ತರುವುದನ್ನು ಸಂಪೂರ್ಣವಾಗಿ ವಿರೋಧಿಸಿವೆ. ಇನ್ನೊಂದೆಡೆ ಕೇಂದ್ರ ಸರ್ಕಾರ ಕೂಡ ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ಇದು ಸಕಾಲವಲ್ಲ ಎಂದು ಹೇಳಿದ ಕಾರಣ ವಿಷಯ ಹೆಚ್ಚಿನ ಚರ್ಚೆಯನ್ನೇ ಕಾಣದೆ ಕೊನೆಗೊಂಡಿದೆ.

ಸಭೆಯ ಬಳಿಕ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಕೇರಳ ಹೈಕೋರ್ಟ್‌ ಆದೇಶದಂತೆ ಪೆಟ್ರೋಲ್‌ ಹಾಗೂ ಡೀಸೆಲ್‌ ಅನ್ನು ಜಿಎಸ್‌ಟಿಯ ಅಡಿಯಲ್ಲಿ ತರುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು. ಆದರೆ, ತೈಲೋತ್ಪನ್ನಗಳನ್ನು ಜಿಎಸ್‌ಟಿಯ ಅಡಿಯಲ್ಲಿ ತರುವ ಸಮಯ ಇದಲ್ಲ ಎಂಬುದಾಗಿ ಜಿಎಸ್‌ಟಿ ಮಂಡಳಿ ಅಭಿಪ್ರಾಯಪಟ್ಟಿದೆ. ಹೀಗಾಗಿ ಸದ್ಯದ ಮಟ್ಟಿಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ಜಿಎಸ್‌ಟಿಯ ಅಡಿಯಲ್ಲಿ ಬರಲ್ಲ ಎಂದು ತಿಳಿಸಿದರು.

ಇ ಕಾಮರ್ಸ್‌ ವೇದಿಕೆ ಜಿಎಸ್ಟಿಗೆ ವ್ಯಾಪ್ತಿಗೆ:

ಆ್ಯಪ್‌ ಆಧಾರಿತ ಆಹಾರ ಪೂರೈಕೆ ಸೇವೆ ಒದಗಿಸುತ್ತಿರುವ ಸ್ವಿಗ್ಗಿ, ಝೊಮ್ಯಾಟೋ, ಕ್ಲೌಡ್‌ ಕಿಚನ್‌ ಸೇರಿದಂತೆ ಇ ಕಾಮರ್ಸ್‌ ತಾಣಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ. ಆದರೆ ಇದು ಹೆಚ್ಚುವರಿ ತೆರಿಗೆ ಇಲ್ಲ. ಇದುವರೆಗೂ ರೆಸ್ಟೋರೆಂಟ್‌ಗಳಿಂದ ಸಂಗ್ರಹಿಸುತ್ತಿದ್ದ ಜಿಎಸ್ಟಿಯನ್ನು ಇನ್ನು ಇ ಕಾಮರ್ಸ್‌ ತಾಣಗಳ ಸೇವೆಗೆ ವಿಧಿಸಲಾಗುವುದು. ಅವು ಶೇ.5ರಷ್ಟುಜಿಎಸ್‌ಟಿ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಲಿವೆ. ಇದರಿಂದ ರೆಸ್ಟೋರೆಂಟ್‌, ಆ್ಯಪ್‌, ಗ್ರಾಹಕ ಸೇರಿ ಯಾರಿಗೂ ಹೊಸ ಹೊರೆಯಾಗುವುದಿಲ್ಲ ಎಂದು ಸರ್ಕಾರ ಹೇಳಿದೆ. ಈ ತೆರಿಗೆ ವ್ಯಾಪ್ತಿಗೆ ವಾಹನಗಳ ಮೂಲಕ ಪ್ರಯಾಣಿಕರನ್ನು ಸಾಗಿಸುವ ಆನ್‌ಲೈನ್‌ ವೇದಿಕೆಗಳು ಬರಲಿವೆ. ಇವುಗಳಿಗೆ 2022ರ ಜ.1ರಿಂದ ತೆರಿಗೆ ವಿಧಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ಔಷಧಿಗೆ ರಿಯಾಯಿತಿ:

ಇದೇ ವೇಳೆ ಕೋವಿಡ್‌ ಔಷಧ ಸಾಮಗ್ರಿಗಳ ಮೇಲಿನ ತೆರಿಗೆ ರಿಯಾಯಿತಿಯನ್ನು ಡಿ.31ರವರೆಗೂ ವಿಸ್ತರಿಸಲು, ಕ್ಯಾನ್ಸರ್‌ ಔಷಧವಾದ ಕೀಟ್ರುಡಾಕ್ಕೆ ವಿಧಿಸುತ್ತಿದ್ದ ಜಿಎಸ್ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಜೊತೆಗೆ ವಿಶ್ವದ ಅತಿ ದುಬಾರಿ (16 ಕೋಟಿ) ಔಷಧ ಝೋಲೆನ್‌ಸ್ಮಾ, ವಿಲ್ಟೆಸ್ಪೋ ಮೊದಲಾದವುಗಳ ಮೇಲಿನ ಜಿಎಸ್‌ಟಿಯನ್ನು ಪೂರ್ಣ ರದ್ದುಗೊಳಿಸಲಾಗಿದೆ.

ಪರಿಹಾರ ಇಲ್ಲ:

ಜಿಎಸ್ಟಿನಷ್ಟಪರಿಹಾರದ ರೂಪದಲ್ಲಿ ರಾಜ್ಯಗಳಿಗೆ ನೀಡುವ ಪರಿಹಾರವು 2022ರ ಜುಲೈಗೆ ಅಂತ್ಯವಾಗಲಿದೆ. ಅದರ ಬಳಿಕ ಅದನ್ನು ವಿಸ್ತರಿಸುವುದಿಲ್ಲ. ಅದರ ಬಳಿಕ 5 ವರ್ಷಗಳ ಅವಧಿಗೆ ಸಂಗ್ರಹಿಸುವ ಸೆಸ್‌ ಅನ್ನು ಹಾಲಿ ರಾಜ್ಯಗಳಿಗೆ ಪರಿಹಾರ ವಿತರಿಸಲು ಪಡೆದಿರುವ ಸಾಲ ಮತ್ತು ಬಡ್ಡಿ ಹಾಗೂ ಸಾಲಕ್ಕೆ ಬಳಸಲಾಗುವುದು ಎಂದು ಕೇಂದ್ರ ಸರ್ಕಾರ ಸಭೆಯಲ್ಲಿ ತಿಳಿಸಿದೆ.