ವಾಷಿಂಗ್ಟನ್(ನ.2): ಇದು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಕೇಂದ್ರ ಸರ್ಕಾರದ ವಿದೇಶಾಂಗ ನೀತಿಗೆ ಸಂದ ಜಯ. ಕಾರಣ ಇರಾನ್ ಮೇಲಿನ ನವೆಂಬರ್ 4 ರ ತನ್ನ ನಿರ್ಬಂಧದ ಹೊರತಾಗಿಯೂ ಭಾರತ ತೈಲ ಆಮದು ಮಾಡಿಕೊಳ್ಳಬಹುದು ಎಂದು ಅಮೆರಿಕ ಘೋಷಿಸಿದೆ.

ಹೌದು, ಇದೇ ನವೆಂಬರ್ 4ರಿಂದ ಇರಾನ್ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನ ಸಂಪೂರ್ಣವಾಗಿ ಜಾರಿಗೆ ಬರಲಿದ್ದು, ನವೆಂಬರ್ 4 ರ ಬಳಿಕ ಇರಾನ್‌ನಿಂದ ತೈಲ ಆಮದು ಒಪ್ಪಂದ ಏನಾಗಲಿದೆ ಎಂಬ ಚಿಂತೆಪ್ರತಿಯೊಬ್ಬ ಭಾರತೀಯನನ್ನೂ ಕಾಡುತ್ತಿತ್ತು.

ವಾಗ್ದಾನ ಪೂರೈಸಿದ ಕೇಂದ್ರ:

ಆದರೆ ಇರಾನ್‌ನಿಂದ ತೈಲ ಆಮದು ಒಪ್ಪಂದದ ಮೇಲೆ ಯಾವುದೇ ಪರಿಣಾಮವಾಗದಂತೆ ನೋಡಿಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಹಿಂದೆಯೇ ಜನತೆಗೆ ಭರವಸೆ ನೀಡಿತ್ತು..

ಅದರಂತೆ ತನ್ನ ವಾಗ್ದಾನವನ್ನು ಉಳಿಸಿಕೊಂಡಿರುವ ಕೇಂದ್ರ, ನಿರ್ಬಂಧದ ಹೊರತಾಗಿಯೂ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ಕುರಿತು ಅಮೆರಿಕ ಮನವೋಲಿಸುವಲ್ಲಿ ಯಶಸ್ವಿಯಾಗಿದೆ.

ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಶ್ವೇತ ಭವನ, ಭಾರತದ ತೈಲ ಬೇಡಿಕೆ ಕುರಿತು ಅಮೆರಿಕಕ್ಕೆ ಮನವರಿಕೆಯಾಗಿದ್ದು, ಭಾರತ ಈ ಮೊದಲಿನಂತೆಯೇ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದೆ.

ಯಾವ್ಯಾವ ರಾಷ್ಟ್ರಗಳಿಗೆ ರಿಲೀಫ್?:

ಇನ್ನು ಕೇವಲ ಭಾರತ ಮಾತ್ರವಲ್ಲದೇ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಇತರ ಪ್ರಮುಖ 8 ದೇಶಗಳಿಗೂ ಈ ನಿಯಮ ಅನ್ವಯಿಸಲಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರಗಳಾದ ಚೀನಾ, ಜಪಾನ್, ದ.ಕೋರಿಯಾ, ಭಾರತ ಸೇರಿದಂತೆ ಎಲ್ಲಾ ಪ್ರಮುಖ 8 ರಾಷ್ಟ್ರಗಳಿಗೆ ಈ ನಡೆಯಿಂದ ದೊಡ್ಡ ನಿರಾಳತೆ ಸಿಕ್ಕಂತಾಗಿದೆ. ಆದರೆ ಚೀನಾ ಈ ಕುರಿತಂತೆ ಅಮೆರಿಕದೊಂದಿಗೆ ಮತ್ತಷ್ಟು ಮಾತುಕತೆ ನಡೆಸಲು ಮುಂದಾಗಿದ್ದು, ತನ್ನ ತೈಲ ಅವಶ್ಯಕತೆಗನುಗುಣವಾಗಿ ತೈಲ ಆಮದು ಮಾಡಿಕೊಳ್ಳಲು ಅನುವು ಮಾಡಿಕೊಡುವಂತೆ ಕೋರುತ್ತಿದೆ.

ಇರಾನ್ ಗತಿ?:

ಇನ್ನು ಇರಾನ್ ಮೇಲಿನ ನಿರ್ಬಂಧ ಕುರಿತು ಪ್ರತಿಕ್ರಿಯೆ ನೀಡಿರುವ ಶ್ವೇತ ಭವನ ಉಪ ವಕ್ತಾರ ರಾಬರ್ಟ್ ಪಲಾಡಿನೋ, ಇರಾನ್ ಪರಮಾಣು ಯೋಜನೆಗಳಿಂದ ಮಧ್ಯಪ್ರಾಚ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದ್ದು, ಇದನ್ನು ಹತೋಟಿಗೆ ತರಲು ಇರಾನ್ ಮೇಲಿನ ನಮ್ಮ ಆರ್ಥಿಕ ದಿಗ್ಬಂಧನ ಸಹಾಯ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

 

ನವೆಂಬರ್ 4ರ ನಿರ್ಬಂಧ ಭೀತಿ: ನಮಗೆ ಇರಾನ್ ತೈಲದ ಗತಿ?

ಭಾರತ-ಅಮೆರಿಕ ತೈಲ ಮಾತುಕತೆ: ಟ್ರಂಪ್ ಕೇಳ್ತಾರಾ ನಮ್ಮ ವ್ಯಥೆ?

ಇರಾನ್ ಕೈ ಬಿಡದಿದ್ದರೆ ‘ನೋಡ್ಕೊತೀವಿ’: ಭಾರತಕ್ಕೆ ಟ್ರಂಪ್ ಬೆದರಿಕೆ!

‘ಟ್ರಂಪ್ ಏನ್ಮಾಡ್ತಾರೋ ನೋಡೇ ಬಿಡ್ತಿವಿ: ಇರಾನ್‌ನಿಂದ ಪೆಟ್ರೋಲ್ ತರ್ತಿವಿ’!